ಉಡುಪಿ: ಕರಾವಳಿಯಲ್ಲಿ ಭಾರಿ ಮಳೆಗೆ (Karnataka Weather) ಮೊದಲ (Rain News) ಬಲಿಯಾಗಿದೆ. ಉಡುಪಿಯ ಕೊಲ್ಲೂರು ಗ್ರಾಮದ ಸೊಸೈಟಿ ಗುಡ್ಡೆ ಎಂಬಲ್ಲಿ ಗುಡ್ಡ ಕುಸಿದು ಮಹಿಳೆ ಮೃತಪಟ್ಟಿದ್ದಾರೆ. ಹಳ್ಳಿ ಬೇರು ನಿವಾಸಿ ಅಂಬಾ (45) ಮೃತಪಟ್ಟವರು.
ಏಕಾಏಕಿ ಗುಡ್ಡ ಕುಸಿದು ಬಿದ್ದ ಪರಿಣಾಮ ಅಂಬಾ ಮಣ್ಣಿನ ಅಡಿ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಸ್ಥಳೀಯರ ಸಹಾಯದಿಂದ ಮಣ್ಣು ಸರಿಸಿ ಮೃತ ದೇಹವನ್ನು ಮೇಲೆ ಎತ್ತಲಾಗಿದೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಆಗುಂಬೆಯಲ್ಲಿ 25 ಸೆಂ.ಮೀ ಮಳೆ ದಾಖಲು
ನೈರುತ್ಯ ಮಾನ್ಸೂನ್ ಕರಾವಳಿಯಲ್ಲಿ ಸಕ್ರಿಯವಾಗಿದ್ದರೆ, ಒಳಭಾಗದಲ್ಲಿ ಸಾಮಾನ್ಯವಾಗಿತ್ತು. ಆಗುಂಬೆ (ಶಿವಮೊಗ್ಗ ಜಿಲ್ಲೆ) 25, ಗೇರ್ಸೊಪ್ಪ (ಉತ್ತರ ಕನ್ನಡ ಜಿಲ್ಲೆ) 24, ಸಿದ್ದಾಪುರ (ಉಡುಪಿ ಜಿಲ್ಲೆ) 23, ಕಮ್ಮರಡಿ (ಚಿಕ್ಕಮಗಳೂರು) 20 ಸೆಂ.ಮೀ ಮಳೆಯಾಗಿತ್ತು. ಲಿಂಗನಮಕ್ಕಿ (ಶಿವಮೊಗ್ಗ ಜಿಲ್ಲೆ) 19, ಕದ್ರಾ (ಉತ್ತರ ಕನ್ನಡ ಜಿಲ್ಲೆ) 15, ಸಿದ್ದಾಪುರ (ಉತ್ತರ ಕನ್ನಡ ಜಿಲ್ಲೆ) 15, ಶೃಂಗೇರಿ (ಜಿಲ್ಲೆ ಚಿಕ್ಕಮಗಳೂರು) 15, ಕುಂದಾಪುರ (ಉಡುಪಿ ಜಿಲ್ಲೆ) 13, ಮಂಕಿ (ಉತ್ತರ ಕನ್ನಡ ಜಿಲ್ಲೆ) 12 ಸೆಂ.ಮೀ ಮಳೆಯಾಗಿತ್ತು.
ಇದನ್ನೂ ಓದಿ: Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್; ಪ್ರಯಾಣಿಕರು ಕಂಗಾಲು
ಚಾರ್ಮಾಡಿ ಹೆದ್ದಾರಿ ತಡೆಗೋಡೆಗಳಲ್ಲಿ ಬಿರುಕು
ಚಿಕ್ಕಮಗಳೂರಿನಲ್ಲಿ ಮಳೆ ಮುಂದುವರಿದ್ದು, ಚಾರ್ಮಾಡಿ ಹೆದ್ದಾರಿಯ ತಡೆಗೋಡೆಗಳಲ್ಲಿ ಬಿರುಕು ಬಿಟ್ಟಿದೆ. ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಅಲ್ಲಲ್ಲಿ ತಡೆಗೋಡೆಗಳಲ್ಲಿ ಬಿರುಕು ಬಿಟ್ಟಿದ್ದು, ಅಪಾಯಕ್ಕೆ ಆಹ್ವಾನಿಸುತ್ತಿದೆ. ಹೊಸ ಕಾಮಗಾರಿ ನಡೆದ ಸ್ಥಳದಲ್ಲೇ ಬಿರುಕು ಕಾಣಿಸಿಕೊಂಡಿದೆ. ಮಳೆ ಹಾಗೂ ಮಂಜಿನ ನಡುವೆ ರಸ್ತೆ ಬಿರುಕು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ರಸ್ತೆಗೆ ಕೋಟ್ಯಂತರ ರೂಪಾಯಿ ವ್ಯಯಿಸಿದರೂ ಪ್ರಯೋಜನವಾಗಿಲ್ಲ. ಕಳಪೆ ಗುಣಮಟ್ಟದ ಕಾಮಗಾರಿ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇತ್ತ ರಾತ್ರಿಯಿಡೀ ಸುರಿದ ಮಳೆಗೆ ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಾಳೆ ಗದ್ದೆ ಬಿಳ್ಳೂರು ಗ್ರಾಮದಲ್ಲಿ ಬಿಳ್ಳೂರು- ಮುಲ್ಲರ ಹಳ್ಳಿ ಸೇರಿ ಹಲವು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ಸೇತುವೆ ಮೇಲೆ ನೀರು ನದಿಯಂತೆ ಉಕ್ಕಿ ಹರಿಯುತ್ತಿದೆ. ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಲು ಗ್ರಾಮಸ್ಥರು ಪರದಾಟ ಅನುಭವಿಸುತ್ತಿದ್ದು, ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.
ಶೃಂಗೇರಿಯ ಕೆರೆಕಟ್ಟೆ ಘಟ್ಟಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಶೃಂಗೇರಿ ಶಾರದಾಂಭೆ ತಟದಲ್ಲಿ ತುಂಗಾ ನದಿ ದೊಡ್ಡ ಪ್ರಮಾಣದಲ್ಲಿ ಹರಿಯುತ್ತಿದೆ. ತುಂಗಾ ನದಿ ಇಕ್ಕೆಲಗಳ ತೋಟಗಳು ಜಲಾವೃತವಾಗುವ ಸಾಧ್ಯತೆ ಇದೆ. ಇತ್ತ ಅಪಾಯದ ಮಟ್ಟ ಮೀರಿದ ಭದ್ರಾ ನದಿಯಿಂದಾಗಿ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗುವ ಹಂತ ತಲುಪಿದೆ.
ಹೆಬ್ಬಾಳೆ ಸೇತುವೆಯ ಮೇಲ್ಪದರಕ್ಕೆ ಭದ್ರಾ ನೀರು ಅಪ್ಪಳಿಸುತ್ತಿದೆ. ಸೇತುವೆ ಮುಳುಗಡೆಯಾದರೆ ಹತ್ತಾರು ಹಳ್ಳಿಗಳ ಸಂಪರ್ಕ ಬಂದ್ ಆಗಲಿದೆ. ಕಳಸ-ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದ ಮಾರ್ಗವೂ ಬಂದ್ ಆಗಲಿದೆ. ಹೀಗಾಗಿ ಮುಂಜಾಗೃತ ಕ್ರಮವಾಗಿ ಪ್ರವಾಸಿಗರು ಹಾಗೂ ಸ್ಥಳೀಯರ ಓಡಾಟಕ್ಕೆ ತಡೆಹಿಡಿಯಲಾಗಿದೆ. ಯಾವುದೇ ಕ್ಷಣದಲ್ಲಾದರೂ ಸೇತುವೆ ಮೇಲೆ ನೀರು ಉಕ್ಕುವ ಸಾಧ್ಯತೆ ಇದೆ. ಹೀಗಾಗಿ ಸ್ಥಳದಲ್ಲಿಯೇ ಕಳಸ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ