Site icon Vistara News

Karnataka Weather : ನಾಳೆಗೂ ಮಳೆ ಮುನ್ನೆಚ್ಚರಿಕೆ; ಸೆ.30ರವರೆಗೆ ಈ ಪ್ರವಾಸಿ ತಾಣಗಳಲ್ಲಿ ಟ್ರಕ್ಕಿಂಗ್‌ ನಿಷೇಧ

karnataka weather Forecast

ಚಿಕ್ಕಮಗಳೂರು/ಬೆಂಗಳೂರು: ರಾಜ್ಯಾದ್ಯಂತ ನೈರುತ್ಯ ಮುಂಗಾರು (karnataka Weather Forecast) ಸಕ್ರಿಯವಾಗಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಮಳೆಯು (Heavy Rain Alert) ಅಬ್ಬರಿಸುತ್ತಿದ್ದು, ಆಗುಂಬೆ 33, ಅಂಕೋಲಾ 26, ಕಾರವಾರ 23, ಹಾಗೂ ಗೇರ್ಸೊಪ್ಪ 21 ಸೆಂ.ಮೀ ಮಳೆಯಾಗಿದೆ. ಇನ್ನೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸೆಪ್ಟೆಂಬರ್ 30ರವರೆಗೆ ಚಾರಣಕ್ಕೆ ನಿಷೇಧಿಸಲಾಗಿದೆ.

ಚಿಕ್ಕಮಗಳೂರಿನ ಬಲ್ಲಾಳ ರಾಯನ ದುರ್ಗ, ರಾಣಿಝರಿ, ಬಂಡಾಜೆ ಫಾಲ್ಸ್ ಟ್ರಕ್ಕಿಂಗ್‌ಗೆ ನಿರ್ಬಂಧ ಹಾಕಲಾಗಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಭಾರಿ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಳಗೊಂಡಿದೆ. ಪ್ರವಾಸಿಗರು ಚಾರಣದ ವೇಳೆ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದೆ. ಪ್ರವಾಸಿಗರ ಹಿತದೃಷ್ಟಿಯಿಂದ ಮೂಡಿಗೆರೆ ತಾಲೂಕಿನ ಬಲ್ಲಾಳ ರಾಯನ ದುರ್ಗ ಪ್ರವಾಸಿ ತಾಣ, ಕಳಸ ತಾಲೂಕಿನ ಬಂಡಾಜೆ ಫಾಲ್ಸ್‌ಗೆ ಕೊಪ್ಪ ವಿಭಾಗದ ಅರಣ್ಯ ಇಲಾಖೆ ಈ ಕ್ರಮಕೈಗೊಂಡಿದೆ.

ಇದನ್ನೂ ಓದಿ: Muharram 2024: ರಾಯಚೂರಿನಲ್ಲಿ ಮೊಹರಂನಲ್ಲಿ ಕೊಂಡ ಹಾಯುವಾಗ ಆಯತಪ್ಪಿ ಬಿದ್ದ ವ್ಯಕ್ತಿ ಸುಟ್ಟು ಭಸ್ಮ

ಶಿವಮೊಗ್ಗದಲ್ಲಿ ಕುಸಿದು ಬಿದ್ದ ಮನೆ

ಶಿವಮೊಗ್ಗ ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಮನೆಯೊಂದು ಕುಸಿದು ಬಿದ್ದಿದೆ. ಶಿವಮೊಗ್ಗದ ಶಿಕಾರಿಪುರ ತಾಲೂಕಿನ ಕುಸ್ಕೂರು ಗ್ರಾಮದಲ್ಲಿ ಘಟನೆ ನಡೆದಿದೆ. ಮಂಜಾನಾಯ್ಕ ಎಂಬುವವರಿಗೆ ಸೇರಿದ ಮನೆ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮನೆಯಲ್ಲಿದ್ದ ಗೃಹ ಬಳಕೆ ವಸ್ತುಗಳು ನೀರುಪಾಲಾಗಿವೆ.

ಉಡುಪಿಯಲ್ಲಿ ಮಳೆಗೆ ಉಕ್ಕಿ ಹರಿದ ಬ್ರಹ್ಮಾವರ ಮಡಿಸಾಲು ಹೊಳೆ

ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮಳೆಗೆ ಬ್ರಹ್ಮಾವರ ಮಡಿಸಾಲು ಹೊಳೆ ಉಕ್ಕಿ ಹರಿದಿದೆ. ಇದರಿಂದಾಗಿ ಆರೂರು ಬೆಳ್ಮಾರು ನೆರೆ ಹಾವಳಿ ಸೃಷ್ಟಿಯಾಗಿದೆ. ನೂರಾರು ಎಕರೆ ಕೃಷಿ ಭೂಮಿ ನೆರೆ ನೀರಿನಲ್ಲಿ ಮುಳುಗಿ ನಷ್ಟವಾಗಿದೆ. ಮಂಗಳವಾರ ಮಧ್ಯಾಹ್ನದ ನಂತರ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಿದೆ. ಆದರೂ ಘಟ್ಟ ಪ್ರದೇಶದಿಂದ ಹರಿದು ಬರುತ್ತಿರುವ ನೀರಿನಿಂದಾಗಿ ನೆರೆ ಸೃಷ್ಟಿಯಾಗುತ್ತಿದೆ.

ಮುಂದಿನ 24 ಗಂಟೆಯಲ್ಲಿ ಭಾರಿ ಮಳೆ

ಮುಂದಿನ 24 ಗಂಟೆಯಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಗಾಳಿಯ ವೇಗವು 30-40 ಕಿಮೀ ತಲುಪುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ವ್ಯಾಪಕ ಮಳೆಯಾಗಲಿದೆ. ಜತೆಗೆ ನಿರಂತರ ಗಾಳಿಯ ವೇಗವು 40-50 ಕಿಮೀ ಇರಲಿದೆ. ಒಳನಾಡಿನ ಬೆಳಗಾವಿ ಮತ್ತು ಹಾಸನ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಮಳೆಯು ಅಬ್ಬರಿಸಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version