ಬೆಂಗಳೂರು/ದೊಡ್ಡಬಳ್ಳಾಪುರ: ಸಿಡಿಲು ಬಡಿದು ಮನೆಯ ಗೋಡೆ ಕುಸಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಮುಕ್ಕಡಿಘಟ್ಟ ಗ್ರಾಮದಲ್ಲಿ (Karnataka Weather Forecast) ನಡೆದಿದೆ. ಸೋಮವಾರ ರಾತ್ರಿ ಗುಡುಗು, ಸಿಡಿಲು ಸಹಿತ ಜಡಿ (Rain News) ಮಳೆಯಾಗಿದೆ.
ಈ ವೇಳೆ ಸಿಡಿಲು ಬಡಿದ ಪರಿಣಾಮ ಗೋಡೆ ಕುಸಿತವಾಗಿದೆ. ಗಂಗರಾಜ್ ಎಂಬುವವರಿಗೆ ಸೇರಿದ ಮನೆ ಹಾನಿಯಾಗಿದೆ. ಮನೆಯ ಕುಟುಂಬಸ್ಥರು ಬೇರೆ ಕೋಣೆಯಲ್ಲಿದ್ದ ಕಾರಣ ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೂ ಗೋಡೆ ಕುಸಿದ ಪರಿಣಾಮ ಮನೆಯಲ್ಲಿದ್ದ ವಸ್ತುಗಳು ಜಖಂಗೊಂಡಿವೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Electric shock : ಮೀನು ಹಿಡಿಯಲು ಹೋದಾಗ ವಿದ್ಯುತ್ ಪ್ರವಹಿಸಿ ಬಾಲಕರಿಬ್ಬರು ಮೃತ್ಯು; ಕುಟುಂಬಸ್ಥರ ಆಕ್ರಂದನ
ಚಿಕ್ಕಮಗಳೂರಲ್ಲಿ ಅಬ್ಬರ ಮಳೆ
ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ ಭಾರಿ ಮಳೆಯಾಗಿದ್ದು, 8 ಸೆಂ.ಮೀ ದಾಖಲಾಗಿದೆ. ಧರ್ಮಸ್ಥಳದಲ್ಲಿ 6 ಸೆಂ.ಮೀ, ಕಾರ್ಕಳ , ಕಕ್ಕೇರಿ, ಯಗಟಿಯಲ್ಲಿ ತಲಾ 5 ಸೆಂ.ಮೀ ಮಳೆಯಾಗಿದೆ. ಮಂಗಳೂರು ವಿಮಾನ ನಿಲ್ದಾಣ, ಹೊಸದುರ್ಗ, ಹಾರಂಗಿ, ರಾಯಲ್ಪಾಡು, ಚನ್ನಗಿರಿ, ಕೋಲಾರ, ಎಂಎಂ ಹಿಲ್ಸ್‌ನಲ್ಲಿ 4 ಸೆಂ.ಮೀ ಮಳೆಯಾಗಿದೆ.
ಇನ್ನೂ ಮಣಿ, ಶಿರಾಲಿ, ಬೆಳ್ತಂಗಡಿ, ಕೊಣನೂರಿನಲ್ಲಿ ತಲಾ 3 ಸೆಂ.ಮೀ ಹಾಗೂ ಹೊನ್ನಾವರ, ಪುತ್ತೂರು, ಮಂಗಳೂರು, ತುಮಕೂರು, ಭಾಗಮಂಡಲ, ವಿರಾಜಪೇಟೆ, ಕುಶಾಲನಗರದಲ್ಲಿ ತಲಾ 2 ಸೆಂ.ಮೀನಷ್ಟು ಮಳೆಯಾಗಿದೆ. ಮಂಕಿ, ಪಣಂಬೂರು , ಮೂಲ್ಕಿ, ಉಪ್ಪಿನಂಗಡಿ, ಕುಮಟಾ, ಮಧುಗಿರಿ, ಪರಶುರಾಂಪುರ, ತೊಂಡೇಭಾವಿಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.
ಕರಾವಳಿ ಭಾಗಕ್ಕೆ ಮಳೆ ಅಲರ್ಟ್
ಜೂನ್ 19ರಂದು ಕರಾವಳಿ ಭಾಗಕ್ಕೆ ಮಳೆ ಎಚ್ಚರಿಕೆ ನೀಡಲಾಗಿದೆ. ಕರಾವಳಿಯ ಬಹುತೇಕ ಕಡೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಒಳನಾಡಿನಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. ರಾಜಧಾನಿ ಬೆಂಗಳೂರಲ್ಲಿ ಕೆಲವೊಮ್ಮೆ ಹಗುರದಿಂದ ಕೂಡಿದ ಮಳೆಯಾಗಲಿದೆ. ಗರಿಷ್ಠ 30 ಹಾಗೂ ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ