Site icon Vistara News

Karnataka Weather : ಮಳೆಗಾಗಿ ಕಪ್ಪೆಗಳಿಗೆ ಮದುವೆ; ಶಾಖದ ಹೊಡೆತಕ್ಕೆ 6 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

karnataka weather Forecast

ಮೈಸೂರು/ಬೆಂಗಳೂರು: ಮಳೆ ಆಗದೆ ನೀರಿಗಾಗಿ ಎಲ್ಲಿಲ್ಲದ ಸಂಕಷ್ಟ ಎದುರಾಗುತ್ತಿದ್ದು, ಜನರು ಮಳೆಗಾಗಿ ದೇವರಲ್ಲಿ ಮೊರೆ ಹೋಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಒಂದೊಂದು ಕಡೆ ಒಂದೊಂದು ಸಂಪ್ರದಾಯಗಳೂ ಚಾಲ್ತಿಯಲ್ಲಿವೆ. ಈಗ ಮೈಸೂರಿನ ನಂಜನಗೂಡು ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಮಳೆಗಾಗಿ ಕಪ್ಪೆಗಳಿಗೆ ಮದುವೆ ಮಾಡಿದ್ದಾರೆ. ಮಳೆ ಬಾರದಿರುವ ಸಂಕಟದ (Karnataka Weather Forecast) ಮಧ್ಯೆ ಮಳೆ ಬರಲಿ (Rain News), ವರುಣ ದೇವ ಸಂತುಷ್ಟಗೊಳ್ಳಲಿ, ದಿನವೂ ಮೈ ತೊಪ್ಪೆಯಾಗುವಷ್ಟು ಮಳೆ ಸುರಿಯಲಿ, ಕೃಷಿ ಚಟುವಟಿಕೆಗೆ ತೊಂದರೆಯಾಗದಿರಲಿ, ಭೂತಾಯಿಗೆ ಬೇಕಾಗುವಷ್ಟು ಮಳೆ ಸುರಿಯಲಿ, ಅಂತರ್ಜಲ ಪೂರ್ಣಗೊಳ್ಳಲಿ, ನದಿ, ಹಳ್ಳಕೊಳ್ಳಗಳು ತುಂಬಿಕೊಳ್ಳಲಿ ಎಂದು ಪ್ರಾರ್ಥನೆ ಮಾಡಿದ್ದಾರೆ. ಬಿಸಿಲಿನ ಬೇಗೆಗೆ ತತ್ತರಿಸಿದ ಜನರು ಮಳೆ ಸುರಿಯುವಂತೆ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದರು. ಗ್ರಾಮದ ಬೀದಿ ಬೀದಿಗಳಲ್ಲಿ ಕಪ್ಪೆಗಳ ಮೆರವಣಿಗೆ ಮಾಡಿ ತಮಟೆ ಬಾರಿಸಿದ್ದಾರೆ. ಹುಯ್ಯೋ ಹುಯ್ಯೋ ಮಳೆರಾಯ ಬಾಳೆ ತೋಟಕ್ಕೆ ನೀರಿಲ್ಲ ಎಂದು ಘೋಷಣೆ ಕೂಗಿದರು.

ಇದನ್ನೂ ಓದಿ: Prajwal Revanna Case: ಏನಿದು ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌? ಕೇಂದ್ರ ರದ್ದು ಮಾಡಿದರೆ ಪ್ರಜ್ವಲ್‌ ರೇವಣ್ಣ ಅರೆಸ್ಟ್!

ಮುಂದುವರಿಯಲಿದೆ ಒಣಹವೆ

ರಾಜ್ಯಾದ್ಯಂತ ಇನ್ನೆರಡು ದಿನಗಳು ಒಣಹವೆ ಇರುವ ಸಾಧ್ಯತೆ ಇದೆ. ಏ.2-3ರಂದು ಶುಷ್ಕ ವಾತಾವರಣ ಇದ್ದರೆ, ಏಪ್ರಿಲ್‌ 4ರಂದು ಚಾಮರಾಜನಗರದಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ.

ಶಾಖದ ಅಲೆಯ ಎಚ್ಚರಿಕೆ

ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ತೀವ್ರ ಬಿಸಿಗಾಳಿ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಬಳ್ಳಾರಿ, ಕಲಬುರಗಿ, ವಿಜಯಪುರ, ರಾಯಚೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶಾಖದ ಅಲೆಯ ವಾತಾವರಣವು ಹೆಚ್ಚಾಗಿರುತ್ತದೆ.

ರಾತ್ರಿ ಬೆಚ್ಚನೆಯ ವಾತಾವರಣ

ಮುಂದಿನ 5 ದಿನಗಳವರೆಗೆ ಕರ್ನಾಟಕದ ಉತ್ತರ ಒಳಭಾಗದಲ್ಲಿ ಬೆಚ್ಚನೆಯ ರಾತ್ರಿಯ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಮೇ 5ರಂದು ಉತ್ತರ ಕನ್ನಡ ಬಿಸಿ ಮತ್ತು ಆರ್ದ್ರತೆಯ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ರಾಜ್ಯಾದ್ಯಂತ ಗರಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆ ಇಲ್ಲ.

6 ಜಿಲ್ಲೆಗಳಿಗೆ ರೆಡ್ ಅಲರ್ಟ್

ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ನೀಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version