Site icon Vistara News

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Karnataka Weather Forecast

ಬೆಂಗಳೂರು: ಭಾನುವಾರದಂದು ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಹಾಗೂ ಕರಾವಳಿ, ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಿರುವ (Rain News) ವರದಿ ಆಗಿದೆ. ಅತಿ ಹೆಚ್ಚು ಮಳೆಯು ಪುತ್ತೂರು ಹಾಗೂ ರಾಯಚೂರಿನಲ್ಲಿ ತಲಾ 10 ಸೆಂ.ಮೀ (Karnataka Weather Forecast) ಮಳೆಯಾಗಿದೆ. ಉಳಿದಂತೆ ಉಪ್ಪಿನಂಗಡಿ 9, ಸಿರಾ ಮತ್ತು ಕೊಟ್ಟಿಗೆಹಾರದಲ್ಲಿ ತಲಾ 8 ಸೆಂ.ಮೀ, ಗಬ್ಬೂರು, ಬೆಳಗಾವಿಯಲ್ಲಿ 7 ಸೆಂ.ಮೀ ಮಳೆಯಾಗಿರುವ ವರದಿ ಆಗಿದೆ. ಗರಿಷ್ಠ ಉಷ್ಣಾಂಶ ರಾಯಚೂರಿನಲ್ಲಿ 39.4 ಡಿ. ಸೆ ದಾಖಲಾಗಿದೆ.

ಕಾಸರಗೋಡಿನಲ್ಲಿ ಗಾಳಿ ಮಳೆಗೆ ನೆಲಕ್ಕುರುಳಿದ ಬೃಹತ್ ಹೋರ್ಡಿಂಗ್‌

ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗ ಕೇರಳದ ಕಾಸರಗೋಡಿನ ಬಸ್ ನಿಲ್ದಾಣ ಬಳಿ ಗಾಳಿ ಸಹಿತ ಮಳೆಯಾಗುತ್ತಿದೆ. ಗಾಳಿ ಮಳೆಗೆ ಬೃಹತ್ ಹೋರ್ಡಿಂಗ್‌ ನೆಲಕ್ಕುರುಳಿದ ಘಟನೆ ನಡೆದಿದೆ. ಹೋರ್ಡಿಂಗ್‌ ಬೀಳುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನೂ ಹೋರ್ಡಿಂಗ್‌ ಬಿದ್ದು ಕೆಳಗಡೆ ಪಾರ್ಕ್ ಮಾಡಿದ್ದ ವಾಹನಗಳಿಗೆ ಹಾನಿಯಾಗಿದೆ. ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಪಾರ್ಕಿಂಗ್‌ ಜಾಗದಲ್ಲಿ ಜನರು ಇರಲಿಲ್ಲ. ಇದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ.

ಹಾಸನದಲ್ಲಿ ಉರುಳಿ ಬಿದ್ದ ಮರ

ಹಾಸನ ಜಿಲ್ಲೆಯ ವಿವಿಧೆಡೆ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಮರವೊಂದು ಉರುಳಿ ಬಿದ್ದಿತ್ತು. ಪರಿಣಾಮ ಎರಡು ಗಂಟೆಗೂ ಹೆಚ್ಚು ಸಮಯ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿಘಾಟ್‌ ರಸ್ತೆಯಲ್ಲಿ ಘಟನೆ ನಡೆದಿದೆ.

ಮಂಗಳೂರು-ಬೆಂಗಳೂರು ಸಂಪರ್ಕ ಕಲ್ಪಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ 75 ಶಿರಾಡಿಘಾಟ್ ರಸ್ತೆಗೆ ಮರ ಬಿದ್ದಿತ್ತು. ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ ವಾಹನ ಸವಾರರು ಪರದಾಡಿದರು. ಸ್ಥಳಕ್ಕಾಗಮಿಸಿ ಟ್ರಾಫಿಕ್‌ ಪೊಲೀಸರು ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಮುಕ್ತ ಮಾಡಿದರು.

ಇದನ್ನೂ ಓದಿ: Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

ಮಳೆ ಜತೆಗೆ 60 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ ಬಿರುಗಾಳಿ

ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರಿದ್ದು, ಮೇ 14ರಂದು ಭಾರಿ ಮಳೆಯೊಂದಿಗೆ ಗಾಳಿ ವೇಗವು 50-60 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ. ದಕ್ಷಿಣ ಕನ್ನಡ, ಉಡುಪಿಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಇನ್ನೂ ಚಿಕ್ಕಮಗಳೂರು, ಹಾಸನ, ಮಂಡ್ಯ,ಮೈಸೂರು ಸೇರಿ ಕಲಬುರಗಿ, ಬೆಳಗಾವಿ, ಯಾದಗಿರಿ ಜಿಲ್ಲೆಗಳಲ್ಲಿ ಗಾಳಿಯೊಂದಿಗೆ ಭಾರಿ ಮಳೆಯಾಗಲಿದೆ.

ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಕೋಲಾರ, ವಿಜಯಪುರ, ಬಾಗಲಕೋಟೆ, ಬೀದರ್‌, ಧಾರವಾಡ,ಗದಗದಲ್ಲಿ ಗುಡುಗು, ಸಿಡಿಲಿನೊಂದಿಗೆ ಜೋರಾದ ಗಾಳಿಯೊಂದಿಗೆ ಮಳೆಯಾಗಲಿದೆ. ಉಳಿದೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ರಾಜಧಾನಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ಅಥವಾ ರಾತ್ರಿ ನಂತರ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 33 ಹಾಗೂ ಕನಿಷ್ಠ ಉಷ್ಣಾಂಶ 22 ಡಿ.ಸೆ ಇರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version