ಬೆಂಗಳೂರು: ಕರ್ನಾಟಕದ ಕರಾವಳಿಯಲ್ಲಿ ವ್ಯಾಪಕವಾಗಿ ಸಾಧಾರಣದಿಂದ ಭಾರಿ ಮಳೆಯಾಗುವ (Heavy Rain) ಸಾಧ್ಯತೆಯಿದೆ. ಮಲೆನಾಡು ಭಾಗಗಳಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಉತ್ತರ ಒಳನಾಡಿನಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯೊಂದಿಗೆ ಚದುರಿದ ಹಗುರದಿಂದ ಮಧ್ಯಮ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ (Rain News) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.
ದಕ್ಷಿಣ ಒಳನಾಡಿನಲ್ಲಿ ಪ್ರತ್ಯೇಕವಾಗಿ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ. ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು ಸೇರಿದಂತೆ ರಾಮನಗರ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ.
ಉತ್ತರ ಒಳನಾಡಿನಲ್ಲಿ ಚದುರಿದಂತೆ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ರಾಯಚೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಬೀದರ್, ಕಲಬುರಗಿ, ಧಾರವಾಡ ಮತ್ತು ಹಾವೇರಿ, ವಿಜಯಪುರ, ಗದಗ, ಕೊಪ್ಪಳ, ಯಾದಗಿರಿ, ಬಾಗಲಕೋಟೆಯಲ್ಲೂ ಮಳೆ ಇರಲಿದೆ.
ಮಲೆನಾಡಿನ ಹಾಸನ, ಕೊಡಗು ಜಿಲ್ಲೆಯಾದ್ಯಂತ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ವ್ಯಾಪಕ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಚದುರಿದಂತೆ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಈ ಜಿಲ್ಲೆಗಳಿಗೆ ಆರೆಂಜ್-ಯೆಲ್ಲೋ ಅಲರ್ಟ್
ಗುಡುಗು ಸಹಿತ ಭಾರೀ ಮಳೆಯಾಗಲಿದ್ದು, 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿ: Assault Case : ಜಮೀನು ವಿವಾದ; ನೀರಿನಲ್ಲಿ ಮುಳುಗಿಸಿ, ಕುಡುಗೋಲು, ಕಲ್ಲಿನಿಂದ ವ್ಯಕ್ತಿ ಮೇಲೆ ಹಲ್ಲೆ!
ಜುಲೈ 6ಕ್ಕೂ ಶಾಲಾ-ಕಾಲೇಜುಗಳಿಗೆ ರಜೆ
ಕರಾವಳಿಯಲ್ಲಿ ಭಾರೀ ಮಳೆ ಅಬ್ಬರ ಹಿನ್ನೆಲೆಯಲ್ಲಿ ಜುಲೈ 6 ರಂದು ಕುಮಟಾ, ಹೊನ್ನಾವರ, ಭಟ್ಕಳ ತಾಲೂಕಿನ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್‌ರಿಂದ ಆದೇಶ ಹೊರಡಿಸಲಾಗಿದೆ. ಪದವಿ ಕಾಲೇಜು ಹೊರತುಪಡಿಸಿ ಉಳಿದ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಕಳೆದ ಎರಡು ದಿನಗಳಿಂದ ಭಾರೀ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ರಸ್ತೆ, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಅಪಾಯದಲ್ಲಿರುವ ಬಳ್ಕುಂಜೆ -ಪಲಿಮಾರು ಸಂಪರ್ಕ ಸೇತುವೆ
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯನ್ನು ಸಂಪರ್ಕಿಸುವ ಮುಲ್ಕಿ ಸಮೀಪದ ಬಳ್ಕುಂಜೆ -ಪಲಿಮಾರು ಸಂಪರ್ಕ ಸೇತುವೆ ಅಪಾಯದಲ್ಲಿದೆ. ಸ್ಥಳೀಯರ ದೂರಿನಂತೆ ಜಿಲ್ಲಾಡಳಿತವು ಘನ ವಾಹನ ಸಂಚಾರ ನಿಷೇಧಿಸಿದೆ. ಸೇತುವೆಯ ಅಡಿ ಭಾಗದಲ್ಲಿ ತುಂಡು ತುಂಡಾಗಿ ಬೀಮ್‌ಗಳ ಸಿಮೆಂಟ್‌ಗಳು ಬೀಳುತ್ತಿವೆ. ನಿರಂತರ ಅಕ್ರಮ ಮರುಳು ಸಾಗಾಟವೇ ಇದಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಈ ಭಾಗದಲ್ಲಿ ಪೋಲಿಸ್ ಚೆಕ್ ಪೋಸ್ಟ್ ಇಲ್ಲದಿರುವುದು ಮರಳು ದಂದೆಕೋರರಿಗೆ ವರದಾನವಾಗಿದೆ ಎಂದು ಕಿಡಿಕಾರಿದ್ದಾರೆ. ಬಳ್ಕುಂಜೆ ಭಾಗದಿಂದ ಪಲಿಮಾರು, ಉಡುಪಿ, ನಿಟ್ಟೆ, ಬೆಳ್ಮಣ್, ಕುದುರೆಮುಖ, ಹೆಬ್ರಿ, ಸಾಗರ ಮೊದಲಾದ ಕಡೆಗೆ ಸಂಪರ್ಕಿಸುವ ರಸ್ತೆ ಇದಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ