ಬೆಂಗಳೂರು: ರಾಜ್ಯದ ಹಲವೆಡೆ ಮಳೆ ಅಬ್ಬರಕ್ಕೆ ಜನ-ಜೀವನ ಅಸ್ತವ್ಯಸ್ತವಾಗಿದೆ. ಮುಂದಿನ 24 ಗಂಟೆಯಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗಲಿದೆ (Rain News) ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.
ಮಧ್ಯ ಮಹಾರಾಷ್ಟ್ರದಿಂದ ಕರ್ನಾಟಕ ಸೇರಿ ಕೇರಳದವರೆಗೆ ಸುಳಿಗಾಳಿಯ ಚಲನೆಯಿಂದ ಹವಾಮಾನದಲ್ಲಿ ವೈಪರಿತ್ಯ ಉಂಟಾಗಿದೆ. ಇದರ ಪ್ರಭಾವದಿಂದಾಗಿ ಇನ್ನೆರಡು ದಿನಗಳು ಕರ್ನಾಟಕದಲ್ಲಿ ಮಳೆಯಾಗಲಿದೆ ಎಂದು ಸೂಚನೆ ನೀಡಲಾಗಿದೆ.
ಪ್ರಮುಖವಾಗಿ ಉತ್ತರ ಒಳನಾಡಿನ ಬೆಳಗಾವಿ, ವಿಜಯಪುರ, ಬಾಗಲಕೋಟೆ ಹಾಗೂ ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಸೇರಿ ದಕ್ಷಿಣ ಒಳನಾಡಿನ ಮೈಸೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಹಗುರ ಮಳೆಯಾಗಲಿದೆ. ಇನ್ನೂ 30-40 ಕಿಮೀ ವೇಗದಲ್ಲಿ ಬಿರುಸಿನ ಗಾಳಿ ಬೀಸಲಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ.
ಸಿಡಿಲಿಗೆ ಎತ್ತುಗಳು ಬಲಿ
ಬೀದರ್‌ನ ಔರಾದ್ ತಾಲೂಕಿನ ಕೊಳ್ಳೂರ ಗ್ರಾಮದಲ್ಲಿ ಸಿಡಿಲು ಬಡಿದು 2 ಎತ್ತುಗಳು ಮೃತಪಟ್ಟಿರುವ ಘಟನೆ ನಡೆದಿದೆ. ಸೋಮವಾರ ತಡರಾತ್ರಿಯಲ್ಲಿ ಭಾರಿ ಮಳೆಯೊಂದಿಗೆ ಸಿಡಿಲು ಬಡಿದಿದೆ. ಪರಿಣಾಮ ಸಾಗರ ಬಸವರಾಜ ಪಾಟೀಲ ಎಂಬುವವರಿಗೆ ಸೇರಿದ ಎತ್ತುಗಳು ಮೃತಪಟ್ಟಿವೆ.
ವಿಜಯನಗರದಲ್ಲಿ ಗಾಳಿ-ಮಳೆಗೆ ಹಾರಿದ ಶಾಮಿಯಾನ
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಸೀತಾರಾಮ್ ತಾಂಡಾದ ಗ್ರಾಮದ ಬಳಿಯ ಆಂಜನೇಯ ದೇಗುಲದಲ್ಲಿ ಹನುಮ ಜಯಂತಿ ನಿಮಿತ್ತ ಶಾಮಿಯಾನ, ಲೈಟಿಂಗ್ ಹಾಕಲಾಗಿತ್ತು. ಆದರೆ ಜೋರಾಗಿ ಬೀಸಿದ ಗಾಳಿ, ಮಳೆಗೆ ಶಾಮಿಯಾನ, ಲೈಟಿಂಗ್ಸ್ ಹಾರಿ ಹೋಗಿತ್ತು. ಇದರಿಂದಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿತ್ತು.
ತಡರಾತ್ರಿ ಬಿರುಗಾಳಿ ಸಹಿತ ಮಳೆಗೆ ಹತ್ತಾರು ಎಕರೆ ಪಪ್ಪಾಯಿ ಬೆಳೆ ನೆಲಕ್ಕೆ ಉರುಳಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನ ವಟ್ಟಮ್ಮನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ವಟ್ಟಮ್ಮನಹಳ್ಳಿ ಗ್ರಾಮದ ಮೂಗಪ್ಪ ಎಂಬುವರಿಗೆ ಸೇರಿದ 5 ಎಕರೆ ಪಪ್ಪಾಯಿ ಬೆಳೆ ಹಾಳಾಗಿದೆ. ಇದರಿಂದ ಅಂದಾಜು 5 ರಿಂದ 7 ಲಕ್ಷ ರೂಪಾಯಿ ಬೆಲೆ ಬಾಳುವ ಪಪ್ಪಾಯಿ ಬೆಳೆಗೆ ಹಾನಿಯಾಗಿದೆ. ಇದೇ ಗ್ರಾಮದ ಪತ್ರಿಗೌಡ ಹೊನ್ನೆಹಳ್ಳಿ ಎನ್ನುವವರ 3 ಎಕರೆ, ಕುಸುಮ ಅವರ 4 ಎಕರೆ ಪಪ್ಪಾಯಿ ಬೆಳೆ ನಷ್ಟವಾಗಿದೆ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೂಕ್ತ ಪರಿಹಾರಕ್ಕೆ ರೈತರು ಆಗ್ರಹಿಸಿದ್ದಾರೆ.
ದಾವಣಗೆರೆಯಲ್ಲಿ ಬಾಳೆ ಬೆಳೆ ನಾಶ
ಸೋಮವಾರ ಸಂಜೆ ಸುರಿದ ಗಾಳಿ ಮಳೆಗೆ ಅಪಾರ ಪ್ರಮಾಣದ ಬಾಳೆ ಬೆಳೆ ನಾಶವಾಗಿವೆ. ದಾವಣಗೆರೆಯ ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿ, ಜಮ್ಮಪುರ, ಹರಿಶಿನಗುಂಡಿ ಸೇರಿದಂತೆ ಹಲವು ಕಡೆ ಬೆಳೆ ನಾಶವಾಗಿದೆ. ಕಟ್ಟಿಗೆಹಳ್ಳಿ ಗ್ರಾಮದ ಸಿದ್ದಮ್ಮ, ಬಸವರಾಜಪ್ಪ ಎಂಬುವರಿಗೆ ಸೇರಿದ 20 ಎಕರೆ ಬಾಳೆ ತೋಟ ನೆಲಕಚ್ಚಿದೆ. ಬರಗಾಲದಲ್ಲಿ ಟ್ಯಾಂಕರ್ ನೀರು ಖರೀದಿ ಮಾಡಿ ಬಾಳೆ ಬೆಳೆಸಿದ್ದರು. ಆದರೆ ಗಾಳಿ ಮಳೆಗೆ ಬಾಳೆಯು ನೆಲಸಮವಾಗಿದೆ. ಕೂಡಲೇ ಹಾನಿಗೊಂಡ ಬೆಳೆಗೆ ಸರ್ಕಾರ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ