ಬೆಂಗಳೂರು: ಒಳನಾಡು ಸೇರಿ ಮಲೆನಾಡು, ಕರಾವಳಿಯಲ್ಲಿ ಮಳೆಯು (Karnataka Weather Forecast) ಅಬ್ಬರಿಸುತ್ತಿದೆ. ಶುಕ್ರವಾರವೂ ಹಲವೆಡೆ ಮಳೆಯಾಗಿದೆ. ಧಾರವಾಡದಲ್ಲಿ ಕಳೆದ ಅರ್ಧ ಗಂಟೆಗೂ ಹೆಚ್ಚು ಸಮಯ (Rain News) ಮಳೆಯಾಗಿದೆ. ಕಳೆದ ಒಂದು ವಾರದಿಂದ ನಗರದಲ್ಲಿ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಧಾರವಾಡ ಗ್ರಾಮೀಣ ಭಾಗದಲ್ಲೂ ಮಳೆಯು ಅಬ್ಬರಿಸಿದೆ. ಇತ್ತ ಕೊಡಗಿನಲ್ಲಿ ಮತ್ತೆ ಮಳೆಯು ವ್ಯಾಪಿಸಿದೆ. ಎರಡು ದಿನಗಳಿಂದ ಕೊಂಚ ಬಿಡುವು ನೀಡಿದ್ದ ಮಳೆಯು, ಶುಕ್ರವಾರ ಮಧ್ಯಾಹ್ನದ ನಂತರ ಜಿಲ್ಲೆಯಾದ್ಯಂತ ಅಬ್ಬರಿಸಿದೆ. ಮಳೆಗೆ ಕಾವೇರಿ ನದಿ ತುಂಬಿ ಹರಿಯುತ್ತಿದ್ದು, ಹಾರಂಗಿ ಜಲಾಶಕ್ಕೆ ಹೆಚ್ಚಾದ ಒಳ ಹರಿವಿನ ಪ್ರಮಾಣ ಹೆಚ್ಚಳಗೊಂಡಿದೆ.
ಜುಲೈ 6ಕ್ಕೂ ಶಾಲಾ-ಕಾಲೇಜುಗಳಿಗೆ ರಜೆ
ಕರಾವಳಿಯಲ್ಲಿ ಭಾರೀ ಮಳೆ ಅಬ್ಬರ ಹಿನ್ನೆಲೆಯಲ್ಲಿ ಜುಲೈ 6 ರಂದು ಕುಮಟಾ, ಹೊನ್ನಾವರ, ಭಟ್ಕಳ ತಾಲೂಕಿನ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್‌ರಿಂದ ಆದೇಶ ಹೊರಡಿಸಲಾಗಿದೆ. ಪದವಿ ಕಾಲೇಜು ಹೊರತುಪಡಿಸಿ ಉಳಿದ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಕಳೆದ ಎರಡು ದಿನಗಳಿಂದ ಭಾರೀ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ರಸ್ತೆ, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಧಾರಾಕಾರ ಮಳೆಗೆ ಸೇತುವೆಗಳು ಮುಳುಗಡೆ
ಮಹಾರಾಷ್ಟ್ರ ಮತ್ತು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಎರಡು ಸಂಪರ್ಕ ಸೇತುವೆಗಳು ಮುಳುಗಡೆಯಾಗಿವೆ. ಕೃಷ್ಣಾ ವೇದಗಂಗಾ ಹಾಗೂ ದೂದಗಂಗಾ ನದಿ ಮೈದುಂಬಿ ಹರಿಯುತ್ತಿದ್ದು, ನಿಪ್ಪಾಣಿ ತಾಲೂಕಿನ ಬಾರವಾಡ-ಕುನ್ನೂರ ಸಂಪರ್ಕಿಸುವ ಸೇತುವೆ ಜಲಾವೃತಗೊಂಡಿದೆ.
ವೇದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಮುಳುಗಡೆಯಾಗಿದೆ. ದೂದಗಂಗಾ ನದಿಯಿಂದ ಕಾರದಗಾ-ಭೋಜ ಸಂಪರ್ಕಿಸುವ ಸೇತುವೆ ಜಲಾವೃತಗೊಂಡಿದೆ. ಕೃಷ್ಣಾ ನದಿಗೆ ಸುಮಾರು 50 ಸಾವಿರ ಕ್ಯೂಸೆಕ್ ನೀರಿನ ಒಳಹರಿವು ಹೆಚ್ಚಾಗಿದೆ. ಹೀಗಾಗಿ ನದಿಗೆ ಇಳಿಯದಂತೆ ಬೆಳಗಾವಿ ಜಿಲ್ಲಾಡಳಿತದಿಂದ ನದಿ ಪಾತ್ರದ ಜನರಿಗೆ ಸೂಚನೆ ನೀಡಿದೆ. ಆದರೆ ಜಿಲ್ಲಾಡಳಿತದ ಮನವಿಗೆ ಕ್ಯಾರೇ ಎನ್ನದ ಜನರು ನದಿಯಲ್ಲಿ ಇಳಿದು ಅಪಾಯಮಟ್ಟ ಮೀರಿ ಹರಿಯುತ್ತಿರುವ ನದಿಯಲ್ಲಿ ಮೀನು ಹಿಡಿಯಲು ಮುಂದಾಗಿದ್ದಾರೆ. ಹೀಗಾಗಿ ನದಿ ಬಳಿ ಬಂದೋಬಸ್ತ್ ಸಲುವಾಗಿ ಜಿಲ್ಲಾಡಳಿತದಿಂದ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಶಿರೂರು ಸಮೀಪ ಗುಡ್ಡ ಕುಸಿಯುವ ಭೀತಿ
ಉಡುಪಿಯ ಶಿರೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿಯುವ ಭೀತಿ ಹೆಚ್ಚಾಗಿದೆ. ಬೈಂದೂರು ತಾಲೂಕು, ಶಿರೂರು ಸಮೀಪದಲ್ಲಿ ಗುಡ್ಡ ಜರಿಯುವ ಸಾಧ್ಯತೆ ಇದೆ. ಐಆರ್‌ಬಿ ಸಂಸ್ಥೆಯಿಂದ ರಾಷ್ಟ್ರೀಯ ಹೆದ್ದಾರಿ ಶತಶಪಥ ಕಾಮಗಾರಿಯ ವೇಳೆ ಗುಡ್ಡ ಕೊರೆಯಲಾಗಿತ್ತು. ಅವೈಜ್ಞಾನಿಕ ಕಾಮಗಾರಿ ಹಿನ್ನೆಲೆಯಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ಗುಡ್ಡ ಜರಿಯುವ ಭೀತಿ ಇದೆ.
ಕಳೆದ ಮೂರು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಒತ್ತಿನಣೆಯಲ್ಲಿ ನಿಧಾನವಾಗಿ ಜರಿದು ಗುಡ್ಡ ಬೀಳುತ್ತಿದೆ. ಮಳೆ ಮುಂದುವರೆದರೆ ಸಂಪೂರ್ಣ ಗುಡ್ಡ, ಹೆದ್ದಾರಿ ಮೇಲೆ ಕುಸಿಯುವ ಭೀತಿ ಇದೆ. ಒಂದು ವೇಳೆ ಗುಡ್ಡ ಜರಿದರೆ ಉತ್ತರ ಕನ್ನಡ, ಉಡುಪಿ ಜಿಲ್ಲೆಗೆ ಸಂಪರ್ಕ ಬಂದ್ ಆಗಲಿದೆ.
ಚಿತ್ರದುರ್ಗದಲ್ಲಿ ಶಾಲೆಗೆ ನುಗ್ಗಿದ ನೀರು
ಚಿತ್ರದುರ್ಗ ಜಿಲ್ಲೆಯಲ್ಲಿ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಕಳ್ಳಿಹಟ್ಟಿ ಗೊಲ್ಲರಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀರು ನುಗ್ಗಿದೆ. ಜತೆಗೆ ಶಾಲಾ ಕೊಠಡಿಯಲ್ಲಿ ನೀರು ಸೋರುತ್ತಿದೆ. ಹೀಗಾಗಿ ಶಿಕ್ಷಕರು ಮಕ್ಕಳನ್ನು ಒಂದು ಮೂಲೆಗೆ ಕೂರಿಸಿದ್ದಾರೆ. ನೂತನ ಕಟ್ಟಡ ಅಥವಾ ಬೇರೊಂದು ಕಟ್ಟಡ ಕಟ್ಟಿಸಿಕೊಡುವಂತೆ ಹಲವು ಬಾರಿ ಶಾಲಾ ಸಿಬ್ಬಂದಿ ಮನವಿ ಮಾಡಿದ್ದಾರೆ. ಆದರೆ ಶಿಕ್ಷಣ ಇಲಾಖೆ ಅಧಿಕಾರಿಗಳು ಮೌನಕ್ಕೆ ಜಾರಿದ್ದಾರೆ.
ಒತ್ತಿನೆಣೆ ಬೀಚ್‌ನಲ್ಲಿ ಪ್ರವಾಸಿಗರ ಹುಚ್ಚಾಟ
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಪ್ರವಾಸಿ ತಾಣ ಒತ್ತಿನೆಣೆ ಬೀಚ್‌ನಲ್ಲಿ ಸುರಿಯುತ್ತಿರುವ ಮಳೆಯಲ್ಲಿ ಪ್ರವಾಸಿಗರ ಹುಚ್ಚಾಟ ಮಿತಿಮೀರಿದೆ. ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಬಹುತೇಕ ಎಲ್ಲಾ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶವನ್ನು ಜಿಲ್ಲಾಡಳಿತ ನಿಷೇಧ ಹೇರಿದೆ. ಅದರಲ್ಲೂ ಎಲ್ಲಾ ಬೀಚ್‌ಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಾಚ್ ಗಾರ್ಡ್ ಸಿಬ್ಬಂದಿ ಕಣ್ಗಾವಲು ಇದೆ. ಆದರೂ ಅಪ್ಪಳಿಸಿ ಬರುವ ಅಲೆಗಳ ಮುಂದೆ ಸೆಲ್ಫಿ ತೆಗೆಯಲು ಪ್ರವಾಸಿಗರು ಯತ್ನಿಸುತ್ತಿದ್ದಾರೆ.
ಅಪಾಯದಲ್ಲಿರುವ ಬಳ್ಕುಂಜೆ -ಪಲಿಮಾರು ಸಂಪರ್ಕ ಸೇತುವೆ
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯನ್ನು ಸಂಪರ್ಕಿಸುವ ಮುಲ್ಕಿ ಸಮೀಪದ ಬಳ್ಕುಂಜೆ -ಪಲಿಮಾರು ಸಂಪರ್ಕ ಸೇತುವೆ ಅಪಾಯದಲ್ಲಿದೆ. ಸ್ಥಳೀಯರ ದೂರಿನಂತೆ ಜಿಲ್ಲಾಡಳಿತವು ಘನ ವಾಹನ ಸಂಚಾರ ನಿಷೇಧಿಸಿದೆ. ಸೇತುವೆಯ ಅಡಿ ಭಾಗದಲ್ಲಿ ತುಂಡು ತುಂಡಾಗಿ ಬೀಮ್‌ಗಳ ಸಿಮೆಂಟ್‌ಗಳು ಬೀಳುತ್ತಿವೆ. ನಿರಂತರ ಅಕ್ರಮ ಮರುಳು ಸಾಗಾಟವೇ ಇದಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಈ ಭಾಗದಲ್ಲಿ ಪೋಲಿಸ್ ಚೆಕ್ ಪೋಸ್ಟ್ ಇಲ್ಲದಿರುವುದು ಮರಳು ದಂದೆಕೋರರಿಗೆ ವರದಾನವಾಗಿದೆ ಎಂದು ಕಿಡಿಕಾರಿದ್ದಾರೆ. ಬಳ್ಕುಂಜೆ ಭಾಗದಿಂದ ಪಲಿಮಾರು, ಉಡುಪಿ, ನಿಟ್ಟೆ, ಬೆಳ್ಮಣ್, ಕುದುರೆಮುಖ, ಹೆಬ್ರಿ, ಸಾಗರ ಮೊದಲಾದ ಕಡೆಗೆ ಸಂಪರ್ಕಿಸುವ ರಸ್ತೆ ಇದಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ