ಶಿವಮೊಗ್ಗ: ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರಿಸತೊಡಗಿದೆ. ಪುನರ್ವಸು ವರ್ಷಧಾರೆ ಹೊಡೆತಕ್ಕೆ ಕರಾವಳಿ, ಮಲೆನಾಡಿನ ವಿವಿಧ ಭಾಗಗಳು ತತ್ತರಿಸಿವೆ. ಈ ಮಧ್ಯೆ ಆಗುಂಬೆಯಲ್ಲಿ ಲಘು ಪ್ರಮಾಣದಲ್ಲಿ ಗುಡ್ಡ ಕುಸಿದಿದ್ದು, ವಾಹನ ಸಂಚಾರ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದು, ಮಣ್ಣು ತೆರವು ಕಾರ್ಯ ಆರಂಭವಾಗಿದೆ (Rain News).
ಭಾರಿ ಮಳೆಗೆ ಶಿವಮೊಗ್ಗ ಮತ್ತು ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಆಗುಂಬೆ ಘಾಟಿಯ 4ನೇ ತಿರುವಿನಲ್ಲಿ ಗುಡ್ಡ ಕುಸಿದಿದೆ. ಹೀಗಾಗಿ ವಾಹನ ಚಾಲಕರು ಎಚ್ಚರಿಕೆಯಿಂದ ಸಂಚರಿಸಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಗುಡ್ಡ ಮತ್ತಷ್ಟು ಕುಸಿದರೆ ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಈಗಾಗಲೇ ಈ ಹೆದ್ದಾರಿಯಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಹೀಗಾಗಿ ತೀರ್ಥಹಳ್ಳಿ-ಉಡುಪಿ ಮಾರ್ಗವಾಗಿ ಹೋಗುವ ವಾಹನಗಳು ಹುಲಿಕಲ್ ಘಾಟಿ ಮಾರ್ಗವಾಗಿ ಸಂಚರಿಸುತ್ತಿವೆ. 3 ವರ್ಷಗಳ ಹಿಂದೆ ಈ ಘಾಟಿಯಲ್ಲಿ ಗುಡ್ಡ ಕುಸಿದು ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು. ಸದ್ಯ ರಸ್ತೆಗೆ ಬಿದ್ದಿರುವ ಮಣ್ಣು ತೆರವುಗೊಳಿಸಲಾಗುತ್ತಿದೆ.
ಗೋಕರ್ಣದಲ್ಲಿ ಗುಡ್ಡ ಕುಸಿತ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಭಾರಿ ಮಳೆ ಮುಂದುವರಿದಿದ್ದು, ಕುಮಟಾ ತಾಲೂಕಿನ ಗೋಕರ್ಣದಲ್ಲಿ ಗುಡ್ಡ ಕುಸಿದಿದೆ. ಗೋಕರ್ಣದ ತಾರಮಕ್ಕಿ ಸರ್ಕಾರಿ ಶಾಲೆ ಬಳಿ ಘಟನೆ ನಡೆದಿದ್ದು, ರಸ್ತೆಗೆ ಮಣ್ಣು, ಮರ ಕುಸಿದು ಬಿದ್ದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿದೆ. ಸ್ಥಳೀಯ ಆಡಳಿತದಿಂದ ಮಣ್ಣು ತೆರವು ಕಾರ್ಯ ನಡೆಯುತ್ತಿದ್ದು, ಮಳೆ ಹೆಚ್ಚಾದಲ್ಲಿ ಮತ್ತೆ ಗುಡ್ಡದ ಮಣ್ಣು ಕುಸಿಯುವ ಭೀತಿ ಎದುರಾಗಿದೆ. ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: Nandi Hills: ಕರಾವಳಿಯ ಹಲವು ತಾಣಗಳಿಗೆ ನಿರ್ಬಂಧ; ನಂದಿ ಬೆಟ್ಟದತ್ತ ಪ್ರವಾಸಿಗರ ದಂಡು
ಚಿಕ್ಕಮಗಳೂರಿಗೆ ಹರಿದು ಬಂದ ಜನ ಸಾಗರ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಪ್ರವಾಸಿ ತಾಣಗಳು ಗಮನ ಸೆಳೆಯುತ್ತಿವೆ. ಹಳ್ಳ-ಕೊಳ್ಳ, ಜಲಪಾತಗಳು ಮೈತುಂಬಿ ಹರಿಯುತ್ತಿದ್ದು, ಬೆಟ್ಟ-ಗುಡ್ಡ ಹಸುರಿನಿಂದ ಕಂಗೊಳಿಸುತ್ತಿವೆ. ಹೀಗಾಗಿ ನಿಸರ್ಗ ತಾಣಗಳತ್ತ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
ಟ್ರಾಫಿಕ್ ಜಾಮ್
ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನ ಗಿರಿ, ಮಾಣಿಕ್ಯಾಧಾರಕ್ಕೆ ಭಾರಿ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಭಾನುವಾರ ಆಗಿರುವುದರಿಂದ ಇಂದು ಜನ ದಟ್ಟಣೆಯೇ ಕಂಡು ಬಂದಿದೆ. ಚಿಕ್ಕಮಗಳೂರಿನ ಕೈಮರ ಚೆಕ್ ಪೋಸ್ಟ್ ಬಳಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪ್ರವಾಸಿಗರು ಪರದಾಡುವಂತಾಗಿದೆ. ರಾಜ್ಯದ ನಾನಾ ಭಾಗಗಳಿಂದ ಬಂದಿರುವ ಸಾವಿರಾರು ಪ್ರವಾಸಿಗರನ್ನು ನಿಯಂತ್ರಿಸುವುದೇ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪ್ರಕೃತಿಯ ಮಡಿಲಲ್ಲಿ ಮದ್ಯ ಸೇವನೆ, ಪ್ಲಾಸ್ಟಿಕ್ ನಿಷೇಧಕ್ಕೆ ಪೋಲೀಸ್, ಜಿಲ್ಲಾಡಳಿತ ಪಣ ತೊಟ್ಟಿದ್ದು, ಎಲ್ಲೆಡೆ ಕಣ್ಗಾವಲು ಇರಿಸಲಾಗಿದೆ. ಜತೆಗೆ ಮಳೆಯಾಗುತ್ತಿರುವುದಿಂದ ಪ್ರವಾಸಿಗರ ಸುರಕ್ಷತೆಗೆ ಪೊಲೀಸರು ಆದ್ಯತೆ ನೀಡಿದ್ದಾರೆ. ಈಗಾಗಲೇ ಕೆಲವು ಅಪಾಯಕಾರಿ ತಾಣಗಳಿಗೆ ಪ್ರವೇಶ ನಿಷೇಧಿಸಿ ಆದೇಸ ಹೊರಡಿಸಲಾಗಿದೆ.