ಬೆಂಗಳೂರು: ರಾಜ್ಯದಲ್ಲಿ ಇನ್ನೊಂದು ವಾರ ಧಾರಾಕಾರ ಮಳೆ (Karnataka Weather Forecast) ಸುರಿಯಲಿದೆ. ಈ ಕುರಿತು ಹವಾಮಾನ ಇಲಾಖೆ ಎಚ್ಚರಿಕೆಯನ್ನು (Rain News) ನೀಡಿದೆ. ಕೆಲವೊಮ್ಮೆ ಗಾಳಿಯು ಗಂಟೆಗೆ 50 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದ್ದು, ಗುಡುಗು, ಸಿಡಿಲಿನ ಆರ್ಭಟ ಇರಲಿದೆ.
ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಚದುರಿದಂತೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ದಕ್ಷಿಣ ಕನ್ನಡಕ್ಕೂ ಎಚ್ಚರಿಕೆ ನೀಡಲಾಗಿದೆ. ಕೆಲವೊಮ್ಮೆ ಭಾರೀ ಗಾಳಿಯೊಂದಿಗೆ (40-50 kmph) ಮಳೆಯಾಗುವ ಸಾಧ್ಯತೆ ಇದೆ.
ಬಾಗಲಕೋಟೆ, ಕೊಪ್ಪಳ, ಧಾರವಾಡ, ಹಾವೇರಿ, ಬೆಳಗಾವಿ, ಗದಗ ಜಿಲ್ಲೆಗಳಲ್ಲಿ ಭಾರೀ ಗಾಳಿಯೊಂದಿಗೆ (40-50 kmph) ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಶಿವಮೊಗ್ಗದ ಒಂದೆರಡು ಕಡೆಗಳಲ್ಲಿ ಮಳೆ ಸಂಭವಿಸುವ ಸಾಧ್ಯತೆಯಿದೆ. ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಲಘು ಮಳೆಯಾಗಬಹುದು.
ಬೆಂಗಳೂರಿನಲ್ಲಿ ಸಾಧಾರಣ ಮಳೆ ಸಾಧ್ಯತೆ
ರಾಜಧಾನಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಸಾಧಾರಣ ಮಳೆಯಾಗಬಹುದು. ಕೆಲವೊಮ್ಮೆ ಗುಡುಗು, ಮಿಂಚು ಸಹಿತ ಮಳೆಯಾಗುವ ಸಂಭವವಿದೆ. ಜತೆಗೆ ಮೇಲ್ಮೈ ಮಾರುತಗಳು ಕೆಲವೊಮ್ಮೆ ಬಲವಾದ ಮತ್ತು ಬಿರುಗಾಳಿಯ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 31 ಮತ್ತು 21 ಡಿ.ಸೆ ಇರಲಿದೆ.
ಇದನ್ನೂ ಓದಿ: Self Harming : ಮಗಳ ನಗ್ನ ಫೋಟೊ ತೋರಿಸಿ ಪ್ರಿಯಕರ ಬ್ಲ್ಯಾಕ್‌ಮೇಲ್; ಮರ್ಯಾದೆಗೆ ಅಂಜಿ ವಿಷ ಸೇವಿಸಿದ ಕುಟುಂಬಸ್ಥರು
ವಿಜಯಪುರದ ದೋಣಿ ನದಿ ಸೇತುವೆ ಜಲಾವೃತ
ವಿಜಯಪುರದ ಯಾಳವಾರ ಗ್ರಾಮದ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಭಾರಿ ಮಳೆಗೆ ಸಂಪೂರ್ಣ ದೋಣಿ ನದಿ ಸೇತುವೆ ಜಲಾವೃತದಿಂದ ರಸ್ತೆ ಸಂಪರ್ಕ ಕಡಿತವಾಗಿದೆ. ಸೇತುವೆ ಜಲಾವೃತದಿಂದ ಹೊಲಗಳಿಗೆ ತೆರಳುವ ರೈತರಿಗೂ ಸಂಕಷ್ಟ ಎದುರಾಗಿದೆ. ಡೋಣಿ ನದಿಗೆ ಕಟ್ಟಿರುವ ಹಳೆಯ ನೆಲ ಸೇತುವೆ ಜಲಾವೃತಗೊಂಡಿದೆ. ಹೊಸ ಸೇತುವೆ ಕಳಪೆ ಕಾಮಗಾರಿಯಿಂದ ಶಿಥಿಲಗೊಂಡಿದೆ. ಹೀಗಾಗಿ ಜಲಾವೃತವಾದ ಹಳೆಯ ಸೇತುವೆಯ ಮೇಲೆಯೇ ವಾಹನಗಳು ಸಂಚಾರಿಸುತ್ತಿದೆ. ಹೊಸ ಸೇತುವೆ ಅಲ್ಲಲ್ಲಿ ಬಿರುಕು ಬಿಟ್ಟು ಬೀಳುವ ಹಂತ ತಲುಪಿದೆ. ಹೀಗಾಗಿ ಹೊಸ ಸೇತುವೆ ಮೇಲೆ ಕಳೆದ ಎರಡು ವರ್ಷಗಳಿಂದ ಸಂಚಾರ ನಿಷೇಧಿಸಲಾಗಿದೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ ನೆಲ ಮಟ್ಟದ ಸೇತುವೆ ಮೇಲೆ ಓಡಾಟ ನಡೆಸುತ್ತಿದ್ದಾರೆ.
ಗ್ರಾಮಕ್ಕೆ ನುಗ್ಗಿದ ಹಳ್ಳದ ನೀರು
ವಿಜಯನಗರ ಜಿಲ್ಲೆಯ ಗುಡೇಕೋಟೆ ಹೋಬಳಿಯ ಮಹದೇವಪುರ ಗ್ರಾಮದಲ್ಲಿ ಮಳೆಯಿಂದಾಗಿ ಭಾರಿ ಪ್ರಮಾಣದ ಹಳ್ಳದ ನೀರು ಗ್ರಾಮಕ್ಕೆ ನುಗ್ಗಿದೆ. ಗ್ರಾಮದ ಬೀದಿಗಳಲ್ಲಿ ರಭಸವಾಗಿ ಹರಿದು ಮನೆ ಒಳಗೆ ನುಗ್ಗಿದೆ. ಮಹದೇವಪುರ ಗ್ರಾಮದ ಮಾರಿಗುಡ್ಡ ಏರಿಯಾದಿಂದ ಗ್ರಾಮಕ್ಕೆ ನೀರು ನುಗ್ಗುತ್ತಿದೆ. ಮಹದೇವಪುರ ಗ್ರಾಮದಲ್ಲಿ ದಲಿತ ಕೇರಿ ತಗ್ಗು ಪ್ರದೇಶದಲ್ಲಿ ಇದೆ.
ಚಿಕ್ಕಮಗಳೂರು, ಉತ್ತರ ಕನ್ನಡದಲ್ಲಿ ಮಳೆಯ ಅಬ್ಬರ
ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮಳೆ ಮುಂದುವರಿದಿದೆ. ಕರಾವಳಿಯ ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದೆ. ಇನ್ನೂ ಚಿಕ್ಕಮಗಳೂರಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಣಕಲ್, ಬಾಳೂರು ಸುತ್ತಮುತ್ತ ಭಾರೀ ಮಳೆಯಾಗಿದೆ. ಚಾರ್ಮಾಡಿ ಘಾಟಿಯಲ್ಲಿ ಭಾರೀ ಮಳೆಗೆ ವಾಹನ ಸವಾರರು ಪರದಾಡಿದರು. ಮಳೆ ರಭಸಕ್ಕೆ ರಸ್ತೆ ಕಾಣದೆ ಇರುವುದರಿಂದ ಸವಾರರು ಕೊಟ್ಟಿಗೆಹಾರದಲ್ಲೇ ವಾಹನ ನಿಲ್ಲಿಸಿಕೊಂಡಿರುವುದು ಕಂಡು ಬಂತು.
ಗದಗದಲ್ಲಿ ಕೊಚ್ಚಿ ಹೋದ ಕಿರುಸೇತುವೆ
ಸತತ ಮಳೆಯಿಂದಾಗಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಧರ್ಮಾಪುರ ಗ್ರಾಮದ ಗಣಪತಿ ಕೆರೆಯ ಕಿರುಸೇತುವೆ ಕೊಚ್ಚಿ ಹೋದೆ. ಜಮೀನುಗಳಿಗೆ ಸಂಪರ್ಕ ಕಲ್ಪಿಸಲು ನಿರ್ಮಾಣ ಮಾಡಿದ್ದ ಕಿರುಸೇತುವೆ ನೀರುಪಾಲಾಗಿದೆ. ಕಳೆದ ವರ್ಷವಷ್ಟೇ ರೈತರು ತಮ್ಮ ಜಮೀನುಗಳಿಗೆ ತೆರಳಲು ನಿರ್ಮಿಸಲಾಗಿತ್ತು. ನಿರಂತರ ಮಳೆಯಿಂದಾಗಿ ಕಿರುಸೇತುವೆ ರಸ್ತೆ ಕೊಚ್ಚಿ ಹೋಗಿದ್ದು, ರೈತರು ಪರದಾಡುತ್ತಿದ್ದಾರೆ. ರಸ್ತೆ ಇಲ್ಲದ ಹಿನ್ನೆಲೆ ಇದೀಗ ರೈತರು ಕೃಷಿ ಚಟುವಟಿಕೆ ನಡೆಸಲು ಸಮಸ್ಯೆಯಾಗಿದೆ.
ಬೆಳಗಾವಿಯಲ್ಲಿ ಕೆರೆಯಂತಾದ ರಸ್ತೆಗಳು
ಮಳೆರಾಯನ ಅರ್ಭಟಕ್ಕೆ ಬೆಳಗಾವಿ ಕ್ಯಾಂಪ್ ಪ್ರದೇಶದ ಹತ್ತಿರ ರಸ್ತೆಗಳು ಕೆರೆಯಂತೆ ಮಾರ್ಪಾಟ್ಟಿವೆ. ಬೆಳಗಾವಿಯ ವಿವಿಧೆಡೆ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದೆ. ವಾಹನ ಸಂಚಾರಕ್ಕೆ ಅಡೆತಡೆ ಉಂಟಾಯಿತು. ಬೆಳಗಾವಿಯ ಖಾನಾಪುರ ರಸ್ತೆಯಲ್ಲಿ ಎರಡು ಅಡಿ ನೀರು ನಿಂತು ಅವಾಂತರವೇ ಸೃಷ್ಟಿಯಾಗಿತ್ತು. ಬೆಳಗಾವಿಯ ಗ್ಲೋಬ್ ಥೀಯೇಟರ್ ಅಂಗಳಕ್ಕೆ ನೀರು ನುಗ್ಗಿತ್ತು. ಟಿಕೆಟ್ ಕೌಂಟರ್ ಸಂಪೂರ್ಣ ಜಲಾವೃತಗೊಂಡಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ