ಮಹಾರಾಷ್ಟ್ರ/ಬೆಳಗಾವಿ: ಮಹಾರಾಷ್ಟ್ರದ ಬುಲಡಾನ್ ಪ್ರದೇಶದಲ್ಲಿ ನಿರಂತರ ಮಳೆಯಿಂದ (Karnataka Rain) ಪ್ರವಾಸವೇ ಸೃಷ್ಟಿಯಾಗಿದೆ. ಉಕ್ಕಿ ಹರಿಯುವ ನೀರಲ್ಲಿ ಪಾನ್ ಶಾಪ್ ಹಾಗೂ ಕಾರು ಎರಡು ಕೊಚ್ಚಿ (Rain Effect) ಹೋಗಿವೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ ಎನ್ನಲಾಗಿದೆ.
ಮಹಾರಾಷ್ಟ್ರದಲ್ಲಿ ಮಳೆ ಅವಾಂತರ ಮುಂದುವರಿದಿದ್ದು, ಬೆಳಗಾವಿಯ ಗಡಿಯಲ್ಲಿ ಮಳೆಯಿಂದಾಗಿ ಪ್ರವಾಸಿಗರು ಪರದಾಟ ಅನುಭವಿಸಿದರು. ಚಂದಗಡ್ ತಾಲೂಕಿನ ತಿಲಾರಿ ಮತ್ತು ಪಾಟ್ನೆಪಾಟಾದಲ್ಲಿ ಹಿರಣ್ಯಕೇಶಿ ನದಿ ನೀರು ಏಕಾಏಕಿ ರಸ್ತೆಗೆ ಹರಿದು ಬಂದಿತ್ತು. ಪರಿಣಾಮ ಸೇತುವೆ ಮೇಲೆ ಮೂರು ಅಡಿಯಷ್ಟು ನೀರು ಹರಿದು ತಿಲಾರಿ ಬೆಳಗಾವಿ ಸಂಪರ್ಕಿಸುವ ರಸ್ತೆಯು ಹೊಳೆಯಂತಾಗಿ ಮಾರ್ಪಟ್ಟಿತ್ತು. ಕೆಲ ಪ್ರವಾಸಿಗರು ಎರಡ್ಮೂರು ಅಡಿ ನಿಂತ ನೀರಲ್ಲೇ ಕಾರು ಚಲಾಯಿಸಿಕೊಂಡು ಹೊರ ಬಂದರು. ನೀರಲ್ಲಿ ಬೈಕ್ ಚಲಾಯಿಸಲು ಆಗದೆ ಬೈಕ್‌ಗಳನ್ನು ತಳ್ಳಿಕೊಂಡು ಬಂದರು.
ಬೆಂಗಳೂರಿನಲ್ಲೂ ಅಬ್ಬರಿಸಿದ ಮಳೆ
ಜು.8ರ ಸಂಜೆ ರಾಜ್ಯದ ವಿವಿಧೆಡೆ ಮಳೆಯು ಆರ್ಭಟಿಸಿದೆ. ಬೆಂಗಳೂರಿನ ಮಲ್ಲೇಶ್ವರಂ, ಶಿವಾನಂದ, ಮೆಜೆಸ್ಟಿಕ್ ಹಾಗೂ ವಿಧಾನಸೌಧ, ಶಿವಾಜಿನಗರ ಸೇರಿದಂತೆ ಬೆಂಗಳೂರಿನ ಹಲವೆಡೆ ಭಾರಿ ಮಳೆಯಾಗಿದೆ. ಇತ್ತ ವಿಜಯನಗರ ಜಿಲ್ಲೆಯಲ್ಲಿ ದಿಢೀರ್ ಮಳೆಯಿಂದಾಗಿ ಜನ-ಜೀವನ ಅಸ್ತವ್ಯಸ್ತವಾಗಿತ್ತು. ವಿಜಯನಗರದ ಹೊಸಪೇಟೆಯಲ್ಲಿ ಬಿರುಗಾಳಿ ಸಹಿತ ಭಾರಿ ಪ್ರಮಾಣದಲ್ಲಿ ಮಳೆಯಾಗಿತ್ತು. ದಿಢೀರ್ ಸುರಿದ ಭಾರೀ ಮಳೆಗೆ ರಸ್ತೆ ಇಕ್ಕೆಲಗಳಲ್ಲೆಲ್ಲ ನೀರು ತುಂಬಿ ಹರಿದಿತ್ತು. ಏಕಾಏಕಿ ಸುರಿದ ಮಳೆಗೆ ರಸ್ತೆ, ಚರಂಡಿಗಳು ತುಂಬಿ ಹರಿದಿತ್ತು.
ನಿರಂತರ ಮಳೆಗೆ ಉರುಳಿ ಬಿದ್ದ ಮರ; ಕಾರು ಜಖಂ
ನಿರಂತರ ಮಳೆಯಿಂದ ಬೃಹತ್ ಮರವೊಂದು ಬುಡಸಮೇತ ಉರುಳಿ ಕಾರಿನ ಮೇಲೆ ಬಿದ್ದಿದೆ. ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯ ಮುಂಭಾಗದಲ್ಲಿ ಘಟನೆ ನಡೆದಿದೆ. ದಿಲೀಪ ಪವಾರ್ ಎಂಬುವವರಿಗೆ ಸೇರಿದ ಕಾರು ಸಂಪೂರ್ಣ ಜಖಂಗೊಂಡಿದೆ. ಆಸ್ಪತ್ರೆಯಲ್ಲಿದ್ದ ರೋಗಿಯ ಭೇಟಿಗೆ ಬಂದಿದ್ದ ದಿಲೀಪ್ ಪವಾರ್, ಆಸ್ಪತ್ರೆಯ ಮುಂದೆ ಕಾರು ಪಾರ್ಕ್ ಮಾಡಿದ್ದರು. ಈ ವೇಳೆ ಮರ ಬಿದ್ದಿದೆ, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇದನ್ನೂ ಓದಿ: Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!
ದಾವಣಗೆರೆಯಲ್ಲಿ ಕೆಸರು ಗದ್ದೆಯಾದ ಶಾಲಾ ಆವರಣ
ಸತತ ಮಳೆಯಿಂದ ಶಾಲಾ ಆವರಣವು ಕೆಸರು ಗದ್ದೆಯಾಗಿದೆ. ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ನೀಲಕಂಠ ನಗರದಲ್ಲಿ ಘಟನೆ ನಡೆದಿದೆ. ಒಂದನೇ ತರಗತಿ ರಿಂದ ಏಳನೇ ತರಗತಿ ವರೆಗೆ ಶಾಲೆಗೆ ಹೋಗುವ ಮಕ್ಕಳು ಪರದಾಟ ಅನುಭವಿಸುತ್ತಿದ್ದಾರೆ.
ಶಾಲಾ ಆವರಣದಲ್ಲಿ ಮಳೆ ನೀರು ಹೊರ ಹೋಗದೆ ನಿಂತಲ್ಲೇ ನಿಲ್ಲುವಂತಾಗಿದೆ. ಇದರಿಂದಾಗಿ ಮಕ್ಕಳು ಶಾಲೆ ಒಳಗೆ ಹೋಗಲು ಪರದಾಟ ಅನುಭವಿಸುವಂತಾಗಿದೆ. ಮಳೆ ಬಂದರೆ ಸಾಕು ಮಕ್ಕಳು ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಆವರಣವೆಲ್ಲವೂ ಕೆಸರು ಗದ್ದೆಯಾಗಿದೆ.
ಕೊಡಗಿನ ನದಿ ತಟ್ಟದ ನಿವಾಸಿಗಳಿಗೆ ಎಚ್ಚರಿಕೆ
ಹಾರಂಗಿ ಜಲಾನಯ ಪ್ರದೇಶದಲ್ಲಿ ಮಳೆ ಮುಂದುವರಿದ್ದು, ಒಳಹರಿವು ಪ್ರಮಾಣ ಹೆಚ್ಚಳಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ನದಿಗೆ ನೀರು ಹರಿಸಲು ಸಿದ್ಧತೆ ನಡೆದಿದ್ದು, ನದಿ ತಟ್ಟದ ನಿವಾಸಿಗಳು ಎಚ್ಚರದಿಂದ ಇರುವಂತೆ ಸೂಚನೆ ನೀಡಲಾಗಿದೆ. 1000 ಕ್ಯೂಸೆಕ್ಸ್ ನೀರು ನದಿಗೆ ಹರಿಸಲು ಚಿಂತನೆ ನಡೆದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕಾವೇರಿ ನೀರಾವರಿ ನಿಗಮ ಆದೇಶ ಹೊರಡಿಸಿದೆ.
ಜು.9ರಂದು ಶಾಲಾ-ಕಾಲೇಜುಗಳಿಗೆ ರಜೆ
ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆ ಆಗುತ್ತಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಎಲ್ಲಾ ತಾಲೂಕಿನ ಶಾಲಾ-ಕಾಲೇಜಿಗೆ ಜು.9 ರಂದು ರಜೆ ಘೋಷಣೆ ಮಾಡಲಾಗಿದೆ. ಅಂಗನವಾಡಿ, ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ, ಉಡುಪಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ