Site icon Vistara News

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast

ಬೆಂಗಳೂರು/ದಾವಣಗೆರೆ: ಕರಾವಳಿ, ಮಲೆನಾಡು ಹಾಗೂ ಒಳನಾಡು ಭಾಗದಲ್ಲಿ ಮಳೆಯು (Rain News) ಅಬ್ಬರಿಸುತ್ತಿದೆ. ಸೋಮವಾರ (ಜು.1) ದಾವಣಗೆರೆಯಲ್ಲಿ ಅರ್ಧ ಗಂಟೆಗೂ ಹೆಚ್ಚು ಸಮಯ (Karnataka weather Forecast) ಮಳೆಯಾಗಿದೆ. ನಗರದ ಕೆಬಿ ಬಡಾವಣೆ, ಪಿಜೆ ಬಡಾವಣೆಯ ರಸ್ತೆಗಳಲ್ಲಿ ನೀರು ತುಂಬಿ ಹರಿದಿದೆ. ಇತ್ತ ಕೊಡಗಿನಲ್ಲೂ ಆರಿದ್ರಾ ಮಳೆ ಅಬ್ಬರಕ್ಕೆ ನದಿ ತೋರೆ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದೆ. ತಲಕಾವೇರಿ ಭಾಗಮಂಡಲ ವ್ಯಾಪ್ತಿಯಲ್ಲೂ ಉತ್ತಮ ಮಳೆಯಾಗುತ್ತಿದೆ. ಕಾವೇರಿ ನದಿ ನೀರಿನ ಮಟ್ಟದಲ್ಲೂ ಗಣನೀಯ ಏರಿಕೆ ಕಂಡಿದೆ.

ಪಂಚಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಮುಳುಗಡೆ

ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮಳೆ ಮುಂದುವರಿದಿದೆ. ನಿರಂತರ ಮಳೆಯಿಂದ ಪಂಚಗಂಗಾ ಒಳಹರಿವಿನ ಪ್ರಮಾಣ ಹೆಚ್ಚಳಗೊಂಡಿದೆ. ಪಂಚಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಬ್ರಿಡ್ಜ್ ಕಮ್ ಬ್ಯಾರೇಜ್ ಮುಳುಗಡೆಯಾಗಿದೆ. ಕೊಲ್ಹಾಪುರ ಜಿಲ್ಲೆಯ ಶಿಂಗನಾಪುರ ಬಳಿ ಇರುವ ಸೇತುವೆ ಮುಳುಗಡೆಗೊಂಡಿದ್ದು, ವಾಹಗಳ ಸಂಚಾರಕ್ಕೆ ತೊಂದರೆಯುಂಟಾಗಿದೆ. ಇತ್ತ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಕೊಲ್ಹಾಪುರ ಜಿಲ್ಲಾಡಳಿತ ಹಾಗೂ ಪೊಲೀಸರ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: Inspirational Story: ಕಣ್ಣೆದುರೆ ಸುಟ್ಟು ಕರಕಲಾದ ಮಗಳ ದುರಂತ ಅಂತ್ಯ; ಬಡಮಕ್ಕಳಿಗೆ ದಾರಿದೀಪವಾದ ಎಎಸ್‌ಐ

ಒಳನಾಡಿನಲ್ಲಿ ಮುಂಗಾರು ಸಕ್ರಿಯ

ನೈರುತ್ಯ ಮುಂಗಾರು ಒಳನಾಡಿನಲ್ಲಿ ಸಕ್ರಿಯವಾಗಿದ್ದರೆ, ಕರಾವಳಿಯಲ್ಲಿ ಸಾಧಾರಣವಾಗಿತ್ತು. ಕೊಡಗಿನ ವಿರಾಜಪೇಟೆಯಲ್ಲಿ 13 ಸೆಂ.ಮೀ ಮಳೆಯಾಗಿದೆ. ಜತೆಗೆ ಭಾಗಮಂಡಲ 11, ಆಗುಂಬೆ 9, ಸಿದ್ದಾಪುರ 8, ಕಮ್ಮರಡಿ 8 ಹಾಗೂ ಕುಂದಾಪುರ 7 ಸೆಂ.ಮೀ ಮಳೆಯಾಗಿದೆ. ಉಳಿದಂತೆ ರಾಜ್ಯಾದ್ಯಂತ ಬಹುತೇಕ ಕಡೆಗಳಲ್ಲಿ ಮಳೆಯಾಗಿರುವ ವರದಿ ಆಗಿದೆ.

ಕರಾವಳಿಯಲ್ಲಿ ತಗ್ಗಿದ ಮಳೆ ಅಬ್ಬರ

ಜು.2ರಂದು ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆ ಅಬ್ಬರವು ತಗ್ಗಿದೆ. ಉತ್ತರ ಒಳನಾಡಿನ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಆದರೆ ಗಾಳಿ ವೇಗವು ಗಂಟೆಗೆ 30-40 ಕಿ.ಮೀ ವ್ಯಾಪ್ತಿಯಲ್ಲಿ ತಲುಪಲಿದೆ. ದಕ್ಷಿನ ಒಳನಾಡಿನ ಹಲವೆಡೆ ಸಣ್ಣ ಪ್ರಮಾಣದಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದ್ದು, ಗರಿಷ್ಟ ಹಾಗೂ ಕನಿಷ್ಠ ಉಷ್ಣಾಂಶವು ಕ್ರಮವಾಗಿ 27 ಹಾಗೂ 21 ಡಿ.ಸೆ ಇರಲಿದೆ.

ಚಾರ್ಮಾಡಿ ಘಾಟ್‌ನಲ್ಲಿ ಪ್ರವಾಸಿಗರ ಹುಚ್ಚಾಟ

ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‌ನಲ್ಲಿ ಜಾರುವ ಬಂಡೆಗಳ ಮೇಲೆ ಪ್ರವಾಸಿಗರು ಹುಚ್ಚಾಟ ಮೆರೆದಿದ್ದಾರೆ. ಜಲಪಾತಗಳ ಮಧ್ಯೆ ಹೋಗಿ ಜಾರುವ ಬಂಡೆಗಳ ಮೇಲೆ ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಬಂಡೆಗಳ ಮೇಲೆ ಹತ್ತಿ ಅಪಾಯದ ಸ್ಥಳದಲ್ಲಿ ಡ್ಯಾನ್ಸ್ ಮಾಡುತ್ತಾ ಮೋಜು ಮಸ್ತಿ ಮಾಡುತ್ತಿದ್ದಾರೆ. ನಿರಂತರವಾಗಿ ನೀರು ಹರಿದು ಬಂಡೆ ತೀವ್ರವಾಗಿ ಜಾರುತ್ತಿರುತ್ತೆ. ಈ ಹಿಂದೆಯೂ ಬಿದ್ದು ಕೈ-ಕಾಲು ಮುರಿದುಕೊಂಡಿದ್ದಾರೆ, ಜೀವ ಕಳೆದುಕೊಂಡಿದ್ದಾರೆ. ಬಂಡೆಗಳ ಮೇಲೆ ಹತ್ತದಂತೆ ನಾಮಫಲಕ ಇದ್ದರೂ ಪ್ರವಾಸಿಗರು ಮಾತ್ರ ಡೋಂಟ್ ಕೇರ್ ಎನ್ನುತ್ತಿದ್ದಾರೆ. ಇತ್ತ ಪೊಲೀಸರು ಗಸ್ತು ತಿರುಗುತ್ತಿದ್ದರೂ ಕಣ್ತಪ್ಪಿಸಿ ಬಂಡೆ ಹತ್ತುತ್ತಿದ್ದಾರೆ. ಜಲಪಾತಗಳ ಬಳಿ ಕಾರು ನಿಲ್ಲಿಸಿಕೊಂಡು ರಸ್ತೆ ಬದಿಯೂ ಕುಣಿದು ಕುಪ್ಪಳಿಸುತ್ತಾ, ಇತರೆ ವಾಹನಗಳಿಗೂ ಅಡ್ಡಿಯಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version