ಶಿವಮೊಗ್ಗ/ಕಾರವಾರ: ರಾಜ್ಯಾದ್ಯಂತ ಮಳೆಯು (Heavy rain alert) ಅಬ್ಬರಿಸುತ್ತಿದ್ದು, ಮುನ್ನೆಚ್ಚರಿಕಾ ದೃಷ್ಟಿಯಿಂದ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ (Holiday For schools) ಮಾಡಲಾಗಿದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಿಗೆ ರೆಡ್ ಅಲರ್ಟ್ (Karnataka Weather Forecast) ಘೋಷಣೆ ಮಾಡಲಾಗಿದೆ. ಹೀಗಾಗಿ ಜು.16ಕ್ಕೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಶಿವಮೊಗ್ಗದ ಸಾಗರ ತಾಲೂಕಿನ ಶಾಲಾ-ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಣೆ ಮಾಡಲಾಗಿದೆ. ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಾಗರ ತಹಶೀಲ್ದಾರ್ ಚಂದ್ರಶೇಖರ್ ನಾಯಕ್ ರಜೆ ಘೋಷಣೆ ಮಾಡಿದ್ದಾರೆ. ಇತ್ತ ಹೊಸನಗರ ತಾಲೂಕಿನ ಶಾಲಾ-ಕಾಲೇಜುಗಳಿಗೂ ರಜೆ ಘೋಷಣೆ ಮಾಡಲಾಗಿದೆ. ಮಂಗಳವಾರ ರಜೆ ಘೋಷಣೆ ಮಾಡಿ ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ಆದೇಶ ಹೊರಡಿಸಿದ್ದಾರೆ.
ಹಾಸನ ಜಿಲ್ಲೆಯಲ್ಲೂ ನಿರಂತರ ಮಳೆಯಾಗುತ್ತಿದ್ದು, ಸಕಲೇಶಪುರ, ಆಲೂರು, ಬೇಲೂರು, ಹಾಸನ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲಾಧಿಕಾರಿ ಅನುಮತಿ ಪಡೆದು, ರಜೆ ಘೋಷಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪಾಂಡು ಆದೇಶ ಹೊರಡಿಸಿದ್ದಾರೆ. ಸರ್ಕಾರಿ, ಖಾಸಗಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದು, ಜುಲೈ 20 ರಂದು ಸರಿದೂಗಿಸುಂತೆ ಆದೇಶಿಸಿದ್ದಾರೆ.
ಎಮರ್ಜೆನ್ಸಿ ಆಪರೇಷನ್ ಸೆಂಟರ್ ತೆರೆದ ಜಿಲ್ಲಾಡಳಿತ
ಉತ್ತರಕನ್ನಡ ಜಿಲ್ಲೆಗೆ ಮುಂದಿನ 3 ದಿನ ರೆಡ್ ಅಲರ್ಟ್ ಘೋಷಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ತುರ್ತು ಪರಿಸ್ಥಿತಿ ನಿರ್ವಹಣೆಗೆ ಡಿಸ್ಟ್ರಿಕ್ಟ್ ಎಮರ್ಜೆನ್ಸಿ ಆಪರೇಷನ್ ಸೆಂಟರ್ ತೆರೆದಿದೆ. ಈ ಕುರಿತು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ.ಕೆ ಮಾಹಿತಿ ನೀಡಿದ್ದಾರೆ. ಡಿಸಿ ಕಚೇರಿಯನ್ನೇ ಕಂಟ್ರೋಲ್ ರೂಮ್ ಆಗಿ ಎಮರ್ಜೆನ್ಸಿ ಆಪರೇಷನ್ ಸೆಂಟರ್ ಆಗಿ ಮಾರ್ಪಾಡು ಮಾಡಲಾಗಿದೆ.
ವಿಪತ್ತು ನಿರ್ವಹಣೆ, ಪೊಲೀಸ್, ಅರಣ್ಯ, ಅಗ್ನಿಶಾಮಕ, ಹೆಸ್ಕಾಂ ಇಲಾಖೆಯಿಂದ ಒಬ್ಬೊಬ್ಬ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ ಎಲ್ಲಾ ಇಲಾಖೆಯೊಂದಿಗೆ ಸಂಪರ್ಕ ಸಾಧಿಸಲು ಎಮರ್ಜೆನ್ಸಿ ಆಪರೇಷನ್ ಸೆಂಟರ್ ಮಾಡಲಾಗಿದೆ. ಎಲ್ಲೇ ಸಹಾಯ ಅಗತ್ಯವಿದ್ದರೂ ತುರ್ತು ಸ್ಪಂದನೆಗೆ ಕ್ರಮವಹಿಸಲಾಗುತ್ತದೆ. ಎಲ್ಲಾ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗೂ ಕೇಂದ್ರಸ್ಥಾನ ಬಿಡದಂತೆ ಸೂಚನೆ ನೀಡಲಾಗಿದೆ. ನೆರೆ ಪರಿಸ್ಥಿತಿಯ ಸ್ಥಳಗಳಲ್ಲಿ ಕಾಳಜಿ ಕೇಂದ್ರ ಸ್ಥಾಪನೆಗೆ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಲಾಗಿದ್ದು ಜತೆಗೆ ಮನೆ, ಬೆಳೆ ಹಾನಿ ಕುರಿತಾಗಿಯೂ ಶೀಘ್ರದಲ್ಲಿ ಪರಿಶೀಲಿಸಿ ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.
ಇನ್ನೂ ನೌಕಾನೆಲೆ ಕಾಂಪೌಂಡ್‌ನಿಂದ ಕಾರವಾರದ ಚೆಂಡಿಯಾ ಭಾಗದಲ್ಲಿ ನೆರೆ ಪರಿಸ್ಥಿತಿ ನಿರ್ಮಾಣ ವಿಚಾರವಾಗಿಯೂ ಭೇಟಿ ನೀಡಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಪರಿಶೀಲಿಸಿದರು. ನೌಕಾನೆಲೆಯ ಎರಡು ಕಡೆ ಕಾಮಗಾರಿ ಪ್ರದೇಶದಲ್ಲಿ ನೀರು ಹರಿದುಹೋಗಲು ಅಡ್ಡಿಯಾಗಿದೆ. ನೀರು ಹರಿದುಹೋಗಲು ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದರು.
ಇದನ್ನೂ ಓದಿ: Karnataka Rain : ಚಿಕ್ಕಮಗಳೂರಲ್ಲಿ ಮಳೆಗೆ ಕರೆಂಟ್ ಕಟ್; ಕೊಡಗು, ದಾವಣಗೆರೆಯಲ್ಲೂ ಅವಾಂತರ
ಗಾಳಿ ಮಳೆಗೆ ಉರುಳಿ ಬಿದ್ದ ಬೃಹತ್ ಗಾತ್ರದ ಮರ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಗಾಳಿ-ಮಳೆಗೆ ಬೃಹತ್ ಗಾತ್ರದ ಮರ ಉರುಳಿ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಬೈಕ್ ಸವಾರ ಪಾರಾಗಿದ್ದಾರೆ. ಕೊಪ್ಪ ತಾಲೂಕಿನ ಹೆಗ್ಗಾರು ಕುಡಿಗೆ ಸಮೀಪ ಘಟನೆ ನಡೆದಿದೆ. ಶೃಂಗೇರಿ ಹಾಗೂ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದ್ದು, ಎರಡು ಗಂಟೆಗೂ ಹೆಚ್ಚು ಸಮಯ ಮರ ತೆರವುಗೊಳಿಸಲು ಹರಸಾಹಸ ಪಡೆಬೇಕಾಯಿತು.
ಶೃಂಗೇರಿಯಿಂದ ಹೊರನಾಡಿಗೆ ಹೋಗುವ ಪ್ರವಾಸಿಗರು, ಸ್ಥಳೀಯರು ಪರದಾಟ ಅನುಭವಿಸಿದರು. ಅರಣ್ಯ ಸಿಬ್ಬಂದಿ, ಸ್ಥಳೀಯ ಮೆಸ್ಕಾಂ ಸಿಬ್ಬಂದಿಯಿಂದ ತೆರವು ಕಾರ್ಯಾಚರಣೆ ನಡೆಸಲಾಯಿತು. ಇತ್ತ ಭಾರಿ ಗಾಳಿ ಮಳೆಗೆ ಮಲೆನಾಡಿನ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಡಿತ್ತು.
ಪ್ರವಾಸಿಗರ ಹುಚ್ಚಾಟಕ್ಕೆ ಸ್ಥಳೀಯರು ಬೇಸರ
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿರುವ ಇತಿಹಾಸ ಪ್ರಸಿದ್ಧ ಹೊಸಳ್ಳಿ ಬೆಟ್ಟದಲ್ಲಿ ಪ್ರವಾಸಿಗರು ಹುಚ್ಚಾಟ ಮೆರೆದಿದ್ದಾರೆ. ಹಸಿರಿನಿಂದ ಕಂಗೊಳಿಸುತ್ತಿರುವ ಬೆಟ್ಟದ ಮೇಲೆ ವಾಹನಗಳ ಪ್ರವೇಶ ನಿಷೇಧವಿದ್ದರೂ ಮನಬಂದಂತೆ ವಾಹನಗಳನ್ನು ಚಲಾಯಿಸಿದ್ದಾರೆ. ಅಕ್ರಮವಾಗಿ ಪ್ರವೇಶ ಮಾಡಿರುವ ಕೆಲ ಯುವಕರು, ಹಸಿರು ಹುಲ್ಲಿನ ಮೇಲೆ ಡರ್ಟ್ ರೈಡ್ ಮಾಡಿ ಕೆಸರು ಗದ್ದೆಯಂತೆ ಮಾಡಿದ್ದಾರೆ. ಹೊಸಳ್ಳಿ ಬೆಟ್ಟ ಹಾಳು ಮಾಡಿರುವವರ ವಿರುದ್ಧ ಸ್ಥಳೀಯರು ಹಾಗೂ ಪರಿಸರವಾದಿಗಳು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ತುಂಗಭದ್ರ ಡ್ಯಾಂ ಹಿನ್ನಿರಿನಲ್ಲಿ ಪ್ರವಾಸಿಗರ ಹುಚ್ಚಾಟ
ವಿಜಯನಗರ ಜಿಲ್ಲೆಯ ಹೊಸಪೇಟೆ ಬಳಿ ಇರುವ ತುಂಗಾಭದ್ರ ಡ್ಯಾಂ ಹಿನ್ನಿರಿಗೆ ಪ್ರವಾಸಿಗರು ಆಗಮಿಸುತ್ತಿದ್ದಾರೆ. ನೀರಿನ ಅಲೆಗಳ ಜತೆ ಫೋಟೊ ಕ್ಲಿಕ್ಕಿಸಿಕೊಳ್ಳುವ ಸಾಹಸಕ್ಕೆ ಕೈಹಾಕಿದ್ದಾರೆ. ಪ್ರೇಮಿಗಳು , ಕಾಲೇಜು ವಿಧ್ಯಾರ್ಥಿಗಳು ಡ್ಯಾಂ ಹಿನ್ನಿರಿಗೆ ಇಳಿದು ಹುಚ್ಚಾಟ ಮೆರೆದಿದ್ದಾರೆ. ನೀರಿನ ಅಲೆಗಳ ಜತೆ ಎಂಜಾಯ್ ಮಾಡಲು ಹೋಗಿ ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ.
ಕುಡಿದು ಸಮುದ್ರಕ್ಕೆ ಇಳಿದ ಯುವಕರು
ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕುಡ್ಲೇ ಬೀಚ್‌ನಲ್ಲಿ ಮದ್ಯಪಾನ ಮಾಡಿ ಅಪಾಯ ಲೆಕ್ಕಿಸದೇ ಪ್ರವಾಸಿಗರು ಈಜಲು ಸಮುದ್ರಕ್ಕೆ ಇಳಿದ ಘಟನೆ ನಡೆದಿದೆ. ಸಮುದ್ರದಲ್ಲಿ 40-50 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ಅಷ್ಟಾದರೂ ಸೂಚನೆಗಳನ್ನು ನಿರ್ಲಕ್ಷ್ಯಿಸಿ ಕಡಲಿಗೆ ಇಳಿಯುತ್ತಿದ್ದಾರೆ.
ಜೋಗ್‌ಫಾಲ್ಸ್‌ಗೆ ಹರಿದು ಬಂದ ಜನಸಾಗರ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವಿಶ್ವ ವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ನಿನ್ನೆ ಭಾನುವಾರ ಒಂದೇ ದಿನ 50 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದಾರೆ. ಶರಾವತಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗಿದ್ದು, ಜೋಗ ಜಲಪಾತದ ರಾಜ, ರಾಣಿ, ರೋರರ್, ರಾಕೇಟ್ ಕವಲುಗಳು ಧುಮ್ಮಿಕ್ಕಿ ಹರಿಯುತ್ತಿದೆ. ಜೋಗ ಜಲಪಾತದ ನಯನ ಮನೋಹರ ದೃಶ್ಯ ಪ್ರವಾಸಿಗರು ಕಣ್ತುಂಬಿಕೊಂಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ