ಬೆಂಗಳೂರು: ಶನಿವಾರ ದಾವಣಗೆರೆಯ ಹೆಬ್ಬಾಳು, ಹುಣಸೇಕಟ್ಟೆ, ಹಾಲುವರ್ತಿ ಸೇರಿದಂತೆ ಹಲವೆಡೆ (Rain News) ಮಳೆಯಾಗಿದೆ. ಬಿಸಿಲಿ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ವರುಣ ತಂಪು ಸೂಸಿದ್ದಾನೆ. ರಾಷ್ಟ್ರೀಯ ಹೆದ್ದಾರಿ ಹೆಬ್ಬಾಳ್ ಟೋಲ್ ಬಳಿ ಇರುವ ಅಂಗಡಿಗಳಿಗೆ ನೀರು ನುಗ್ಗಿತ್ತು. ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆಯಾಗಿದೆ. ಇತ್ತ ಬಿಸಿಲ ನಾಡು ಬಾಗಲಕೋಟೆಯಲ್ಲೂ ಸಂಜೆಯಾಗುತ್ತಿದ್ದಂತೆ ಮಳೆಯು ಅಬ್ಬರಿಸುತ್ತಿದೆ. ಸತತ ಮಳೆಯಿಂದ ಬಿಸಿಲಿನ ತಾಪ ಕುಗ್ಗಿದೆ. ನವನಗರ, ವಿದ್ಯಾಗಿರಿ ಸೇರಿದಂತೆ ಜಿಲ್ಲೆಯ ಹಲವೆಡೆ ಗುಡುಗು ಮಿಂಚು ಸಹಿತ (Karnataka Weather Forecast) ಮಳೆಯಾಗಿದೆ.
ಸಿಡಿಲು ಬಡಿದು ಕುಸಿದ ದೇವಸ್ಥಾನದ ಗೋಪುರ
ಶನಿವಾರ ಸಂಜೆ ಕೊಪ್ಪಳದಲ್ಲೂ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ. ಸಿಡಿಲು ಬಡಿದು ದೇವಸ್ಥಾನದ ಗೋಪುರ ಕುಸಿದಿದೆ. ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ನವಲಿ ತಾಂಡದಲ್ಲಿ ಘಟನೆ ನಡೆದಿದೆ. ದುರ್ಗಾದೇವಿಯ ಗೋಪುರಕ್ಕೆ ಸಿಡಿಲು ಬಡಿದಿದ್ದು, ಗೋಪುರದ ಕುಸಿತದಿಂದ ಭಕ್ತರು ಆತಂಕದಲ್ಲಿದ್ದಾರೆ. ಸಿಡಿಲಿನ ಹೊಡೆತಕ್ಕೆ ಗೋಪುರದ ಮೇಲ್ಬಾಗ ಸಂಪೂರ್ಣ ಕುಸಿತಗೊಂಡಿದೆ.
ಇದನ್ನೂ ಓದಿ: Rain News: ಬಿರುಗಾಳಿ ಸಹಿತ ಭಾರಿ ಮಳೆ; ಆಕಾಶದೆತ್ತರಕ್ಕೆ ಹಾರಿತು ಮನೆಗಳ ತಗಡು, ಮಳೆಯಲ್ಲೇ ಬೀಗರ ಊಟ
ರಾಜ್ಯದ ಹಲವೆಡೆ ಮಳೆಯು ಅಬ್ಬರಿಸುತ್ತಿದೆ. ಗುಡುಗು, ಸಿಡಿಲು, ಬಿರುಗಾಳಿ ಜತೆಗೆ ಮಳೆಯು ದಾಳಿ ಮಾಡುತ್ತಿದೆ. ಮುಂದಿನ 24 ಗಂಟೆಯಲ್ಲಿ ಕರಾವಳಿ, ಮಲೆನಾಡು ಸೇರಿದಂತೆ ಉತ್ತರ ಒಳನಾಡಿನಲ್ಲಿ ಭಾರಿ ವರ್ಷಧಾರೆ ಆಗಲಿದೆ. ಏಪ್ರಿಲ್ 14ರಂದು ಕರಾವಳಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಸೇರಿ ದಕ್ಷಿಣ ಒಳನಾಡಿನ ಮೈಸೂರು, ವಿಜಯನಗರದಲ್ಲಿ ಒಂದೆರಡು ಕಡೆಗಳಲ್ಲಿ ಮಳೆಯಾಗಲಿದೆ. ಉಳಿದೆಡೆ ಒಣ ಹವೆ ಮೇಲುಗೈ ಸಾಧಿಸಲಿದೆ.
ಕರಾವಳಿಯಲ್ಲಿ ಗಂಟೆಗೆ 30-40 ಕಿ.ಮೀ ಮತ್ತು ಒಳನಾಡಿನಲ್ಲಿ 40-50 ಕಿ.ಮೀ ವೇಗದಲ್ಲಿ ಗಾಳಿಯ ವೇಗವು ಪ್ರಬಲ ಮತ್ತು ರಭಸದಿಂದ ಕೂಡಿರುವ ಸಾಧ್ಯತೆ ಇದೆ. ಹೀಗಾಗಿ ಹೊರಗೆ ಹೋಗುವಾಗ ಎಚ್ಚರವಹಿಸಿ.
ಬೆಂಗಳೂರಿಗೆ ಇಲ್ವಾ ಮಳೆ ಸೂಚನೆ
ರಾಜಧಾನಿ ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಮಳೆಯಾಗುವ ಯಾವುದೇ ಮುನ್ಸೂಚನೆಯನ್ನು ನೀಡಿಲ್ಲ. ಗರಿಷ್ಠ 35, ಕನಿಷ್ಠ ಉಷ್ಣಾಂಶ 22 ಡಿ.ಸೆ ಇರಲಿದೆ.
ಗುಡುಗು-ಸಿಡಿಲು ಎಚ್ಚರಿಕೆ
ರಾಜ್ಯದ ಒಂದೆರಡು ಕಡೆಗಳಲ್ಲಿ ಸಿಡಿಲು ಸಹಿತ ಗುಡುಗು, ಮಿಂಚಿನ ಮಳೆಯಾಗುವ ಸಂಭವವಿದೆ. ಹೀಗಾಗಿ ಜನರು ಗುಡುಗು ಮತ್ತು ಸಿಡಿಲು ಸಂದರ್ಭದಲ್ಲಿ ಮುನ್ನೆಚ್ಚರಿಕೆಯನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ. ಹೊರಗೆ ಹೋಗುವಾಗ ಹವಾಮಾನ ಮುನ್ಸೂಚನೆ ಮೆಸೇಜ್‌ಗಳನ್ನು ಚೆಕ್ ಮಾಡಿಕೊಳ್ಳಿ. ಮಳೆ ಸಮಯದಲ್ಲಿ ವಿಶೇಷವಾಗಿ ಹೊಲ, ತೋಟದಲ್ಲಿ ಕೆಲಸ ಮಾಡಲು ಮನೆಯಿಂದ ಹೊರಗೆ ಹೋಗಬೇಡಿ.
ಗುಡುಗು-ಸಿಡಿಲಿನ ಸಂದರ್ಭದಲ್ಲಿ ಲೋಹದ ತಗಡನ್ನು ಹೊದಿಸಿರುವ ಮನೆಗಳು ಸುರಕ್ಷಿತವಲ್ಲ, ಸುರಕ್ಷಿತವಾದ ಕಟ್ಟಡಗಳಲ್ಲಿ ಆಶ್ರಯ ಪಡೆಯುವುದು. ಬೆಟ್ಟಗಳು, ಪರ್ವತ ಶ್ರೇಣಿಗಳು ಅಥವಾ ಶಿಖರಗಳಂತಹ ಎತ್ತರದ ಪ್ರದೇಶಗಳಿಂದ ಕೆಳಗೆ ಪ್ರವಾಹ ಇಳಿದು ಬರದಂತಹ ತಗ್ಗು ಪ್ರದೇಶದಲ್ಲಿ ಆಶ್ರಯ ಪಡೆಯಿರಿ. ನೀರಿನ ಮೂಲಗಳಾದ ಕೆರೆ ಮತ್ತು ನದಿಗಳಿಂದ ದೂರವಿರಿ. ವಿದ್ಯುತ್ ಉಪಕರಣ, ವಿದ್ಯುತ್ ಲೈನ್‌ಗಳು, ದೂರವಾಣಿ ಸಂಪರ್ಕ, ಮೊಬೈಲ್ ಟವರ್, ಪವನ ವಿದ್ಯುತ್ ಗೋಪುರ ಹಾಗೂ ರೈಲು ಹಳಿಗಳಿಂದ ದೂರವಿರಿ. ವಾಹನ ಚಾಲನೆಯಲ್ಲಿದ್ದರೆ ತಕ್ಷಣವೇ ವಾಹನ ನಿಲ್ಲಿಸಿ ವಾಹನದಲ್ಲಿಯೇ ಆಶ್ರಯ ಪಡೆಯುವುದು. ಗುಡುಗು ಸಿಡಿಲಿನ ಸಮಯದಲ್ಲಿ ಗುಂಪಿನಲ್ಲಿದ್ದರೆ, ಅಪಾಯವನ್ನು ಕಡಿಮೆ ಮಾಡಲು ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳುವುದು.
ಗುಡುಗು ಮತ್ತು ಸಿಡಿಲು ಸಂದರ್ಭದಲ್ಲಿ ಹೊರಾಂಗಣದಲ್ಲಿ ಕೆಲಸ ಮಾಡುತ್ತಿದ್ದರೆ ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯುವುದು. ವಿದ್ಯುತ್ ಅಥವಾ ಟೆಲಿಫೋನ್ ಕಂಬಗಳು ಅಥವಾ ಮರಗಳ ಕೆಳಗೆ ಆಶ್ರಯ ಪಡೆಯಬಾರದು, ಇವು ಮಿಂಚನ್ನು ಆಕರ್ಷಿಸುತ್ತವೆ. ಅರಣ್ಯ ಪ್ರದೇಶದಲ್ಲಿದ್ದರೆ ಸಣ್ಣ ಮರಗಳ ಕೆಳಗೆ ಆಶ್ರಯ ಪಡೆಯಿರಿ. ಲೋಹದ ವಸ್ತುಗಳನ್ನು ಬಳಸಬಾರದು. ಬೈಕುಗಳು, ವಿದ್ಯುತ್ ಅಥವಾ ದೂರವಾಣಿ ಕಂಬಗಳು, ತಂತಿ ಬೇಲಿ, ಯಂತ್ರಗಳು ಇತ್ಯಾದಿಗಳಿಂದ ದೂರವಿರಿ. ಸಿಡಿಲಿನ ಸಂದರ್ಭದಲ್ಲಿ ಮೊಬೈಲ್ ಫೋನ್‌ಗಳನ್ನು ಬಳಸಬೇಡಿ. ಕಬ್ಬಿಣದ ಸರಳುಗಳಿಂದ ಕೂಡಿದ ಛತ್ರಿಗಳನ್ನು ಬಳಸಬಾರದು. ಗುಡುಗು ಸಿಡಿಲಿನ ಸಮಯದಲ್ಲಿ ಕಿಟಕಿ, ಬಾಗಿಲುಗಳನ್ನು ಮುಚ್ಚಿ. ಬೆಂಕಿ ಮತ್ತು ವಿದ್ಯುತ್ ಸಂಪರ್ಕದಿಂದ ದೂರವಿರಿ. ಮಕ್ಕಳು, ವಯೋವೃದ್ಧರು ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಗಮನಹರಿಸುವುದು.
ಸಿಡಿಲಿನ ಸಂದರ್ಭದಲ್ಲಿಕಟ್ಟಡದ ಕೊಳಾಯಿ ಮತ್ತು ಲೋಹದ ಕೊಳವೆಗಳ ಮೂಲಕ ವಿದ್ಯುತ್ ಹರಿಯುವ ಸಾಧ್ಯತೆ ಇದೆ. ಹೀಗಾಗಿ ಆಗ ಸ್ನಾನ ಮಾಡಬಾರದು, ಪಾತ್ರೆ ತೊಳೆಯಬಾರದು, ಬಟ್ಟೆ ಒಗೆಯಬಾರದು. ಗುಡುಗು ಸಿಡಿಲಿನ ಮುನ್ಸೂಚನೆ ಅಥವಾ ಮುನ್ನೆಚ್ಚರಿಕೆ ಇದ್ದಲ್ಲಿ ಪ್ರಯಾಣವನ್ನು ಮುಂದೂಡಿ. ಗುಡುಗು ಸಿಡಿಲಿನ ಸಮಯದಲ್ಲಿ ಮೋಟರ್ ಸೈಕಲ್ ಅಥವಾ ಇನ್ನಿತರೆ ಯಾವುದೇ ತೆರೆದ ವಾಹನ ಸಂಚಾರ ಬೇಡ. ಆಟದ ಮೈದಾನ, ಉದ್ಯಾನವನಗಳು, ಕಡಲ ತೀರಗಳಿಗೆ ಹೋಗುವುದನ್ನು ತಪ್ಪಿಸಿ. ದೋಣಿ ವಿಹಾರ ಅಥವಾ ಈಜುತ್ತಿದ್ದರೆ, ಸಾಧ್ಯವಾದಷ್ಟು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯುವುದು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ