ತುಮಕೂರು/ ಚಿಕ್ಕಮಗಳೂರು: ರಾಜ್ಯದ ಹಲವೆಡೆ ಮಳೆಯು (Karnataka Weather) ಅಬ್ಬರಿಸುತ್ತಿದ್ದು, ಅವಾಂತರವನ್ನೇ ಸೃಷ್ಟಿ ಮಾಡಿದೆ. ತುಮಕೂರಲ್ಲಿ ಸಿಡಿಲಿಗೆ ಹಸುವೊಂದು ಬಲಿಯಾಗಿದ್ದು, ನಾಲ್ಕು ಜಾನುವಾರುಗಳಿಗೆ ಸುಟ್ಟ ಗಾಯವಾಗಿವೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ರಂಗಸಮುದ್ರ ಗ್ರಾಮದಲ್ಲಿ ಘಟನೆ ನಡೆದಿದೆ.
ಕರಿಯಪ್ಪ ಎಂಬುವರಿಗೆ ಸೇರಿದ ಜಾನುವಾರುಗಳನ್ನು ತೋಟದಲ್ಲಿದ್ದ ಗುಡಿಸಿಲಿನ ಕೊಟ್ಟಿಗೆಯಲ್ಲಿ ಕಟ್ಟಿದ್ದರು. ಆದರೆ ಸಿಡಿಲು ಬಡಿದು ಕೊಟ್ಟಿಗೆ ಹೊತ್ತಿ ಉರಿದಿದೆ. ಈ ವೇಳೆ ಬೆಂಕಿ ನಂದಿಸಲು ಹೋದ ಮಹಾಲಿಂಗನಿಗೂ ಗಾಯವಾಗಿದೆ. ಕರಿಯಪ್ಪ ಹಾಗೂ ಆತನ ಮಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಡಿಲು ಬಡಿದ ಪರಿಣಾಮ ಗುಡಿಸಲು ಭಸ್ಮವಾಗಿದೆ. ಅರಸಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಿಕ್ಕಮಗಳೂರಲ್ಲಿ ಮಳೆ ಅವಾಂತರ
ಚಿಕ್ಕಮಗಳೂರಿನಲ್ಲಿ ಮಳೆ ಅವಾಂತರ ಮುಂದುವರಿದಿದೆ. ಭಾರಿ ಗಾಳಿ ಮಳೆಗೆ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿತ್ತು. ಇದರಿಂದಾಗಿ ಮೇಲ್ಪಾಲ್, ಕೊಪ್ಪ, ಬಾಳೆಹೊನ್ನೂರು ರಸ್ತೆ ಸಂಪರ್ಕ ಕಡಿತವಾಗಿದೆ. ಎನ್‌ಆರ್ ಪುರ ತಾಲೂಕಿನ ಅರಳಿ ಕೊಪ್ಪ ತಿರುವಿನಲ್ಲಿ ಘಟನೆ ನಡೆದಿದೆ. ರಸ್ತೆಗೆ ಮರ ಬಿದ್ದ ಕಾರಣಕ್ಕೆ ಮಾರ್ಗ ಬಂದ್ ಆಗಿದ್ದು, ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಬದಲಿ ಮಾರ್ಗದಲ್ಲಿ ಸುತ್ತಾಡಿ ಸಂಚರಿಸುವಂತಾಯಿತು.
ಇತ್ತ ಭಾರಿ ಗಾಳಿ ಮಳೆಗೆ ಚಿಕ್ಕಮಗಳೂರು ತಾಲೂಕಿನ ಗಾಳಿಹಳ್ಳಿ, ತಿಮ್ಮನಹಳ್ಳಿ ಗ್ರಾಮಗಳು ತತ್ತರಿಸಿ ಹೋಗಿವೆ. ರಸ್ತೆಯ ಮೇಲೆ ನದಿಯಂತೆ ನೀರು ಹರಿಯುತ್ತಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಮಳೆಯಿಂದಾಗಿ ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ಸಂಚಾರ ಸ್ಥಗಿತವಾಗಿತ್ತು.
ಇದನ್ನೂ ಓದಿ: Murder case : ಬಯಲು ಶೌಚಾಲಯಕ್ಕೆ ಹೋದ ಬಾಲಕನ ದೊಣ್ಣೆಯಿಂದ ಹೊಡೆದು ಕೊಂದರು
ರಾಯಚೂರಿನಲ್ಲಿ ಮಳೆಗೆ ಕೊಚ್ಚಿ ಹೋದ ರಸ್ತೆ
ರಾಯಚೂರಿನಲ್ಲಿ ಗುರುವಾರ ರಾತ್ರಿ ಸುರಿದ ಮಳೆಗೆ ರಸ್ತೆಯೇ ಕೊಚ್ಚಿ ಹೋಗಿದೆ. ರಾಯಚೂರು ಗ್ರಾಮೀಣ ತಾಲೂಕಿನ ಬಿ ಯದ್ಲಾಪುರ ಗ್ರಾಮದಲ್ಲಿ ಹಳ್ಳದ ನೀರಿನ ರಭಸಕ್ಕೆ ರಸ್ತೆ ಕೊಚ್ಚಿ ಹೋಗಿದೆ. ಸದ್ಯ ಬಿ ಯದ್ಲಾಪುರ ಮತ್ತು ಗಿಲ್ಲೆಸಗೂರು ಕ್ಯಾಂಪ್ ನಡುವಿನ ಸಂಪರ್ಕ ಕಡಿತವಾಗಿದೆ. ರಸ್ತೆ ಕಡಿತವಾಗಿದ್ದರಿಂದ ರಾಯಚೂರು ಮತ್ತು ಮಂತ್ರಾಲಯಕ್ಕೆ ತೆರಳುವವರಿಗೆ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪರದಾಡಬೇಕಾಯಿತು.
ವಿಜಯಪುರದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಮರ
ವಿಜಯಪುರ ನಗರದ ನಾಲಬಂದ್ ಗಲ್ಲಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ತೆಂಗಿನ ಮರವೊಂದು ಹೊತ್ತಿ ಉರಿದಿದೆ. ಭಾರಿ ಮಳೆಯಿಂದಾಗಿ ತೆಂಗಿನ ಗರಿಯು ವಿದ್ಯುತ್ ಕಂಬದ ಮೇಲೆ ಬಿದ್ದಿದೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಇಡೀ ತೆಂಗಿನ ಮರದಲ್ಲಿ ಬೆಂಕಿ ಆವರಿಸಿತ್ತು. ಇದರಿಂದಾಗಿ ಕೆಲಕಾಲ ಆತಂಕ ಉಂಟಾಗಿತ್ತು. ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಿಕ್ಕಮಗಳೂರು, ಕೊಪ್ಪಳದಲ್ಲಿ ಮಳೆಗೆ ತುಂಬಿ ಹರಿದ ಹಳ್ಳ ಕೊಳ್ಳಗಳು
ಚಿಕ್ಕಮಗಳೂರಿನಲ್ಲಿ ರಾತ್ರಿಯಿಡೀ ಸುರಿದ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಹರಿದವು. ಕಳಸಾಪುರ, ಬೆಳವಾಡಿ, ಕೆ.ಬಿ ಹಾಳ್, ಈಶ್ವರ ಹಳ್ಳಿ ಭಾಗದಲ್ಲಿ ಉತ್ತಮ ಮಳೆಯಾಗಿದೆ. ತುಂಗ, ಭದ್ರಾ ನದಿಗಳ ನೀರಿನ ಮಟ್ಟದಲ್ಲಿ ಏರಿಕೆ ಆಗಿದೆ. ಕುದುರೆಮುಖ ಪರ್ವತ ಶ್ರೇಣಿಯಲ್ಲಿ ಭಾರಿ ಮಳೆ ಹಿನ್ನೆಲೆ ತುಂಗಾ ಹಾಗೂ ಭದ್ರಾ ನದಿಗಳ ನೀರಿನ ಮಟ್ಟದಲ್ಲಿ ಅಲ್ಪ ಪ್ರಮಾಣದ ಏರಿಕೆ ಆಗಿದೆ.
ಕೊಪ್ಪಳದಲ್ಲೂ ಭಾರಿ ಮಳೆಯಾಗುತ್ತಿದ್ದು, ಹಳ್ಳ- ಕೊಳ್ಳಗಳು ತುಂಬಿ ಹರಿಯುತ್ತಿವೆ. ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದಲ್ಲಿ ಬ್ರಿಡ್ಜ್ ಮುಳುಗಡೆಗೆ ಕೆಲವೇ ಅಡಿಗಳು ಬಾಕಿ ಇದೆ. ಲಕ್ಷ್ಮೀ ಕ್ಯಾಂಪ್-ಗುಂಡೂರು ರಸ್ತೆ ಸಂಪರ್ಕ ಸೇತುವೆ ಇದಾಗಿದೆ. ಇನ್ನೂ ಬ್ರಿಡ್ಜ್ ಮೇಲೆ ನಿಂತು ತುಂಬಿ ಹರಿಯುತ್ತಿರುವ ಹಳ್ಳವನ್ನು ಕಣ್ತುಂಬಿಕೊಂಡರು.
ರಾಯಚೂರಿನಲ್ಲಿ ವಾಹನ ಸವಾರರ ಪರದಾಟ
ರಾಯಚೂರಲ್ಲಿ ರಾತ್ರಿ ಸುರಿದ ಮಳೆಗೆ ವಾಹನ ಸವಾರರು ಪರದಾಡಿದರು. ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ರೈಲ್ವೆ ಬಿಡ್ಜ್ ಕೆಳಗೆ ನೀರು ನಿಂತು, ತಗ್ಗು ಗುಂಡಿ ತಪ್ಪಿಸಿ ವಾಹನ ಚಲಾಯಿಸಲು ಸವಾರರು ಹರಸಾಹಸ ಪಟ್ಟರು. ರಾಯಚೂರು-ಹೈದ್ರಬಾದ್ ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. 2 ಬದಿಯಲ್ಲಿ ಕಿಲೋ ಮೀಟರ್ ಗಟ್ಟಲೆ ಸಾಲುಗಟ್ಟಿ ವಾಹನಗಳು ನಿಂತಿದ್ದವು. ಮಳೆ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಇಲ್ಲದೆ ಇರುವುದೇ ಈ ಅವಾಂತರಕ್ಕೆ ಕಾರಣ ಎನ್ನಲಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ