Site icon Vistara News

Karnataka Weather : ಥಂಡಿ ಮಿಶ್ರಿತ ಗಾಳಿ-ಮಳೆಗೆ ಹೈರಣಾದ ಜನತೆ; ಜು.25ರವರಗೆ ಮಳೆ ಮುಂದುವರಿಕೆ

karnataka Weather Forecast

ಬೆಂಗಳೂರು/ವಿಜಯನಗರ: ಭಾನುವಾರ ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯು (Karnataka Weather Forecast) ಅಬ್ಬರಿಸಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮಧ್ಯಾಹ್ನದಿಂದ ಜಿಟಿಜಿಟಿ ಮಳೆಯಾಗಿತ್ತು. ಥಂಡಿ ಮಿಶ್ರಿತ ಗಾಳಿ ಜತೆಗೆ ಜಿಟಿ ಜಿಟಿ ಮಳೆಗೆ (Rain news) ಜನರು ಹೈರಾಣಾದರು. ಹಡಗಲಿ, ಹರಪನಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ ತಾಲೂಕುಗಳಲ್ಲಿಯೂ ಇದೇ ರೀತಿಯ ವಾತಾವರಣ ಇತ್ತು.

ಇನ್ನೂ ಜು.22ರಂದು ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಪ್ರತ್ಯೇಕವಾದ ಭಾರೀ ಮಳೆಯೊಂದಿಗೆ ನಿರಂತರ ಗಾಳಿಯ ವೇಗ 30-40 ಕಿಮೀ ತಲುಪುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬಹುತೇಕ ಸ್ಥಳಗಳಲ್ಲಿ ಲಘುವಾಗಿ ಮಧ್ಯಮ ಮಳೆ ಜತೆಗೆ ಗಾಳಿಯು ಸಾಥ್‌ ನೀಡಲಿದೆ. ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.

ಬೆಂಗಳೂರಲ್ಲಿ ಹಗುರ ಮಳೆ

ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಥಂಡಿ ಗಾಳಿ ಜತೆಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 27 ಮತ್ತು 21 ಡಿ.ಸೆ ಇರಲಿದೆ.

ಇದನ್ನೂ ಓದಿ: Karnataka Rain : ಭರ್ತಿಯತ್ತ ಜಲಾಶಯಗಳು; ಪ್ರವಾಹ ಭೀತಿ ಹಿನ್ನೆಲೆ ನದಿ ತೀರದಲ್ಲಿ ಹೈ ಅಲರ್ಟ್

ಬೆಳಗಾವಿಯಲ್ಲಿ 17 ಸಂಪರ್ಕ ಸೇತುವೆಗಳು ಜಲಾವೃತ

ಬೆಳಗಾವಿ: ಭಾರಿ ಮಳೆಗೆ (Karnataka Rain) ಬೆಳಗಾವಿ ಜಿಲ್ಲೆಗೆ ಸಪ್ತ ನದಿಗಳ ನೆರೆ ಭೀತಿ ಶುರುವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಕೇವಲ ಐದು ದಿನದಲ್ಲಿ 17 ಸಂಪರ್ಕ ಸೇತುವೆಗಳು ಜಲಾವೃತಗೊಂಡಿದೆ. ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಏಳು ಸೇತುವೆಗಳು ಹಾಗೂ ಬೆಳಗಾವಿ ವ್ಯಾಪ್ತಿಯಲ್ಲಿ ಹತ್ತು ಸಂಪರ್ಕ ಸೇತುವೆ ಮುಳುಗಡೆಯಾಗಿವೆ.

ದೂದಗಂಗಾ ನದಿಗೆ ದತ್ತವಾಡ-ಮಲ್ಲಿಕವಾಡ, ಬೋಜ್-ಕಾರದಗಾ, ಬೋಜವಾಡಿ-ಕುಣ್ಣೂರ ಹಾಗೂ ವೇದಗಂಗಾ ನದಿಗೆ ಜತ್ರಾಟ-ಭೀವಶಿ, ಅಕ್ಕೋಳ-ಸಿದ್ನಾಳ, ಕೃಷ್ಣಾ ನದಿಗೆ ಮಾಂಜರಿ-ಬಾವನಸೌದತ್ತಿ, ಹಿರಣ್ಯಕೇಶಿ ನದಿಗೆ ಯರನಾಳ-ಮದಮಕ್ಕನಾಳ ಸೇರಿ ಘಟಪ್ರಭಾ ನದಿಗೆ ಸುಣಧೋಳಿ – ಮೂಡಲಗಿ, ಅವರಾದಿ- ನಂದಗಾಂವ, ಕಮಲದಿನ್ನಿ – ಹುಣಶ್ಯಾಳ ಪಿವೈ, ವಡ್ಡರಹಟ್ಟಿ- ಉದಗಟ್ಟಿ, ಗೋಕಾಕ್-ಶಿಂಗಳಾಪುರ, ಮಲಪ್ರಭಾಗೆ ಖಾನಾಪುರ-ಹೆಮ್ಮಡಗಾ, ಸಾತ್ನಾಳಿ-ಮಾಸಾಳಿ ಸಂಪರ್ಕ ಕಡಿತಗೊಂಡಿದೆ. ಇದರಿಂದ ಬರೋಬ್ಬರಿ 34 ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದ್ದು, ಕಿ.ಮೀ ಗಟ್ಟಲೇ ಸುತ್ತಿ ಹಾಕಿ ಓಡಾಡುವಂತಾಗಿದೆ.

ಕೊಡಗಿನಲ್ಲಿ ಕರೆಂಟ್‌ ಶಾಕ್‌ಗೆ ಎತ್ತು ಸಾವು

ಕೊಡಗು: ಗದ್ದೆಯಲ್ಲಿ ವಿದ್ಯುತ್ ಸ್ಪರ್ಶಿಸಿ ಎತ್ತೊಂದು ಮೃತಪಟ್ಟಿದೆ. ಮತ್ತೊಂದು ಎತ್ತು ಹಾಗೂ ರೈತನ ಕುಟುಂಬ ಹಾಗೂಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊಡಗಿನ ಸೋಮವಾರಪೇಟೆ ತಾಲೂಕಿನ ದೊಡ್ಡಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಗದ್ದೆಯಲ್ಲಿ ಉಳುಮೆ ಮಾಡುತ್ತಿದ್ದ ಸಂದರ್ಭದಲ್ಲಿ ಕರೆಂಟ್‌ ಶಾಕ್‌ ಹೊಡೆದಿದೆ. ಈ ವೇಳೆ ಒಂದು ಎತ್ತು ಮೃತಪಟ್ಟರೆ, ಕುಂಬಗೌಡನ ಸದಾ ಅವರ ಪತ್ನಿ ವೀಣಾ, ಮತ್ತೊಂದು ಎತ್ತು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾರಿ ಮಳೆ ಹಿನ್ನೆಲೆಯಲ್ಲಿ ಕಂಬದಿಂದ ವಿದ್ಯುತ್ ಲೀಕೇಜ್‌ ಆಗಿದ್ದೆ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಚೆಸ್ಕಾಂ ಸಿಬ್ಬಂದಿ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version