Site icon Vistara News

Karnataka Weather : ಸಿಡಿಲಿಗೆ 7 ಕುರಿಗಳು ಸಾವು, ಕೊಡಗಿನಲ್ಲಿ ಭಾರಿ ಮಳೆಗೆ ಮಗುಚಿದ ಲಾರಿ; ನಾಳೆ ಎಲ್ಲೆಲ್ಲಿ ಆರ್ಭಟ

Karnataka Weather Forecast

ಕೊಡಗು/ಬೆಂಗಳೂರು: ಸೋಮವಾರ (ಏ.22) ಕೊಡಗಿನ ಹಲವೆಡೆ ಗುಡುಗು ಸಹಿತ ಮಳೆಯು (Rain News) ಅಬ್ಬರಿಸುತ್ತಿದೆ. ಮಡಿಕೇರಿ, ನಾಪೋಕ್ಲು, ಮೂರ್ನಾಡು ಭಾಗದಲ್ಲಿ ಭರ್ಜರಿ (Karnataka Weather Forecast) ಮಳೆಯಾಗಿದೆ. ಒಂದು ಕಡೆಗೆ ಮಳೆಯಿಂದ ಕೊಡಗಿನ ಕೃಷಿಕರಲ್ಲಿ ಮಂದಹಾಸ ಮೂಡಿದರೆ ಮತ್ತೊಂದು ಕಡೆ ಮಳೆ ಅನಾಹುತವು ಆತಂಕ ಹೆಚ್ಚಿಸಿದೆ.

ಮಡಿಕೇರಿ‌‌ ಸಮೀಪದ ಜೋಡುಪಾಲ ಬಳಿ ಭಾರಿ ಮಳೆಗೆ ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು‌ ಮಗುಚಿ ಬಿತ್ತು. ಬೆಂಗಳೂರಿನಿಂದ‌‌ ಮಂಗಳೂರಿಗೆ ಲಾರಿಯಲ್ಲಿ ಜ್ಯೂಸ್ ಸಾಗಿಸಲಾಗುತ್ತಿತ್ತು. ಮಳೆಯಿಂದ ಜೋಡುಪಾಲದ ತಿರುವಿನಲ್ಲಿ ಲಾರಿಯ ವೀಲ್ ಜಾರಿ, ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಿಡಿಲು ಬಡಿದು 7 ಕುರಿಗಳು ಸಾವು

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಹೇಮಗುಡ್ಡ ಬಳಿ ಸಿಡಿಲು ಬಡಿದು 7 ಕುರಿಗಳು ಮೃತಪಟ್ಟಿವೆ. ಹೇಮಗುಡ್ಡ ಗ್ರಾಮದ ರಾಮಣ್ಣ ಬಂಡಿ ಎಂಬುವವರಿಗೆ ಸೇರಿದ 7 ಕುರಿಗಳು ಸಿಡಿಲಿಗೆ ಬಲಿಯಾಗಿವೆ. 8ಕ್ಕೂ ಹೆಚ್ಚು ಕುರಿಗಳು ಗಾಯಗೊಂಡಿವೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಧಾರವಾಡ ನಗರದಲ್ಲಿ ಗುಡುಗು ಸಹಿತ ಮಳೆಯಾಗಿದೆ. ಕಳೆದ ಎರಡು ದಿನಗಳಿಂದ ಹೆಚ್ಚಾಗಿದ್ದ ಬಿಸಿಲಿನ ತಾಪಮಾನವು ಮಳೆಯಿಂದಾಗಿ ತಣ್ಣಗಾಗಿತ್ತು. ಕೊಪ್ಪಳ‌ದಲ್ಲಿ ಗಾಳಿ, ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಮಳೆಯಾಗಿದೆ. ಮುಂಜಾನೆ ಮೋಡ ಕವಿದ ವಾತಾವರಣ ಇತ್ತು, ಮಧ್ಯಾಹ್ನದ ಹೊತ್ತಿಗೆ ಶುರುವಾದ ಸಣ್ಣ ಮಳೆಯು ನಂತರ ರಭಸವಾದ ಗಾಳಿಯೊಂದಿಗೆ ಗುಡುಗು ಸಿಡಿಲಿನ ಶಬ್ಧವು ಜನರನ್ನು ಬೆಚ್ಚಿ ಬೀಳಿಸಿತ್ತು.

ಇದನ್ನೂ ಓದಿ: Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

ಮುಂದಿನ 48 ಗಂಟೆಯಲ್ಲಿ ಗಾಳಿ ಜತೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಏ.23ರಂದು ಉತ್ತರ ಒಳನಾಡಿನ ಬೀದರ್‌, ಕಲಬುರಗಿ, ಬೆಳಗಾವಿ, ಬಾಗಲಕೋಟೆಯ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಹಗುರ ಮಳೆಯಾಗಲಿದೆ. ಕೆಲವೊಮ್ಮೆ 30-40 ಕಿ.ಮೀ ವ್ಯಾಪ್ತಿಯಲ್ಲಿ ರಭಸವಾದ ಗಾಳಿಯು ಬೀಸಲಿದೆ. ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಹಾಸನ ಸೇರಿ ದಕ್ಷಿಣ ಒಳನಾಡಿನ ಮೈಸೂರು, ಮಂಡ್ಯದ ಕೆಲವೆಡೆ ಮಳೆಯಾಗಲಿದ್ದು, ಉಳಿದೆಡೆ ಒಣಹವೆ ಇರುವ ಸಾಧ್ಯತೆ ಇದೆ.

ಏ.24ರಂದು ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ದಕ್ಷಿಣ ಒಳನಾಡಿನ ಮೈಸೂರು, ಮಂಡ್ಯದ ಒಂದೆರಡು ಕಡೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗಲಿದೆ.

ಬಿಸಿ ಗಾಳಿ ಮುನ್ನೆಚ್ಚರಿಕೆ

ಬೀದರ್‌, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಗದಗ, ಧಾರವಾಡ, ದಾವಣಗೆರೆ, ಕೋಲಾರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ಬಿಸಿಗಾಳಿ ಹೆಚ್ಚಾಗುವ ಸಾಧ್ಯತೆ ಇದೆ.

ಬಿಸಿ ಮತ್ತು ಆರ್ದ್ರತೆ

ಮುಂದಿನ 5 ದಿನಗಳ ಕಾಲ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರತೆ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಜತೆಗೆ ಮುಂದಿನ 5 ದಿನಗಳಲ್ಲಿ ರಾಜ್ಯದಲ್ಲಿ ಗರಿಷ್ಠ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್‌ ಏರಿಕೆಯಾಗುವ ಸಾಧ್ಯತೆ ಇದೆ.

ಬೆಂಗಳೂರು ನಗರ ಮತ್ತು ಸುತ್ತಮುತ್ತ ಮುಂಜಾನೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಮಧ್ಯಾಹ್ನ ಅಥವಾ ಸಂಜೆಗೆ ಆಕಾಶವು ನಿರ್ಮಲವಾಗಿರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 37 ಮತ್ತು 24 ಡಿ.ಸೆ ಇರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version