Site icon Vistara News

Karnataka Weather : ಭಾರಿ ಮಳೆಗೆ ಶ್ರೀನಿವಾಸಪುರದ ರೈಲ್ವೆ ಅಂಡರ್‌ ಪಾಸ್‌ ಜಲಾವೃತ; ಇನ್ನೈದು ದಿನ ಭಾರಿ ವರ್ಷಧಾರೆ

Karnataka weather Forecast

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮುಂದಿನ 24 ಗಂಟೆ ಭರ್ಜರಿ ಮಳೆಯಾಗುವ (Rain News) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ. ಗುಡುಗು, ಮಿಂಚು ಮತ್ತು ಬಿರುಗಾಳಿಯೊಂದಿಗೆ ಮಳೆಯಾಗಲಿದೆ.

ಬೆಳಗಾವಿ, ಕಲಬುರಗಿ, ವಿಜಯಪುರ, ಬಾಗಲಕೋಟೆ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಕೋಲಾರ, ಹಾಸನದ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ. ಇನ್ನು ಗಾಳಿ ವೇಗವು 30-40 ಕಿ.ಮೀ ವ್ಯಾಪ್ತಿಯಲ್ಲಿ ಇರಲಿದೆ.

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಒಳನಾಡಿನ ಬೀದರ್‌, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಹಾಗೂ ರಾಯಚೂರು, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳುರು, ಚಿತ್ರದುರ್ಗ, ದಾವಣಗೆರೆ, ಕೊಡಗು ಹಾಗೂ ಮೈಸೂರು, ಮಂಡ್ಯ, ರಾಮನಗರ, ಶಿವಮೊಗ್ಗ, ವಿಜಯನಗರದ ಸುತ್ತಮುತ್ತ ಹಗುರದಿಂದ ಕೂಡಿದ ಮಳೆಯಾಗಲಿದೆ.

ಇದನ್ನೂ ಓದಿ: Physical Abuse : ಮಹಿಳೆಯರು ಚಳಿ ಬಿಡಿಸಲು ಬಂದಾಗ ಕಾಂಪೌಂಡ್‌ ಹಾರಿದ ಪುರಸಭೆ ಮಾಜಿ ಅಧ್ಯಕ್ಷೆಯ ಪತಿಗೆ ಧರ್ಮದೇಟು

ಮುಂದುವರಿದ ಮಳೆ ಅವಾಂತರ

ಕೋಲಾರದಲ್ಲಿ ಗುರುವಾರ ಸುರಿದ ದಿಢೀರ್‌ ಮಳೆಗೆ ಶ್ರೀನಿವಾಸಪುರದ ರೈಲ್ವೆ ಅಂಡರ್‌ ಪಾಸ್‌ ಜಲಾವೃತಗೊಂಡಿತ್ತು. ಸುಮಾರು 2-3 ಅಡಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡಬೇಕಾಯಿತು. ದೊಡ್ಡ ದೊಡ್ಡ ವಾಹನಗಳು ಜಲಾವೃತಗೊಂಡ ರಸ್ತೆಯಲ್ಲೇ ಬಂದರೆ, ಬೈಕ್‌ ಸವಾರರು ತಳ್ಳಿಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಬಂತು.

ಇತ್ತ ಶಾಲಾ ‌ಮಕ್ಕಳು ಮನೆಗೆ ತೆರಳಲು ಹರಸಾಹಸ ಪಡೆಬೇಕಾಯಿತು. ಅಪಾಯವನ್ನು ಲೆಕ್ಕಿಸದೆ ಸೈಕಲ್‌ನಲ್ಲಿ ಹೋದ ಶಾಲಾ ವಿದ್ಯಾರ್ಥಿಯೊಬ್ಬ ನೀರಿನ ರಭಸಕ್ಕೆ ವಾಪಸ್‌ ಹಿಂದಕ್ಕೆ ಬಂದಿದ್ದ. ಅಂಡರ್‌ಪಾಸ್‌ನಲ್ಲಿ ನೀರು ಸರಿಯಾಗಿ ಹರಿದು ಹೋಗಲು ಆಗದ ಕಾರಣಕ್ಕೆ ಈ ಸಮಸ್ಯೆ ಆಗಿದೆ ಎಂದು ಸಾರ್ವಜನಿಕರು ಕಿಡಿಕಾರಿದರು.

ಮಾವಿನ ಮಾರುಕಟ್ಟೆಗೆ ತೆರಳಲು ಇರುವ ಏಕೈಕ ಮಾರ್ಗವಿದು. ಪ್ರತಿ ಬಾರಿ ಮಳೆಯಾದರೂ ಇದೇ ಪರಿಸ್ಥಿತಿ ಎದುರಾಗುತ್ತದೆ. ಆದರೆ ಸಂಬಂಧ ಪಟ್ಟ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಇನ್ನೂ ರಾಜಧಾನಿ ಬೆಂಗಳೂರು ನಗರದಲ್ಲಿ ಮಳೆ ಅಬ್ಬರಕ್ಕೆ ಮರಗಳು ನೆಲಕ್ಕುರುಳಿವೆ. ಆದರೆ ಕೆಲವೆಡೆ ಮರಗಳ ತೆರವು ಕಾರ್ಯಾಚರಣೆ ನಡೆದಿಲ್ಲ. ರಸ್ತೆ ಹಾಗೂ ಫುಟ್‌ಪಾತ್‌ ಮಧ್ಯೆ ಮರದ ರೆಂಬೆ, ಕೊಂಬೆಗಳು ಬಿದ್ದಿವೆ. ಹೀಗಾಗಿ ಜನರ ಓಡಾಟ ಸೇರಿ ವ್ಯಾಪಾರಸ್ಥರು ಪರದಾಡಬೇಕಾಗಿದೆ. ಇನ್ನೂ ಜಯನಗರದಲ್ಲಿ ಮರಗಳು ಬಿದ್ದ ಕಾರಣ ವ್ಯಾಪಾರಸ್ಥರಿಗೆ ಅನಾನುಕೂಲವಾಗಿದೆ. ಬಿಬಿಎಂಪಿ‌ಯವರು ಮರ ಕತ್ತರಿಸಿ ಪಕ್ಕಕ್ಕೆ ಹಾಕಿ ಹೋಗಿದ್ದಾರೆ. ಆದರೆ ಅದನ್ನು ತೆರವು ಮಾಡದೆ ಇರುವುದರಿಂದ ವ್ಯಾಪಾರ ಮಾಡಲು ಕಷ್ಟವಾಗುತ್ತಿದೆ ಎಂದು ವೃದ್ಧೆಯೊಬ್ಬರು ಅಳಲು ತೋಡಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version