ಬೆಂಗಳೂರು: ಮುಂದಿನ 24 ಗಂಟೆಯಲ್ಲಿ ಕರಾವಳಿ, ಉತ್ತರ ಒಳನಾಡು ಮತ್ತು ಮಲೆನಾಡಿನ ಕೆಲವು ಭಾಗಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ (Rain News) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.
ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡಿನ ಹಾಸನ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದಲ್ಲೂ ಗಾಳಿ ಜತೆಗೆ ಹಗುರದಿಂದ ಕೂಡಿದ ಮಳೆಯಾಗಲಿದೆ.
ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ ಹಾಗೂ ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯ ಪ್ರತ್ಯೇಕ ಸ್ಥಳಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗಲಿದೆ.
ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು ಹಾಗೂ ರಾಮನಗರ, ತುಮಕೂರು, ವಿಜಯನಗರದಲ್ಲಿ ಮಳೆಯೊಂದಿಗೆ ಗಾಳಿ ವೇಗವು 30-40 ಕಿಮೀ ವ್ಯಾಪ್ತಿಯಲ್ಲಿ ಗಾಳಿ ಬೀಸಲಿದೆ.
ಇದನ್ನೂ ಓದಿ: Video Viral: ಮಹಿಳೆಯನ್ನು ತಿವಿದು ರಸ್ತೆಯುದ್ದಕ್ಕೂ ಎಳೆದೊಯ್ದ ಎಮ್ಮೆ! ವಿಡಿಯೊ ಇದೆ
ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ
ಬೆಂಗಳೂರು: ಬೇಸಿಗೆ ಕಾಲದ ನಂತರ ಬರುವ ಮಳೆಗಾಲ ನಿಮ್ಮನ್ನು ಶಾಖದಿಂದ ಮುಕ್ತಗೊಳಿಸಿ ತಂಪನ್ನು ನೀಡುತ್ತದೆ ನಿಜ. ಆದರೆ ಈ ಸಮಯದಲ್ಲಿ ಬ್ಯಾಕ್ಟೀರಿಯಾ, ವೈರಸ್‌ಗಳ ಹಾವಳಿ ಹೆಚ್ಚಾಗಿರುತ್ತದೆ. ಹಾಗಾಗಿ ಅನೇಕ ಕಾಯಿಲೆಗಳು ಕೂಡ ಹರಡುತ್ತದೆ. ಇದರಿಂದ ನೀವು ಬಹಳ ಬೇಗನೆ ಅನಾರೋಗ್ಯಕ್ಕೊಳಗಾಗುತ್ತೀರಿ. ಹಾಗಾಗಿ ಮಳೆಗಾಲದಲ್ಲಿ ನೀವು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕಾಗುತ್ತದೆ. ಇದರಿಂದ ನೀವು ಫಿಟ್ ಆಗಿ ಆರೋಗ್ಯ (Health Tips) ವಾಗಿರಬಹುದು.
ಶುದ್ಧ ಮತ್ತು ಕುದಿಸಿದ ನೀರನ್ನು ಕುಡಿಯಿರಿ
ಮಳೆಗಾಲದಲ್ಲಿ ನೀರು ತುಂಬಾ ಕಲುಷಿತವಾಗಿರುತ್ತದೆ. ಹಾಗಾಗಿ ಅದರಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಈ ನೀರನ್ನು ನೀವು ಹಾಗೇ ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು, ಜ್ವರದಂತಹ ಸಾಮಾನ್ಯ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಮಳೆಗಾಲದಲ್ಲಿ ಶುದ್ಧವಾದ ನೀರನ್ನು ಬಳಸಿ ಮತ್ತು ಕುದಿಸಿ ಆರಿಸಿದ ನೀರನ್ನೇ ಕುಡಿಯಿರಿ. ಹಾಗೇ ಹೊರಗಡೆ ಹೋದಾಗ ಅಲ್ಲಲ್ಲಿ ನೀರನ್ನು ಕುಡಿಯುವ ಬದಲು ಮನೆಯ ನೀರನ್ನು ತೆಗೆದುಕೊಂಡು ಹೋಗಿ ಬಳಸಿ.
ಬೀದಿ ಬದಿಯ ಆಹಾರ ಮತ್ತು ಜಂಕ್ ಫುಡ್ ಸೇವನೆಯನ್ನು ತಪ್ಪಿಸಿ
ಹೆಚ್ಚಿನ ಜನರು ಬೀದಿಗಳಲ್ಲಿ ಮಾರಾಟ ಮಾಡುತ್ತಿರುವ ಆಹಾರವನ್ನು ಸೇವಿಸುತ್ತಾರೆ. ಆದರೆ ಬೀದಿಗಳಲ್ಲಿ ಆಹಾರಗಳನ್ನು ತೆರೆದಿಡುತ್ತಾರೆ. ಹಾಗಾಗಿ ಅದರಲ್ಲಿ ಬ್ಯಾಕ್ಟೀರಿಯಾಗಳು ಸೇರಿಕೊಳ್ಳುತ್ತದೆ. ಅದನ್ನು ಸೇವಿಸಿದರೆ ನಿಮ್ಮ ಆರೋಗ್ಯ ಕೆಡುತ್ತದೆ. ಹಾಗಾಗಿ ಅವುಗಳನ್ನು ತಿನ್ನುವುದನ್ನು ತಪ್ಪಿಸಿ.
ಮನೆಯ ಸುತ್ತಮುತ್ತ ನೀರು ನಿಲ್ಲುವುದನ್ನು ತಪ್ಪಿಸಿ
ಮಳೆಗಾಲದಲ್ಲಿ ಮನೆಯ ಸುತ್ತಮುತ್ತಲಿರುವ ಹೊಂಡಗಳು, ಮಡಿಕೆಗಳು, ಪ್ಲಾಸ್ಟಿಕ್ ಡಬ್ಬಗಳು, ಬಾಟಲಿಗಳು ಮುಂತಾದವುಗಳಲ್ಲಿ ನೀರು ಸಂಗ್ರಹವಾಗುತ್ತದೆ. ಹಾಗಾಗಿ ಇಂತಹ ನೀರಿನಲ್ಲಿ ಸೊಳ್ಳೆಗಳು ಮೊಟ್ಟಯಿಟ್ಟು ಮರಿ ಮಾಡುತ್ತವೆ. ಈ ಸೊಳ್ಳೆಗಳ ಕಡಿತದಿಂದ ಡೆಂಗ್ಯೂ, ಮಲೇರಿಯಾದಂತಹ ಹಲವಾರು ಕಾಯಿಲೆಗಳು ಹರಡುತ್ತವೆ. ಹಾಗಾಗಿ ಈ ನೀರು ಶೇಖರಣೆಯಾಗುವುದನ್ನು ತಪ್ಪಿಸಿ.
ಹಣ್ಣುಗಳು-ತರಕಾರಿಗಳನ್ನು ತೊಳೆದು ಬಳಸಿ
ಮಾರುಕಟ್ಟೆಯಿಂದ ತಂದ ಹಣ್ಣುಗಳು ಮತ್ತು ತರಕಾರಿಗಳ ಮೇಲ್ಮೈ ಮೇಲೆ ಬ್ಯಾಕ್ಟೀರಿಯಾಗಳು ಇರುತ್ತವೆ. ಇದನ್ನು ಹಾಗೇ ಸೇವಿಸಿದರೆ ಹೊಟ್ಟೆ ಕೆಡುತ್ತದೆ. ಹಾಗಾಗಿ ಅವುಗಳನ್ನು ಉಪ್ಪನ್ನು ಬೆರೆಸಿದ ನೀರಿನಲ್ಲಿ ಚೆನ್ನಾಗಿ ತೊಳೆದು ಉಪಯೋಗಿಸಿ. ಮತ್ತು ತರಕಾರಿಗಳನ್ನು ಚೆನ್ನಾಗಿ ಬೇಯಿಸಿ ತಿನ್ನಿ. ಹಸಿ ತರಕಾರಿ ತಿನ್ನುವುದನ್ನು ತಪ್ಪಿಸಿ.
ಸುಖಕರವಾಗಿ ನಿದ್ರೆ ಮಾಡಿ
ನಿದ್ರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೇಹಕ್ಕೆ ವಿಶ್ರಾಂತಿಯನ್ನು ನೀಡುತ್ತದೆ. ತಡವಾಗಿ ನಿದ್ರೆ ಮಾಡುವುದು , ಕಡಿಮೆ ನಿದ್ರೆ ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದ ನೀವು ಜ್ವರ, ಶೀತದಂತಹ ಸಾಮಾನ್ಯ ಕಾಯಿಲೆಯಿಂದ ಬಳಲುತ್ತೀರಿ. ಹಾಗಾಗಿ ದಿನದಲ್ಲಿ 8 ಗಂಟೆಗಳ ಕಾಲ ನಿದ್ರಿಸಿ.
ನಿಯಮಿತವಾದ ವ್ಯಾಯಾಮ
ಮಳೆಗಾಲದಲ್ಲಿ ಹೊರಗಡೆ ಮಳೆ ಸುರಿಯುವುದರಿಂದ ವಾಕಿಂಗ್, ಸೈಕ್ಲಿಂಗ್, ಯೋಗ ಮುಂತಾದ ವ್ಯಾಯಾಮಗಳನ್ನು ಮಾಡಲು ಅಡ್ಡಿಯಾಗುತ್ತದೆ. ಆದರೆ ನೀವು ಪ್ರತಿದಿನದ ವ್ಯಾಯಾಮವನ್ನು ತಪ್ಪಿಸಬೇಡಿ. ಮನೆಯೊಳಗೆ ನಿಮಗೆ ಸಾಧ್ಯವಾದಷ್ಟು ವ್ಯಾಯಾಮ ಮಾಡಿ. ಇದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.
ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆಯಿರಿ
ನೀವು ಹೊರಗಡೆಯಿಂದ ಬಂದಾಗ ಕೈಕಾಲುಗಳನ್ನು ಸ್ವಚ್ಛ ಗೊಳಿಸುವುದನ್ನು ಮರೆಯಬೇಡಿ. ಹಾಗೇ ಯಾವುದೇ ಆಹಾರವನ್ನು ಸೇವಿಸುವ ಮುನ್ನ ಕೈಗಳನ್ನು ಚೆನ್ನಾಗಿ ತೊಳೆಯಿರಿ. ಇದು ನಿಮ್ಮನ್ನು ಹಾನಿಕಾರಕ ಬ್ಯಾಕ್ಟೀರಿಯಾಗಳಿಂದ ಕಾಪಾಡುತ್ತದೆ.
ಆಗಾಗ ಮಳೆಯಲ್ಲಿ ನೆನೆಯುವುದನ್ನು ತಪ್ಪಿಸಿ
ಮಳೆಗಾಲದಲ್ಲಿ ಹೊರಗಡೆ ಮಳೆ ಧಾರಕಾರವಾಗಿ ಸುರಿಯುತ್ತಿರುತ್ತದೆ. ಹಾಗಾಗಿ ನೀವು ಹೊರಗಡೆ ಹೋಗುವಾಗ ಛತ್ರಿ, ರೈನ್ ಕೋಟ್ ಧರಿಸುವುದನ್ನು ಮರೆಯಬೇಡಿ. ಇಲ್ಲವಾದರೆ ನೀವು ಮಳೆಯಲ್ಲಿ ನೆನೆಯಬೇಕಾಗುತ್ತದೆ. ಇದರಿಂದ ನೀವು ಅನಾರೋಗ್ಯಕ್ಕೊಳಗಾಗಬಹುದು. ಹಾಗಾಗಿ ಮಳೆಗಾಲದಲ್ಲಿ ನೀವು ಆರೋಗ್ಯವಾಗಿರಲು ಪ್ರಯತ್ನಿಸಿ. ಅದಕ್ಕಾಗಿ ಈ ಸಲಹೆಗಳನ್ನು ತಪ್ಪದೇ ಪಾಲಿಸಿ. ಇವು ನಿಮ್ಮನ್ನು ರೋಗಗಳಿಂದ ಕಾಪಾಡಲು ಸಹಾಯ ಮಾಡುತ್ತವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ