ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೆಲ ದಿನಗಳ ಬಿಡುವು ಕೊಟ್ಟಿದ್ದ ವರುಣ (Rain news) ಗುರುವಾರ ಮಧ್ಯಾಹ್ನದ ವೇಳೆಗೆ ಅಬ್ಬರಿಸಿದ್ದ. ಊಟದ ಸಮಯಕ್ಕೆ ಬಂದ ದಿಢೀರ್ ಮಳೆಯಿಂದಾಗಿ (Karnataka Weather Forecast) ಹಲವರು ಬಸ್ ನಿಲ್ದಾಣ, ಹೋಟೆಲ್, ಅಂಗಡಿ ಮುಂಗಟ್ಟುಗಳ ಆಶ್ರಯ ಪಡೆದಿದ್ದರು.
ಬೆಂಗಳೂರಿನ ರಾಜಾಜಿನಗರ, ಮಲ್ಲೇಶ್ವರ, ಶ್ರೀರಾಂಪುರ, ಓಕಳಿಪುರ ಸೇರಿದಂತೆ ವಿಧಾನಸೌಧ, ಶಿವಾಜಿನಗರ, ಮೆಜೆಸ್ಟಿಕ್ ಸುತ್ತಮುತ್ತ ಅರ್ಧ ತಾಸಿಗೂ ಹೆಚ್ಚು ಮಳೆಯಾಗಿತ್ತು. ಬೆಳಗ್ಗೆಯಿಂದಲೇ ನಗರದಲ್ಲಿ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ ಆಗುತ್ತಿದ್ದಂತೆ ಮಳೆಯು ಆರ್ಭಟಿಸಿತ್ತು.
ಚಿಕ್ಕಮಗಳೂರಲ್ಲಿ ಗಾಳಿ-ಮಳೆ
ಚಿಕ್ಕಮಗಳೂರಲ್ಲಿ ಗಾಳಿ ಸಹಿತ ಮಳೆಯು ಅಬ್ಬರಿಸಿತ್ತು. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಾಳೂರು, ಬಣಕಲ್ ಭಾಗದಲ್ಲಿ ಭಾರೀ ಮಳೆಯಾಗಿದೆ. ಅರ್ಧ ಗಂಟೆಗೂ ಹೆಚ್ಚು ಸಮಯ ಸುರಿದ ಧಾರಾಕಾರ ಮಳೆಗೆ ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಇತ್ತ ಕೊಟ್ಟಿಗೆಹಾರದಲ್ಲಿ ಸರದಿ ಸಾಲಲ್ಲಿ ವಾಹನಗಳು ನಿಂತಿದ್ದವು.
ಬಾಗಲಕೋಟೆಯಲ್ಲೂ ಕೃಪೆ ತೋರಿದ ವರುಣ
ನಾಲ್ಕೈದು ದಿನಗಳಿಂದ ವಿರಾಮ ನೀಡಿದ್ದ ಮಳೆರಾಯ ಬಾಗಲಕೋಟೆಯಲ್ಲಿ ಮಿಂಚಿದ್ದ. ವಿದ್ಯಾಗಿರಿ, ನವನಗರದ ಸೇರಿ ಜಿಲ್ಲೆಯ ಹಲವೆಡೆ ಮಳೆಯಾಗಿತ್ತು. ಬಿತ್ತನೆ ಮಾಡಿ ಮಳೆಗಾಗಿ ಕಾಯುತ್ತಿದ್ದ ರೈತರಲ್ಲಿ ಸಂತಸ ಮೂಡಿತ್ತು. ಹೆಸರು, ಉದ್ದು, ತೊಗರಿ, ಮುಸುಕಿನ ಜೋಳ ಬಿತ್ತನೆ ಮಾಡಿದ್ದ ರೈತರಿಗೆ ಮಳೆಯಿಂದಾಗಿ ಮಂದಹಾಸ ಮೂಡಿದೆ.
ಇದನ್ನೂ ಓದಿ: Mysuru News : ಪತ್ನಿ ಶೀಲ ಶಂಕಿಸಿ ಬೆಂಕಿ ಹಚ್ಚಿ ಸುಟ್ಟು ಹಾಕಿದವನಿಗೆ ಜೀವಾವಧಿ ಶಿಕ್ಷೆ
ಜೂನ್ 23ಕ್ಕೆ ಭಯಂಕರ ಮಳೆ!
ಜೂನ್ 23ರಂದು ಪ್ರತ್ಯೇಕವಾಗಿ ವಿಪರೀತ ಮಳೆಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಬಲವಾದ ಗಾಳಿ ಮತ್ತು ಭೂಕುಸಿತದ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಕೆಯನ್ನು ನೀಡಿದೆ. ಬಲವಾದ ಗಾಳಿಯಿಂದಾಗಿ ಕರಾವಳಿ ಮತ್ತು ಪಶ್ಚಿಮ ಘಟ್ಟಕ್ಕೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.
ಶುಕ್ರವಾರ ಇಲ್ಲೆಲ್ಲ ಮಳೆ
ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಪ್ರತ್ಯೇಕ ಕಡೆಗಳಲ್ಲಿ 30-40 ಕಿ.ಮೀ ವ್ಯಾಪ್ತಿಯಲ್ಲಿ ಬಿರುಗಾಳಿ ಬೀಸಲಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗುಡುಗು ಮುನ್ನೆಚ್ಚರಿಕೆಯನ್ನು ನೀಡಲಾಗಿದೆ. ಬೆಂಗಳೂರಲ್ಲಿ ಪ್ರಬಲ ಗಾಳಿ ಬೀಸಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಕರಾವಳಿ, ಮಲೆನಾಡಿನಲ್ಲಿ ಭರ್ಜರಿ ಮಳೆ
ನೈರುತ್ಯ ಮುಂಗಾರು ಬುಧವಾರ ರಾಜ್ಯದಲ್ಲಿ ದುರ್ಬಲವಾಗಿತ್ತು. ಕರಾವಳಿಯ ಹಲವು ಕಡೆಗಳಲ್ಲಿ, ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಕೊಟ್ಟಿಗೆಹಾರದಲ್ಲಿ 5 ಸೆಂ.ಮೀ, ಕೋಟ, ಕುಂದಾಪುರ, ಗೇರ್ಸೊಪ್ಪ 4 ಸೆಂ.ಮೀ ಮಳೆಯಾಗಿದೆ. ಧರ್ಮಸ್ಥಳ, ಆಗುಂಬೆ, ಕಮ್ಮರಡಿಯಲ್ಲಿ 3 ಸೆಂ.ಮೀ ಮಳೆಯಾಗಿದೆ.
ಉಳಿದಂತೆ ಕಾರ್ಕಳ, ಕೊಲ್ಲೂರು, ಸಿದ್ದಾಪುರ, ಕಾರವಾರ, ಹೊನ್ನಾವರ, ಬೆಳ್ತಂಗಡಿ, ಮೂಡಿಗೆರೆ, ಶೃಂಗೇರಿ, ಕೃಷ್ಣರಾಜಸಾಗರ ಸೇರಿದಂತೆ, ಭಾಗಮಂಡಲದಲ್ಲಿ 2 ಸೆಂ.ಮೀ ಮಳೆಯಾಗಿದೆ. ತಿಪಟೂರು, ಮಂಕಿ, ಮಂಗಳೂರು , ಅಂಕೋಲಾ, ಪಣಂಬೂರು, ಮಣಿ, ಮೂಲ್ಕಿ, ಉಪ್ಪಿನಂಗಡಿ, ಕೊಪ್ಪ ಹಾಗೂ ಜಯಪುರ, ನಾಪೋಕ್ಲು, ಕಳಸ , ಅಜ್ಜಂಪುರ , ಪೊನ್ನಂಪೇಟೆಯಲ್ಲಿ 1 ಸೆಂ.ಮಿನಷ್ಟು ಮಳೆಯಾಗಿರುವ ವರದಿ ಆಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ