ಹಾಸನ: ಹಾಸನ ಜಿಲ್ಲೆಯಾದ್ಯಂತ ಮಳೆ (Heavy rain) ಮುಂದುವರಿದಿದ್ದು, ಆರು ತಾಲೂಕಿನ ಶಾಲೆಗಳಿಗೆ ನಾಳೆ ರಜೆ ಘೋಷಣೆ (Karnataka Weather Forecast) ಮಾಡಲಾಗಿದೆ. ಜು.26ರಂದು ಸಕಲೇಶಪುರ, ಆಲೂರು, ಬೇಲೂರು, ಹಾಸನ, ಹೊಳೆನರಸೀಪುರ ಹಾಗೂ ಅರಕಲಗೂಡು ತಾಲೂಕುಗಳಿಗೆ ರಜೆ ಘೋಷಿಸಿ ಡಿಡಿಪಿಐ ಹೆಚ್.ಕೆ.ಪಾಂಡು ಆದೇಶ ಹೊರಡಿಸಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮಾತ್ರ ರಜೆ ಘೋಷಣೆ ಮಾಡಲಾಗಿದೆ.
ಇನ್ನೂ ಕೊಡಗು ಜಿಲ್ಲೆಯಲ್ಲೂ ಮಳೆ ಅಬ್ಬರದಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಪದವಿ ಹಾಗೂ ಸ್ನಾತಕೋತ್ತರ ಕಾಲೇಜುಗಳನ್ನು ಹೊರತು ಪಡಿಸಿ ಅಂಗನವಾಡಿ ಸೇರಿದಂತೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಕೊಡಗು ಜಿಲ್ಲಾಧಿಕಾರಿ ವೆಂಕಟರಾಜಾ ಆದೇಶ ಹೊರಡಿಸಿದ್ದಾರೆ.
ಭಾರಿ ಮಳೆಗೆ ಉಕ್ಕಿ ಹರಿದ ಐಗೂರು ಹೊಳೆ
ಭಾರಿ ಮಳೆಗೆ ಹಾಸನದ ಐಗೂರು ಹೊಳೆ ಉಕ್ಕಿ ಹರಿದಿದೆ. ಪರಿಣಾಮ ಯಡಿಕೇರಿ-ಕುಂಬ್ರಳ್ಳಿ ,ಹೆತ್ತೂರು ನಡುವಿನ ಸೇತುವೆ ಮಳುಗಡೆಯಾಗಿದೆ. ಸಕಲೇಶಪುರ ತಾಲೂಕಿನ ಯಡಿಕೇರಿ-ಕುಂಬ್ರಳ್ಳಿ ನಡುವಿನ ಸೇತುವೆ ಮುಳುಗಡೆಯಿಂದಾಗಿ ಯಡಿಕೇರಿ-ಕುಂಬ್ರಳ್ಳಿ-ಹೆತ್ತೂರು ಹಾಗೂ ಸಕಲೇಶಪುರಕ್ಕೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ರಸ್ತೆ ಸಂಪರ್ಕವಿಲ್ಲದೆ ಗ್ರಾಮಸ್ಥರು ಪರದಾಟ ಅನುಭವಿಸಿದರು. ಜನ-ಜಾನುವಾರು, ವಾಹನ ಓಡಾಡಲಾಗದೆ ತೀವ್ರ ಸಮಸ್ಯೆಗೆ ಸಿಲುಕಬೇಕಾಯಿತು. ಸೇತುವೆ ದುರಸ್ತಿ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಸೇತುವೆ ಮೇಲೆ ಅಪಾಯಕಾರಿ ರೀತಿಯಲ್ಲಿ ನೀರು ಹರಿಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಸೇತುವೆ ಮೇಲೆ ಸಂಚಾರ ನಿಷೇಧ ಹಾಕಲಾಗಿದೆ. ಸೇತುವೆಯ ಎರಡೂ ಬದಿಗೂ ಬ್ಯಾರಿಕೇಡ್ ಹಾಕಿ ಸಂಚಾರಕ್ಕೆ ತಡೆಹಿಡಿಯಲಾಗಿದೆ.
ಸಕಲೇಶಪುರ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹೇಮಾವತಿ ಜಲಾಶಯಕ್ಕೆ ಒಳಹರಿವು ಏರಿಕೆಯಾಗುತ್ತಿದೆ. ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಆರು ಕ್ರಸ್ಟ್ ಗೇಟ್‌ಗಳ ಮೂಲಕ 65 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಹೀಗಾಗಿ ಹೇಮಾವತಿ ನದಿಯ ತಗ್ಗು ಪ್ರದೇಶದ ಮತ್ತು ನದಿಯ ಎರಡು ದಂಡೆಯಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ ಆಸ್ತಿ ಪಾಸ್ತಿ ಹಾಗೂ ಜಾನುವಾರುಗಳ ರಕ್ಷಣೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳವಂತೆ ಹೇಮಾವತಿ ಅಣೆಕಟ್ಟು ವಿಭಾಗದ ಕಾರ್ಯಪಾಲಕ ಇಂಜಿನಿಯರ್‌ರಿಂದ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು
ಭಾರಿ ಮಳೆ ಮುನ್ಸೂಚನೆ
ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಸೇರಿ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರಿ ಮಳೆಯಾಗಲಿದೆ. ಜತೆಗೆ ಬೆಳಗಾವಿ ಜಿಲ್ಲೆಯ ಘಟ್ಟ ಪ್ರದೇಶದಲ್ಲಿ ಭರ್ಜರಿ ಮಳೆಯೊಂದಿಗೆ ನಿರಂತರ ಗಾಳಿಯ ವೇಗವು 40-50 ಕಿಮೀ ತಲುಪುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಹಾಸನ ಜಿಲ್ಲೆಯ ಘಟ್ಟ ಪ್ರದೇಶದಲ್ಲೂ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಗಾಳಿ ವೇಗವು ವಿಪರೀತವಾಗಿರಲಿದೆ.
ಉತ್ತರ ಒಳನಾಡಿನ ಬೀದರ್, ಕಲಬುರಗಿ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳ ಕೆಲವೆಡೆ ಗಾಳಿ ಜತೆಗೆ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಉಳಿದೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಗಾಳಿಯ ವೇಗ 40-50 ಕಿ.ಮೀ ತಲುಪುವ ಸಾಧ್ಯತೆ ಇದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ