ಬೆಂಗಳೂರು: ನೈರುತ್ಯ ಮುಂಗಾರು (Rain News) ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಧಾರಣವಾಗಿದ್ದು, ಉತ್ತರ ಒಳನಾಡಿನಲ್ಲಿ (Karnataka Weather Forecast) ದುರ್ಬಲಗೊಂಡಿದೆ. ಕರಾವಳಿ, ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗಿದ್ದು, ಗುಡ್ಡ ಕುಸಿತದಂತಹ ಪ್ರಕರಣಗಳು ಹೆಚ್ಚಾಗಿವೆ. ಕೊಲ್ಲೂರು, ಸಿದ್ದಾಪುರ, ಕೊಟ್ಟಿಗೆಹಾರದಲ್ಲಿ 9 ಸೆಂ.ಮೀ ಮಳೆಯಾಗಿದೆ. ಕೋಟ, ಆಗುಂಬೆಯಲ್ಲಿ ತಲಾ 8 ಸೆಂ.ಮೀ ಹಾಗೂ ಉಡುಪಿ, ಧರ್ಮಸ್ಥಳ, ಲಿಂಗನಮಕ್ಕಿಯಲ್ಲಿ 7 ಸೆಂ.ಮೀ ಮಳೆಯಾಗಿದೆ.
ಆರಿದ್ರಾ ಮಳೆ ಎಫೆಕ್ಟ್ ಕೊಡಗಿನಲ್ಲಿ ಗುಡ್ಡ ಕುಸಿತ
ಕೊಡಗಿನಲ್ಲಿ ಸುರಿದ ಆರಿದ್ರಾ ಮಳೆಯ ಎಫೆಕ್ಟ್‌ನಿಂದಾಗಿ ಅಲ್ಲಲ್ಲಿ ಸಣ್ಣ ಪ್ರಮಾಣದ ಗುಡ್ಡ ಕುಸಿತ ಉಂಟಾಗುತ್ತಿದೆ. ನಿನ್ನೆ ಸೋಮವಾರ ಸುರಿದ ಮಳೆಗೆ ಬೆಟ್ಟದ ಮಣ್ಣು ಕುಸಿದು ಮನೆ ಮತ್ತು ದೇವಸ್ಥಾನಕ್ಕೆ ಅಲ್ಪಪ್ರಮಾಣದಲ್ಲಿ ಹಾನಿಯಾಗಿದೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಪಾಲೆಮಾಡುವಿನಲ್ಲಿ ಘಟನೆ ನಡೆದಿದೆ. ಪಾಲೆಮಾಡುವಿನ ಎಂಆರ್ ಕಾಳಪ್ಪ ಅವರ ಮನೆಯ ಸಮೀಪದ ಮಣ್ಣು ಕುಸಿದಿದೆ. ದೇವಸ್ಥಾನದ ಗೋಡೆ ಪಕ್ಕದಲ್ಲಿ ಮತ್ತು ವಾಸದ ಮನೆಯ ಪಕ್ಕದಲ್ಲಿ ರಾಶಿ ಮಣ್ಣು ತುಂಬಿದೆ.
ಇದನ್ನೂ ಓದಿ: Student Death : ಅಮ್ಮನ ಸೀರೆಯಲ್ಲಿ ನೇಣು ಬಿಗಿದುಕೊಂಡಳು ಅಪ್ರಾಪ್ತೆ
ಮಂಗಳೂರಿನ ಬಂಗ್ರ ಕೂಳೂರಿನಲ್ಲೂ ರಸ್ತೆ ಕುಸಿತ
ಭಾರೀ ಮಳೆಯಿಂದಾಗಿ ಮಂಗಳೂರಿನಲ್ಲಿ ಅವಾಂತರವೇ ಸೃಷ್ಟಿಯಾಗಿದೆ. ಮಂಗಳೂರಿನ ಬಂಗ್ರ ಕೂಳೂರಿನಲ್ಲಿ ರಸ್ತೆ ಕುಸಿದಿದೆ. ಎ ಜೆ ಇಂಜಿನಿಯರಿಂಗ್ ಕಾಲೇಜಿಗೆ ಸಂಪರ್ಕಿಸುವ ರಸ್ತೆ ಇದಾಗಿದ್ದು, ಮಣ್ಣಿನ ಸವೆತಕ್ಕೆ ಕ್ಷಣ ಕ್ಷಣಕ್ಕೂ ರಸ್ತೆಯು ಕುಸಿಯುತ್ತಿದೆ.
350 ಮೀಟರ್ ಉದ್ದದ ಈ ರಸ್ತೆಯಲ್ಲಿ ರಾಜಕಾಲುವೆಯು ಹೊಂದಿಕೊಂಡಿದೆ. ಹೀಗಾಗಿ ಈ ರಸ್ತೆಯಲ್ಲಿ ವಾಹನ ಸಂಚಾರ ಹಾಗೂ ಜನರ ಓಡಾಟವನ್ನು ನಿಷೇಧಿಸಲಾಗಿದೆ. ರಸ್ತೆ ಪಕ್ಕದ 10ಕ್ಕೂ ಹೆಚ್ಚು ಮನೆಗಳು ಕೂಡ ಅಪಾಯದಲ್ಲಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ.
ಚಿಕ್ಕಮಗಳೂರಲ್ಲಿ ಗಾಳಿ- ಮಳೆಗೆ ಶಾಲೆಗೆ ಹಾನಿ
ಚಿಕ್ಕಮಗಳೂರಿನಲ್ಲಿ ಗಾಳಿ-ಮಳೆ ಮುಂದುವರಿದಿದೆ. ಭಾರಿ ಮಳೆಗೆ ಶಾಲಾ ಕಟ್ಟಡವೊಂದು ಶಿಥಿಲಾವಸ್ಥೆಗೊಂಡಿದೆ. ಸರ್ಕಾರಿ ಶಾಲೆಯ ಚಾವಣಿಗೆ ಹಾನಿಯಾಗಿದ್ದು, ಗೋಡೆಯ ಮಣ್ಣು ಉದುರುತ್ತಿದೆ. ಮೂಡಿಗೆರೆ ತಾಲೂಕಿನ ಹಾಲೂರು ಸರ್ಕಾರಿ ಶಾಲೆಯಲ್ಲಿ ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಶಾಲೆಗೆ ಭೇಟಿ ನೀಡಿದ ಸ್ಥಳೀಯ ಶಾಸಕಿ ನಯನ ಮೋಟಮ್ಮ, ಶಿಥಿಲಾವಸ್ಥೆ ಗೊಂಡಿರುವ ಚಾವಣಿ ಸರಿಪಡಿಸಲು ಕ್ರಮವಹಿಸಲು ಸೂಚಿಸಿದರು.
ಧಾರಾಕಾರ ಮಳೆಗೆ ಧುಮ್ಮಿಕ್ಕಿದ ಜೋಗ್ ಫಾಲ್ಸ್
ಶಿವಮೊಗ್ಗದ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮಳೆಯಿಂದ ವಿಶ್ವವಿಖ್ಯಾತ ಜೋಗ ಜಲಪಾತ ಜೀವಕಳೆ ಪಡೆದುಕೊಂಡಿದೆ. ಜೋಗ ಜಲಪಾತದ ಸೌಂದರ್ಯಕ್ಕೆ ಪ್ರವಾಸಿಗರು ಮನ ಸೋತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ