Site icon Vistara News

Karnataka Weather : ಬೆಂಗಳೂರಲ್ಲಿ ವೀಕೆಂಡ್‌ಗೆ ಬ್ರೇಕ್‌ ಕೊಟ್ಟ ವರುಣ! ಈ 3 ಜಿಲ್ಲೆಗಳಿಗೆ ಮಳೆ ಎಚ್ಚರಿಕೆ

karnataka weather forecast

ಬೆಂಗಳೂರು: ನೈರುತ್ಯ ಮುಂಗಾರು ಉತ್ತರ ಒಳನಾಡಿನಲ್ಲಿ ಚುರುಕಾಗಿದ್ದು, ಕರಾವಳಿ, ದಕ್ಷಿಣ ಒಳನಾಡಿನಲ್ಲಿ (Karnataka Weather Forecast) ಸಾಮಾನ್ಯವಾಗಿದೆ. ವಾರಾಂತ್ಯದಲ್ಲಿ ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ (Rain News) ಸಾಧ್ಯತೆ ಇದೆ.

ಉಳಿದ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಬಿರುಗಾಳಿ ಬೀಸಲಿದೆ. ಗಂಟೆಗೆ 40-50 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ. ಕೆಲವೆಡೆ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ಬೆಂಗಳೂರಲ್ಲಿ ಮೋಡ ಕವಿ ವಾತಾವರಣ

ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಆಗಾಗ ಸೂರ್ಯ ತನ್ನ ದರ್ಶನ ಕೊಡಲಿದ್ದಾನೆ. ಪ್ರತ್ಯೇಕ ಕಡೆಗಳಲ್ಲಿ ಗುಡುಗು ಸಹಿತ ಹಗುರದಿಂದ ಕೂಡಿದ ಮಳೆಯಾಗಲಿದೆ.

ಯೆಲ್ಲೋ ಅಲರ್ಟ್‌ ಘೋಷಣೆ

ಗುಡುಗು ಸಹಿತ ಭಾರಿ ಮಳೆಯೊಂದಿಗೆ ಗಾಳಿ ವೇಗವು ಗಂಟೆಗೆ 40-50 ವ್ಯಾಪ್ತಿಯಲ್ಲಿ ಬೀಸಲಿದೆ. ಹೀಗಾಗಿ ಉತ್ತರ ಒಳನಾಡಿನ ಬೀದರ್‌, ವಿಜಯಪುರ, ಕಲಬುರಗಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ.

ಇದನ್ನೂ ಓದಿ: Bus Accident : ವಾಹನ ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ತಲೆಸುತ್ತು; ರಸ್ತೆ ಬಿಟ್ಟು ಜಮೀನಿಗೆ ನುಗ್ಗಿದ ಬಸ್‌

ಮುಂಗಾರು ಮಳೆಗೆ ಪಪ್ಪಾಯಿ ಬೆಳೆ ಹಾನಿ

ಬಾಗಲಕೋಟೆಯಲ್ಲೂ ಮುಂಗಾರು ಮಳೆ ಅಬ್ಬರಕ್ಕೆ ತೋಟಗಾರಿಕಾ ಬೆಳೆ ಹಾನಿಯಾಗಿದ್ದು ರೈತರು ಆತಂಕದಲ್ಲಿದ್ದಾರೆ. ಬಾಗಲಕೋಟೆ ತಾಲೂಕಿನ ಹೊನ್ನಾಕಟ್ಟಿ ಗ್ರಾಮದಲ್ಲಿ ಫಸಲು ಕೈಗೆಟಕುವ ಮುನ್ನವೇ ಮಳೆಗೆ ಪಪ್ಪಾಯಿ ಆಹುತಿಯಾಗಿದೆ. ಅಧಿಕ ಮಳೆಯಿಂದಾಗಿ ತೇವಾಂಶದಿಂದ ಗಿಡದಿಂದ ಪಪ್ಪಾಯಿ ಉದುರುತ್ತಿದೆ.

ಪಪ್ಪಾಯಿ ಬೆಳೆದ ಹೊನ್ನಾಕಟ್ಟಿ ರೈತ ಯಲ್ಲಪ್ಪ ಜಿವೊಜಿ ಕಂಗಾಲಾಗಿದ್ದಾರೆ. 2 ಎಕರೆ ಜಮೀನಿನಲ್ಲಿ 2 ಲಕ್ಷ ರೂ. ಹೆಚ್ಚು ಖರ್ಚು ಮಾಡಿ ಪಪ್ಪಾಯಿ ಬೆಳೆಯಲಾಗಿತ್ತು. ಆದರೆ ಪಪ್ಪಾಯಿ ಫಸಲು ಚನ್ನಾಗಿ ಬಂದಿದ್ದರೂ, ಮಳೆಯಿಂದ ಪಪ್ಪಾಯಿಗೆ ಕೊಳೆ ರೋಗಕ್ಕೆ ಉದುರುತ್ತಿದೆ. 7- 8 ಲಕ್ಷ ರೂ ಲಾಭದ ನಿರೀಕ್ಷೆಯಲ್ಲಿದ್ದ ರೈತ ಯಲ್ಲಪ್ಪನಿಗೆ ಇದೀಗ ಸಾಲದ ಹೊರೆ ಹೆಚ್ಚಾಗಿದೆ. ನಿರಂತರ ಮಳೆಯಿಂದ ಪಪ್ಪಾಯಿ ಬೆಳೆ ಸಂಪೂರ್ಣ ಹಾನಿಯಾಗಿದೆ. ಸದ್ಯ ಸರ್ಕಾರದಿಂದ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.

ಮುಲ್ಲಾಮಾರಿ ಜಲಾಶಯದಿಂದ ನೀರು ಬಿಡುಗಡೆ; ಗ್ರಾಮಸ್ಥರಿಗೆ ಎಚ್ಚರಿಕೆ

ಕಲಬುರಗಿಯ ಚಿಂಚೊಳ್ಳಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ನಾಗರಾಳ‌ ಬಳಿ ಇರುವ ಮುಲ್ಲಾಮಾರಿ ಜಲಾಶಯದ ಒಳಹರಿವು 1,500 ಕ್ಯೂಸೆಕ್ ಹೆಚ್ಚಾಗಿದೆ. ಜಲಾಶಯದ ಗರಿಷ್ಠ ಮಟ್ಟ 491 ಮೀಟರ್ ಇದ್ದು, ಯಾವುದೇ ಕ್ಷಣದಲ್ಲಾದರೂ ಜಲಾಶಯದ ನೀರು ಬಿಡುಗಡೆ ಮಾಡಲಾಗುತ್ತದೆ. ಹೀಗಾಗಿ ಮುಲ್ಲಾಮಾರಿ ಕೆಡದಂಡೆ ಗ್ರಾಮಗಳಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ. ಚಿಮ್ಮನಚೋಡ, ತಾಜಲಾಪುರ, ಗಾರಂಪಳ್ಳಿ ಸೇರಿ ಹಲವು ಗ್ರಾಮಗಳಿಗೆ ನದಿ ‌ದಡದಲ್ಲಿ ಹೋಗದಂತೆ ಎಇ‌ ಸೂಚನೆ ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version