ಕಾರವಾರ/ ಕಲಬುರಗಿ: ಕರಾವಳಿಯಲ್ಲಿ ವ್ಯಾಪಕ (Rain News) ಮಳೆಯಾಗುತ್ತಿದ್ದು, ಅವಾಂತರಗಳು ಮುಂದುವರಿದಿದೆ. ಉತ್ತರ ಕನ್ನಡದ ಕಾರವಾರ ರಾಷ್ಟ್ರೀಯ ಹೆದ್ದಾರಿ 66ರ ಬಿಣಗಾ ಸುರಂಗದಲ್ಲಿ ಮತ್ತೆ ಗುಡ್ಡ ಕುಸಿತ ಭೀತಿ ಎದುರಾಗಿದೆ. ಟನಲ್ ಎದುರು ಗುಡ್ಡದಿಂದ ಬಂಡೆಗಲ್ಲುಗಳು ರಸ್ತೆಗೆ ಉರುಳಿ ಬೀಳುತ್ತಿವೆ. ಭಾರೀ ಮಳೆಗೆ (Karnataka weather Forecast) ಟನಲ್ ಮೇಲ್ಭಾಗದ ಮಣ್ಣು ಸಡಿಲಗೊಂಡಿದ್ದು, ಬಂಡೆಗಲ್ಲು ಬೀಳುತ್ತಿವೆ.
ಐಆರ್‌ಬಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಹೆದ್ದಾರಿಯಲ್ಲೂ ಗುಡ್ಡ ಕುಸಿತ ಭೀತಿ ಎದುರಾಗಿದೆ. ವಾಹನ ಸವಾರರು ಆತಂಕದಲ್ಲೇ ಹೆದ್ದಾರಿಯಲ್ಲಿ ಸಾಗುವಂತಾಗಿದೆ. ಕಳೆದ 10 ವರ್ಷಗಳಿಂದ ಕಾರವಾರದಿಂದ ಭಟ್ಕಳವರೆಗೂ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಪೂರ್ಣಗೊಂಡಿಲ್ಲ. ಹೆದ್ದಾರಿ ಅಗಲೀಕರಣ ನಡೆಸುತ್ತಿರುವ ಐಆರ್‌ಬಿ ಕಂಪೆನಿ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರು, ಕಲಬುರಗಿಯಲ್ಲಿ ಭಾರಿ ಮಳೆ
ರಾಜಧಾನಿ ಬೆಂಗಳೂರಲ್ಲಿ ಮಂಗಳವಾರ ಸಂಜೆ ವೇಳೆಗೆ ಮಳೆಯಾಗಿದೆ. ಅನ್ನಪೂರ್ಣೇಶ್ವರಿ ನಗರ, ಲಗ್ಗೆರೆ, ಸುಂಕದಕಟ್ಟೆ, ವಿಧಾನಸೌಧ, ಮೆಜೆಸ್ಟಿಕ್, ಶಿವಾಜಿನಗರ ಸೇರಿದಂತೆ ಹಲವೆಡೆ ಮಳೆಯಾಗಿದೆ. ಇತ್ತ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದೆ. ಯಡ್ರಾಮಿ ತಾಲೂಕಿನ ವರವಿ-ಕುಕನೂರು ಮಾರ್ಗದಲ್ಲಿ ಹಳ್ಳ ದಾಟಲು ಗ್ರಾಮಸ್ಥರು ಹರಸಾಹಸ ಪಡುವಂತಾಗಿದೆ.
ಜಮೀನಿನಲ್ಲಿ ಬಿತ್ತನೆ ಕಾರ್ಯ ಮುಗಿಸಿ ಮನೆಗೆ ತೆರಳುವಾಗ ರೈತರು ಹಗ್ಗ ಹಿಡಿದು ಹಳ್ಳದಾಟುತ್ತಿದ್ದಾರೆ. ಪ್ರತಿಬಾರಿ ಮಳೆಗಾಲದಲ್ಲೂ ಇದೇ ರೀತಿ ಸಮಸ್ಯೆ ಎದುರಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಕೊಪ್ಪಳದಲ್ಲೂ ಮಳೆ ಸುರಿದಿದೆ. ಕೊಪ್ಪಳ ನಗರ ಸೇರಿದಂತೆ ಸುತ್ತಮುತ್ತ ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ ಆಗುತ್ತಿದ್ದಂತೆ ಮಳೆಯ ಸಿಂಚನವಾಗಿದೆ. ನಿತ್ಯವೂ ಆಗಾಗ ಮಳೆ ಬೀಳುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ಕೊಂಚ ಹಿನ್ನಡೆಯಾಗಿದೆ.
ಇದನ್ನೂ ಓದಿ: Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಅರೆಸ್ಟ್; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ
ನಾಳೆ, ನಾಡಿದ್ದು ಅಲ್ಪ ಮಳೆ
ರಾಜ್ಯದ ಹಲವೆಡೆ ಮಳೆ ಅಬ್ಬರ ತಗ್ಗಿದೆ. ಇನ್ನೊಂದು ವಾರ ಪ್ರತ್ಯೇಕ ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಜೂ.12ರಂದು ಕರಾವಳಿಯ ದಕ್ಷಿಣ ಕನ್ನಡ, ಉಡುಪಿಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕನ್ನಡದ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಉತ್ತರ ಒಳನಾಡಿನ ಬೀದರ್, ವಿಜಯಪುರ, ಯಾದಗಿರಿ, ಕಲಬುರಗಿ ಹಾಗೂ ಮಲೆನಾಡಿನ ಚಿಕ್ಕಮಗಳೂರು ಭಾಗದಲ್ಲಿ ಗುಡುಗು ಸಹಿತ ಮಳೆ ಜತೆಗೆ ಗಾಳಿಯು ಗಂಟೆಗೆ 30-40 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ.
ಜೂನ್ 13ರಂದು ಉತ್ತರ ಕನ್ನಡದಲ್ಲಿ ಭಾರಿ ಮಳೆಯಾಗಲಿದೆ. ಕರಾವಳಿ, ಉತ್ತರ ಒಳನಾಡು, ದಕ್ಷಿಣ ಒಳನಾಡಿನ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಇನ್ನೂ ಬೆಂಗಳೂರು ಸುತ್ತಮುತ್ತ ಆಗಾಗ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಗುಡುಗು ಸಹಿತ ಮಳೆಯಾಗಬಹುದು ಅಂದಾಜಿಸಲಾಗಿದೆ. ಗರಿಷ್ಠ ಹಾಗೂ ಕನಿಷ್ಠ ಉಷ್ಣಾಂಶವು ಕ್ರಮವಾಗಿ 29, 21 ಡಿ.ಸೆ ಇರಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ