ಬೆಂಗಳೂರು/ಬೆಳಗಾವಿ: ಕಳೆದ ಮೂರು ದಿನಗಳಿಂದ ಹಲವೆಡೆ ಮಳೆಯು (Rain News) ಅಬ್ಬರಿಸುತ್ತಿದ್ದು, ಮೇ 15ರವರೆಗೆ ಗುಡುಗು ಸಹಿತ ಭಾರಿ ಮಳೆಯಾಗುವ (Heavy Rain) ಎಚ್ಚರಿಕೆಯನ್ನು ಹವಾಮಾನ ಇಲಾಖೆ (Karnataka Weather Forecast) ನೀಡಿದೆ. ಶುಕ್ರವಾರದಂದು ಹಲವೆಡೆ ಸುರಿದ ಮಳೆಗೆ ಸಾವು-ನೋವು ಸಂಭವಿಸಿದೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಹಾಗೂ ಅವರ ಶ್ವಾನಕ್ಕೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಸಿಡಿಲು ಬಡಿದು ಮಹಿಳೆ ಸೇರಿ ಶ್ವಾನ ಸಾವು
ಸಿಡಿಲು ಬಡಿದು ಓರ್ವ ಮಹಿಳೆ ಹಾಗೂ ಶ್ವಾನವೊಂದು ಸ್ಥಳದಲ್ಲಿಯೇ ಮೃತಪಟ್ಟಿದೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಬೋನಸಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಸ್ವಪ್ನ (48) ಮೃತ ದುರ್ದೈವಿ. ಸ್ವಪ್ನ ಅವರ ಮಗ ಜ್ಞಾನೇಶ್ವರಗೆ (20) ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತಮ್ಮ ಹೊಲದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಸಾಕು ನಾಯಿಯು ಸಿಡಿಲಿಗೆ ಬಲಿಯಾಗಿದೆ. ಕುಂಚಾವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಿಕ್ಕೋಡಿ ತಾಲೂಕಿನ ವಿವಿಧೆಡೆ ತುಂತುರು ಮಳೆಯಾಗಿದೆ. ಬಿಸಿಲಿನ ಬೇಗೆಗೆ ತತ್ತರಿಸಿದ್ದ ಜನತೆಗೆ ಮಳೆಯಿಂದ ವಾತಾವರಣ ತಂಪಾಗಿತ್ತು. ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಬಿಸಿಲು ನಾಡು ಯಾದಗಿರಿಯಲ್ಲಿ ವರುಣನ ಸಿಂಚನವಾಗಿದೆ. ಕಳೆದ ಒಂದು ಗಂಟೆಯಿಂದ ಸುರಿಯುತ್ತಿರುವ ಮಳೆಗೆ ಶಹಾಪುರ ಪಟ್ಟಣ ಮಲೆನಾಡಿನಂತಾಗಿತ್ತು. ಬಿಸಿಲಿನ ತಾಪಮಾನದಿಂದ ಕಂಗೆಟ್ಟಿದ್ದ ಜನರು ಸಂತಸಗೊಂಡರು. ಶಹಾಪುರ ತಾಲೂಕಿನಾದ್ಯಂತ ಗಾಳಿ ಸಹಿತ ಮಳೆ ಸುರಿಯುತ್ತಿದೆ. ಯಾದಗಿರಿ ಜಿಲ್ಲೆಯಾದ್ಯಂತ ಮೋಡಕವಿದ ವಾತಾವರಣವಿದೆ.
ಕೊಪ್ಪಳದಲ್ಲಿ ಭಾರಿ ಬಿರುಗಾಳಿಗೆ ನೆಲಕ್ಕುರುಳಿದ ಬಾಳೆ
ಕೊಪ್ಪಳ ತಾಲೂಕಿನ ಡೊಂಬರಳ್ಳಿ ಗ್ರಾಮದಲ್ಲಿ ಭಾರಿ ಬಿರುಗಾಳಿ ಮಳೆಗೆ ಬಾಳೆ ಬೆಳೆಯು ಹಾಳಾಗಿದೆ. ಡೊಂಬರಹಳ್ಳಿ ಗ್ರಾಮದ ಬಸವರಡ್ಡಿ ಕರಡ್ಡಿ ಎಂಬುವವರಿಗೆ ಸೇರಿದ ಸುಮಾರು ಒಂದೂವರೆ ಎಕರೆಯಲ್ಲಿ ಬೆಳೆದಿದ್ದ ಬಾಳೆಯು ನೆಲಕ್ಕುರುಳಿದೆ. ಬಾಳೆ ಗೊನೆ ಬಿಟ್ಟು ಫಸಲು ನೀಡುವ ವೇಳೆ ಬಾಳೆ ಬೆಳೆ ನಾಶವಾಗಿದ್ದು, ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ತೋಟಗಾರಿಕೆ ಇಲಾಖೆಯವರು ಸಮಿಕ್ಷೆ ಮಾಡಿ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Road Accident : ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಸಾವು; ಕರೆಂಟ್ ವೈರ್ ತಾಗಿ ವ್ಯಕ್ತಿ ಮೃತ್ಯು
ಮೇ 15ರವರೆಗೆ ಮಳೆ ಎಚ್ಚರಿಕೆ
ಮಲೆನಾರಿನ ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆಯು ಅಬ್ಬರಿಸಲಿದೆ. ಕೆಲವು ಸ್ಥಳಗಳಲ್ಲಿ ಭಾರೀ ಗಾಳಿಯೊಂದಿಗೆ (40-50 kmph) ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಇನ್ನೂ ಕಾರವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಒಳನಾಡಿನ ಜಿಲ್ಲೆಗಳಾದ ದಾವಣಗೆರೆ, ಮಂಡ್ಯ, ಮೈಸೂರು, ಚಾಮರಾಜನಗರ, ಹಾವೇರಿ, ಬೆಳಗಾವಿ, ಬಾಗಲಕೋಟೆ, ಗದಗ, ವಿಜಯಪುರ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಬಿರುಗಾಳಿ (40-50 kmph) ಬೀಸಲಿದ್ದು, ಗುಡುಗು ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಬೀದರ್, ಧಾರವಾಡ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೋಲಾರ, ರಾಮನಗರ, ಚಿತ್ರದುರ್ಗದ ಕೆಲವು ಸ್ಥಳಗಳಲ್ಲಿ ಬಿರುಗಾಳಿ ಜತೆಗೆ (40-50 kmph) ವ್ಯಾಪಕ ಮಳೆಯಾಗಲಿದೆ.
ಬೆಂಗಳೂರಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಪ್ರದೇಶಗಳಲ್ಲಿ ಸಂಜೆ ಅಥವಾ ರಾತ್ರಿ ವೇಳೆಗೆ ಹಗುರದಿಂದ ಸಾಧಾರಣ ಮಳೆಯಾಗಲಿದ್ದು, ಗುಡುಗು ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 32°C ಮತ್ತು 21°C ಇರುವ ಸಾಧ್ಯತೆ ಇದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ