Site icon Vistara News

Karnataka Weather : ಉತ್ತರ‌ ಕನ್ನಡಕ್ಕೆ ಭಾರಿ ಮಳೆ ಮುನ್ಸೂಚನೆ; 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

Karnataka Weather Forecast

ಬೆಂಗಳೂರು: ಕಳೆದೊಂದು ವಾರದಿಂದ ಅಬ್ಬರಿಸುತ್ತಿದ್ದ ವರುಣ ಕೊಂಚ ತಣ್ಣಗಾಗಿದ್ದಾನೆ. ಈ ದಿನ ಕರ್ನಾಟಕದ ಕರಾವಳಿಯಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ (Rain News) ಸಾಧ್ಯತೆಯಿದೆ. ಮಲೆನಾಡು ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ (Heavy rain News) ನಿರೀಕ್ಷೆಯಿದೆ. ದಕ್ಷಿಣ ಒಳನಾಡಿನಲ್ಲಿ ಅತ್ಯಂತ ಹಗುರದಿಂದ ಮಧ್ಯಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka weather Forecast) ನೀಡಿದೆ.

ದಕ್ಷಿಣ ಒಳನಾಡಿನ ಪ್ರತ್ಯೇಕವಾಗಿ ಅತ್ಯಂತ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಮಂಡ್ಯ, ರಾಮನಗರ, ಮೈಸೂರು ಹಾಗೂ ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ತುಮಕೂರು ಸೇರಿ ವಿಜಯನಗರದಲ್ಲಿ ಕಡಿಮೆ ಮಳೆಯಾಗಲಿದೆ.

ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ ಮತ್ತು ಬೀದರ್ ಸೇರಿ ರಾಯಚೂರು, ಧಾರವಾಡ ಮತ್ತು ಹಾವೇರಿ, ಗದಗ, ಕೊಪ್ಪಳದಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ. ಆದರೆ ಯಾದಗಿರಿಯಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ.

ಮಲೆನಾಡಿನ ಚಿಕ್ಕಮಗಳೂರು, ಹಾಸನ, ಶಿವಮೊಗ್ಗದಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಕರಾವಳಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲೂ ವ್ಯಾಪಕವಾಗಿ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಉತ್ತರಕನ್ನಡದಲ್ಲಿ ಅಬ್ಬರಿಸಲಿದೆ ಮಳೆ

ಗುಡುಗು ಸಹಿತ ಭಾರೀ ಮಳೆಯಾಗಲಿದ್ದು, ಗಾಳಿ ವೇಗವು 30-40 ಕಿ.ಮೀ ವ್ಯಾಪ್ತಿಯಲ್ಲಿ ಬೀಸಿಲಿದೆ. ಉತ್ತರ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಇನ್ನೂ ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬೀದರ್, ಕಲಬುರಗಿ, ಗದಗ ಮತ್ತು ಹಾಸನ ಜಿಲ್ಲೆಗಳಲ್ಲೂ ವಿಪರೀತ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಇದನ್ನೂ ಓದಿ: Chikkamagaluru News : ಚಿಕ್ಕಮಗಳೂರು ಚಳಿಗೆ ನಶೆ ಏರಿಸಿಕೊಳ್ಳುತ್ತಿದ್ದವರ ಕಿಕ್ಕಿಳಿಸಿದ ಬಣಕಲ್ ಪಿಎಸ್ಐ ರೇಣುಕಾ

ದೇವರಮನೆಗುಡ್ಡದಲ್ಲಿ ಪ್ರವಾಸಿಗರ ಹುಚ್ಚಾಟ

ಚಿಕ್ಕಮಗಳೂರು/ಕಾರವಾರ: ಚಿಕ್ಕಮಗಳೂರಿನಲ್ಲಿ ಭಾರಿ ಮಳೆಯೊಂದಿಗೆ (Karnataka Rain) ಮೊನ್ನೆ ರಸ್ತೆ ಮಧ್ಯೆ ಡ್ಯಾನ್ಸ್, ನಿನ್ನೆ ಪ್ರವಾಸಿ ತಾಣದಲ್ಲಿ ಎಣ್ಣೆ ಪಾರ್ಟಿ ಮಾಡಿ ಪ್ರವಾಸಿಗರು ಹುಚ್ಚಾಟ ತೋರಿದ್ದರು. ಮೂಡಿಗೆರೆ ತಾಲೂಕಿನ ಪ್ರಸಿದ್ದ ಪ್ರವಾಸಿ ತಾಣ ದೇವರಮನೆಗುಡ್ಡದಲ್ಲಿ ಪೊಲೀಸರು ಯುವಕರಿಗೆ ಚಳಿ ಬಿಡಿಸಿದ್ದಾರೆ.

ಹೊಯ್ಸಳರ ಕಾಲದ ಕಾಲಭೈರವೇಶ್ವರನ ಸನ್ನಿದಿ ಆಗಿರುವ ದೇವರಮನೆ ಗುಡ್ಡದಲ್ಲಿ 2 ದಿನದ ಹಿಂದೆ ರಸ್ತೆ ಮಧ್ಯೆ ಗಾಡಿ ನಿಲ್ಲಿಸಿ ಮದ್ಯ ಸೇವಿಸಿ ಯುವಕರು ಡ್ಯಾನ್ಸ್ ಮಾಡಿದ್ದರು. ಜತೆಗೆ ದೇವರಮನೆಗುಡ್ಡದ ಎಲ್ಲೆಂದರಲ್ಲಿ ಕಾರು ನಿಲ್ಲಿಸಿಕೊಂಡು ಲೈಟ್ ಮ್ಯೂಸಿಕ್ ಹಾಕಿಕೊಂಡು ಎಣ್ಣೆ ಪಾರ್ಟಿ ಮಾಡಿದ್ದರು.

ಬಣಕಲ್ ಪಿಎಸ್ಐ ರೇಣುಕಾ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಮದ್ಯ ಸೇವಿಸಿ, ಧೂಮಪಾನ ಮಾಡಿದ್ದಕ್ಕೆ ಕೆಪಿ ಆಕ್ಟ್‌ನಲ್ಲಿ 20 ಜನರ ಮೇಲೆ ಕೇಸ್ ದಾಖಲಾಗಿದೆ. ಕೋಟ್ಪಾ ಕಾಯ್ದೆಯಡಿ 9 ಜನರ ಮೇಲೆ ಕೇಸ್ ಹಾಕಲಾಗಿದೆ.

ಸಂಪರ್ಕ ಸೇತುವೆ ಮುಳುಗಡೆ

ಉತ್ತರಕನ್ನಡ ಜಿಲ್ಲೆಯ ಕಾರವಾರದ ಗೋಯರ್ ಗ್ರಾಮದಲ್ಲಿ ಭಾರೀ ಮಳೆಗೆ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಮುಳುಗಡೆಯಾಗಿದ್ದು, ಗ್ರಾಮಸ್ಥರು ಪರದಾಡಿದ್ದರು. ಕಾಡಿನ ಹಾದಿಯಲ್ಲೇ ಸಾಗಬೇಕಿರುವ ಗ್ರಾಮದ ರಸ್ತೆ ಇದಾಗಿದ್ದು, ಬಾರಗದ್ದೆ, ಗೋಯರ್ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಜಲಾವೃತಗೊಂಡಿದೆ.

ಸುಮಾರು 25ಕ್ಕೂ ಅಧಿಕ ಮನೆಗಳಿರುವ ಗೋಯರ್ ಗ್ರಾಮದಲ್ಲಿ ಭಾರೀ ಮಳೆಯಿಂದಾಗಿ ರಸ್ತೆ ಮೇಲೆ‌ ಹಳ್ಳದ ನೀರು ಹರಿಯುತ್ತಿದೆ. ನೀರು ತುಂಬಿ ನಿಂತ ರಸ್ತೆಯಲ್ಲೇ ಹರಸಾಹಸಪಟ್ಟು ಗ್ರಾಮಸ್ಥರು ಓಡಾಡುವಂತಾಗಿದೆ. ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದೇ ಇರುವುದಕ್ಕೆ ಹಿಡಿಶಾಪ ಹಾಕಿದ್ದಾರೆ.

ಇತ್ತ ಹೊನ್ನಾವರ ತಾಲ್ಲೂಕಿನ 12 ಕಾಳಜಿ ಕೇಂದ್ರಗಳಲ್ಲಿ 437 ಮಂದಿಗೆ ಆಶ್ರಯ ನೀಡಲಾಗಿದೆ. ಭಾರೀ ಮಳೆಯಿಂದಾಗಿ ಜಲಾವೃತಗೊಂಡಿದ್ದ ಗುದ್ನಕಟ್ಟು ಗ್ರಾಮದಿಂದ 60 ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಎನ್‌ಡಿಆರ್‌ಎಫ್ ತಂಡದಿಂದ ನೆರೆ ಅಪಾಯದಲ್ಲಿದ್ದವರ ರಕ್ಷಣೆ ಮಾಡಲಾಗಿದೆ. ಮಳೆಯ ಅಬ್ಬರಕ್ಕೆ ಇದುವರೆಗೆ ನೂರಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದ್ದು, ಈವರೆಗೆ ಜಿಲ್ಲೆಯಲ್ಲಿ ಒಂದು ಸಾವು ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version