Site icon Vistara News

Rain Effect : ಭಾರಿ ಮಳೆಗೆ ಶಿರೂರು ಗುಡ್ಡ ಕುಸಿತ; ಮಣ್ಣಿನಡಿ ಸಿಲುಕಿದ್ದ ಮಹಿಳೆ ಮೃತದೇಹ ಪತ್ತೆ, ಉಳಿದವರಿಗಾಗಿ ಹುಡುಕಾಟ

Rain Effect

ಉತ್ತರಕನ್ನಡ: ಉತ್ತರಕನ್ನಡದಲ್ಲಿ ಭಾರಿ ಮಳೆಗೆ (Karnataka Rain Effect) ರಾಷ್ಟ್ರೀಯ ಹೆದ್ದಾರಿ 66ರ ಶಿರೂರು ಬಳಿ ಭಾರೀ ಗುಡ್ಡಕುಸಿತ (Karnataka Rain) ಉಂಟಾಗಿತ್ತು. ಧಾರಾಕಾರ ಮಳೆಯಿಂದಾಗಿ ಹೆದ್ದಾರಿ ಪಕ್ಕದ ಗುಡ್ಡ ಸಡಿಲಗೊಂಡು, ಅಂಕೋಲಾ ತಾಲೂಕಿನ ಶಿರೂರು ಬಳಿ ಅಂಗಡಿಯೊಂದರ ಮೇಲೆ ಬಿದ್ದಿತ್ತು. ಇದೀಗ ಮಣ್ಣಿನಡಿ ಸಿಲುಕಿ ಮೃತಪಟ್ಟ ಮಹಿಳೆಯೊಬ್ಬರ ಮೃತದೇಹ (Rain Effect) ಪತ್ತೆಯಾಗಿದೆ.

ಉತ್ತರ ಕನ್ನಡದ ಅಂಕೋಲಾ ಗುಡ್ಡ ಕುಸಿತ ಪ್ರದೇಶಕ್ಕೆ ಕುಮಟಾ ಎಸಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಂಕೋಲಾದ ರಾಷ್ಟ್ರೀಯ ಹೆದ್ದಾರಿ 66ರ ಶಿರೂರು ಬಳಿ ಗುಡ್ಡ ಕುಸಿದಿದೆ. ಗುಡ್ಡದ ಮಣ್ಣಿನಡಿ 10ಕ್ಕೂ ಅಧಿಕ ಮಂದಿ ಸಿಲುಕಿರುವ ಶಂಕೆ ಇದ್ದು, ಒಂದೇ ಕುಟುಂಬದ ಐವರು ಸೇರಿ ಹತ್ತಕ್ಕೂ ಅಧಿಕ ಮಂದಿ ಕಣ್ಮರೆಯಾಗಿದ್ದಾರೆ ಎನ್ನಲಾಗಿದೆ. ಗುಡ್ಡ ಕುಸಿದ ರಭಸಕ್ಕೆ ನದಿಗೆ 2 ಗ್ಯಾಸ್ ಟ್ಯಾಂಕರ್‌ಗಳು ಕೊಚ್ಚಿ ಹೋಗಿದೆ. ಗುಡ್ಡದ ಕೆಳಗಿದ್ದ ಲಾರಿ, ಮತ್ತೊಂದು ಟ್ಯಾಂಕರ್‌ ಹಾಗೂ ಚಾಲಕರು ಪಾರಾಗಿದ್ದಾರೆ.

ಅಂಕೋಲಾ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದ್ದಾರೆ. ಅವಘಡದಲ್ಲಿ 7 ಮಂದಿ ಸಾವನ್ನಪ್ಪಿರಬಹುದು, ಆದರೆ ಇನ್ನೂ ಕೂಡಾ ಖಚಿತ ಮಾಹಿತಿ ಬರಬೇಕಿದೆ ಎಂದಿದ್ದಾರೆ. ಸದ್ಯ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಎಷ್ಟು ಸಾವಾಗಿದೆ ಹೇಳುವುದು ಸಾಧ್ಯವಿಲ್ಲ. ಕಾರ್ಯಾಚರಣೆಗೆ ಅಗತ್ಯ ಸಲಕರಣೆಗಳು ಸಾಕಾಗುತ್ತಿಲ್ಲ. ಹೀಗಾಗಿ ಕುಮಟಾ ಹಾಗೂ ಅಂಕೋಲಾ ಎರಡೂ ಕಡೆಯಿಂದ ಕಾರ್ಯಾಚರಣೆಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಜೆಸಿಬಿ, ಹಿಟಾಚಿ ಮತ್ತಿತರ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುವುದು ಎಂದರು.

ಮಳೆ ನಡುವೆಯೂ ಶೋಧ ಕಾರ್ಯ

ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಶಿರೂರು ಬಳಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಐವರು ಸೇರಿ 7 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ ಶಾಂತಿ ನಾಯ್ಕ ಎಂಬ ಮಹಿಳೆಯ ಶವ ಪತ್ತೆಯಾಗಿದ್ದು, ಮಣ್ಣಿನ ಅಡಿ ಸಿಲುಕಿರುವ ಇನ್ನೂ ಆರು ಮಂದಿಗಾಗಿ ಶೋಧ ನಡೆಯುತ್ತಿದೆ.

ಮಳೆ ನಡುವೆಯೂ ಬೆಳಗ್ಗೆಯಿಂದಲೂ ಜೆಸಿಬಿ ಮೂಲಕ ಮಣ್ಣು ತೆಗೆಯುವ ಕೆಲಸ ನಡೆಯುತ್ತಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಸ್ಥಳಕ್ಕೆ ಎನ್‌ಡಿಆರ್‌ಎಫ್‌ ತಂಡ ಭೇಟಿ ನೀಡಿದೆ. ಹೆದ್ದಾರಿ ಬಂದ್ ಆಗಿದ್ದರಿಂದ ಯಲ್ಲಾಪುರ ಮಾರ್ಗವಾಗಿ ಶಿರೂರಿಗೆ ಆಗಮಿಸಿದ್ದಾರೆ. ಕಾರ್ಯಾಚರಣೆಗೆ ಧಾರಾಕಾರ ಮಳೆಯು ಅಡ್ಡಿಯಾಗುತ್ತಿದೆ. ಸ್ಥಳದಲ್ಲಿ ಪೊಲೀಸ್, ತಾಲ್ಲೂಕಾಡಳಿತದ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ.

ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಲಾರಿಯಲ್ಲಿ ಹೊರಟ ಅಧಿಕಾರಿಗಳು

ಕಾರವಾರ ತಾಲೂಕಿನ ಅರಗಾ ಬಳಿ ನೀರು ನಿಂತು ಹೆದ್ದಾರಿ ಬಂದ್ ಆಗಿದೆ. ಅಪಾರ ಪ್ರಮಾಣದಲ್ಲಿ ನೀರು ನಿಂತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯತ್ ಸಿಇಒ ಈಶ್ವರ್ ಕಾಂದೂ ಹಾಗೂ ಎಸ್‌ಪಿ ಎಂ ನಾರಾಯಣ್ ಲಾರಿ ಮೂಲಕ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.

ಮಾಲೀಕರಿಗಾಗಿ ಹುಡುಕಾಟ ನಡೆಸಿದ ಶ್ವಾನ

ಇತ್ತ ಶ್ವಾನವೊಂದು ಮಣ್ಣು ಕುಸಿದ ಪ್ರದೇಶದಲ್ಲಿ ಮಾಲೀಕನನ್ನು ಹುಡುಕಾಡುತ್ತಿದೆ. ರಸ್ತೆಯಲ್ಲಿ ಅತ್ತಿಂದಿತ್ತ ಓಡಾಡುತ್ತಾ ಜನರ ಮುಖ ನೋಡಿ ಶ್ವಾನ ಮರುಗುತ್ತಿದೆ. ಟೀ ಸ್ಟಾಲ್ ಮಾಲೀಕ ಲಕ್ಷ್ಮಣ ನಾಯ್ಕಗೆ ಸೇರಿದ ಶ್ವಾನವು ಗೋಳಾಡುತ್ತಿದೆ. ಈಗಾಗಲೇ ಮಣ್ಣಿನಡಿ ಸಿಲುಕಿದ್ದ ಲಕ್ಷ್ಮಣ ಅವರ ಪತ್ನಿ ಶಾಂತಿ ನಾಯ್ಕ ಶವ ಪತ್ತೆಯಾಗಿದೆ. ಇನ್ನುಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಅಂಕೋಲಾ ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ.ಕೆ ಮಾಹಿತಿ ನೀಡಿದ್ದಾರೆ. ಒಂದು ಕುಟುಂಬದ ಐವರು, ಎದುರು ಮನೆಯ ಓರ್ವರು ಕಣ್ಮರೆಯಾಗಿದ್ದಾಗಿ ನಮಗೆ ಮಾಹಿತಿ ಇದೆ. ಈಗಾಗಲೇ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ಉಳಿದವರಿಗಾಗಿ ಈಗಾಗಲೇ ಶೋಧ ಕಾರ್ಯ ನಡೆಯುತ್ತಿದೆ. ಗುಡ್ಡದ ಕೆಳಗಿದ್ದ 3 ಗ್ಯಾಸ್ ಟ್ಯಾಂಕರ್ ಪೈಕಿ ಎರಡು ನದಿಗೆ ಬಿದ್ದಿವೆ. ಎರಡು ಟ್ಯಾಂಕರ್‌ಗಳನ್ನು ಮೇಲೆತ್ತಲು ನೌಕಾನೆಲೆ ಹಾಗೂ ತಜ್ಞರ ತಂಡದೊಂದಿಗೆ ಪ್ರಯತ್ನ ನಡೆಯುತ್ತಿದೆ. ಕಾರ್ಯಾಚರಣೆಗೆ ಅಗತ್ಯ ಜೆಸಿಬಿ, ಹಿಟಾಚಿ ಸೇರಿ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಕಾರ್ಯಾಚರಣೆ ನಡೆಯುತ್ತಿರುವ ಸ್ಥಳದಿಂದ ಸಾರ್ವಜನಿಕರನ್ನು ಹೊರಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

ಭಾರಿ ಮಳೆಗೆ ವರ್ಷದ ಹಿಂದೆ ನಿರ್ಮಿಸಿದ ಸೇತುವೆ ಕುಸಿತ

ಉಡುಪಿಯ ಕುಂದಾಪುರ ತಾಲೂಕು ಹಾಲಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭರಣಕೊಳ್ಕಿಯಲ್ಲಿ ವರ್ಷದ ಹಿಂದೆ ನಿರ್ಮಿಸಿದ ಸೇತುವೆ ಭಾರಿ ಮಳೆಗೆ ಕುಸಿದಿದೆ. ಹಾಲಾಡಿಯಿಂದ ಜೋರಾಡಿ ಮುದ್ದೂರು ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದೆ. ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಇದೆ ಸೇತುವೆಯನ್ನೇ ಬಳಸಬೇಕಿತ್ತು. ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಸೇತುವೆ ಕುಸಿದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸೇತುವೆ ವರ್ಷದ ಒಳಗೆ ನೀರುಪಾಲಾಗಿದೆ.

ಚಿಕ್ಕಮಗಳೂರಲ್ಲಿ ಮರ ಬಿದ್ದು ಮನೆಗಳು ಜಖಂ

ಪುನರ್ವಸು ಮಳೆ ಅಬ್ಬರಕ್ಕೆ ಚಿಕ್ಕಮಗಳೂರು ತತ್ತರಿಸಿ ಹೋಗಿದೆ. ಭಾರೀ ಗಾಳಿ-ಮಳೆಗೆ ಮರಗಳು ಧರೆಗುರುಳುತ್ತಿವೆ. ಮೂಡಿಗೆರೆ ತಾಲೂಕಿನ ಬಾಳೂರು ಗುಡ್ಡಟ್ಟಿ ಗ್ರಾಮದಲ್ಲಿ ಮನೆ ಮೇಲೆ ಮರ ಬಿದ್ದಿದೆ. ನವೀನ್, ಶೇಷಪ್ಪ ಎಂಬುವರಿಗೆ ಸೇರಿದ ಮನೆಗಳು ಜಖಂಗೊಂಡಿವೆ. ಮನೆಯಲ್ಲಿದ್ದ ಗೃಹ ಉಪಯೋಗಿ ವಸ್ತುಗಳು ನಾಶವಾಗಿವೆ. ಮೂಡಿಗೆರೆ ತಾಲೂಕಿನ ಕೆಳಗೂರು ಗ್ರಾಮದ ಮೂಲೆಮನೆ ಎಸ್ಟೇಟ್‌ನಲ್ಲಿ ಭಾರಿ ಗಾಳಿ, ಮಳೆಗೆ ಮನೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದಿತ್ತು. ಪರಿಣಾಮ ಮನೆಯಲ್ಲಿದ್ದ ಇಬ್ಬರಿಗೆ ಗಂಭೀರ ಗಾಯವಾಗಿದೆ. ಮನೆಯಲ್ಲಿದ್ದ ಪೂರ್ಣಿಮಾ, ಪ್ರಣಬ್ ಎಂಬುವವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇತ್ತ ಭಾರೀ ಮಳೆಯಿಂದ ಹೇಮಾವತಿ ನದಿ ಮೈದುಂಬಿ ಹರಿಯುತ್ತಿದೆ. ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಮದಲ್ಲಿ ಹುಟ್ಟುವ ಹೇಮಾವತಿ ನದಿ ಗೊರೂರು ಡ್ಯಾಂ ಮೂಲಕ ಕೆ.ಆರ್.ಎಸ್. ಡ್ಯಾಂ ಸೇರಲಿದೆ.

ತುಂಗಾ ನದಿಯಲ್ಲಿ ಮುಳುಗಿದ ಮಂಟಪ

ಮಲೆನಾಡು ಭಾಗದಲ್ಲಿ ನಿರಂತರ ವರ್ಷಧಾರೆ ಹಿನ್ನೆಲೆಯಲ್ಲಿ ತುಂಗಾ ನದಿ ಉಕ್ಕಿ ಹರಿಯುತ್ತಿದ್ದು, ಮಂಟಪ ಮುಳುಗಿದೆ. ಶಿವಮೊಗ್ಗ ನಗರ ಮಧ್ಯೆ ಸಾಗುವ ತುಂಗಾ ನದಿಗೆ ತಾಗಿಕೊಂಡಿರುವ ಮಂಟಪ ಮುಳುಗಿದೆ. ಶಿವಮೊಗ್ಗ ನಗರದ ಕೋರ್ಪಲಯ್ಯನ ಛತ್ರದ ಬಳಿಯಿರುವ ಮಂಟಪ ಸಂಪೂರ್ಣವಾಗಿ ಮುಳುಗಿದೆ. ನದಿ ಪಾತ್ರದಲ್ಲಿ ಹೆಚ್ಚು ಜನರು ಓಡಾಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಎಸ್‌ಪಿ ಮಿಥುನ್ ಕುಮಾರ್ ನದಿ ಪಾತ್ರದಲ್ಲಿ ಪೊಲೀಸರ ಬೀಟ್ ವ್ಯವಸ್ಥೆ ಮಾಡಿದ್ದಾರೆ.

ದತ್ತ ಮಂದಿರಕ್ಕೆ ಸುತ್ತುವರಿದ ಕೃಷ್ಣೆ

ಮಹಾರಾಷ್ಟ್ರದ ಪ್ರಸಿದ್ಧ ದೇವಸ್ಥಾನ ದತ್ತ ಮಂದಿರಕ್ಕೆ ಕೃಷ್ಣೆ ನದಿ ಸುತ್ತುವರಿದಿದೆ. ಕೊಲ್ಹಾಪುರ ಜಿಲ್ಲೆಯ ಶಿಳೋಳ‌ ತಾಲೂಕಿನ‌ ನರಸಿಂಹವಾಡಿಯಲ್ಲಿರುವ ದತ್ತ ಮಂದಿರ ಜಲಾವೃತಗೊಂಡಿದೆ. ನರಸಿಂಹವಾಡಿ ಕೃಷ್ಣಾ ಹಾಗೂ ಪಂಚಗಂಗಾ ನದಿಗಳ ಸಂಗಮಸ್ಥಾನವಾಗಿದೆ. ಜಲಾವೃತವಾಗಿದ್ದರೂ ದೇವಸ್ಥಾನಕ್ಕೆ ಭಕ್ತರ ದಂಡು ಹರಿದು ಬಂಧಿದೆ. ನಡು ಮಟ್ಟದ ನೀರಲ್ಲಿಯೇ ಪ್ರದಕ್ಷಿಣೆ ಹಾಕುತ್ತಿದ್ದಾರೆ.

ಕೋಟ ಸಾಹೇಬ್ರಕಟ್ಟೆ ರಾಜ್ಯ ಹೆದ್ದಾರಿ ಸಂಪರ್ಕ ಬಂದ್

ಉಡುಪಿಯ ಕೋಟ ಸಾಹೇಬ್ರಕಟ್ಟೆ ರಾಜ್ಯ ಹೆದ್ದಾರಿ ಸಂಪರ್ಕ ಬಂದ್ ಆಗಿದೆ. ಕೋಟ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಬನ್ನಾಡಿಹೊಳೆ ತುಂಬಿ ಹರಿದಿದೆ. ರಾಜ್ಯ ಹೆದ್ದಾರಿ ಬನ್ನಾಡಿ ಭಾಗದಲ್ಲಿ ಪ್ರತಿ ವರ್ಷವೂ ಕಾಣಿಸಿಕೊಳ್ಳುವ ನೆರೆಹಾವಳಿಯಿಂದಾಗಿ ಸಂಚಾರ ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಹೆದ್ದಾರಿ ಬಂದ್ ಮಾಡಲಾಗಿದೆ. ಸ್ಥಳಕ್ಕೆ ಕುಂದಾಪುರ ಎಸಿ ರಶ್ಮಿ ಭೇಟಿ ನೀರಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಕುಂದಾಪುರ ವಾರಾಹಿ ಸೌಪರ್ಣಿಕ ನದಿ ಭರ್ತಿಯಾಗಿದೆ. ಕುಂದಾಪುರದ ನದಿ ಸಾಲಿನಲ್ಲಿ ನೆರೆಯ ವಾತಾವರಣ ನಿರ್ಮಾಣವಾಗಿದೆ. ಬೇಳೂರು ದೇಲಟ್ಟು ಭಾಗದಿಂದ ಜನರ ಸ್ಥಳಾಂತರ ಮಾಡಲಾಗಿದೆ. ಕುಂದಾಪುರ ಅಗ್ನಿಶಾಮಕ ದಳದ ಕಾರ್ಯಾಚರಣೆ ನಡೆಸುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version