ಚಿಕ್ಕಮಗಳೂರು/ಬೆಂಗಳೂರು:ಕಳೆದೊಂದು ವಾರದಿಂದ ಮಲೆನಾಡು ಭಾಗದಲ್ಲಿ ಬಿಡುವು ಕೊಟ್ಟಿದ್ದ ವರುಣ ಸೋಮವಾರ (Karnataka weather Forecast) ಅಬ್ಬರಿಸಿದ್ದ. ಕಾಫಿನಾಡು ಚಿಕ್ಕಮಗಳೂರಲ್ಲಿ ಒಂದು ಗಂಟೆಗೂ ಹೆಚ್ಚು ಸಮಯ ಧಾರಾಕಾರ ಮಳೆ (Rain News) ಸುರಿದಿದೆ. ಗಾಳಿ ಸಹಿತ ಮಳೆಗೆ ಸವಾರರು ಹೆಡ್ ಲೈಟ್ ಹಾಕಿಕೊಂಡೇ ವಾಹನ ಚಾಲನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಾಳೂರು, ಬಣಕಲ್, ಚಾರ್ಮಾಡಿ ಘಾಟ್ ಸುತ್ತಮುತ್ತ ಭಾರೀ ಮಳೆಯಾಗಿದೆ. ನಿರಂತರ ಮಳೆಯಿಂದಾಗಿ ವಾಹನ ಸವಾರರು ಪರದಾಡಬೇಕಾಯಿತು. ಅದರಲ್ಲೂ ಚಾರ್ಮಾಡಿ ಘಾಟಿಯಲ್ಲಿ ವಾಹನಗಳು ಮಂದಗತಿಯಲ್ಲಿ ಸಾಗಿದ್ದವು. ಭಾರಿ ಮಳೆಗೆ ರಸ್ತೆ ಕಾಣದೆ ಹಲವರು ರಸ್ತೆ ಬದಿ ವಾಹನ ನಿಲ್ಲಿಸಿಕೊಂಡಿದ್ದರು.
ಬೆಂಗಳೂರಲ್ಲಿ ಸಣ್ಣ ಮಳೆ
ರಾಜಧಾನಿ ಬೆಂಗಳೂರಿನಲ್ಲೂ ಕಳೆದ ನಾಲ್ಕೈದು ದಿನಗಳಿಂದ ಮಳೆಯು ಮಾಯವಾಗಿತ್ತು. ನಗರದ ಹಲವು ಭಾಗಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆ ಶುರುವಾಗಿತ್ತು. ಮುಖ್ಯವಾಗಿ ಕಾರ್ಪೋರೇಶನ್, ಕೆಆರ್ ಮಾರ್ಕೆಟ್, ಮೆಜೆಸ್ಟಿಕ್, ಶೇಷಾದ್ರಿಪುರಂ ಸುತ್ತಮುತ್ತ ಹಗುರದಿಂದ ಕೂಡಿದ ಮಳೆಯಾಗಿದೆ. ದಿಢೀರ್ ಮಳೆಯಿಂದಾಗಿ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೊಂದರೆಯುನ್ನುಂಟಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
ಕುಮಟಾದಲ್ಲಿ ಅತಿ ಹೆಚ್ಚು ಮಳೆ ದಾಖಲು
ನೈರುತ್ಯ ಮುಂಗಾರು ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಸಾಧಾರಣವಾಗಿತ್ತು. ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿತ್ತು. ಕರಾವಳಿ ಹಾಗೂ ಒಳನಾಡಿನ ಕೆಲವೆಡೆ ಮಳೆಯಾಗಿರುವ ವರದಿ ಆಗಿದೆ. ಉತ್ತರ ಕನ್ನಡದ ಕುಮಟಾದಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, 9 ಸೆಂ.ಮೀ ದಾಖಲಾಗಿದೆ.
ಉಳಿದಂತೆ ಗೇರ್ಸೊಪ್ಪ, ಗೋಕರ್ಣ, ಅಂಕೋಲಾ, ಗದಗದಲ್ಲಿ ತಲಾ 5 ಸೆಂ.ಮೀ ಮಳೆಯಾಗಿದೆ. ಮಂಕಿ, ಹಳಿಯಾಳ, ಶಿರಾಲಿ ಪಿಟಿಒ, ಸಂಕೇಶ್ವರ , ಕುಶಾಲನಗರದಲ್ಲಿ ತಲಾ 4 ಸೆಂ.ಮೀ ಮಳೆಯಾಗಿದೆ. ಇನ್ನೂ ಕಾರವಾರ, ಹೊನ್ನಾವರ, ನಿಪ್ಪಾಣಿಯಲ್ಲಿ 3 ಸೆಂ.ಮೀ ಹಾಗೂ ಯಲ್ಲಾಪುರ, ಮುಂಡಗೋಡು , ಚಿಕ್ಕೋಡಿ , ಹಿಡಕಲ್ ಅಣೆಕಟ್ಟು, ಬೆಳಗಾವಿ ವಿಮಾನ ನಿಲ್ದಾಣ, ಭಾಗಮಂಡಲದಲ್ಲಿ 2 ಸೆಂ.ಮೀ ಮಳೆಯಾಗಿದೆ. ಬೆಳ್ತಂಗಡಿ, ಸಿದ್ದಾಪುರ, ಜಗಲಬೆಟ್, ಕೋಟ, ಕಿರವ, ಕದ್ರಾ, ಲೋಂಡಾ, ಹಾವೇರಿ ಪಿಟಿಒ, ಔರಾದ್ , ಧಾರವಾಡ ಹಾಗೂ ಕುಂದಗೋಳ, ಚಿಂತಾಮಣಿ, ರಾಯಲ್ಪಾಡು, ಸೋಮವಾರಪೇಟೆ, ಕೊಡಗು, ಹಾರಂಗಿಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿರುವ ವರದಿ ಆಗಿದೆ.
ಬಿರುಗಾಳಿ ಸಹಿತ ಮಳೆ ಎಚ್ಚರಿಕೆ
ಜೂನ್ 18ರಂದು ಕರಾವಳಿಯ ಬಹುತೇಕ ಸ್ಥಳಗಳಲ್ಲಿ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಒಳನಾಡಿನ ಜಿಲ್ಲೆಗಳ ಅನೇಕ ಕಡೆಗಳಲ್ಲಿ ಬಿರುಗಾಳಿಯು ವೇಗವು 30-40 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ. ಜತೆಗೆ ಗುಡುಗು ಸಹಿತ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಬೆಂಗಳೂರಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ