ಬೆಳಗಾವಿ: ಭಾರಿ ಮಳೆಗೆ (Karnataka Rain) ಮರ ಬಿದ್ದು (Tree fall) ಯುವಕನೊರ್ವ ಮೃತಪಟ್ಟರೆ, ಮತ್ತಿಬ್ಬರು ಗಂಭೀರ ಗಾಯಗೊಂಡಿದ್ದಾರೆ. ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ಬಳಿ ದುರ್ಘಟನೆ ನಡೆದಿದೆ. ಕರ್ಲೆ ಗ್ರಾಮದ ಸೋಮನಾಥ್ ಮುಚ್ಚಂಡಿಕರ್ (21) ಮೃತ ದುರ್ದೈವಿ.
ವಿಠ್ಠಲ್ ತಳವಾರ್, ಸ್ವಪ್ನಿಲ್ ದೇಸಾಯಿ ಗಾಯಾಳುಗಳು. ಈ ಮೂವರು ಬೈಕ್‌ನಲ್ಲಿ ಬೆಳಗಾವಿಗೆ ಬರುತ್ತಿದ್ದರು. ಇದೇ ವೇಳೆ ಭಾರಿ ಮಳೆ ಬರುತ್ತಿತ್ತು. ಮಳೆಯಲ್ಲೇ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಏಕಾಏಕಿ ಬೃಹತ್ ಗಾತ್ರದ ಮರವೊಂದು ಧರೆಗುರುಳಿ ಬೈಕ್ ಮೇಲೆ ಬಿದ್ದಿದೆ.
ಮರ ಬಿದ್ದ ರಭಸಕ್ಕೆ ಮುಚ್ಚಂಡಿಕರ್‌ನ ಕರುಳು ಹೊರಗೆ ಬಂದಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತಿಬ್ಬರ ತಲೆಗೂ ಗಂಭೀರ ಗಾಯವಾಗಿದ್ದು, ಸ್ಥಳೀಯರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು, ಸ್ಥಳೀಯರ ಸಹಾಯದೊಂದಿಗೆ ರಸ್ತೆ ಮೇಲೆ ಬಿದ್ದಿದ್ದ ಮರ ತೆರವು ಮಾಡಿದರು. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಭಾರಿ ಗಾಳಿ-ಮಳೆಗೆ ಮರ ಬಿದ್ದು ಕಾರುಗಳು ಜಖಂ
ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ನಗರ ಕೆ.ಸಿ.ವೃತ್ತದಲ್ಲಿ ಭಾರಿ ಗಾಳಿ ಮಳೆಗೆ ಬೃಹತ್ ಗಾತ್ರದ ಮರವೊಂದು ಬಿದ್ದ ಪರಿಣಾಮ ಎರಡು ಕಾರುಗಳಿಗೆ ಹಾನಿಯಾಗಿದೆ. ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಕಾರುಗಳ ಮೇಲೆ ಮರ ಬಿದ್ದು ಜಖಂಗೊಂಡಿದೆ. ಕಳೆದೆರಡು ದಿನಗಳಿಂದ ದಾಂಡೇಲಿ ನಗರದಲ್ಲಿ ಭಾರಿ ಮಳೆ ಸುರಿಯುತ್ತಿದೆ.
ಇದನ್ನೂ ಓದಿ: Drowned in water : ಆಯತಪ್ಪಿ ಘಟಪ್ರಭಾ ನದಿಗೆ ಬಿದ್ದ ಟ್ರಾಕ್ಟರ್; ಓರ್ವ ನೀರುಪಾಲು, 12 ಮಂದಿ ಪಾರು
ರಾಜಧಾನಿ ಬೆಂಗಳೂರಲ್ಲಿ ಮಳೆ ಅಬ್ಬರ
ಭಾನುವಾರ ಬೆಂಗಳೂರಿನ ಹಲವೆಡೆ ಭಾರಿ ಮಳೆಯಾಗಿದೆ. ವೀಕೆಂಡ್ ಮೂಡ್‌ನಲ್ಲಿದ್ದವರಿಗೆ ಮಳೆಯು ಅಡ್ಡಿಯಾಗಿತ್ತು. ಶಿವಾಜಿನಗರ, ಮೆಜೆಸ್ಟಿಕ್, ರಾಜಾಜಿನಗರ, ವಿಧಾನಸೌಧ, ಕೆಆರ್ ಸರ್ಕಲ್ ಹಾಗೂ ಟೌನ್ ಹಾಲ್ ಹಾಗೂ ಜೆ.ಸಿ ರಸ್ತೆ ಸುತ್ತಮುತ್ತ ಮಳೆಯಾಗಿತ್ತು. ವೀಕೆಂಡ್ ಕಳೆಯಲು ಕಬ್ಬನ ಪಾರ್ಕ್‌ಗೆ ಬಂದವರಿಗೆ ದಿಢೀರ್ ಮಳೆಯಿಂದಾಗಿ ತೊಂದರೆ ಆಯಿತು. ಮಳೆಯಿಂದ ಆಶ್ರಯ ಪಡೆಯಲು ಓಡುತ್ತಿದ್ದ ದೃಶ್ಯ ಕಂಡು ಬಂತು. ಜೋರಾಗಿ ಸುರಿದ ಒಂದೂವರೆ ಗಂಟೆ ಮಳೆಗೆ ಕೆಆರ್ ಸರ್ಕಲ್ ರಸ್ತೆಯು ಕೆರೆಯಂತಾಗಿತ್ತು. ಮಳೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್ ಹಾಕಿ ಅಂಡರ್ ಪಾಸ್ ಕ್ಲೋಸ್ ಮಾಡಲಾಗಿತ್ತು.
ಉತ್ತರ ಕನ್ನಡದಲ್ಲಿ ಮುಂದುವರಿದ ವರುಣಾರ್ಭಟ
ಕರಾವಳಿ ಘಟ್ಟದ ಮೇಲಿನ ತಾಲೂಕುಗಳಲ್ಲಿ ಮೂರನೇ ದಿನವೂ ಧಾರಾಕಾರ ಮಳೆಯಾಗಿದೆ. ಮಳೆ ಅಬ್ಬರಕ್ಕೆ ತಗ್ಗು ಪ್ರದೇಶ, ಹಳ್ಳ, ಕೊಳ್ಳಗಳಲ್ಲಿ ನೀರು ತುಂಬಿ ಹರಿದಿತ್ತು. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳದಲ್ಲಿ ಹೆಚ್ಚಿನ ಮಳೆಯಾಗಿದೆ. ಘಟ್ಟದ ಮೇಲಿನ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳದಲ್ಲೂ ಮಳೆಯಾಗಿದೆ.
ಮಳೆಗೆ ತಿಪ್ಪೆಯಂತಾದ ರಸ್ತೆಯಲ್ಲಿ ಓಡಾಟ
ವಿಜಯಪುರ ಜಿಲ್ಲೆ ದೇವರ ಹಿಪ್ಪರಗಿ ತಾಲೂಕಿನ ಮಾರ್ಕಬ್ಬಿನಹಳ್ಳಿ ಗ್ರಾಮದ ಜನರ ಗೋಳು ಕೇಳುವವರು ಇಲ್ಲ. ಮಳೆ ಬಂದರೆ ರಸ್ತೆಗಳು ಎಲ್ಲವೂ ಕೆಸರು ಗದ್ದೆಯಂತಾಗುತ್ತದೆ. ಅತಿಯಾದ ಮಳೆ ಬಂದರೆ ಮನೆಯೊಳಗೆ ನೀರು ನುಗ್ಗುತ್ತದೆ. ಮಾರ್ಕಬ್ಬಿನಹಳ್ಳಿ ಗ್ರಾಮದ ದಲಿತರ ಕೆರಿಯಲ್ಲಿನ ರಸ್ತೆಗಳು ಸಂಪೂರ್ಣ ಕೆಸರುಮಯವಾಗಿದೆ.
ಬಾಗಲಕೋಟೆಯಲ್ಲಿ ಮನೆಗಳಿಗೆ ನುಗ್ಗಿದ ನೀರು
ಬಾಗಲಕೋಟೆ ಜಿಲ್ಲೆಯಲ್ಲಿ ಶನಿವಾರ ಅಬ್ಬರಿಸಿದ ಮಳೆಗಳಿಗೆ ನೀರು ನುಗ್ಗಿ, ತಗ್ಗು ಪ್ರದೇಶದ ನಿವಾಸಿಗಳು ಹೈರಾಣಾದರು. ರಬಕವಿ ನಗರದ ಬಾಬು ಗಂಗಾವತಿ ಅವರ ಮನೆ ಸಂಪೂರ್ಣ ಜಲಮಯವಾಗಿತ್ತು. ಸೂಕ್ತ ಒಳಚರಂಡಿ ವ್ಯವಸ್ಥೆ ಮಾಡದ ನಗರ ಸಭೆ ವಿರುದ್ಧ ನಿವಾಸಿಗಳು ಆಕ್ರೋಶ ಹೊರಹಾಕಿದರು. ಕುಟುಂಬದ ಸದಸ್ಯರು ಬಕೆಟ್‌ನಿಂದ ಮಳೆ ನೀರು ಹೊರ ಹಾಕಿದರು.
ಕೋಲಾರದಲ್ಲಿ ಬಿರುಗಾಳಿ ಸಹಿತ ಮಳೆಗೆ ನೆಲಕಚ್ಚಿದ ಬಿನ್ಸ್ ಬೆಳೆ
ಬಿರುಗಾಳಿ ಸಹಿತ ಸುರಿದ ಮಳೆಗೆ ಮೂರು ಎಕರೆಯಲ್ಲಿ ಪಾಲಿ ಹೌಸ್ ನಿರ್ಮಾಣ ಮಾಡಿ ಬೆಳೆದಿದ್ದ ಬಿನ್ಸ್ ಬೆಳೆ ಹಾಳಾಗಿತ್ತು. ಎರಡು ದಿನದ ಹಿಂದೆ ಸುರಿದ ಬಿರುಗಾಳಿ ಸಹಿತ ಮಳೆ ಪಾಲಿ ಹೌಸ್ ಧ್ವಂಸವಾಗಿತ್ತು. ಕೋಲಾರ ತಾಲ್ಲೂಕಿನ ಚೆಲ್ಲಹಳ್ಳಿ ಗ್ರಾಮದ ರೈತ ಅದಿ ಮೂರ್ತಿ ಎಂಬುವರು ಬೆಳೆದಿದ್ದ ಬಿನ್ಸ್ ಬೆಳೆಗೆ ಹಾನಿಯಾಗಿತ್ತು. ಉಷ್ಣಾಂಶದಿಂದ ಬೆಳೆ ಹಾನಿ ತಪ್ಪಿಸಲು ಪಾಲಿ ಹೌಸ್ ನಿರ್ಮಾಣಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿತ್ತು. ಸುಮಾರು ನಲವತ್ತು ಲಕ್ಷ ಖರ್ಚು ಮಾಡಿ ಮೂರು ಎಕರೆಯಲ್ಲಿ ಬೆಳೆದಿದ್ದ ಬೆಳೆಯು ನೆಲಕಚ್ಚಿದೆ.
ಮಳೆ ಅನಾಹುತ; ಉಕ್ಕಿ ಹರಿವ ನೀರಲ್ಲೆ ಜೆಸಿಬಿ ಮೂಲಕ ರಸ್ತೆ ದಾಟಿದ ಗ್ರಾಮಸ್ಥರು
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಹತ್ತರಕಿಹಾಳ ಗ್ರಾಮದಲ್ಲಿ ಶನಿವಾರ ರಾತ್ರಿ ಸುರಿದ ಮಳೆಯಿಂದಾಗಿ ಗ್ರಾಮದ ಹಳ್ಳ ತುಂಬಿ ಹರಿಯುತ್ತಿದೆ. ಹೀಗಾಗಿ ವಾಹನ ಸಂಚಾರ ಬಂದ್ ಆಗಿದ್ದರಿಂದ ಗ್ರಾಮಸ್ಥರು ಜೆಸಿಬಿ ಮೂಲಕ ಸೇತುವೆ ದಾಟಿದರು. ಹತ್ತರಕಿಹಾಳ ಗ್ರಾಮದಿಂದ ಬಸವನ ಬಾಗೇವಾಡಿ ರಸ್ತೆ ಸಂಚಾರ ಬಂದ್ ಆಗಿದೆ. ಬಸ್ಸಿನಲ್ಲಿ ಬಂದ ಗ್ರಾಮಸ್ಥರನ್ನು ಜೆಸಿಬಿ ಮೂಲಕ ಸೇತುವೆ ದಾಟಿಸಲಾಯಿತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ