ಚಿಕ್ಕಮಗಳೂರು/ಕೊಡಗು: ಭಾರಿ ಗಾಳಿ-ಮಳೆ (Karnataka Weather Forecast) ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ 6 ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಣೆ (School Holiday) ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಶನಿವಾರ ಮಾತ್ರ ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕಿನ ಅಂಗನವಾಡಿ ,ಪ್ರಾಥಮಿಕ , ಪ್ರೌಢ ಶಾಲೆಗಳಿಗೆ ರಜೆ ನೀಡಲಾಗಿದೆ. ಇನ್ನೂ ಕಡೂರು, ತರೀಕೆರೆ ಹಾಗೂ ಅಜ್ಜಂಪುರ ತಾಲೂಕಿಗೆ ಯಾವುದೇ ರಜೆ ಇಲ್ಲ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.
ದಕ್ಷಿಣ ಕೊಡಗಿನಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಲಕ್ಷ್ಮಣ ತೀರ್ಥನದಿಯಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಹರಿಹರ-ಬಲ್ಯಮುಂಡೂರು ರಸ್ತೆ ಸಂಪರ್ಕ ಕಡಿತಗೊಂಡಿದ್ದು, ನದಿ ನೀರು ರಸ್ತೆ ಮೇಲೆ ಹರಿದಿದೆ. ಪೊನ್ನಂಪೇಟೆ ತಾಲೂಕಿನ ಗ್ರಾಮಗಳ ಗದ್ದೆಪ್ರದೇಶಗಳು ಮುಳುಗಡೆಯಾಗಿದೆ.
ಇನ್ನೂ ಕೊಡಗು ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದ್ದು, ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅಂಗನವಾಡಿ, ಶಾಲೆ, ಪದವಿಪೂರ್ವ ಕಾಲೇಜುಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ವೆಂಕಟರಾಜ ಆದೇಶ ಹೊರಡಿಸಿದ್ದಾರೆ.
ಬೆಳಗಾವಿಯಲ್ಲಿ ವ್ಯಾಪಕ ಮಳೆ ಹಿನ್ನೆಲೆ ರಜೆ ಮುಂದುವರಿದಿದೆ. ರಾಮದುರ್ಗ ತಾಲೂಕು ಹೊರತುಪಡಿಸಿ ಎಲ್ಲ ಕಡೆ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಜಿಲ್ಲಾಧಿಕಾರಿ ಮೊಹ್ಮದ್ ರೋಷನ್‌ರಿಂದ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ. ಧಾರವಾಡ ಜಿಲ್ಲೆಯಲ್ಲೂ ಮಳೆ ಜತೆಗೆ ಶೀತಗಾಳಿ ಮುಂದುವರಿದಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಡಿಸಿ ದಿವ್ಯಪ್ರಭು ಆದೇಶ ಹೊರಡಿಸಿದ್ದಾರೆ. ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಪಿಯುಸಿ ಕಾಲೇಜುಗಳಿಗೆ ರಜೆ ಇದೆ. ಮುಂದಿನ ಸಾರ್ವಜನಿಕ ರಜಾ ದಿನಗಳಲ್ಲಿ ಹೆಚ್ಚುವರಿ ವರ್ಗಗಳನ್ನು ನಡೆಸುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ (ಘಟ್ಟ ಪ್ರದೇಶಗಳು) ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ನಿರಂತರ ಗಾಳಿಯ ವೇಗವು 40-50 ಕಿಮೀ ತಲುಪುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಜಿಲ್ಲೆಗಳ ಬಹುತೇಕ ಸ್ಥಳಗಳಲ್ಲಿ ಗಾಳಿಯ ವೇಗವು 40-50ಕಿ.ಮೀ ತಲುಪುವ ಸಾಧ್ಯತೆಯಿದೆ. ಹಗುರದಿಂದ ಸಾಧಾರಣ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಗಾಳಿಯ ವೇಗದೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ