ಮಂಗಳೂರು/ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿರಂತರ ಮಳೆ (Rain news) ಸುರಿಯುತ್ತಿರುವ ಹಿನ್ನೆಲೆ ಜೂ.28ರಂದು ಎಲ್ಲಾ ಪ್ರಾಥಮಿಕ-ಪ್ರೌಢಶಾಲೆಗಳಿಗೆ ರಜೆ ಘೋಷಣೆ (Karnataka weather Forecast) ಮಾಡಲಾಗಿದೆ. ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ನದಿ ಮತ್ತು ಸಮುದ್ರ ತೀರದ ಜನರಿಗೆ ಎಚ್ಚರ ವಹಿಸುವಂತೆ ತಿಳಿಸಲಾಗಿದೆ.
ನಿರಂತರ ಗಾಳಿಯೊಂದಿಗೆ ಭಾರಿ ಮಳೆ ಎಚ್ಚರ
ಕರಾವಳಿ ಭಾಗದಲ್ಲಿ ಅಲ್ಲಲ್ಲಿ ಭಾರೀ ಮಳೆಯೊಂದಿಗೆ 40-50ಕಿ.ಮೀ ವೇಗದಲ್ಲಿ ನಿರಂತರ ಗಾಳಿ ಬೀಸುವ ಸಾಧ್ಯತೆ ಇದೆ. ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ವ್ಯಾಪಕ ಮಳೆಯಾದರೆ, ಕರ್ನಾಟಕದ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ರಭಸವಾಗಿ ಗಾಳಿ ಬೀಸಲಿದೆ.
ಕಾರವಾರದಲ್ಲಿ ಕಾಟೇಜ್‌ಗಳು ನೆಲಸಮ
ಭಾರಿ ಗಾಳಿ ಮಳೆಗೆ ಉತ್ತರಕನ್ನಡ ಜಿಲ್ಲೆಯ ಕಾರವಾರದ ದೇವಭಾಗದಲ್ಲಿ ಕಡಲಕೊರೆತ ಜೋರಾಗಿದೆ. ಜಂಗಲ್ ಲಾಡ್ಜಸ್‌ಗೆ ಸೇರಿದ ದೇವಭಾಗ ಬೀಚ್ ರೆಸಾರ್ಟ್ಸ್‌ನ 4 ಕಾಟೇಜ್‌ಗಳಿಗೆ ಹಾನಿಯಾಗಿದೆ. 18 ಕಾಟೇಜ್‌ಗಳಿದ್ದ ದೇವಭಾಗ್ ಬೀಚ್ ರೆಸಾರ್ಟ್‌ನಲ್ಲಿ ಮೂರ್ನಾಲ್ಕು ದಿನಗಳ ಅಂತರದಲ್ಲೇ 4 ಕಾಟೇಜ್‌ಗಳು ನೆಲಸಮವಾಗಿದೆ. ದಡಕ್ಕೆ ಅಪ್ಪಳಿಸುತ್ತಿರುವ ಆಳೆತ್ತರದ ಅಲೆಗಳಿಂದಾಗಿ ಕಾಟೇಜ್‌ಗಳು ಸಮುದ್ರಪಾಲಾದ ಪರಿಣಾಮ 1 ಕೋಟಿಗೂ ಅಧಿಕ ಹಾನಿಯಾಗಿದೆ. ಕಡಲ ತೀರಪ್ರದೇಶಕ್ಕೆ ಹೊಂದಿಕೊಂಡಿದ್ದ ಕಾಟೇಜ್‌ಗಳಿಗೆ ಹಾನಿಯಾಗಿದ್ದು, ಅರಣ್ಯ ಇಲಾಖೆಯ ನೂರಾರು ಮರಗಳು ನೆಲಕ್ಕುರುಳಿವೆ.
ಹೆದ್ದಾರಿಯಲ್ಲಿ ಗುಡ್ಡ ಕುಸಿತ
ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ಭಾಸ್ಕೇರಿ ಬಳಿ ಬುಧವಾರ ರಾತ್ರಿ ಗುಡ್ಡ ಕುಸಿದಿತ್ತು. ಗುಡ್ಡ ಕುಸಿತದಿಂದ ಹೊನ್ನಾವರ ಬೆಂಗಳೂರು ನಡುವಿನ ಸಂಚಾರ ಅಸ್ತವ್ಯಸ್ಥವಾಗಿತ್ತು. ಇದೀಗ ಸ್ಥಳೀಯರ ಸಹಾಯದಿಂದ ಗುಡ್ಡದ ಮಣ್ಣನ್ನು ತಾಲೂಕು ಆಡಳಿತ ತೆರವು ಮಾಡಿದೆ.
ಕೊಡಗಿನಲ್ಲಿ ಕುಸಿದು ಬಿದ್ದ ತಡೆಗೋಡೆ
ಕೊಡಗು ಜಿಲ್ಲೆಯಲ್ಲಿ ವರುಣಾರ್ಭಟ ಮುಂದುವರಿದಿದ್ದು, ಬುಧವಾರ ಸುರಿದ ಗಾಳಿ ಮಳೆಗೆ ತಡರಾತ್ರಿ ತಡೆಗೋಡೆ ಕುಸಿದಿದೆ. ಮಡಿಕೇರಿಯ ತ್ಯಾಗರಾಜ ಕಾಲೋನಿಯಲ್ಲಿ ಘಟನೆ ನಡೆದಿದೆ. ಮನೆಗಳ ರಕ್ಷಣೆಗಾಗಿ ನಿರ್ಮಿಸಿದ ತಡೆಗೋಡೆ ಕುಸಿದ ಹಿನ್ನೆಲೆಯಲ್ಲಿ ಹಿಂಬದಿಯ ಮನೆಗಳಿಗೆ ಅಪಾಯ ಕಾಡುತ್ತಿದೆ. ತಡೆಗೋಡೆ ಕುಸಿತ ಹಿನ್ನೆಲೆಯಲ್ಲಿ ಮನೆಯ ಮುಂಭಾಗಕ್ಕೆ ಟಾರ್ಪಲ್ ಹೊದಿಕೆ ಹಾಕಲಾಗಿದೆ. ಸ್ಥಳಕ್ಕೆ ಮಡಿಕೇರಿ ನಗರಸಭೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಡಗು ಜಿಲ್ಲೆಯ ಸಂಪಾಜೆ ಸಮೀಪದ ಕೊಯ್ನಾಡಿನಲ್ಲಿ ಭಾರಿ ಗಾಳಿ ಮಳೆಗೆ ಶಾಲಾ ಕೊಠಡಿಯ ಮೇಲೆ ಗುಡ್ಡ ಕುಸಿದಿದೆ. ಶಾಲಾ ಕೊಠಡಿಯ ಮೇಲೆ ಗುಡ್ಡ ಕುಸಿದು ಗೋಡೆ, ಕಿಟಕಿ ಜಖಂಗೊಂಡಿದೆ. ಶಾಲೆಗೆ ರಜೆ ಇದ್ದಿದ್ದರಿಂದ ಅನಾಹುತ ತಪ್ಪಿದೆ. ಸುಮಾರು 80 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಳೆದ ಬಾರಿ ಮಳೆಗಾಲದಲ್ಲಿ ಇದೇ ಸಮಸ್ಯೆ ಎದುರಾಗಿತ್ತು.
ಮಳೆ ನಿಂತರೂ ನಿಲ್ಲದ ನೆರೆಹಾವಳಿ
ಉಡುಪಿ ನಗರದ ಹಲವೆಡೆ ಮಳೆ ನಿಂತರೂ ನೆರೆಹಾವಳಿ ಕಡಿಮೆ ಆಗಿಲ್ಲ. ಮೂಡನಿಡಂಬೂರು ಪರಿಸರದಲ್ಲಿ ನೀರಿನ ಮಟ್ಟ ಹೆಚ್ಚಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಮನೆ ದೇವಾಲಯಗಳಿಗೆ ನೀರು ನುಗ್ಗಿದೆ. ದೈವಾರಾದನೆ ನಡೆಯುವ ಮೂಡನಿಡಂಬೂರು ಗರಡಿಯು ಜಲಾವೃತಗೊಂಡಿದೆ.
ಉಡುಪಿ ಜಿಲ್ಲೆಯಲ್ಲಿ ಎರಡು ದಿನಗಳಿಂದ ಸುರಿದ ಭಾರಿ ಮಳೆ ಹಿನ್ನೆಲೆ ವಿಶ್ವ ಪ್ರಸಿದ್ಧ ಮರವಂತೆ ಬೀಚ್ ಬಳಿ ಸಮುದ್ರದ ರುದ್ರನರ್ತನ ಜೋರಾಗಿದೆ. ತೀರದಲ್ಲಿ ಹಾಕಲಾಗಿರುವ ಟೆಟ್ರಾ ಪಾರ್ಟ್ಸ್ ಗೆ ಬಂದು ಅಲೆಗಳು ಬಡಿಯುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮೀನುಗಾರರು, ಪ್ರವಾಸಿಗರು ಕಡಲಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಉಡುಪಿಯ ಕಲ್ಸಂಕದ ಹೋಟೆಲ್- ಲಾಡ್ಜ್ ಗೆ ಮಳೆ ನೀರು ನುಗ್ಗಿದ್ದು, ಎರಡು ಪಂಪ್ ಇಟ್ಟು ನೀರು ಖಾಲಿ ಮಾಡಲಾಗಿದೆ. ಕೃಷ್ಣಮಠ, ಕಲ್ಸಂಕ, ಬೈಲಕೆರೆ ಭಾಗದ ಕೆಲ ಮನೆ ಕಟ್ಟಡಗಳಿಗೆ ನೀರು ನುಗ್ಗಿದೆ. ಲಾಡ್ಜ್, ಹೋಟೆಲ್‌ನ ಬೇಸ್ ಮೆಂಟ್‌ಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ಇಂದ್ರಾಣಿ ನದಿ ತುಂಬಿ ಹರಿದ ಪರಿಣಾಮ ಸುತ್ತಮುತ್ತ ಜಲಾವೃತಗೊಂಡಿದೆ.
ಉಡುಪಿ ಜಿಲ್ಲೆಯ ಬೈಂದೂರು ಪಟ್ಟಣ ಪಂಚಾಯತ್ ಬಳಿ ಕೃತಕ ನೆರೆ ಸೃಷ್ಟಿಯಾಗಿದೆ. ಯಡ್ತರೆ ಗ್ರಾಮದ ಬಂಕೇಶ್ವರ ಅಂಗನವಾಡಿ ಕೇಂದ್ರಕ್ಕೆ ನೀರು ನುಗಿದ್ದು, ಮಕ್ಕಳಿಗೆ ರಜೆ ಘೋಷಿಸಲಾಗಿದೆ. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ ನೀಡಿ, ಪಟ್ಟಣಪಂಚಾಯತ್ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ತರಾಟೆಗೆ ತೆಗೆದುಕೊಂಡರು. ಅಂಗನವಾಡಿಯ ಆಹಾರ ಸಾಮಾಗ್ರಿ ದಾಸ್ತಾನ ನೀರುಲಾಗಿತ್ತು. ಎರಡು ದಿನದಲ್ಲಿ ಒಳಚರಂಡಿ ವ್ಯವಸ್ಥೆ ಸರಿಪಡಿಸುವಂತೆ ಸೂಚನೆ ನೀಡಲಾಗಿದೆ.