ಬೆಂಗಳೂರು/ಕಾರವಾರ: ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ಶುಕ್ರವಾರ ಉತ್ತರಕನ್ನಡ ಜಿಲ್ಲೆಯಲ್ಲಿ ಮತ್ತೆ ವರುಣಾರ್ಭಟ ಮುಂದುವರಿದಿದೆ. ಕರಾವಳಿ ತಾಲೂಕುಗಳಲ್ಲಿ ಗಾಳಿ ಸಹಿತ ಭಾರಿ ಮಳೆಯಾಗಿದೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಭಾಗಗಳಲ್ಲಿ ಭಾರೀ ಗಾಳಿ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಒಂದು ತಾಸಿಗೂ ಬಿರುಗಾಳಿ ಸಹಿತ ಭಾರಿ ಮಳೆಗೆ ಹಲವೆಡೆ ಮರಗಳು ನೆಲಕ್ಕುರುಳಿತ್ತು.
ಮುಂಗಾರು ಮಳೆಗೆ ಪಪ್ಪಾಯಿ ಬೆಳೆ ಹಾನಿ
ಬಾಗಲಕೋಟೆಯಲ್ಲೂ ಮುಂಗಾರು ಮಳೆ ಅಬ್ಬರಕ್ಕೆ ತೋಟಗಾರಿಕಾ ಬೆಳೆ ಹಾನಿಯಾಗಿದ್ದು ರೈತರು ಆತಂಕದಲ್ಲಿದ್ದಾರೆ. ಬಾಗಲಕೋಟೆ ತಾಲೂಕಿನ ಹೊನ್ನಾಕಟ್ಟಿ ಗ್ರಾಮದಲ್ಲಿ ಫಸಲು ಕೈಗೆಟಕುವ ಮುನ್ನವೇ ಮಳೆಗೆ ಪಪ್ಪಾಯಿ ಆಹುತಿಯಾಗಿದೆ. ಅಧಿಕ ಮಳೆಯಿಂದಾಗಿ ತೇವಾಂಶದಿಂದ ಗಿಡದಿಂದ ಪಪ್ಪಾಯಿ ಉದುರುತ್ತಿದೆ.
ಪಪ್ಪಾಯಿ ಬೆಳೆದ ಹೊನ್ನಾಕಟ್ಟಿ ರೈತ ಯಲ್ಲಪ್ಪ ಜಿವೊಜಿ ಕಂಗಾಲಾಗಿದ್ದಾರೆ. 2 ಎಕರೆ ಜಮೀನಿನಲ್ಲಿ 2 ಲಕ್ಷ ರೂ. ಹೆಚ್ಚು ಖರ್ಚು ಮಾಡಿ ಪಪ್ಪಾಯಿ ಬೆಳೆಯಲಾಗಿತ್ತು. ಆದರೆ ಪಪ್ಪಾಯಿ ಫಸಲು ಚನ್ನಾಗಿ ಬಂದಿದ್ದರೂ, ಮಳೆಯಿಂದ ಪಪ್ಪಾಯಿಗೆ ಕೊಳೆ ರೋಗಕ್ಕೆ ಉದುರುತ್ತಿದೆ. 7- 8 ಲಕ್ಷ ರೂ ಲಾಭದ ನಿರೀಕ್ಷೆಯಲ್ಲಿದ್ದ ರೈತ ಯಲ್ಲಪ್ಪನಿಗೆ ಇದೀಗ ಸಾಲದ ಹೊರೆ ಹೆಚ್ಚಾಗಿದೆ. ನಿರಂತರ ಮಳೆಯಿಂದ ಪಪ್ಪಾಯಿ ಬೆಳೆ ಸಂಪೂರ್ಣ ಹಾನಿಯಾಗಿದೆ. ಸದ್ಯ ಸರ್ಕಾರದಿಂದ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.
ಭಾರಿ ಮಳೆಗೆ ಕೆರೆಯಂತಾದ ಕಾಲಕಾಲೇಶ್ವರ ಗ್ರಾಮ
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರ ಗ್ರಾಮದ ಸುತ್ತಮುತ್ತ ಭಾರಿ ಮಳೆಯಾಗುತ್ತಿದ್ದು, ಕಾಲಕಾಲೇಶ್ವರ ಗ್ರಾಮದ ರಸ್ತೆಗಳು ಕೆರೆಯಂತಾಗಿದೆ. ರಸ್ತೆ ತುಂಬ ನೀರು ನಿಂತು ಜನರು ಓಡಾಡಲು ಪರದಾಡುವಂತಾಗಿತ್ತು. ಇತ್ತ ಕಾಲಕಾಲೇಶ್ವರ ಗುಡ್ಡದಲ್ಲಿ ಕಿರು ಜಲಪಾತ ಸೃಷ್ಟಿಯಾಗಿದ್ದು, ಜನರು ವೀಕ್ಷಣೆಗಾಗಿ ಬರುತ್ತಿದ್ದ ದೃಶ್ಯ ಕಂಡು ಬಂತು.
ಮುಲ್ಲಾಮಾರಿ ಜಲಾಶಯದಿಂದ ನೀರು ಬಿಡುಗಡೆ; ಗ್ರಾಮಸ್ಥರಿಗೆ ಎಚ್ಚರಿಕೆ
ಕಲಬುರಗಿಯ ಚಿಂಚೊಳ್ಳಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ನಾಗರಾಳ ಬಳಿ ಇರುವ ಮುಲ್ಲಾಮಾರಿ ಜಲಾಶಯದ ಒಳಹರಿವು 1,500 ಕ್ಯೂಸೆಕ್ ಹೆಚ್ಚಾಗಿದೆ. ಜಲಾಶಯದ ಗರಿಷ್ಠ ಮಟ್ಟ 491 ಮೀಟರ್ ಇದ್ದು, ಯಾವುದೇ ಕ್ಷಣದಲ್ಲಾದರೂ ಜಲಾಶಯದ ನೀರು ಬಿಡುಗಡೆ ಮಾಡಲಾಗುತ್ತದೆ. ಹೀಗಾಗಿ ಮುಲ್ಲಾಮಾರಿ ಕೆಡದಂಡೆ ಗ್ರಾಮಗಳಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ. ಚಿಮ್ಮನಚೋಡ, ತಾಜಲಾಪುರ, ಗಾರಂಪಳ್ಳಿ ಸೇರಿ ಹಲವು ಗ್ರಾಮಗಳಿಗೆ ನದಿ ದಡದಲ್ಲಿ ಹೋಗದಂತೆ ಎಇ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!
ಕಲಬುರಗಿಯಲ್ಲಿ ಮನೆಗಳಿಗೆ ನುಗ್ಗಿದ ನೀರು
ಕಲಬುರಗಿಯ ಶಹಾಬಾದ್, ಆಳಂದ, ಚಿಂಚೊಳ್ಳಿ ಸೇರಿ ಹಲವು ಭಾಗದಲ್ಲಿ ಭಾರಿ ಮಳೆಯಾಗಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಚಿತ್ತಾಪೂರ ತಾಲೂಕಿನ ತರ್ಕಸ್ ಪೇಟೆಯಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ, ಶೇಖರಿಸಿಟ್ಟಿದ್ದ ದವಸ ಧಾನ್ಯಗಳು ನೀರುಪಾಲಾಗಿದ್ದವು. ಜತೆಗೆ ಚಂದಾಪುರ ಪಟೇಲ್ ಕಾಲೋನಿಯಲ್ಲಿ ಇಪ್ಪತ್ತಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿತ್ತು. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ಮನೆಗೆ ನುಗ್ಗಿತ್ತು. ಪುರಸಭೆ ಅಧಿಕಾರಿಗಳ ವಿರುದ್ಧ ಜನರು ಹಿಡಿಶಾಪ ಹಾಕಿದರು.
ಮಳೆಗೆ ಮರ ಬಿದ್ದು ಸಂಚಾರ ಅಸ್ತವ್ಯಸ್ತ
ಭಾರಿ ಮಳೆಗೆ ರಸ್ತೆಗೆ ಅಡ್ಡಲಾಗಿ ಮರ ಬಿದ್ದು ಸಂಚಾರ ಅಸ್ತವ್ಯಸ್ತವಾಗಿತ್ತು. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿತ್ತು. ಮರ ಬಿದ್ದ ಪರಿಣಾಮ ಕಿ.ಮೀ ಗಟ್ಟಲೆ ವಾಹನ ದಟ್ಟಣೆ ಉಂಟಾಗಿತ್ತು. ಅಡ್ಡಲಾಗಿ ಬಿದ್ದ ಮರದ ಕೆಳಗಡೆಯಿಂದ ಸವಾರರು ರಸ್ತೆ ದಾಟುತ್ತಿದ್ದರು. ಮರ ಬಿದ್ದು ಗಂಟೆಗಟ್ಟಲೆ ಸಮಯ ಕಳೆದರೂ ಸ್ಥಳಕ್ಕೆ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಸ್ಥಳೀಯರಿಂದಲೇ ಮರ ತೆರವುಗೊಳಿಸಲಾಯಿತು.
ಗುಡುಗು ಸಹಿತ ಮಳೆ ಎಚ್ಚರಿಕೆ
ಜೂನ್ 15ರಂದು ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಗುಡುಗು ಸಹಿತ ಹಗುರದೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗಾಳಿವೇಗವು ಒಂದು ಎರಡು ಕಡೆಗಳಲ್ಲಿ 40-50 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ. ಬೆಂಗಳೂರು ಸುತ್ತಮುತ್ತ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವೊಮ್ಮೆ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಹಾಗೂ ಕನಿಷ್ಠ ತಾಪಮಾನವು ಕ್ರಮವಾಗಿ 30-21 ಡಿ.ಸೆ ಇರಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ