ಬೆಂಗಳೂರು: ಕುಂತರೂ ನಿಂತರೂ ರಾಜ್ಯದ ಜನರನ್ನು ಬೇಸಿಗೆಯು ಸುಸ್ತು ಮಾಡಲಿದೆ. ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತಾಪಮಾನ ದಾಖಲಾಗುವ ಸಾಧ್ಯತೆ ಇದೆ ಎಂದು ತಜ್ಞರು (Karnataka Weather Forecast) ಎಚ್ಚರಿಸಿದ್ದಾರೆ. ಅದರಲ್ಲೂ ಉತ್ತರ ಒಳನಾಡಲ್ಲಿ ಗರಿಷ್ಠ ಉಷ್ಣಾಂಶ (temperature rising) ಮಾರ್ಚ್‌ನಿಂದ ಮೇ ತಿಂಗಳವರೆಗೆ ಹೆಚ್ಚಾಗಿ ಇರಲಿದೆ. ಮಾರ್ಚ್ ತಿಂಗಳಲ್ಲೇ ಗರಿಷ್ಠ ತಾಪಮಾನವೂ 35 ಡಿ.ಸೆ ಗಡಿ ದಾಟಿದೆ.
ಸುಡುವ ಬಿಸಿಲ ನಡುವೆಯೂ ಮಾರ್ಚ್ ತಿಂಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ತಜ್ಞರು ನೀಡಿದ್ದಾರೆ. ಆದರೆ ಉತ್ತರ ಒಳನಾಡಲ್ಲಿ ರಣಬಿಸಿಲು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮುಂದಿನ 48 ಗಂಟೆಯಲ್ಲಿ ರಾಜ್ಯದಲ್ಲಿ ಒಣ ಹವೆ ಮುಂದುವರಿಯಲಿದೆ.
ತಾಪಮಾನದ ಮುನ್ಸೂಚನೆ
ಉತ್ತರ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ. ಕರ್ನಾಟಕದ ದಕ್ಷಿಣ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: Monkey Death : ಕರುಳು ಹಿಂಡುವ ದೃಶ್ಯ; ಅಪಘಾತದಲ್ಲಿ ಮೃತಪಟ್ಟ ಮರಿ ಕೋತಿಯನ್ನು ತಬ್ಬಿ ಅಮ್ಮನ ರೋದನೆ
ಬೆಂಗಳೂರಲ್ಲಿ ತಲುಪಿದ ಗರಿಷ್ಠ ಉಷ್ಣಾಂಶ
ಈ ಹಿಂದಿನ ದಾಖಲೆಗಳ ಪ್ರಕಾರ 2005ರ ಫೆಬ್ರವರಿಯಲ್ಲಿ ಬೆಂಗಳೂರಲ್ಲಿ ಗರಿಷ್ಠ ತಾಪಮಾನ 35.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಆ ನಂತರ 2016, 2017, 2018 ಮತ್ತು 2019ರ ಫೆಬ್ರವರಿಯಲ್ಲಿ ಗರಿಷ್ಠ ತಾಪಮಾನ 35.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಆದರೆ ಈ ವರ್ಷ ಫೆಬ್ರವರಿಯಲ್ಲಿ 34.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಳೆದ ಮಾ.5ರ ಮಂಗಳವಾರ ಬೆಂಗಳೂರಿನಲ್ಲಿ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದು ಈ ವರ್ಷದ ಅತ್ಯಂತ ಹೆಚ್ಚು ತಾಪಮಾನದ ದಿನವಾಗಿದೆ. ಮಾರ್ಚ್ 2017ರಲ್ಲಿ, ಆ ತಿಂಗಳ ನಾಲ್ಕನೇ ವಾರದಲ್ಲಿ 37.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿತ್ತು. 2019ರಲ್ಲಿ, ಮಾರ್ಚ್ 8ರಂದು 37.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿತ್ತು.
ಇನ್ನೂ ರಾಜಧಾನಿ ಬೆಂಗಳೂರಲ್ಲಿ ಬಿಸಿಲ ಧಗೆ ಹೆಚ್ಚಾಗಿದೆ. ಗರಿಷ್ಠ ಉಷ್ಣಾಂಶ 35 ಡಿ.ಸೆಯಷ್ಟು ಹೆಚ್ಚಾಗಿದೆ. ಮುಂದಿನ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ ಮುಖ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಗರಿಷ್ಠ ಉಷ್ಣಾಂಶ 35 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಕಲಬುರಗಿಯಲ್ಲಿ ತಾಪ ಹೆಚ್ಚಳ
ಇನ್ನೂ ರಾಜ್ಯಾದ್ಯಾಂತ ಬುಧವಾರದಂದು ಒಣ ಹವೆ ಇತ್ತು. ಅತೀ ಗರಿಷ್ಠ ಉಷ್ಣಾಂಶ 38.8 ಡಿ.ಸೆ ಕಲಬುರಗಿಯಲ್ಲಿ ದಾಖಲಾಗಿತ್ತು. ಕನಿಷ್ಠ ಉಷ್ಣಾಂಶ 15.7 ಡಿ.ಸೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ದಾಖಲಾಗಿತ್ತು. ಕೋಲಾರದಲ್ಲಿ ಕನಿಷ್ಠ ಉಷ್ಣಾಂಶ 16.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ರಾಯಚೂರು ಜಿಲ್ಲೆಯಲ್ಲಿ ಸರಾಸರಿ ಗರಿಷ್ಠ ಉಷ್ಣಾಂಶ 40.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಹಾವೇರಿ, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ನಿಂದ 42 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿ ದಾಖಲಾಗಿದೆ. ಇನ್ನೂ ಚಿಕ್ಕಬಳ್ಳಾಪುರ ಮತ್ತು ಚಿಕ್ಕಮಗಳೂರು , ಬೆಳಗಾವಿ, ಕೋಲಾರ, ಹಾಸನ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ 13 ಡಿಗ್ರಿ ಸೆಲ್ಸಿಯಸ್ ನಿಂದ 16 ಡಿಗ್ರಿ ಸೆಲ್ಸಿಯಸ್ ಇತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ