ಮೈಸೂರು: ನಿರಂತರ ಮಳೆಗೆ ಮೈಸೂರಿನ ಒಲಂಪಿಯಾ ಚಿತ್ರಮಂದಿರದ ಹಿಂಬದಿ ಗೋಡೆ ಕುಸಿದು (Karnataka Rain) ಬಿದ್ದಿದೆ. ಚಿತ್ರಮಂದಿರ ಪಕ್ಕದಲ್ಲೇ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ನಾಲ್ವರು ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಕೆಆರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸೋಮವಾರ ಮಧ್ಯಾಹ್ನ ಈ ದುರ್ಘಟನೆ ನಡೆದಿದ್ದು, ತಬರೀಸ್ ಮತ್ತು ಅರ್ಮಾನ್ ಎಂಬುವವರು ಗಂಭೀರವಾಗಿ ಗಾಯಗೊಂಡವರು. ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಗೋಡೆ ಕೆಳಗೆ ಬಿದ್ದ ಪರಿಣಾಮ ಬಟ್ಟೆ ಅಂಗಡಿಯ ಸ್ಟಾಲ್‌ಗಳು ನೆಲಕಚ್ಚಿವೆ. ಜೆಸಿಬಿ ಯಂತ್ರದ ಮೂಲಕ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಹೆದ್ದಾರಿಗೆ ಬಿದ್ದ ಬೃಹತ್ ಮರ
ಉತ್ತರಕನ್ನಡ ಜಿಲ್ಲೆಯಲ್ಲಿ ವರುಣಾರ್ಭಟ ಮುಂದುವರಿದಿದ್ದು, ಶಿರಸಿ-ಹೊಸನಗರ ರಾಜ್ಯ ಹೆದ್ದಾರಿಗೆ ಬೃಹತ್ ಮರವೊಂದು ಬಿದ್ದಿದೆ. ಶಿರಸಿ ತಾಲೂಕಿನ ಗುಡ್ನಾಪುರ ಗ್ರಾಮದ ಬಳಿ ಘಟನೆ ನಡೆದಿದೆ. ಮರ ಬಿದ್ದ ಪರಿಣಾಮ ಶಿರಸಿ-ಬನವಾಸಿ ರಸ್ತೆ ಸಂಚಾರ ಬಂದ್ ಆಗಿದ್ದು, ಮರ ಬಿದ್ದ ಪರಿಣಾಮ ಹಲವು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಅರಣ್ಯ, ಲೋಕೋಪಯೋಗಿ ಇಲಾಖೆ, ಹೆಸ್ಕಾಂ, ಪೊಲೀಸ್ ಇಲಾಖೆಯಿಂದ ತೆರವು ಕಾರ್ಯಾಚರಣೆ ನಡೆದಿದೆ.
ಭಾರಿ ಮಳೆಗೆ ಸೋರುತ್ತಿರುವ ಗ್ರಂಥಾಲಯ
ಭಾರಿ ಮಳೆಗೆ ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದ ಸಕಲೇಶಪುರ ಪಟ್ಟಣದ ಐಬಿ ರಸ್ತೆಯಲ್ಲಿರುವ ಸ್ಕೌಟ್ ಅಂಡ್ ಗೈಡ್ ಕಟ್ಟಡದಲ್ಲಿರುವ ಗ್ರಂಥಾಲಯ ಸೋರುತಿದ್ದು, ಪುಸ್ತಕಗಳು ನೀರುಪಾಲಾಗಿವೆ. ಗ್ರಂಥಾಲಯದ ಹೆಂಚುಗಳು ಹೊಡೆದು ಹೋಗಿದ್ದು, ಯಾವ ಕ್ಷಣದಲ್ಲಾದರೂ ಲೈಬ್ರರಿ ಬೀಳುವ ಸಾಧ್ಯತೆ ಇದೆ. ಸೋರುತ್ತಿರುವ ಮಳೆ ನೀರಿನಿಂದ ಲಕ್ಷಾಂತರ ರೂ ಮೌಲ್ಯದ ಅಮೂಲ್ಯ ಪುಸ್ತಕಗಳಿಗೆ ಹಾನಿಯಾಗಿದೆ.
ಇದನ್ನೂ ಓದಿ: Karnataka Rain : ಭಾರಿ ಮಳೆ-ಗಾಳಿಗೆ ಯುವಕನ ತಲೆ ಮೇಲೆ ಮುರಿದು ಬಿದ್ದ ವಿದ್ಯುತ್ ಕಂಬ
ಊರ ಬಾಗಿಲಿಗೆ ಬಂದುನಿಂತ ಘಟಪ್ರಭಾ ನದಿ ನೀರು
ಬೆಳಗಾವಿಯಲ್ಲಿ ಅಪಾಯದ ಮಟ್ಟ ಮೀರಿ ಘಟಪ್ರಭಾ ನದಿ ಹರಿಯುತ್ತಿದ್ದು, ಊರ ಬಾಗಿಲಿಗೆ ಬಂದುನಿಂತಿದೆ. ಮುಸಗುಪ್ಪಿ ಗ್ರಾಮಕ್ಕೆ ಪ್ರವಾಹದ ಆತಂಕ ಶುರುವಾಗಿದೆ. ನದಿ ಪಕ್ಕದ ಕಬ್ಬು ಸೇರಿದಂತೆ ಹಲವು ಬೆಳೆಗಳು ಸಂಪೂರ್ಣ ಜಲಾವೃತಗೊಂಡಿದೆ. ಇನ್ನೂ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದು, ಕೃಷ್ಣಾ ನದಿ ತೀರದಲ್ಲಿ ಪ್ರವಾಹದ ಆತಂಕ ಎದುರಾಗಿದೆ.
ಕೃಷ್ಣೆಯ ಜತೆಗೆ ದೂದಗಂಗಾ, ವೇದಗಂಗಾ ಹಾಗೂ ಹೀರಣ್ಯಕೇಶಿ ನದಿಗಳ ನೀರಿನ ಮಟ್ಟದಲ್ಲೂ ಏರಿಕೆಯಾಗಿದ್ದು, ಈಗಾಗಲೇ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ 7 ಸೇತುವೆಗಳು ಮುಳುಗಡೆಯಾಗಿವೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದವರಿಗೂ ನದಿ ತೀರಕ್ಕೆ ಹೋಗದಂತೆ ಜಿಲ್ಲಾಡಳಿತದಿಂದ ಕಟ್ಟು ನಿಟ್ಟಿನ ಎಚ್ಚರಿಕೆವಹಿಸಿದೆ.
ಹಾವೇರಿ ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಧರ್ಮಾ ನದಿ ಉಕ್ಕಿ ಹರಿಯುತ್ತಿದೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ಹರಿದಿರುವ ಧರ್ಮಾ ಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಹಾನಗಲ್ ತಾಲೂಕಿನ ಕಂಚಿನೆಗಳೂರು ಬಳಿ ಜಲಪಾತ ಸೃಷ್ಟಿಯಾಗಿದೆ. ವರದಾನದಿಯ ಅಬ್ಬರಕ್ಕೆ ಹಾವೇರಿಯ ಹೊಸರಿತ್ತಿಯಲ್ಲಿರುವ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮೂಲ ಸಂಸ್ಥಾನ ಮಟ ಜಲಾವೃತಗೊಂಡಿದೆ. ಮಠದ ಒಳಗೆ ನೀರು ನುಗ್ಗುವ ಆತಂಕಇದ್ದು, ನೂರಾರು ಎಕರೆ ಬೆಳೆ ಮುಳುಗಡೆಯಾಗಿದೆ.
ಕೆಆರ್‌ಎಸ್ ಬೋಟಿಂಗ್ ಪಾಯಿಂಟ್‌ಗೆ ನಿಷೇಧ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‌ಎಸ್‌ನ ಬೋಟಿಂಗ್ ಪಾಯಿಂಟ್‌ಗೆ ಸಾರ್ವಜನಿಕರಿಗೆ ನಿಷೇಧ ಹೇರಲಾಗಿದೆ. ಜನರು ಓಡಾಡುವ ಸ್ಥಳದಲ್ಲೂ ನೀರು ತುಂಬಿದೆ. ನೀರಿನ ಪ್ರಮಾಣ ಕಡಿಮೆ ಆಗುವವರೆಗೂ ಬೋಟಿಂಗ್ ಸ್ಥಗಿತ ಮಾಡಲಾಗಿದೆ.
ತುಮಕೂರಿನಲ್ಲಿ ಕೆಸರು ಗದ್ದೆಯಂತಾದ ರಸ್ತೆ
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತುಮಕೂರಿನ ಹಿರೇಹಳ್ಳಿಯಲ್ಲಿ ರಸ್ತೆಯು ಕೆಸರು ಗದ್ದೆಯಂತಾಗಿದೆ. ಹಿರೇಹಳ್ಳಿ ಇಂಡಸ್ಟ್ರಿಯಲ್ ಏರಿಯಾಗೆ ಕೆಲಸಕ್ಕೆ ಹೋಗಲು ಪ್ರತಿನಿತ್ಯ ನೂರಾರು ವಾಹನಗಳು ಓಡಾಟ ನಡೆಸುತ್ತವೆ. ರಸ್ತೆಯಲ್ಲಿ ಎರಡು ಮೂರು ಅಡಿಗಳಷ್ಟು ಗುಂಡಿ ಬಿದ್ದರು ರಸ್ತೆ ಸರಿಪಡಿಸದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ.
ನಿರಂತರ ಜಡಿ ಮಳೆ ಎಫೆಕ್ಟ್; ಅಡಿಕೆ ಕೊಯ್ಲಿಗೆ ತೊಂದರೆ
ದಾವಣಗೆರೆ ಜಿಲ್ಲೆಯ ಚನ್ನಗಿರಿ ರಾಜ್ಯದಲ್ಲಿ ಅತಿ ಹೆಚ್ಚು ಅಡಿಕೆ ಬೆಳೆಯುವ ತಾಲೂಕಾಗಿದೆ. 36 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಅಡಿಕೆ ಬೆಳೆ ಕೊಯ್ಲಿಗೆ ಬಂದಿದೆ. ಆದರೆ ನಿರಂತರ ಜಡಿ ಮಳೆಯಿಂದಾಗಿ ಕೊಯ್ಲಿಗೆ ತೊಂದರೆ ಆಗುತ್ತಿದೆ. ರೈತರು ಕಳೆದ ವರ್ಷ ಮಳೆಯಿಲ್ಲದೇ ಟ್ಯಾಂಕರ್ ಮೂಲಕ ನೀರು ಪೂರೈಸಿ ಅಡಿಕೆ ತೋಟ ಉಳಿಸಿಕೊಂಡಿದ್ದರು. ಈ ವರ್ಷ ಉತ್ತಮ ಮಳೆಯಾಗುತ್ತಿದ್ದು, ನಿರಂತರ ಜಡಿ ಮಳೆಯಾಗುತ್ತಿರುವ ಹಿನ್ನೆಲೆ ಅಡಿಕೆ ತೋಟಗಳಲ್ಲಿ ಹೆಜ್ಜೆ ಇಡದ ಸ್ಥಿತಿ ನಿರ್ಮಾಣವಾಗಿದೆ. ಅಡಿಕೆ ಕೊಯ್ಲಿ ಮಾಡದಿದ್ದರೇ ಅಡಿಕೆ ಗೋಟು ಆಗುವ ಭಯವಿದೆ. ಅಡಿಕೆ ಗೋಟು ಆದರೆ ಮಾರುಕಟ್ಟೆಯಲ್ಲಿ ದರ ಕಡಿಮೆಯಾಗಲಿದೆ.
ಬಿರುಗಾಳಿಗೆ ಮುರಿದು ಬಿದ್ದ ವಿದ್ಯುತ್ ಕಂಬ
ಕಾಫಿನಾಡು ಚಿಕ್ಕಮಗಳೂರಲ್ಲಿ ಮಳೆ ತಗ್ಗಿದ್ದರೂ ಗಾಳಿ ವೇಗ ತಗ್ಗುತ್ತಿಲ್ಲ. ಭಾರಿ ಗಾಳಿಗೆ ಬೃಹತ್ ವಿದ್ಯುತ್ ಕಂಬ ಮುರಿದು ಬಿದ್ದಿದೆ. 66 ಕೆ.ವಿ. ವಿದ್ಯುತ್ ಟವರ್ ಅರ್ಧಕ್ಕೆ ಮುರಿದು ಬಿದ್ದಿದೆ. ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಸಮೀಪದ ಆಮೆಕಟ್ಟೆ ಬಳಿ ಘಟನೆ ನಡೆದಿದೆ. ಆಲ್ದೂರು ಹೋಬಳಿಯ ಹತ್ತಾರು ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಬಂದ್ ಆಗಿದೆ. ಇನ್ನು ಎರಡು ದಿನ ಕತ್ತಲಲ್ಲಿ ಕಳೆಯುವಂತಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ