ಧಾರವಾಡ: ಹಿರಿಯ ಜೀವಿಯೊಬ್ಬರು ಮಳೆ (Rain News ) ಬರುವಾಗಲೇ ತಪಸ್ಸಿಗೆ ಕುಳಿತ ಘಟನೆ ಧಾರವಾಡದ ಸಿಬಿಟಿ ಬಸ್ ನಿಲ್ದಾಣದ ಎದುರು ನಡೆದಿದೆ. ಜೋರಾಗಿ ಬರುತ್ತಿದ್ದ ಮಳೆಯಲ್ಲಿ (Karnataka weather Forecast) ನಡು ರಸ್ತೆಯಲ್ಲಿಯೇ ಕಣ್ಣು ಮುಚ್ಚಿ ಕುಳಿತ ವೃದ್ಧ, ಒಂಚೂರು ಅಲುಗಾಡದೆ ತಪಸ್ಸು ಮಾಡಿದ್ದಾರೆ. ಇನ್ನೂ ಈ ದೃಶ್ಯವನ್ನು ಓರ್ವ ಯುವಕನ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಬಳ್ಳಾರಿಯಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು
ಶುಕ್ರವಾರ ವಿಜಯನಗರದಲ್ಲೂ ಧಾರಾಕಾರ ಮಳೆಯಾಗಿದೆ. ಮಳೆಯಿಂದಾಗಿ ಕೆಲ ಕಾಲ ವಾಹನ ಸವಾರರು ಪರದಾಟಬೇಕಾಯಿತು. ಧಾರವಾಡದ ನಗರದ ಕೆಎಂಎಫ್ ಬಳಿಯ ರಸ್ತೆಯ ಮೇಲೆ ಮೊಣಕಾಲುದ್ದ ನೀರು ಬಂದ ಪರಿಣಾಮ ಸವಾರರು ಬೈಕ್ ತಳ್ಳಿಕೊಂಡು ಹೋದರು. ಇತ್ತ ಗಣಿನಾಡು ಬಳ್ಳಾರಿಯಲ್ಲೂ ವರುಣನ ಆರ್ಭಟ ಜೋರಾಗಿತ್ತು. ಬಿಸಿಲಿನ ತಾಪದಿಂದ ಬೇಸೆತ್ತಿದ್ದ ಜನರಿಗೆ ಮಳೆಯು ಸಂತಸವನ್ನುಂಟು ಮಾಡಿತ್ತು. ಮುಂಗಾರು ಬಿತ್ತನೆಯ ನಿರೀಕ್ಷೆಯಲ್ಲಿರುವ ರೈತರ ಮೊಗದಲ್ಲಿ ಹರ್ಷ ತಂದಿತ್ತು. ಮಳೆಯಿಂದಾಗಿ ಬಳ್ಳಾರಿ ನಗರದ ಕೆಲ ರಸ್ತೆಗಳು ಜಲಾವೃತ್ತವಾಗಿದ್ದವು. ನಗರದ ಹಳೆ ಬಸ್ ನಿಲ್ದಾಣದ ಎದುರುಗಡೆ ರಸ್ತೆಯ ಮೇಲೆ ನೀರು ನಿಂತು ಸವಾರರು ಸಮಸ್ಯೆ ಎದುರಿಸುವಂತಾಯಿತು. ನಗರದ ರಾಯಲ್ ಸರ್ಕಲ್ ಪೆಟ್ರೋಲ್ ಬಂಕ್ ಪ್ರದೇಶ, ರೇಣುಕಾ ಕಿಚನ್ ಮುಂದೆಲ್ಲ ನೀರುಮಯವಾಗಿತ್ತು.
ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತ್ತು. ಗಾಳೆ ಮಳೆಗೆ ಕೆಲವೆಡೆ ಮರಗಳು ಧರೆಗುರುಳಿದ್ದವು. ಸಂಡೂರು ತಾಲೂಕಿನಲ್ಲಿ ಮನೆಗಳಿಗೆ, ಹಳೇ ಮಾದಪುರ ಗ್ರಾಮದಲ್ಲಿ ನೀರು ನುಗ್ಗಿದ್ದವು. ಬಳ್ಳಾರಿಯ ಬಂಡಿಮೋಟ್‌ನ ಕೆಲ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದೆ. ಐವತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಮನೆಯಲ್ಲಿರುವ ಸಾಮಾನುಗಳು ತೇಲಾಡುತ್ತಿದೆ. ಬಸ್ ನಿಲ್ದಾಣ, ಲಾರಿ ಟರ್ಮಿನಲ್‌ನಲ್ಲೂ ಅವಾಂತರವೇ ಸೃಷ್ಟಿಯಾಗಿದೆ.
ಇದನ್ನೂ ಓದಿ:Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ
ದಾವಣಗೆರೆಯಲ್ಲಿ ಬಸ್ ನಿಲ್ದಾಣ ಜಲಾವೃತ
ದಾವಣಗೆರೆಯ ಹೊನ್ನಾಳಿಯಲ್ಲಿ ಸುರಿದ ಮಳೆಯಿಂದ ಶುಕ್ರವಾರ ಖಾಸಗಿ ಬಸ್ ನಿಲ್ದಾಣ ಜಲಾವೃತಗೊಂಡಿತ್ತು. ಕೆರೆಯಂತಾದ ನಿಲ್ದಾಣದಲ್ಲಿ ಮೊಣಕಾಲಿನ ವರೆಗೆ ನಿಂತ ನೀರು ಪ್ರಯಾಣಿಕರು ಪರದಾಡಬೇಕಾಯಿತು. ಮಳೆ ನೀರು ಸರಾಗವಾಗಿ ಹೋಗಲು ಸರಿಯಾದ ರೀತಿ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಈ ಅವಸ್ಥೆ ಎಂದು ಕಿಡಿಕಾರಿದರು. ದಾವಣಗೆರೆ, ಮಾಯಕೊಂಡ, ದಾವಣಗೆರೆ ಕುವೆಂಪು ರಸ್ತೆ, ಕೆಬಿ ಬಡಾವಣೆ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದವು. ದಾವಣಗೆರೆಯ ಈರುಳ್ಳಿ ಮಾರ್ಕೆಟ್ ನ ರೈಲು ಬ್ರಿಡ್ಜ್ ಬಳಿ ರಸ್ತೆಯು ಕೆರೆಯಂತಾಗಿತ್ತು, ಹರಪನಹಳ್ಳಿ, ಜಗಳೂರು ತಾಲೂಕಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ರಸ್ತೆ ದಾಟಲು ವಾಹನ ಸವಾರರು ಹರಸಾಹಸ ಪಟ್ಟವರು.
ಕರಾವಳಿಯಲ್ಲಿ ವರುಣಾರ್ಭಟ
ಉತ್ತರ ಕನ್ನಡದ ಕಾರವಾರ, ಅಂಕೋಲಾ, ಕುಮಟಾ ಸೇರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗಿದೆ. ಅಂಕೋಲಾದಲ್ಲಿ ಪಟ್ಟಣದ ರಸ್ತೆಯಲ್ಲಿ ಕಣ್ಣುಹಾರಿಯಿಸಿದರೆ ಬರೀ ನೀರೆ ಕಾಣಿಸುತ್ತಿತ್ತು. ಭಾರೀ ಮಳೆಯಿಂದಾಗಿ ರಸ್ತೆ ಬದಿ ವ್ಯಾಪಾರಸ್ಥರು ಪರದಾಡಬೇಕಾಯಿತು.
ಶುಕ್ರವಾರ ಮಧ್ಯಾಹ್ನ ಸುರಿದ ಧಾರಾಕಾರ ಮಳೆಗೆ ಅಂಕೋಲಾದ ಬೋಳೆ ನಾಡವರಕೇರಿ ಅಂಗನವಾಡಿ ಕೇಂದ್ರಕ್ಕೆ ನೀರು ನುಗ್ಗಿತ್ತು. ಕಾಲುವೆ ಸೇರಿದಂತೆ ಅಂಗನವಾಡಿ ಕೇಂದ್ರದ ಅಂಗಳದಲ್ಲಿ ನೀರು ಜಮಾವಣೆಯಾಗಿತ್ತು. ನೀರು ಹರಿಯದೇ ಅಂಗನವಾಡಿ ಕೇಂದ್ರದಲ್ಲಿ ತುಂಬಿಕೊಂಡಿತ್ತು. ಅದೃಷ್ಟವಶಾತ್ ಮಕ್ಕಳು ಮನೆಗೆ ಹೋಗಿದ್ದರಿಂದ ಅನಾಹುತ ತಪ್ಪಿತ್ತು. ಇತ್ತ ಅಂಗನವಾಡಿ ಕೇಂದ್ರಕ್ಕೆ ನೀರು ನುಗ್ಗಿದ ಪರಿಣಾಮ ಕಿರಾಣಿ ಸೇರಿ ವಸ್ತುಗಳನ್ನು ರಕ್ಷಿಸಿಕೊಳ್ಳಲು ಸಿಬ್ಬಂದಿ ಪರದಾಡಬೇಕಾಯಿತು.
ಯಾದಗಿರಿಯಲ್ಲಿ ಜಮೀನಿಗೆ ನುಗ್ಗಿದ ನೀರು
ಶುಕ್ರವಾರ ಸಂಜೆ ಯಾದಗಿರಿ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದೆ. ವಡಗೇರಾ ತಾಲೂಕಿನ ಭಾಗದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಗೆ ಯಕ್ಷಿಂತಿ ಗ್ರಾಮ ಜಮೀನಿಗೆ ನೀರು ನುಗ್ಗಿದೆ. ಜಮೀನಿಗೆ ತೆರಳುವ ರಸ್ತೆಯು ಸಂಪೂರ್ಣ ಜಲಾವೃತಗೊಂಡಿತ್ತು. ಇತ್ತ ಜಮೀನಿಗೆ ತೆರಳಿದ್ದ ಕಾರ್ಮಿಕರಿಗೆ ವಾಪಸ್ ಮನೆಗೆ ತೆರಳಲು ಸಂಕಷ್ಟ ಎದುರಿಸಬೇಕಾಯಿತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ