Site icon Vistara News

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka weather Forecast

ಚಿಕ್ಕಮಗಳೂರು/ಬೆಂಗಳೂರು: ಚಿಕ್ಕಮಗಳೂರಿನಲ್ಲಿ ಗಾಳಿ-ಮಳೆ (karnataka Weather Forecast) ಅಬ್ಬರ ಮುಂದುವರಿದಿದ್ದು, ಹೇಮಾವತಿ ನದಿಗೆ ಮತ್ತೊಂದು ಕಾರು ಬಿದ್ದಿದೆ. ಭಾರಿ ಮಳೆಯಿಂದ (Rain News) ಚಾಲಕನ ನಿಯಂತ್ರಣ ತಪ್ಪಿ ನದಿಗೆ ಹಾರಿದೆ. ನಿನ್ನೆ ಶುಕ್ರವಾರ ಕೂಡ ಇದೇ ಜಾಗದಲ್ಲಿ, ಇದೇ ಶೈಲಿಯಲ್ಲಿ ಕಾರು ಬಿದ್ದಿತ್ತು. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದ ಬಳಿ ಘಟನೆ ನಡೆದಿದೆ.

ಕಾರಿನಲ್ಲಿದ್ದ ನಾಲ್ವರಿಗೆ ಸಣ್ಣ-ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳ್ತಂಗಡಿಯಿಂದ ಮೂಡಿಗೆರೆಗೆ ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆ ಹಾರಿ ನದಿಗೆ ಬಿದ್ದಿದೆ. ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳೀಯ ಸಹಾಯದಿಂದ ಕಾರನ್ನು ಮೇಲೆ ಎತ್ತಲಾಗಿದೆ.

ಜೂ 28ರಂದು ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಣಕಲ್ ಬಳಿ ನೋಡ ನೋಡುತ್ತಿದ್ದಂತೆ ‌ಕಾರು ಹೇಮಾವತಿ ನದಿಗೆ ಹಾರಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ನಿಂತ ಹಿನ್ನೆಲೆಯಲ್ಲಿ ರಸ್ತೆ ಕಾಣದೆ ಕಾರು ನಿಯಂತ್ರಣ ತಪ್ಪಿರುವ ಶಂಕೆ ವ್ಯಕ್ತವಾಗಿತ್ತು. ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಯಿಂದ ಜಿಗಿದು ನದಿಗೆ ಕಾರು ಬಿದ್ದಿತ್ತು. ಕಳೆದ ಎರಡು ತಿಂಗಳ ಹಿಂದೆ ನಾಲ್ವರು ಅಪಘಾತದಲ್ಲಿ ಮೃತಪಟ್ಟಿದ್ದರು. ಇದೀಗ ಇದೆ ಸ್ಥಳದಲ್ಲೇ ಮತ್ತೆರಡು ಅಪಘಾತ ಸಂಭವಿಸಿದೆ.

ಇದನ್ನೂ ಓದಿ: Road Accident : ಬೆಂ-ಮೈ ಎಕ್ಸ್‌ಪ್ರೆಸ್‌ ವೇನಲ್ಲಿ ಡಿವೈಡರ್‌ಗೆ ಗುದ್ದಿ ಹಳ್ಳಕ್ಕೆ ಜಿಗಿದ ಕೆಎಸ್‌ಆರ್‌ಟಿಸಿ; ಶಿರಾಡಿಘಾಟ್‌ನಲ್ಲಿ ಸರಣಿ ಅಪಘಾತ

ಕರಾವಳಿಯಲ್ಲಿ ವಿಪರೀತ ಮಳೆ

ಜೂನ್‌ 30ರಂದು ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.‌ ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದಲ್ಲಿ ಪ್ರತ್ಯೇಕ ಕಡೆಗಳಲ್ಲಿ ವ್ಯಾಪಕ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಉಳಿದಂತೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯೊಂದಿಗೆ ಗಾಳಿ ವೇಗವು ಗಂಟೆಗೆ 30-40 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ. ದಕ್ಷಿಣ ಒಳನಾಡಿನಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ಬೆಂಗಳೂರು ಸುತ್ತಮುತ್ತ ಮೋಡ ಕವಿದ ವಾತಾವರಣ

ಬೆಂಗಳೂರು ಸುತ್ತಮುತ್ತ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವೊಮ್ಮೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಹಾಗೂ ಕನಿಷ್ಠ ಉಷ್ಣಾಂಶ ಕ್ರಮವಾಗಿ 30-21 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version