ಹಾವೇರಿ/ಬೆಂಗಳೂರು: ರಾಜ್ಯದಲ್ಲಿ ಮಳೆ ಅವಾಂತರ (Karnataka Weather Forecast) ಮುಂದುವರಿದಿದ್ದು, ನಾಳೆಯೂ ವರುಣನ ಅಬ್ಬರವು ಮುಂದುವರಿಯಲಿದೆ. ಸತತ ಮಳೆಗೆ (Rain News) ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಸಮ್ಮಸಗಿ ಬಳಿ ಗುಡ್ಡ ಕುಸಿದಿದೆ. ಹೆದ್ದಾರಿ ಮೇಲೆ ಗುಡ್ಡ ಕುಸಿದ ಪರಿಣಾಮ ಜೆಸಿಬಿ ಮೂಲಕ ಮಣ್ಣು ತೆರವುಗೊಳಿಸಬೇಕಾಯಿತು.
ಎಕ್ಕುಂಬಿ-ಮೊಳಕಾಲ್ಮುರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಿನ್ನೆಲೆ ಮಂದಗತಿಯಲ್ಲಿ ಸಾಗುತ್ತಿದ್ದ ಕಾರಣಕ್ಕೆ ಕೆಲವು ಹೊತ್ತು ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಹಾವೇರಿ – ಶಿರಸಿ ಸಂಪರ್ಕ ಕಲ್ಪಿಸುವ ಹೆದ್ದಾರಿ ಇದಾಗಿದ್ದು, ಮಣ್ಣು ತೆರವುಗೊಳಿಸಿದ ಬಳಿಕ ವಾಹನ ಸಂಚಾರ ಆರಂಭವಾಗಿತ್ತು.
ಮಳೆಯಿಂದಾಗಿ 526 ಮನೆಗಳಿಗೆ ಹಾನಿ
ಹಾವೇರಿ ಜಿಲ್ಲೆಯಲ್ಲಿ ವರುಣನ ಆರ್ಭಟಕ್ಕೆ 526 ಮನೆಗಳಿಗೆ ಹಾನಿಯಾಗಿದೆ. ಮಳೆಯಿಂದಾಗಿ ಈವರೆಗೂ ಐವರು ಮೃತಪಟ್ಟಿದ್ದರು, ನಾಲ್ವರು ಗಾಯಗೊಂಡಿದ್ದಾರೆ. ಎರಡು ಜಾನುವಾರುಗಳು ಸಾವನ್ನಪ್ಪಿವೆ. ಜತೆಗೆ ವರದಾ, ತುಂಗಭದ್ರಾ, ಕುಮದ್ವತಿ, ನದಿ ಅಬ್ವರಕ್ಕೆ 12 ಸೇತುವೆಗಳು ಮುಳುಗಡೆ ಆಗಿ ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. 49 ರೈತರ 31.27 ಹೆಕ್ಟೇರ್ ತೋಟಗಾರಿಕೆ ಬೆಳೆಹಾನಿಯಾಗಿದೆ. ಮೆಣಸಿನಕಾಯಿ 17.25 ಹೆಕ್ಟೇರ್ ಬೆಳೆ, ಬೆಳ್ಳುಳ್ಳಿ ಹಾಗಲಕಾಯಿ,ಕ್ಯಾಬಿಜ್ ಸೇರಿದಂತೆ ತರಕಾರಿ ಬೆಳೆಗಳು ನೀರುಪಾಲಾಗಿದೆ.
ಚಿಕ್ಕಮಗಳೂರಿನಲ್ಲಿ ಗ್ರಾಮಸ್ಥರಿಗೆ ಕಣ್ಣೀರು ತರಿಸಿದ ವರುಣ
ಚಿಕ್ಕಮಗಳೂರಿನಲ್ಲಿ ಭಾರೀ ಗಾಳಿ-ಮಳೆಗೆ ಮನೆ ಮೇಲೆ ಮರ ಬಿದ್ದಿದೆ. ಪರಿಣಾಮ ಮನೆಯೊಳಗೆ ಇದ್ದ ವೃದ್ಧೆ ಗಂಭೀರ ಗಾಯಗೊಂಡರು. ಮಳೆಯ ನಡುವೆ ರಸ್ತೆಯೇ ಇಲ್ಲದೆ ಮನೆಯಿಂದ ಜೋಳಿಗೆಯಲ್ಲಿ ಹಳ್ಳದಾಟಿಸಿ ಕಳಸ ಆಸ್ಪತ್ರೆಗೆ ದಾಖಲು ಮಾಡಿದರು. ಕಳಸ ತಾಲೂಕಿನ ಕಳಗೋಡೆ ಗ್ರಾಮದ ಕಾರ್ಲೆಯಲ್ಲಿ ಘಟನೆ ನಡೆದಿದೆ.
ಹೆದ್ದಾರಿಯಲ್ಲಿ ಮಣ್ಣು ಕುಸಿತ
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಭಾರಿ ಮಳೆಗೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಣ್ಣು ಕುಸಿದಿದೆ. ಮಣ್ಣು ಕುಸಿದಿದ್ದರಿಂದ ರಸ್ತೆ ಹದಗೆಟ್ಟಿತ್ತು. ಶಿರಾಡಿಘಾಟ್ ರಸ್ತೆಯ ತಿರುವಿನಲ್ಲಿ ಬರುವಾಗ ಕಂಟೇನರ್ ಉರುಳಿಬಿದ್ದಿದೆ. ಸಕಲೇಶಪುರ ತಾಲೂಕಿನ ಕೆಸಗಾನಹಳ್ಳಿ ಬಳಿ ಘಟನೆ ನಡೆದಿದೆ. ಭಾರಿ ಮಳೆಗೆ ಶಿರಾಡಿಘಾಟ್ ರಸ್ತೆಯಲ್ಲಿ ಮಣ್ಣು ಕುಸಿಯುತ್ತಲೆ ಇದೆ. ಕಂಟೇನರ್ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಪ್ರಪಾತಕ್ಕೆ ಕಂಟೇನರ್ ಬೀಳುವುದು ಕೂದಲೆಳೆ ಅಂತರದಲ್ಲಿ ಮಿಸ್ ಆಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕಂಟೇನರ್ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.
ಮಳೆಯ ಅಬ್ಬರಕ್ಕೆ ಕುಸಿದ ಸರ್ಕಾರಿ ಶಾಲೆ ಗೋಡೆ
ಶಿವಮೊಗ್ಗದಲ್ಲಿ ಮಳೆಗೆ ಸರ್ಕಾರಿ ಶಾಲೆಯ ಗೋಡೆಯು ಕುಸಿದಿದೆ. ಮಂಗಳವಾರ ಮಧ್ಯಾಹ್ನ ಅನವಟ್ಟಿಯ ಉರ್ದು ಸರ್ಕಾರಿ ಶಾಲೆಯ ಗೋಡೆ ಕುಸಿದಿದೆ. ವಿದ್ಯಾರ್ಥಿಗಳು ಊಟಕ್ಕೆ ತೆರಳಿದ್ದ ಸಮಯದಲ್ಲಿ ಗೋಡೆ ಕುಸಿದಿದೆ. ಅದೃಷ್ಟವಶಾತ್ ಭಾರೀ ದೊಡ್ಡ ಅನಾಹುತ ತಪ್ಪಿದೆ.
ಇದನ್ನೂ ಓದಿ: Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ
ಕರಾವಳಿಯಲ್ಲಿ ಮಳೆಯಾಟ ಮುಂದುವರಿಕೆ
ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಜತೆಗೆ ನಿರಂತರ ಗಾಳಿಯ ವೇಗವು 30-40 ಕಿಮೀ ತಲುಪುವ ಸಾಧ್ಯತೆಯಿದೆ. ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಸುತ್ತಮುತ್ತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಗಾಳಿಯ ವೇಗವು 40-50 ಕಿ.ಮೀ ತಲುಪಲಿದೆ. ದಕ್ಷಿಣ ಒಳನಾಡಿನ ಹಲವೆಡೆ ಗಾಳಿಯ ವೇಗವು 50 ಕಿ.ಮೀ ತಲುಪುವ ಸಾಧ್ಯತೆ ಇದ್ದು, ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಉತ್ತರ ಒಳನಾಡಿನಲ್ಲೂ ಹಗುರದಿಂದ ಕೂಡಿದ ಮಳೆಯಾಗಲಿದೆ. ಬೆಂಗಳೂರು ನಗರ ಮತ್ತು ಸುತ್ತಮುತ್ತ ಮುಂದಿನ 24 ಗಂಟೆಯಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 27 ಮತ್ತು 21 ಡಿಗ್ರಿ ಸೆಲಿಯಸ್ಸ್ ಇರಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ