Site icon Vistara News

Karnataka Weather : ವರ್ಷಾಘಾತಕ್ಕೆ ಉತ್ತರ ಕರ್ನಾಟಕ ಸುಸ್ತು; ರಾತ್ರಿಯೆಲ್ಲ ಗಾಳಿ ಸಹಿತ ಮಳೆಯಾರ್ಭಟ

Karnataka Weather Forecast

ಬೆಂಗಳೂರು: ರಾಜ್ಯಾದ್ಯಂತ ಬೇಸಿಗೆ ಮಳೆ (Rain News) ಅಬ್ಬರ ಜೋರಾಗಿದೆ. ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ಹಾಗೂ ಯಲಹಂಕದಲ್ಲಿ ವರ್ಷದ ಮೊದಲ ಮಳೆಯಾಗಿದೆ. ಕಾದ ಕೆಂಡದಂತಾಗಿದ್ದ ಧರೆಗೆ ಶುಕ್ರವಾರ ಮಧ್ಯಾಹ್ನ ಕೆಲಕಾಲ ಸುರಿದ ಮಳೆಯು ಜನರಲ್ಲಿ ಸಂತಸ (Karnataka weather Forecast) ಮೂಡಿಸಿತ್ತು.

ಶುಕ್ರವಾರ ಸಂಜೆ ನಂತರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಮೇಲ್ಮೈ ಗಾಳಿಯೊಂದಿಗೆ ಲಘು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಜತೆಗೆ ಬಳ್ಳಾರಿ, ಬೀದರ್‌, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಮೈಸೂರು, ರಾಮನಗರ, ಶಿವಮೊಗ್ಗದ ಒಂದೆರಡು ಕಡೆಗಳಲ್ಲಿ ಗಾಳಿ ಸಹಿತ ಮಳೆಯಾಗಿದೆ.

ಇನ್ನೂ ತುಮಕೂರಿನ ಕುಣಿಗಲ್ ತಾಲೂಕು ಡಿ.ಹೊಸಹಳ್ಳಿ, ರಾಜೇಂದ್ರಪುರ ಭಾಗದಲ್ಲಿ ಗಾಳಿ- ಮಳೆಯ ಅಬ್ಬರಕ್ಕೆ ಮನೆಯ ಮೇಲ್ಛಾವಣಿಗಳು ಹಾರಿಹೋಗಿದ್ದವು. ಜತೆಗೆ ಮರಗಳೆಲ್ಲವೂ ಧರೆಗುರುಳಿದ್ದವು. ಕುಣಿಗಲ್ ತಾಲೂಕಿನ ಹಲವೆಡೆ ನಿನ್ನೆ ತುಂತುರು ಮಳೆಯೊಂದಿಗೆ ಬಿರುಗಾಳಿ ಬೀಸಿದೆ. ಬಿರುಗಾಳಿಯ ರಭಸಕ್ಕೆ 30ಕ್ಕೂ ಹೆಚ್ಚು ಮರಗಳು ನೆಲಸಮವಾಗಿತ್ತು. ಡಿ.ಹೊಸಹಳ್ಳಿಯಲ್ಲಿ ಶಾಲಾ ಕಟ್ಟಡದ ಮೇಲೆ ಬೃಹತ್ ಗಾತ್ರದ ಮರವೊಂದು ಬಿದ್ದಿತ್ತು. ಇನ್ನು ರಾಜೇಂದ್ರಪುರ ಗ್ರಾಮದಲ್ಲಿ ಕಲ್ಲೂರಯ್ಯ, ಬರಿಯಯ್ಯ, ಚಿಕ್ಕಕೂರಲಯ್ಯ ಎಂಬುವವರ ಮನೆಗಳ ಮೇಲ್ಛಾವಣಿಯೇ ಹಾರಿಹೋಗಿತ್ತು. ಸ್ಥಳಕ್ಕೆ ಕುಣಿಗಲ್ ಶಾಸಕ ಡಾ.ರಂಗನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: Fraud Case : ಉದ್ಯಮಿಗೆ ಚಮತ್ಕಾರಿ ಚೆಂಬು ಕೊಟ್ಟವರು ಅರೆಸ್ಟ್‌; 22 ಬ್ಯಾಂಕ್‌ಗಳಿಗೆ ಟೋಪಿ ಹಾಕಿದ ಫ್ಯಾಮಿಲಿ ಲಾಕ್‌

ಸಿಡಿಲು ಬಿಡಿದು ಹೊತ್ತಿ ಉರಿದ ತೆಂಗಿನ ಮರ

ಚಿಕ್ಕಮಗಳೂರಿನ ಬಾಳೆಹೊನ್ನುರು-ಕೊಪ್ಪ ರಸ್ತೆಯಲ್ಲಿ ಮಧ್ಯರಾತ್ರಿ ಸಿಡಿಲು ಬಡಿದು ತೆಂಗಿನ ಮರವೊಂದು ಹೊತ್ತಿ ಉರಿದಿತ್ತು. ಕೊಪ್ಪ ರಸ್ತೆಯ ಇಸಾಕ್ ಎಂಬುವರ ಮನೆಯ ತೆಂಗಿನ ಮರ ಹೊತ್ತಿ ಉರಿದಿತ್ತು. ಸಿಡಿಲು ಬಡಿದು ಸಂಪೂರ್ಣ ಸುಟ್ಟುಹೋಗಿತ್ತು. ಕಳೆದ ರಾತ್ರಿ ಬಾಳೆಹೊನ್ನೂರು ಸುತ್ತಮುತ್ತ ಗಾಳಿ-ಮಳೆ ಸುರಿದಿತ್ತು.

karnataka weather Forecast

ಸಿಡಿಲಿಗೆ ಮುರಿದು ಬಿದ್ದ ದೇವಾಲಯದ ಗರುಡುಗಂಬ

ಸಿಡಿಲು ಬಡಿದು ದೇವಾಲಯದ ಗರುಡುಗಂಬ ಮುರಿದು ಬಿದ್ದಿತ್ತು. ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನ ಹಗರನೂರಿನಲ್ಲಿ ಘಟನೆ ನಡೆದಿತ್ತು. ನಿನ್ನೆ ತಡರಾತ್ರಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿತ್ತು. ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಸೇರಿದ ಗರಡುಗಂಬಕ್ಕೆ ಸಿಡಿಲು ಬಡಿದ ಪರಿಣಾಮ ಮುರಿದು ಬಿದ್ದಿತ್ತು. ಅಲ್ಲದೆ ಹಿರೇಹಡಗಲಿಯಲ್ಲಿ ರೈತ ಬಂದ್ರಕಳ್ಳಿ ಲಂಕೆಪ್ಪ ಎಂಬವರ ಹಸುವು ಸಿಡಿಲಿಗೆ ಬಲಿಯಾಗಿತ್ತು. ಹಿರೇಕೊಳಚಿ, ಚಿಕ್ಕಕೊಳಚಿ, ನಾಗತಿಬಸಾಪುರ ಹಿರೇಹಡಗಲಿ ಸೇರಿ ಹತ್ತಾರು ಗ್ರಾಮಗಳಲ್ಲಿ ಮಳೆಯಾಗಿದೆ. ಹಗರನೂರು ಗ್ರಾಮದ ರಸ್ತೆ ಮೇಲೆ ಮರಗಳು ಬಿದ್ದು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ವಾಸದ ಮನೆ, ದನದ ಕೊಟ್ಟಿಗೆ ಮೇಲೆ ಹಾಕಲಾಗಿದ್ದ ತಗಡುಗಳು ಬಿರುಗಾಳಿಗೆ ಹಾರಿಹೋಗಿದ್ದವು.

ಉತ್ತರ ಕರ್ನಾಟಕದಲ್ಲಿ ಮಳೆ ಅಬ್ಬರ

ಗುರುವಾರದಂದು ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮತ್ತು ಕರಾವಳಿ, ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಅಥಣಿ ಹಾಗೂ ನಿಪ್ಪಾಣಿಯಲ್ಲಿ ತಲಾ 6 ಸೆಂ.ಮೀ ಮಳೆಯಾಗಿದೆ. ಮಹಾಲಿಂಗಪುರ 4, ಹೊನ್ನಾವರ, ಲೋಕಾಪುರ, ಗದಗ, ಚಿಕ್ಕೋಡಿ, ಸೇಡಬಾಳ, ಟಿಕ್ಕೋಟ, ಹುಂಚದಕಟ್ಟೆ, ಬೇಲೂರು, ತ್ಯಾಗರ್ತಿಯಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ.

ಮುಂಡಗೋಡು, ಹಾವೇರಿ, ಹಾವೇರಿ ಎಪಿಎಂಸಿ , ರಬಕವಿ , ಕುಂದಗೋಳ , ಸಂಕೇಶ್ವರ, ಕಲಘಟಗಿ , ಯಡವಾಡ, ಪೊನ್ನಂಪೇಟೆ, ಕೊಡಗು, ಹರಪನಹಳ್ಳಿಯಲ್ಲಿ ತಲಾ 2 ಸೆಂ.ಮೀ ಹಾಗೂ ಹಳಿಯಾಳ, ಸಿದ್ದಾಪುರ, ಗೋಕಾಕ್‌ , ರಾಣೆಬೆನ್ನೂರು, ಧಾರವಾಡ, ಮಂಡ್ಯದಲ್ಲಿ 1 ಸೆಂ.ಮೀ ಮಳೆಯಾಗಿದೆ. ರಾಜ್ಯದಲ್ಲಿ ಗರಿಷ್ಠ ಉಷ್ಣಾಂಶ 41.4 ಡಿ.ಸೆ ಕಲಬುರಗಿ ಮತ್ತು ರಾಯಚೂರಿನಲ್ಲಿ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version