Site icon Vistara News

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Weather Forecast

ಬೆಂಗಳೂರು: ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ (Karnataka weather Forecast) ಧಾರಾಕಾರ ಮಳೆಯಾಗುತ್ತಿದ್ದು, ನಾನಾ ಅವಾಂತರವನ್ನೇ (Rain Effect) ಸೃಷ್ಟಿಸಿದೆ. ಭಾರಿ ಮಳೆಗೆ (Karnataka Rain) ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶನಗರದಲ್ಲಿ ಭೂಕುಸಿತ ಉಂಟಾಗಿದೆ. ಮನೆಯ ಹಿಂಬದಿ ಭೂಮಿ ಕುಸಿಯುತ್ತಿರುವುದನ್ನು ಕಂಡು ನಿವಾಸಿಗಳು ಆತಂಕಗೊಂಡಿದ್ದಾರೆ.

ಗಣೇಶನಗರದ 2ನೇ ವಾರ್ಡ್‌ನ ಇಂದೂಧರ ಗೋಸಾವಿ ಎಂಬುವವರ ಮನೆ ಹಿಂಬದಿ ಧರೆ ಕುಸಿಯುವುದನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ನಿಧಾನಕ್ಕೆ ಮಣ್ಣು ಕುಸಿಯುತ್ತಿದ್ದು, ಮನೆಗೂ ಹಾನಿಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮುಂದುವರಿದ ಮಳೆ ಆರ್ಭಟ

ಚಿಕ್ಕಮಗಳೂರಿನಲ್ಲಿ ಭಾನುವಾರ ಮಳೆ ಆರ್ಭಟ ಮುಂದುವರಿದಿದೆ. ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಚಾರ್ಮಾಡಿ, ಕೊಟ್ಟಿಗೆಹಾರ, ಬಾಳೂರು, ಬಣಕಲ್, ಮೂಡಿಗೆರೆಯಲ್ಲಿ ವ್ಯಾಪಕ ಮಳೆಯಾಗಿದೆ. ನಿರಂತರ ಮಳೆಯಿಂದಾಗಿ ಪ್ರವಾಸಿಗರು ಹಾಗೂ ವಾಹನ ಸವಾರರು ಪರದಾಟ ಅನುಭವಿಸಿದರು. ಮಂಜು ಮಿಶ್ರಿತ ಮಳೆಯಿಂದಾಗಿ ರಸ್ತೆ ಕಾಣದೆ ಹೈರಾಣಾದ ಸವಾರರು ವಾಹನ ಚಲಾಯಿಸಲು ಆಗದೆ ನಿಂತಲ್ಲೇ ನಿಲ್ಲುವಂತಾಯಿತು.

ಇದನ್ನೂ ಓದಿ: Self Harming : ಪತಿ ಅಗಲಿಕೆಯ ನೋವು; ಖಿನ್ನತೆಗೊಳಗಾದ ತಾಯಿ ಮತ್ತು ಮಗ ಆತ್ಮಹತ್ಯೆ

ಉತ್ತರ ಕನ್ನಡದಲ್ಲಿ ಅಬ್ಬರಿಸುತ್ತಿರುವ ಮಳೆ

ಕರಾವಳಿ ಸುತ್ತಮುತ್ತ ನೈರುತ್ಯ ಮುಂಗಾರು ಪ್ರಬಲವಾಗಿದ್ದು, ಉತ್ತರ ಕನ್ನಡದ ಸುತ್ತಮುತ್ತ ವ್ಯಾಪಕ ಮಳೆಯಾಗಿದೆ. ಉತ್ತರ ಕನ್ನಡ ಅಂಕೋಲಾ, ಕುಮಟಾ, ಕದ್ರಾ, ಗೇಸೊಪ್ಪ, ಹೊನ್ನಾವರ, ಕಾರ್ಕಳ, ಭಾಗಮಂಡಲದಲ್ಲಿ ತಲಾ 13 ಸೆಂ.ಮೀ ಮಳೆಯಾಗಿದೆ.

ಗಾಳಿಯೊಂದಿಗೆ ಮಳೆ ಎಚ್ಚರಿಕೆ

ಜು.14ರಂದು ಒಳನಾಡಿನ ವಿವಿಧೆಡೆ ಗಾಳಿಯ ವೇಗವು 40-50 ಕಿ.ಮೀ ತಲುಪುವ ಸಾಧ್ಯತೆ ಇದೆ. ಜತೆಗೆ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಉಳಿದಂತೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಶಿವಮೊಗ್ಗ, ಚಿಕ್ಕಮಗಳೂರು ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹಾಸನ ಮತ್ತು ಕೊಡಗು ಸುತ್ತಮುತ್ತ ಗಾಳಿಯೊಂದಿಗೆ ಮಳೆಯಾಗಲಿದೆ. ಉತ್ತರ ಒಳನಾಡಿನ ಬೆಳಗಾವಿ, ವಿಹಯಪುರ, ಯಾದಗಿರಿ, ರಾಯಚೂರು, ಕಲಬುರಗಿ, ಬೀದರ್‌, ಧಾರವಾಡದಲ್ಲಿ ನಿರಂತರ ಗಾಳಿ ಜತೆಗೆ ಮಳೆಯಾಗಲಿದೆ.

ನದಿ ಪಾತ್ರದ ಜನರಿಗೆ ಎಚ್ಚರಿಕೆ ಸಂದೇಶ

ಮೈಸೂರಿನ ಕಬಿನಿ ಜಲಾಶಯದ ಹೊರ ಹರಿವಿನಲ್ಲಿ ದಿಢೀರ್ ಹೆಚ್ಚಳಗೊಂಡಿದೆ. ತಮಿಳುನಾಡಿಗೆ ನೀರು ಬಿಡುವಂತೆ ಸಿಡಬ್ಲ್ಯೂಆರ್‌ಸಿ ಆದೇಶಿಸುತ್ತಿದಂತೆ ನದಿಗೆ 15,000 ಕ್ಯುಸೆಕ್ ನೀರು ಬಿಡಲಾಗುತ್ತಿದೆ. ಇತ್ತ ಒಳ ಹರಿವಿನಲ್ಲೂ ಗಣನೀಯ ಏರಿಕೆ ಆಗಿದ್ದು, ಕಬಿನಿ ಜಲಾಶಯ ಭರ್ತಿ 15,497 ಕ್ಯುಸೆಕ್ ಇದೆ. 15,500 ಕ್ಯುಸೆಕ್ ಹೊರಹರಿವು ಇದ್ದು, ಕಪಿಲಾ ನದಿ ದಂಡೆಯಲ್ಲಿ ಪ್ರವಾಹದ ಭೀತಿ ಶುರುವಾಗಿದೆ. ಹೀಗಾಗಿ ನದಿ ಪಾತ್ರದಲ್ಲಿರುವ ಜನರಿಗೆ ಎಚ್ಚರಿಕೆ ಸಂದೇಶ ರವಾನೆ ಮಾಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version