Site icon Vistara News

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

karnataka Weather Forecast

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಹಲವು ದಿನಗಳಿಂದ ಮೋಡ ಕವಿದ ವಾತಾವರಣ (Karnataka Weather Forecast) ಇತ್ತು. ಮಧ್ಯಾಹ್ನದ ಹೊತ್ತು ಕೆಲವೊಮ್ಮೆ ಜಿಟಿ ಜಿಟಿ ಮಳೆಯ (Rain News) ಸಿಂಚನವಾಗುತ್ತಿತ್ತು. ಭಾನುವಾರ ಗಾಳಿಯೊಂದಿಗೆ ಮಳೆಯಾಗಿದೆ. ಮೆಜೆಸ್ಟಿಕ್, ಕೆಆರ್‌ವೃತ್ತ, ಕಾರ್ಪೋರೇಶನ್ ಸರ್ಕಲ್‌, ಕೆಆರ್‌ ಮಾರ್ಕೆಟ್, ಶೇಷಾದ್ರಿಪುರಂ, ಗಾಂಧಿನಗರ, ಶಿವಾಜಿನಗರ. ವಿಧಾನಸೌಧ ಸುತ್ತಮುತ್ತ ಮಳೆಯಾಗಿದೆ. ಇತ್ತ ದಿಢೀರ್‌ ಬಂದ ಮಳೆಗೆ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸಮಸ್ಯೆಯುಂಟಾಯಿತು.

ಇತ್ತ ಕಲಬುರಗಿಯಲ್ಲಿ ಭಾನುವಾರ ವರುಣನ ಆರ್ಭಟ ಜೋರಾಗಿತ್ತು. ಒಂದು ಗಂಟೆಗೂ ಹೆಚ್ಚು ಸಮಯ ಮಳೆ ಸುರಿದು,ಜನ ಜೀವನ ಅಸ್ತವ್ಯಸ್ತವಾಗಿತ್ತು. ಕೊಪ್ಪಳದಲ್ಲೂ ಕಳೆದ ಒಂದು ವಾರ ಬಿಡುವು ನೀಡಿದ್ದ ಮಳೆರಾಯ ಭಾನುವಾರ ಅಬ್ಬರಿಸಿದ್ದ. ಕೊಪ್ಪಳ ತಾಲೂಕಿನ‌ ಹಿರೇಸಿಂದೋಗಿ ಸುತ್ತಮುತ್ತ ಉತ್ತಮ ಮಳೆಯಾಗಿದೆ.

ಇದನ್ನೂ ಓದಿ: Kidnap case : ಕೋಟಿ ಆಸೆಗೆ ಸಿನಿಮಾ ಸ್ಟೈಲ್‌ನಲ್ಲಿ ಸ್ಟಾಕ್‌ ಮಾರ್ಕೆಟ್‌ ವಂಚಕನ ಕಿಡ್ನ್ಯಾಪ್‌

ಭಾರಿ ಮಳೆ ಎಫೆಕ್ಟ್‌ ರಾ.ಹೆ 275ರಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ

ಕೊಡಗಿನಲ್ಲಿ ಕಳೆದ ಮೂರು ದಿನಗಳಿಂದ ಸುರಿದ ಮಳೆಯ ಎಫೆಕ್ಟ್‌ನಿಂದಾಗಿ, ಜಿಲ್ಲೆಯಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ ಹಾಕಲಾಗಿದೆ. ಕೊಡಗು ಡಿಸಿ ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾದ ವೆಂಕಟ್ ರಾಜಾ ಆದೇಶ ಹೊರಡಿಸಿದ್ದಾರೆ.

ಜುಲೈ 1ರಿಂದ ಜುಲೈ 30ರವರೆಗೆ ಭಾರಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಅಗತ್ಯ ವಸ್ತುಗಳ ಪೂರೈಕೆ ಹಾಗೂ ಸಾರ್ವಜನಿಕ ಪ್ರಯಾಣಿಕರ ವಾಹನಗಳಿಲ್ಲ ಯಾವುದೇ ನಿರ್ಬಂಧ ಇಲ್ಲ. ಗುಡ್ಡದ ಬದಿಯಿಂದ ಮಣ್ಣು ಕುಸಿತಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ ಹಾಕಲಾಗಿದೆ. ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಭಾರಿ ಗಾತ್ರದ ವಾಹನಗಳು ಹೆಚ್ಚು ಸಂಚರಿಸುತ್ತಿದ್ದವು.

ಭೋರ್ಗರೆದ ಧನುಷ್ ಕೋಟಿ ಜಲಪಾತ

ಮೈಸೂರಿನ ಕಾವೇರಿ ಕೊಳ್ಳದಲ್ಲಿ ಭರ್ಜರಿ ಮಳೆ ಹಿನ್ನೆಲೆಯಲ್ಲಿ ಧನುಷ್ ಕೋಟಿ ಜಲಪಾತ ಭೋರ್ಗರೆದಿದೆ. ಮೈಸೂರಿನ ಕೆಆರ್ ನಗರದ ಚುಂಚನಕಟ್ಟೆ ಬಳಿ ಇರುವ ಧನುಷ್ಕೋಟಿ ಜಲಪಾತಕ್ಕೆ ಪ್ರವಾಸಿಗರ ಕೈಬೀಸಿ ಕರೆಯುತ್ತಿದೆ.

ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಳ

ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಕೃಷ್ಣಾ ನದಿಯ ಒಳಹರಿವು ಹೆಚ್ಚಳಗೊಂಡಿದೆ. ಚಿಕ್ಕೋಡಿ ತಾಲೂಕಿನ ಮಾಂಜರಿ, ಬಾವನಸೌದತ್ತಿ ಸಂಪರ್ಕಿಸುವ ಹಳೆ ಸೇತುವೆ ಜಲಾವೃತಗೊಂಡಿದೆ.

ಕರಾವಳಿಗೆ ಭಾರಿ ಮಳೆ ಮುನ್ಸೂಚನೆ

ಜುಲೈ 1ರಂದು ಕರಾವಳಿಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಗಾಳಿಯ ವೇಗವು 30-40 ಕಿ.ಮೀ ತಲುಪುವ ಸಾಧ್ಯತೆಯಿದೆ ಹಾಗೂ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಗಾಳಿ ಜತೆಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಮಧ್ಯಮ ಮಳೆಯಾಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version