Site icon Vistara News

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

karnataka weather Forecast

ಬೆಂಗಳೂರು/ಕಾರವಾರ: ಕರಾವಳಿ ಭಾಗದಲ್ಲಿ ಮಳೆಯು ಅಬ್ಬರಿಸುತ್ತಿದ್ದು, ಜು.8ಕ್ಕೂ ವ್ಯಾಪಕ ಮಳೆಯಾಗುವ (Heavy rain Alert) ಎಚ್ಚರಿಕೆಯನ್ನು ಹವಾಮಾನ ಇಲಾಖೆ (Karnataka Weather Forecast) ನೀಡಿದೆ. ಕರಾವಳಿಯ ಉತ್ತರಕನ್ನಡದಲ್ಲಿ ನಾಳೆಯೂ ಧಾರಾಕಾರ ಮಳೆ‌‌ಯಾಗಲಿದ್ದು, ಶಾಲಾ- ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕಿನ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ.ಕೆ. ರಿಂದ ರಜೆ ಆದೇಶ ಹೊರಡಿಸಲಾಗಿದೆ. ಮಕ್ಕಳ ಹಿತದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ಘೋಷಣೆ ಮಾಡಲಾಗಿದೆ. ಇನ್ನೂ ಘಟ್ಟದ ಮೇಲಿನ ತಾಲೂಕುಗಳ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಇಲ್ಲ.

ಬೆಂಗಳೂರಲ್ಲಿ ಸಾಧಾರಣ ಮಳೆ

ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಮುಂಜಾನೆ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ವೇಳೆಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 28 ಹಾಗೂ ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲಿಯಸ್ಸ್‌ ಇರಲಿದೆ.

ಇದನ್ನೂ ಓದಿ: Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

ಮಳೆಗೆ ಕುಸಿದು ಬಿದ್ದ ಮನೆ ಗೋಡೆ

ಭಾರೀ ಗಾಳಿ ಮಳೆಗೆ ಗೋಡೆ ಬಿದ್ದು ಮನೆಗೆ ಹಾನಿಯಾಗಿದೆ. ಉತ್ತರಕನ್ನಡ ಜಿಲ್ಲೆಯ ಕುಮಟಾದ ಕುಮಟಾ ವಾಲಗಳ್ಳಿ ಗ್ರಾ.ಪಂ ವ್ಯಾಪ್ತಿಯ ಕೋಟೆಗುಡ್ಡದಲ್ಲಿ ಘಟನೆ ನಡೆದಿದೆ. ಕೋಟೆಗುಡ್ಡದ ರಘು ಹಮ್ಮು ಮುಕ್ರಿ ಎಂಬುವವರ ಮನೆ ಕುಸಿದು ಬಿದ್ದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಕುಸಿದು ಪರಿಣಾಮ ಯಾವುದೇ ಸಾವು-ನೋವು ಸಂಭವಿಸಿಲ್ಲ.

ಪಕ್ಕದ ವಿಷ್ಣು ಹಮ್ಮು ಮುಕ್ರಿ ಅವರ ಮನೆಯ ಗೋಡೆಯು ಕುಸಿದು ಹಾನಿಯಾಗಿದೆ. ಮನೆ ಕಳೆದುಕೊಂಡ ಕುಟುಂಬಸ್ಥರಿಗೆ ಕೋಟೆಗುಡ್ಡದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಶ್ರಯ ನೀಡಲಾಗಿದೆ. ಸ್ಥಳಕ್ಕೆ ಗ್ರಾ.ಪಂ ಅಧ್ಯಕ್ಷೆ ಶಾಂತಿ ಮಡಿವಾಳ, ಕಂದಾಯ ಅಧಿಕಾರಿಗಳು, ನೋಡಲ್ ಅಧಿಕಾರಿ ವಿನಾಯಕ ವೈದ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮನೆ ಬಿದ್ದ ಪರಿಣಾಮ ಲಕ್ಷಾಂತರ ರೂಪಾಯಿ ವಸ್ತುಗಳು ಮಣ್ಣಿನಡಿ ಸಿಲುಕಿ ಹಾನಿಯಾಗಿದೆ. ಮನೆ ಕಳೆದುಕೊಂಡು ರಘು, ವಿಷ್ಣು ಕುಟುಂಬಸ್ಥರು ಕಂಗಲಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version