Site icon Vistara News

Karnataka Weather : ಸಾಧಾರಣದಿಂದ ಭಾರಿ ಮಳೆ ಸಾಧ್ಯತೆ; ಕರಾವಳಿ-ಮಲೆನಾಡಿಗೆ ಎಚ್ಚರಿಕೆ

karnataka Weather Forecast

ಬೆಂಗಳೂರು: ಕರ್ನಾಟಕದ ಕರಾವಳಿಯಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ (Rain News) ಮುನ್ಸೂಚನೆಯನ್ನು ಹವಾಮಾನ ಇಲಾಖೆ (karnataka Weather Forecast) ನೀಡಿದೆ. ಮಲೆನಾಡು ಭಾಗಗಳಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಉತ್ತರಒಳನಾಡಿನಲ್ಲಿ ಹಗುರದಿಂದ ಮಧ್ಯಮ ಮಳೆಯಾದರೆ, ದಕ್ಷಿಣ ಒಳನಾಡಿನಲ್ಲಿ ಹಗುರದಿಂದ ಕೂಡಿದ ಮಳೆಯಾಗಲಿದೆ. ಇನ್ನೂ ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು, ಮಿಂಚು ಸಹಿತ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆಯಿದೆ.

ಉತ್ತರ ಒಳನಾಡಿನಲ್ಲಿ ಪ್ರತ್ಯೇಕವಾಗಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಬೀದರ್, ಕಲಬುರಗಿ, ಬೆಳಗಾವಿ, ಧಾರವಾಡ, ರಾಯಚೂರು, ಯಾದಗಿರಿಯಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನಲ್ಲಿ ಪ್ರತ್ಯೇಕವಾಗಿ ಚದುರಿದಂತೆ ಹಗುರದಿಂದ ಕೂಡಿದ ಮಳೆಯಾಗಲಿದೆ.

ಮಲೆನಾಡಿನಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಆದರೆ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ವ್ಯಾಪಕವಾಗಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಬೆಂಗಳೂರಲ್ಲೂ ಗುಡುಗು ಮಳೆ

ಬೆಂಗಳೂರು ಸುತ್ತಮುತ್ತ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನಗಳು ಅನುಕ್ರಮವಾಗಿ 30 ಮತ್ತು 22 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ಈ ಜಿಲ್ಲೆಗಳಿಗೆ ಅಲರ್ಟ್‌

ಜು.1ರಂದು ಗುಡುಗು ಸಹಿತ ಭಾರಿ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಜತೆಗೆ ಮೀನುಗಾರರಿಗೂ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: Kidnap case : ಕೋಟಿ ಆಸೆಗೆ ಸಿನಿಮಾ ಸ್ಟೈಲ್‌ನಲ್ಲಿ ಸ್ಟಾಕ್‌ ಮಾರ್ಕೆಟ್‌ ವಂಚಕನ ಕಿಡ್ನ್ಯಾಪ್‌

ಜು.1ರಿಂದ ಕೊಡಗಿಗೆ ಭಾರಿ ವಾಹನಗಳ ಓಡಾಟ ನಿಷೇಧ

ಕೊಡಗು: ಕೊಡಗಿನಲ್ಲಿ ಕಳೆದ ಮೂರು ದಿನಗಳಿಂದ ಸುರಿದ ಮಳೆಯ ಎಫೆಕ್ಟ್‌ನಿಂದಾಗಿ (Rain Effect), ಜಿಲ್ಲೆಯಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ ಹಾಕಲಾಗಿದೆ. ಕೊಡಗು ಡಿಸಿ ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾದ ವೆಂಕಟ್ ರಾಜಾ ಆದೇಶ ಹೊರಡಿಸಿದ್ದಾರೆ. ಜುಲೈ 1 ರಿಂದ ಜುಲೈ 30ರವರೆಗೆ ಭಾರಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಅಗತ್ಯ ವಸ್ತುಗಳ ಪೂರೈಕೆ ಹಾಗೂ ಸಾರ್ವಜನಿಕ ಪ್ರಯಾಣಿಕರ ವಾಹನಗಳಿಲ್ಲ ಯಾವುದೇ ನಿರ್ಬಂಧ ಇಲ್ಲ. ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಭಾರಿ ಗಾತ್ರದ ವಾಹನಗಳು ಹೆಚ್ಚು ಸಂಚರಿಸುತ್ತಿದ್ದವು. ಆದರೆ ಗುಡ್ಡದ ಬದಿಯಿಂದ ಮಣ್ಣು ಕುಸಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ ಹಾಕಲಾಗಿದೆ.

ಯಾವೆಲ್ಲ ವಾಹನಗಳಿಗೆ ನಿರ್ಬಂಧ?

ವಾಹನದ ನೋಂದಣಿ ತೂಕ 18,500 ಕೆ.ಜಿ.ಗಿಂತ ಹೆಚ್ಚಿನ ತೂಕದ ಸರಕು ಸಾಗಾಣಿಕೆ ವಾಹನ, ಮಲ್ಟಿ ಆಕ್ಸಿಲ್ ಟ್ರಕ್‍ಗಳ ಸಂಚಾರ ಮತ್ತು ಭಾರೀ ವಾಹನಗಳಾದ ಬುಲೆಟ್ ಟ್ಯಾಂಕರ್ಸ್, ಶಿಪ್ ಕಾರ್ಗೋ ಕಂಟೈನರ್ಸ್, ಲಾಂಗ್ ಚಾಸಿಸ್(ಮಲ್ಟಿ ಆಕ್ಸಿಲ್), ಆರ್ಟಿಕ್ಯೂಲೇಟೆಡ್ ವಾಹನಗಳು ಮತ್ತು ಮರಳು ಸಾಗಾಣಿಕೆ, ಮರದ ದಿಮ್ಮಿಗಳನ್ನು ಸಾಗಿಸುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಮುಗಿಯುವವರೆಗೆ ನಿರ್ಬಂಧಿಸಲಾಗಿದೆ.

ಈ ವಾಹನಗಳಿಗೆ ವಿನಾಯಿತಿ

ಅಡುಗೆ ಅನಿಲ ಮತ್ತು ಇಂಧನ ಪೂರೈಕೆ ವಾಹನಗಳು, ಹಾಲು ಪೂರೈಕೆ ವಾಹನಗಳು, ಸರ್ಕಾರಿ ಕೆಲಸದ ನಿಮಿತ್ತ ಉಪಯೋಗಿಸಲ್ಪಡುವ ವಾಹನಗಳು, ಶಾಲಾ ಕಾಲೇಜು ಮತ್ತು ಸಾರ್ವಜನಿಕ ಪ್ರಯಾಣಿಕರ ವಾಹನಗಳಿಗೆ (ಮಲ್ಟಿ ಆಕ್ಸಿಲ್ ಬಸ್‍ಗಳು ಸೇರಿದಂತೆ) ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ.

ಆದೇಶ ಮೀರಿದರೆ ದಂಡ ಪ್ರಯೋಗ

ಈ ಕುರಿತು ಸೂಚನಾ ಫಲಕಗಳನ್ನು ಅಳವಡಿಸಲು ಸೂಚಿಸಲಾಗಿದೆ. ಜತೆಗೆ ಕೊಡಗು ಜಿಲ್ಲೆಯ ಮುಖಾಂತರ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 275 ರ ಜಿಲ್ಲೆಯ ಗಡಿಭಾಗಗಳಾದ ಕುಶಾಲನಗರ ಮತ್ತು ಸಂಪಾಜೆಯಲ್ಲಿ ವ್ಯವಸ್ಥಿತ ಚೆಕ್‍ಪೋಸ್ಟ್ ನಿರ್ಮಿಸುವಂತೆ ತಿಳಿಸಲಾಗಿದೆ. ದಿನದ 24 ಗಂಟೆಯೂ ನಿಗಾ ವಹಿಸಲು ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಮೊಬೈಲ್ ಪ್ಯಾಟ್ರೋಲಿಂಗ್ ನಡೆಸಲು ಹಾಗೂ ಈ ಆದೇಶ ಉಲ್ಲಂಘನೆಯಾಗದಂತೆ ಮತ್ತು ಆದೇಶ ಉಲ್ಲಂಘಿಸಿದವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಪೊಲೀಸ್ ಹಾಗೂ ಸಾರಿಗೆ ಇಲಾಖೆಗೆ ಸೂಚಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version