ಉಡುಪಿ: ಉತ್ತರ ಒಳನಾಡು, ಕರಾವಳಿ ಸೇರಿ ಮಲೆನಾಡು ಭಾಗದ ವಿವಿಧೆಡೆ ಭಾರಿ ವರ್ಷಧಾರೆಗೆ ಜನರು ತತ್ತರಿಸಿಹೋಗಿದ್ದಾರೆ. ನಾಲ್ಕೈದು ದಿನಗಳು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka weather Forecast) ನೀಡಿದೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ (Rain News) ಉಡುಪಿಯ ಬೈಂದೂರು ತಾಲೂಕಿನ ಯಡ್ತರೆ ಸಮೀಪ ರಾಹುತನಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀರು ನುಗ್ಗಿದೆ. ತರಗತಿ ಕೋಣೆಗಳು ಜಲಾವೃತಗೊಂಡ ಪರಿಣಾಮ ಶಾಲಾ ಮಕ್ಕಳಿಗೆ ಶನಿವಾರ ರಜೆ ನೀಡಲಾಗಿತ್ತು. ಶಾಲೆ ಸಮೀಪ ಸಮರ್ಪಕವಾದ ಚರಂಡಿ ವ್ಯವಸ್ಥೆಯಿಲ್ಲದೇ ರಾಷ್ಟ್ರೀಯ ಹೆದ್ದಾರಿಯಿಂದ ಹರಿದ ನೀರು ನೇರ ಶಾಲೆಗೆ ನುಗ್ಗುತ್ತಿದೆ. ಕಳೆದ ಹಲವು ವರ್ಷಗಳಿಂದ ಮಳೆಗಾಲದಲ್ಲಿ ಇದೇ ಸಮಸ್ಯೆ ಆಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ದಾವಣಗೆರೆಯಲ್ಲಿ ಕೆರೆಯಂತಾದ ಜಮೀನುಗಳು
ದಾವಣಗೆರೆಯ ಜಗಳೂರು ತಾಲೂಕಿನಲ್ಲಿ ಶನಿವಾರ ಭರ್ಜರಿ ಮಳೆಯಾಗಿದೆ. ಹನುಮಂತಪುರ, ದಿದ್ದಗಿ , ಹುಚ್ಚವನಹಳ್ಳಿ ಪಲ್ಲಾಗಟ್ಟೆ, ಮೇದಕೇರನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಭಾರಿ ಮಳೆಯಾಗಿದೆ. ಧಾರಾಕಾರವಾಗಿ ಸುರಿದ ಮಳೆಯಿಂದ ಜಮೀನುಗಳು ಕೆರೆಯಂತಾಗಿದೆ.
ಧಾರವಾಡದ ಆಯಟ್ಟಿ ಬ್ರಿಡ್ಜ್ ಬಂದ್
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಆಯಟ್ಟಿ ಬ್ರಿಡ್ಜ್ ಮಳೆಗೆ ಮುಳುಗಡೆಯಾಗಿದ್ದು, ಸಂಚಾರ ಬಂದ್ ಮಾಡಲಾಗಿದೆ. ಹಲವಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಯು ಮಳೆ ಬಂದರೆ ಸಾಕು ನೀರಿನಲ್ಲಿ ಮುಳುಗಡೆಯಾಗುತ್ತದೆ. ಹೀಗಾಗಿ ಸೇತುವೆ ಮೇಲೆ ನೀರು ತಗ್ಗುವವರೆಗೂ ಜನರ ಓಡಾಟ ಸಂಪೂರ್ಣ ಬಂದ್ ಮಾಡಲಾಗಿದೆ. ಇನ್ನೂ ಸೇತುವೆ ಎತ್ತರ ಮಾಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದರೂ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತಿಲ್ಲ. ಇತ್ತ ಹೊಸ ಬ್ರಿಡ್ಜ್ ನಿರ್ಮಾಣ ಮಾಡುವವರೆಗೂ ಜನರ ಸಮಸ್ಯೆ ತಪ್ಪಿದ್ದಲ್ಲ. ಬ್ರಿಡ್ಜ್ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದರೂ ಸಹ ಕೆಲಸ ಮಾತ್ರ ಶುರುವಾಗಿಲ್ಲ.
ಇದನ್ನೂ ಓದಿ: Murder Case : ತಂಗಿಗೆ ವರದಕ್ಷಿಣೆ ಟಾರ್ಚರ್; ಬಾಮೈದನ ಕೊಲೆ ಮಾಡಿದ ಬಾವ
ವಿಜಯಪುರದ ದೋಣಿ ನದಿ ಸೇತುವೆ ಜಲಾವೃತ
ವಿಜಯಪುರದ ಯಾಳವಾರ ಗ್ರಾಮದ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಭಾರಿ ಮಳೆಗೆ ಸಂಪೂರ್ಣ ದೋಣಿ ನದಿ ಸೇತುವೆ ಜಲಾವೃತದಿಂದ ರಸ್ತೆ ಸಂಪರ್ಕ ಕಡಿತವಾಗಿದೆ. ಸೇತುವೆ ಜಲಾವೃತದಿಂದ ಹೊಲಗಳಿಗೆ ತೆರಳುವ ರೈತರಿಗೂ ಸಂಕಷ್ಟ ಎದುರಾಗಿದೆ. ಡೋಣಿ ನದಿಗೆ ಕಟ್ಟಿರುವ ಹಳೆಯ ನೆಲ ಸೇತುವೆ ಜಲಾವೃತಗೊಂಡಿದೆ. ಹೊಸ ಸೇತುವೆ ಕಳಪೆ ಕಾಮಗಾರಿಯಿಂದ ಶಿಥಿಲಗೊಂಡಿದೆ. ಹೀಗಾಗಿ ಜಲಾವೃತವಾದ ಹಳೆಯ ಸೇತುವೆಯ ಮೇಲೆಯೇ ವಾಹನಗಳು ಸಂಚಾರಿಸುತ್ತಿದೆ. ಹೊಸ ಸೇತುವೆ ಅಲ್ಲಲ್ಲಿ ಬಿರುಕು ಬಿಟ್ಟು ಬೀಳುವ ಹಂತ ತಲುಪಿದೆ. ಹೀಗಾಗಿ ಹೊಸ ಸೇತುವೆ ಮೇಲೆ ಕಳೆದ ಎರಡು ವರ್ಷಗಳಿಂದ ಸಂಚಾರ ನಿಷೇಧಿಸಲಾಗಿದೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ ನೆಲ ಮಟ್ಟದ ಸೇತುವೆ ಮೇಲೆ ಓಡಾಟ ನಡೆಸುತ್ತಿದ್ದಾರೆ.
ಗ್ರಾಮಕ್ಕೆ ನುಗ್ಗಿದ ಹಳ್ಳದ ನೀರು
ವಿಜಯನಗರ ಜಿಲ್ಲೆಯ ಗುಡೇಕೋಟೆ ಹೋಬಳಿಯ ಮಹದೇವಪುರ ಗ್ರಾಮದಲ್ಲಿ ಮಳೆಯಿಂದಾಗಿ ಭಾರಿ ಪ್ರಮಾಣದ ಹಳ್ಳದ ನೀರು ಗ್ರಾಮಕ್ಕೆ ನುಗ್ಗಿದೆ. ಗ್ರಾಮದ ಬೀದಿಗಳಲ್ಲಿ ರಭಸವಾಗಿ ಹರಿದು ಮನೆ ಒಳಗೆ ನುಗ್ಗಿದೆ. ಮಹದೇವಪುರ ಗ್ರಾಮದ ಮಾರಿಗುಡ್ಡ ಏರಿಯಾದಿಂದ ಗ್ರಾಮಕ್ಕೆ ನೀರು ನುಗ್ಗುತ್ತಿದೆ. ಮಹದೇವಪುರ ಗ್ರಾಮದಲ್ಲಿ ದಲಿತ ಕೇರಿ ತಗ್ಗು ಪ್ರದೇಶದಲ್ಲಿ ಇದೆ.
ಚಿಕ್ಕಮಗಳೂರು, ಉತ್ತರ ಕನ್ನಡದಲ್ಲಿ ಮಳೆಯ ಅಬ್ಬರ
ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮಳೆ ಮುಂದುವರಿದಿದೆ. ಕರಾವಳಿಯ ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದೆ. ಇನ್ನೂ ಚಿಕ್ಕಮಗಳೂರಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಣಕಲ್, ಬಾಳೂರು ಸುತ್ತಮುತ್ತ ಭಾರೀ ಮಳೆಯಾಗಿದೆ. ಚಾರ್ಮಾಡಿ ಘಾಟಿಯಲ್ಲಿ ಭಾರೀ ಮಳೆಗೆ ವಾಹನ ಸವಾರರು ಪರದಾಡಿದರು. ಮಳೆ ರಭಸಕ್ಕೆ ರಸ್ತೆ ಕಾಣದೆ ಇರುವುದರಿಂದ ಸವಾರರು ಕೊಟ್ಟಿಗೆಹಾರದಲ್ಲೇ ವಾಹನ ನಿಲ್ಲಿಸಿಕೊಂಡಿರುವುದು ಕಂಡು ಬಂತು.
ಗದಗದಲ್ಲಿ ಕೊಚ್ಚಿ ಹೋದ ಕಿರುಸೇತುವೆ
ಸತತ ಮಳೆಯಿಂದಾಗಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಧರ್ಮಾಪುರ ಗ್ರಾಮದ ಗಣಪತಿ ಕೆರೆಯ ಕಿರುಸೇತುವೆ ಕೊಚ್ಚಿ ಹೋದೆ. ಜಮೀನುಗಳಿಗೆ ಸಂಪರ್ಕ ಕಲ್ಪಿಸಲು ನಿರ್ಮಾಣ ಮಾಡಿದ್ದ ಕಿರುಸೇತುವೆ ನೀರುಪಾಲಾಗಿದೆ. ಕಳೆದ ವರ್ಷವಷ್ಟೇ ರೈತರು ತಮ್ಮ ಜಮೀನುಗಳಿಗೆ ತೆರಳಲು ನಿರ್ಮಿಸಲಾಗಿತ್ತು. ನಿರಂತರ ಮಳೆಯಿಂದಾಗಿ ಕಿರುಸೇತುವೆ ರಸ್ತೆ ಕೊಚ್ಚಿ ಹೋಗಿದ್ದು, ರೈತರು ಪರದಾಡುತ್ತಿದ್ದಾರೆ. ರಸ್ತೆ ಇಲ್ಲದ ಹಿನ್ನೆಲೆ ಇದೀಗ ರೈತರು ಕೃಷಿ ಚಟುವಟಿಕೆ ನಡೆಸಲು ಸಮಸ್ಯೆಯಾಗಿದೆ.
ಬೆಳಗಾವಿಯಲ್ಲಿ ಕೆರೆಯಂತಾದ ರಸ್ತೆಗಳು
ಮಳೆರಾಯನ ಅರ್ಭಟಕ್ಕೆ ಬೆಳಗಾವಿ ಕ್ಯಾಂಪ್ ಪ್ರದೇಶದ ಹತ್ತಿರ ರಸ್ತೆಗಳು ಕೆರೆಯಂತೆ ಮಾರ್ಪಾಟ್ಟಿವೆ. ಬೆಳಗಾವಿಯ ವಿವಿಧೆಡೆ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದೆ. ವಾಹನ ಸಂಚಾರಕ್ಕೆ ಅಡೆತಡೆ ಉಂಟಾಯಿತು. ಬೆಳಗಾವಿಯ ಖಾನಾಪುರ ರಸ್ತೆಯಲ್ಲಿ ಎರಡು ಅಡಿ ನೀರು ನಿಂತು ಅವಾಂತರವೇ ಸೃಷ್ಟಿಯಾಗಿತ್ತು. ಬೆಳಗಾವಿಯ ಗ್ಲೋಬ್ ಥೀಯೇಟರ್ ಅಂಗಳಕ್ಕೆ ನೀರು ನುಗ್ಗಿತ್ತು. ಟಿಕೆಟ್ ಕೌಂಟರ್ ಸಂಪೂರ್ಣ ಜಲಾವೃತಗೊಂಡಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ