ಇಣುಕು 1
ಒಂದು ಸಂಜೆಯ ಕತೆ…
ವಿಜಯನಗರದ ಗತವೈಭವ ನೆನಪಿಸಿಕೊಳ್ಳಿ. ದಸರೆಯ ಕೊನೆಯ ಸಂಜೆ, ವಿಜಯದಶಮಿ ಮೆರವಣಿಗೆ ಮುಗಿದಿದೆ. ಹಂಪಿಯ ರಾಜಬೀದಿಗಳ ಒಂದು ಸುತ್ತು ನಡೆದಾಡಲು ಮುಂದಾಗುತ್ತೀರಿ. ದೂರದ ದೇಶಗಳ ಒಂಟೆ ಕುದುರೆ ಆನೆಗಳು. ವಜ್ರವೈಢೂರ್ಯಗಳ ಅಬ್ಬರದ ಮಾರಾಟ. ಜಗಮಗಿಸುವ ರಸ್ತೆಬದಿಗಳಲ್ಲಿ ಸಾಲು ಸಾಲು ಚಿನ್ನ ಬೆಳ್ಳಿ ರತ್ನಗಳ ವರ್ತಕರು.
ʼನೀವುʼ ವಿಜಯ ವಿಠ್ಠಲ ದೇವಾಲಯದಿಂದ ನಡೆದು ಬಾಜಾರ್ ಬೀದಿಯ ಸಡಗರ ಕಣ್ತುಂಬಿಕೊಂಡು, ಸಾಸಿವೆ ಕಾಳು ಗಣೇಶನಿಗೆ ನಮಿಸಿ ನಿಮಗಿಷ್ಟವಾದ ಚಿನ್ನ ಬೆಳ್ಳಿ ವಜ್ರ ಇತ್ಯಾದಿಗಳನ್ನು ಕೊಳ್ಳಲು ಅಣಿಯಾಗಿದ್ದೀರಿ. ಸೇರುಗಟ್ಟಲೆ ಇಟ್ಟ ಬೆಲೆ ಬಾಳುವ ಮುತ್ತು ಹರಳುಗಳು ನಿಮ್ಮನ್ನ ಮೂಕಮುಗ್ಧವಾಗಿಸಿವೆ. ಕೊನೆಗೆ ಒಂದೆರಡು ವಸ್ತುಗಳನ್ನು ಕೊಳ್ಳಲು ಮನಸುಮಾಡಿ QR ಕೋಡ್ ಮೂಲಕ ವ್ಯವಹರಿಸಿ ನಿಮ್ಮ ಕಿಸೆಗೆ ಹಾಕಿ ಹೊರಡುತ್ತೀರಿ.
ತಡ ಸಂಜೆ ಮೈಸೂರಿನ ದಸರಾ ಕಾರ್ಯಕ್ರಮದಲ್ಲಿ ವಿಶ್ವವಿಖ್ಯಾತ ಅರಮನೆಯ ಆವರಣದಲ್ಲಿ ವಿಜಯ್ ಪ್ರಕಾಶ್ ಅವರ ಚಿತ್ರ ಗೀತೆಗಳನ್ನು ನೀವು ಮೊದಲು ಕೊಂಡ ಚಿನ್ನದ ಆಭರಣ ಧರಿಸಿ, ಮೈಸೂರು ಸಿಲ್ಕ್ ಫ್ಯಾಕ್ಟರಿ ತಯಾರಿಸಿದ ಏಕೈಕ ಮಾದರಿಯ ರೇಷ್ಮೆ ಸೀರೆ ಉಟ್ಟು ನಿಮಗಾಗಿಯೇ ಕಾಯ್ದಿರಿಸಿದ ಮುಂದಿನ ಆಸನದಿಂದ ʻನೀವುʼ ಆಸ್ವಾದಿಸುತ್ತಿರುವಿರಿ.
ಕಾನ್ಸರ್ಟ್ ಮುಗಿಯುತ್ತಿದ್ದಂತೆಯೇ ಹೊರದೇಶದಲ್ಲಿರುವ ನಿಮ್ಮ ಮ್ಯಾನೇಜರ್ ಒಂದು ಮೀಟಿಂಗ್ ಇನ್ವೈಟ್ ಕಳಿಸಿ ನಿಮ್ಮನ್ನು ಆಫೀಸಿನ ಮೀಟಿಂಗ್ ರೂಮ್ ಒಂದಕ್ಕೆ ಬರಹೇಳುತ್ತಾರೆ. ಸ್ವಲ್ಪ ಕಸಿವಿಸಿಯಾದರೂ ನೀವು ಮೀಟಿಂಗ್ ರೂಮಿನಲ್ಲಿ ನಿಮ್ಮ ಸಹೋದ್ಯೋಗಿಗಳೊಂದಿಗೆ ಅರ್ಧ ಘಂಟೆಯ ಮೀಟಿಂಗ್ ಮುಗಿಸಿ ಅವರಿಗೆ ಬೀಳ್ಕೊಟ್ಟು ವಾಪಸ್ ಆಗುವಿರಿ.
ನೆನಪಿರಲಿ, ಇವೆಲ್ಲವೂ ಒಂದೇ ಸಂಜೆ ನಿಮ್ಮ ಮನೆಯ ಕೊಠಡಿಯಲ್ಲಿ ನೀವು ಎಕ್ಸ್‌ಪೀರಿಯೆನ್ಸ್ ಮಾಡುತ್ತಿರುವ ಬೇರೆ ಬೇರೆ ಕಾಲಘಟ್ಟದ ಕಾರ್ಯಕ್ರಮಗಳು. ನಿಜವಾಗಿಯೂ ʻನೀವುʼ ಎಂದರೆ ನಿಮ್ಮನ್ನು ಅತಿ ಸನಿಹಕ್ಕೆ ಹೋಲುವ ನಿಮ್ಮ “ಅವತಾರ”.
ಮೇಲಿನ ಕಥೆಯಾಗಿ ಆರಂಭಿಸಿದ ಈ ಲೇಖನ ಮುಂದೊಂದು ದಿನ ನಮ್ಮ ಜೀವನದ ಒಂದು ಸಂಜೆ ನಿಜವಾಗುವುದರಲ್ಲಿ ಸಂದೇಹವಿಲ್ಲ. ಇವೆಲ್ಲದಕ್ಕೂ ಮೂಲ ಕಾರಣವಾಗಲಿದೆ ಈಗ ಬಹಳ ಚಾಲ್ತಿಯಲ್ಲಿರುವ ಪದ “ಮೆಟಾವರ್ಸ್”.
ಮೆಟಾವರ್ಸ್ ಡೆಫಿನಿಶನ್/ವ್ಯಾಖ್ಯಾನಿಸಲು ಬಹಳಷ್ಟು ಪ್ರಯತ್ನಗಳು ನಡೆದಿವೆ. ಇವು ಪ್ರಯತ್ನಗಳು ಅಷ್ಟೇ. ಏಕೆಂದರೆ ಈ ಮೆಟಾವರ್ಸ್ ಅನ್ನೋ ಕಾನ್ಸೆಪ್ಟ್ ಅಥವಾ ಪರಿಕಲ್ಪನೆ ನಮ್ಮ ಈವರೆಗಿನ ಕಲ್ಪನೆಗಷ್ಟೇ ಸೀಮಿತ. ದಿನದಿಂದ ದಿನಕ್ಕೆ ಅದರ ವಿಸ್ತಾರ ಹಾಗು ಅದರ ಅಪ್ಲಿಕೇಶನ್ ಹೆಚ್ಚುತ್ತಾ ಹೋಗುತ್ತಿದೆ.
ನಮ್ಮ ಮೊದಲಿನ ಪ್ರಶ್ನೆಗೆ ಮತ್ತೆ ಬರೋಣ. ಹಾಗಾದರೆ ಏನಿದು ಮೆಟಾವರ್ಸ್?
ಸರಳ ಭಾಷೆಯಲ್ಲಿ ಹೇಳುವುದಾದರೆ ಇದು ನಮ್ಮ ಸುತ್ತಲಿನ ಲೋಕದ ಮತ್ತೊಂದು ಪರ್ಯಾಯ ಲೋಕ. ಈ ಪರ್ಯಾಯ ಲೋಕದ ಎಲ್ಲ ವಿಷಯಗಳು, ವಸ್ತುಗಳು, ಆಗುಹೋಗುಗಳು, ವಹಿವಾಟು ರೂಪುರೇಷೆಗಳು ಎಲ್ಲವೂ ಇಂಟರ್ನೆಟ್ ಬಳಸಿ ವೆಬ್ ೩.೦ ಮೂಲಕ ನಮಗೆ ಅನುಭವಿಸಲು ಲಭ್ಯವಿದೆ.
ಇಂಟರ್ನೆಟ್ ನಮಗೆ ತಿಳಿದಿರುವ ಪದ. ಅದರ ಅಂದಾಜು ನಮಗೆ ಬಹಳಷ್ಟಿದೆ. ಆದರೆ ಈ ವೆಬ್ ೩.೦ ಹೊಸದು. ಅದರ ಉಲ್ಲೇಖ ಮಾಡಿ ನಿಮಗೆ ಮತ್ತೆರಡು ಕಾನ್ಸೆಪ್ಟ್ ಅರ್ಥೈಸಿ ಇವೆಲ್ಲವೂ ಮೆಟಾವರ್ಸ್‌ನಲ್ಲಿ ಹೇಗೆ ಸಮಾಗಮಿಸಿದೆ ಎಂದು ಬಿಡಿಯಾಗಿ ವಿವರಿಸುವೆ.
ವೆಬ್ ೩.೦
1991ರಲ್ಲಿ ಮೊದಲ ವೆಬ್‌ಸೈಟ್ ನಿರ್ಮಿಸಲಾಗಿತ್ತು. ಇದರಲ್ಲಿ ಕೆಲ ಪೂರ್ವನಿರ್ಧಾರಿತ ಪದಗಳು, ಅಂಕಿಗಳು, ಒಂದು ಲಿಂಕ್ ಮೂಲಕ ಲಭ್ಯವಿತ್ತು. ಕಾಲ ಮುಂದುವರಿದಂತೆ ಇದು ವೆಬ್ ೨.೦ ಆಗಿ ರೂಪಾಂತರಗೊಂಡಿತು. ಈಗ ನಮಗೆ ದೊರಕುವ ಪ್ರಾಯಶಃ ಎಲ್ಲ ವೆಬ್‌ಸೈಟ್ ಹಾಗು ಆಪ್‌ಗಳು ಇದಕ್ಕೆ ಉದಾಹರಣೆ. ಇವೆಲ್ಲ ಸಂವಾದಾತ್ಮಕ/ ಇಂಟರಾಕ್ಟಿವ್ ಸೈಟ್‌ಗಳು. ಇವುಗಳ ಮೂಲಕ ಮಾಹಿತಿ ವಿನಿಯೋಗವಾಗುತ್ತದೆ. ಮಾಹಿತಿ ಪಡೆದು ಒಂದು ಪೇಜಿನಿಂದ ಇನ್ನೊಂದು ಪೇಜಿಗೆ ಜಿಗಿದು ಅಲ್ಲಿರುವ ಒಂದು ಫೋಟೋ ಡೌನ್ಲೋಡ್ ಮಾಡಿ, ಜೂಮ್ ಮಾಡಿ ಬಲು ಸಂಕೀರ್ಣವಾದ ವಿಷಯ/ವಿವರಗಳನ್ನು ಪರಿಶೀಲಿಸಿ ನಿಮಗಿಷ್ಟವಾದ ವಸ್ತುಗಳನ್ನು ಖರೀದೀಸಲೂ ಬಹುದು.
ಈ ತರಹದ ವೆಬ್‌ಸೈಟ್‌ಗಳ ಮುಂದುವರಿದ ರೂಪಾಂತರಿಯೇ ವೆಬ್ ೩.೦. ಇಂಟರ್ನೆಟ್ ಬಳಸುವ ವೆಬ್‌ಸೈಟ್‌ನಿಂದ ಇಂಟರ್ನೆಟ್ ಒಳಗೆಯೇ ಇರುವ ವೆಬ್‌ಸೈಟ್ ಅಥವಾ ಆಪ್‌ಗಳನ್ನು ವೆಬ್ ೩.೦ ತಕ್ಕಡಿಗೆ ಹಾಕಬಹುದು. ಒಂದು ಉದಾಹರಣೆ ಕೊಡುವುದಾದರೆ, ಇನ್ಸ್ಟಾಗ್ರಾಮ್ ಮೂಲಕ ಇಂಟರ್ನೆಟ್ ಬಳಸಿ ಒಂದು ಫೋಟೋ ಅಪ್ಲೋಡ್ ಮಾಡುತ್ತೀರಿ. ಆ ಫೋಟೋ ನೋಡಿ ನಿಮ್ಮ ಸ್ನೇಹಿತರು ಲೈಕ್ ಮಾಡುತ್ತಾರೆ. ಕಾಮೆಂಟ್ ಮಾಡುತ್ತಾರೆ. ನೀವು ಆ ಫೋಟೋ ಅಪ್ಲೋಡ್ ಅಥವಾ ಡಿಲೀಟ್ ಮಾಡಬಹುದೇ ಹೊರತು ಅದನ್ನು “own” ಮಾಡಲಾಗದು.
ಇದನ್ನೂ ಓದಿ | ಗ್ಲೋಕಲ್ ಲೋಕ ಅಂಕಣ | ವರ್ಕ್ ಫ್ರಮ್ ಹೋಮ್- ಭವಿಷ್ಯದ ಕತೆ ಏನು?
ವೆಬ್ ೩.೦ ನಿಮಗೆ ಈ ಸೌಲಭ್ಯ ದೊರಕಿಸಿದೆ. ವೆಬ್ ೩.೦ನ ಯಾವುದೇ ವಸ್ತುವನ್ನು, ಜಾಗವನ್ನು, ವಿಷಯವನ್ನು ನೀವು ಖರೀದಿಸಿ ವಾರಸುದಾರರಾಗಬಹುದು. ಅರೆರೆ ಇದನ್ನು ಹೇಗೆ ಖರೀದಿಸುವುದು, ಎಷ್ಟಾಗುತ್ತದೆ, ಯಾವ ದುಡ್ಡು ಬಳಸುವುದು, ಇದನ್ನು ಬೇರೆಯವರು ಕದ್ದು ಬಳಸಬಹುದೇ ಎಂದೆಲ್ಲ ಪ್ರಶ್ನೆ ಬಂದಿದೆಯೆಂದುಕೊಂಡಿದ್ದೇನೆ. ಇವೆಲ್ಲದಕ್ಕೂ ಇರುವ ಉತ್ತರವೇ ವರ್ಚುಯಲ್ ರಿಯಾಲಿಟಿ ಹಾಗು ಬ್ಲಾಕ್ ಚೈನ್.
ವರ್ಚುಯಲ್ ರಿಯಾಲಿಟಿ
ಹೆಸರೇ ಹೇಳುವ ಹಾಗೆ ವಾಸ್ತವವನ್ನು ಹೊರತುಪಡಿಸಿ ಅನುಭವಕ್ಕೆ ಸಿಗುವ ಪರ್ಯಾಯ ವೇದಿಕೆಯೇ ವರ್ಚುಯಲ್ ರಿಯಾಲಿಟಿ. ಮೊದಲಿನ ಮೂರು ಉದಾಹರಣೆಗಳಲ್ಲಿ ಹಂಪಿಯ ಗತವೈಭವ, ಮೈಸೂರಿನ ಯುವ ದಸರೆಯ ಆನಂದ, ನಿಮ್ಮ ಆಫೀಸಿನ ಮೀಟಿಂಗ್ ಕೊಠಡಿ ಇವೆಲ್ಲವೂ ಒಂದು ವರ್ಚುಯಲ್ ರಿಯಾಲಿಟಿಯಲ್ಲಿ ಸೃಷ್ಟಿಸಲ್ಪಟ್ಟ ಅನುಭವಗಳು. ಇದರ ಆಳ ಮತ್ತು ವಿಸ್ತಾರ ಈಗಷ್ಟೇ ಗೊತ್ತಾಗುತ್ತಿದೆ. ಆದರೆ ಈಗಾಗಲೇ ಬಹಳಷ್ಟು ಜನಪ್ರಿಯಗೊಂಡಿದೆ. ಎಷ್ಟರ ಮಟ್ಟಿಗೆ ಎಂದರೆ ವರ್ಚುಯಲ್ ಕ್ಯಾನ್ಸರ್ಟ್‌ಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿವೆ. ಜನರು ತಮ್ಮ ಇಷ್ಟವಾದ ಜಾಗಗಳಲ್ಲಿ ತಮಗಿಷ್ಟವಾದ ಜಾಗದ ಭಾಗಗಳನ್ನು ಖರಿಸುತ್ತಿದ್ದಾರೆ. ಪಾಶ್ಚಾತ್ಯ ದೇಶದ ತಾರೆಯರು- ಆರಿಯಾನ ಗ್ರಾಂಡೆ ಹಾಗು ಜಸ್ಟಿನ್ ಬೀಬರ್ ತಮ್ಮ ಕ್ಯಾನ್ಸರ್ಟ್ ವರ್ಚುಯಲ್ ಆಗಿಯೇ ನಡೆಸಿ ಹುಚ್ಚೆಬ್ಬಿಸಿದ್ದಾರೆ.
ಒಂದು ಆನ್ಲೈನ್ ಆಟ, ವಿಡಿಯೋ ಗೇಮ್ ಒಂದು ಸೆಟ್ಟಿಂಗ್‌ನಲ್ಲಿ ನಡೆಯಲಿದೆ ಎಂದಿಟ್ಟುಕೊಳ್ಳೋಣ. ಒಂದು ಕಾಡು, ಒಂದು ನಗರ. ಅಲ್ಲಿನ ಒಂದು ಜಾಗ ಸೈಟ್ ಖರೀದಿ ಮಾಡಿದ ಹಾಗೆಯೇ ನೀವೀಗ ಖರಿಸಬಹುದು ಎಂದರೆ ಆಶ್ಚರ್ಯ ಅನ್ನಿಸುತ್ತದೆ. ಕೆಲವರಿಗಂತೂ ಹುಚ್ಚಾಟ ಎನ್ನಿಸುತ್ತದೆ. ಆದರೆ ಬ್ಲಾಕ್ ಚೈನ್ ಹಾಗು ಎನ್‌ಎಫ್‌ಟಿ ಇದನ್ನು ನಿಜ ಮಾಡಿದೆ.
ಎನ್‌ಎಫ್‌ಟಿ
ಸ್ಥೂಲವಾಗಿ ಹೇಳುವುದಾದರೆ ಎನ್‌ಎಫ್‌ಟಿ (Non fungible token) ಎಂದರೆ ಡಿಜಿಟಲ್ ಜಗತ್ತಿನಲ್ಲಿರುವ ಏಕೈಕ ವಸ್ತು. ಅದನ್ನು ನಕಲಿಸಲು ಅಸಾಧ್ಯ ಎಂದರ್ಥ. ಇದರ ಮುಂದುವರಿದ ಆವೃತ್ತಿ ಲಿಮಿಟೆಡ್ ಎಡಿಷನ್ಸ್ (ಸೀಮಿತವಾದ) ವಸ್ತುಗಳು. ಇವೆಲ್ಲದರ ಕೊಳ್ಳುವಿಕೆ ಹಾಗು ಮಾರುವಿಕೆ ಮೆಟಾವರ್ಸ್‌ನಲ್ಲಿ ಮಾಡುವುದಕ್ಕೆ ಹುಟ್ಟಿಕೊಂಡದ್ದು ಬ್ಲಾಕ್ ಚೈನ್.
ಬ್ಲಾಕ್ ಚೈನ್
ಯಾವುದೇ ವಹಿವಾಟು ದಾಖಲಿಸಲು ಇರುವ ವ್ಯವಸ್ಥೆಯೇ ಬ್ಲಾಕ್ ಚೈನ್. ಇದು ವಹಿವಾಟಿನ ಎಲ್ಲ ಮಾಹಿತಿಯನ್ನು ದಾಖಲಿಸಿ ಅಧಿಕೃತತೆ ತರುತ್ತದೆ. ಒಂದು ಉದಾಹರಣೆ ನೋಡೋಣ. ನಿಮಗಿಷ್ಟವಾದ ಕ್ರಿಕೆಟ್ ಪಟುವನ್ನು ನೆನೆಯಿರಿ. ನನಗೆ ನಮ್ಮ ಅನಿಲ್ ಕುಂಬ್ಳೆ. ಕುಂಬ್ಳೆಯವರು ಪಾಕಿಸ್ತಾನದ ವಿರುದ್ಧ ಹತ್ತು ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದು ಗೊತ್ತಿರುವ ವಿಷಯ. ಅವರು ದಾಖಲೆ ಮಾಡಿದ ಚೆಂಡು ಒಂದು. ಅದನ್ನು ನಕಲು ಮಾಡಲು ಸಾಧ್ಯವೇ ಇಲ್ಲ. ಆ ದಾಖಲೆ ಚೆಂಡಿನ ಮೇಲೆ ಕುಂಬ್ಳೆ ಅವರ ಹಸ್ತಾಕ್ಷರವಿದ್ದರೆ ಅದರ ಮೌಲ್ಯ ಮತ್ತಷ್ಟು ಹೆಚ್ಚು.
ಇದನ್ನೂ ಓದಿ | ವೈದ್ಯ ದರ್ಪಣ ಅಂಕಣ | ರೊಬೊಟ್ ಇಲಿಗಳು, ಕೃತಕ ಕಣ್ಣು, ಸಿಂಗ್ಯುಲಾರಿಟಿ ಇತ್ಯಾದಿ…
ಈ ಚೆಂಡು ಮಾರಾಟಕ್ಕಿದೆ ಎಂದುಕೊಳ್ಳೋಣ. ನೀವು ಅದನ್ನು ಇಂತಿಷ್ಟು ಹಣ ಕೊಟ್ಟು ಕೊಳ್ಳುತ್ತೀರಿ. ಆದರೆ ಇದೇ ಚೆಂಡಿನ ಡಿಜಿಟಲ್ ಆವೃತ್ತಿ ಮೆಟಾವರ್ಸ್‌ನಲ್ಲಿ ಇದೆ ಎಂದುಕೊಳ್ಳಿ. ಕುಂಬ್ಳೆ ಅವರೇ ಖುದ್ದು ಇದರ ಬಗ್ಗೆ ಮಾತಾಡಿರುವ ವಿಡಿಯೋ ಅಳವಡಿಸಿದೆ ಎಂದುಕೊಳ್ಳಿ. ಕುಂಬ್ಳೆ ಅವರು ಹತ್ತೂ ವಿಕೆಟ್ ಬಗ್ಗೆ ತಮ್ಮ ಅಭಿಪ್ರಾಯ ವಿವರಿಸಿದ್ದಾರೆ ಎಂದುಕೊಳ್ಳಿ. ಇದರ ಮೌಲ್ಯವು ಇಂತಿಷ್ಟು ಎಂದು ನಿಗದಿಯಾಗಿದೆ. ಇದನ್ನೇ ಎನ್‌ಎಫ್‌ಟಿ ಎಂದು ಕರೆಯುವುದು.
ಇದನ್ನು ಡಿಜಿಟಲ್ ಹಣದ ಮೂಲಕ ಮೆಟಾವರ್ಸ್ ಅಲ್ಲಿ ಖರೀದಿಸುವುದಕ್ಕೆ ಬಳಸುವುದು ಬ್ಲಾಕ್ ಚೈನ್. ಇದು ಬಲು ಸುಲಭವಾದ ಉದಾಹರಣೆ. ನಿಮ್ಮ ಊಹೆ ನಿಜ. ಏನನ್ನು ಬೇಕಾದರೂ ಯಾವುದನ್ನು ಬೇಕಾದರೂ ಎನ್‌ಎಫ್‌ಟಿಯನ್ನಾಗಿ ಕರೆಯಬಹುದು. ಆದರೆ ನಿಜ ಜೀವನದ ಹಾಗೆ ವರ್ಚುಯಲ್ ಯುಗದಲ್ಲೂ ಮೌಲ್ಯಕ್ಕೆ ಮಾತ್ರ ಬೆಲೆ.
ಇದು ಮೆಟಾವರ್ಸ್‌ನ ಅರಿಯುವುದಕ್ಕೆ ಮಾಡಿದ ಯತ್ನ. ಇದು ಒಂದು ಚಿಕ್ಕ ಇಣುಕು ಅಷ್ಟೇ. ದಿನದಿಂದ ದಿನಕ್ಕೆ ಇದರ ಆಳ ವಿಸ್ತಾರ ಗ್ರಹಿಕೆ ಪರಿಣಾಮ ಇನ್ನಷ್ಟು ನವೀಕರಣಗೊಳ್ಳುತ್ತಿದೆ. ಜಗತ್ತಿನ ಅತ್ಯಂತ ಪ್ರಮುಖ ಕಂಪನಿಗಳು ತಮ್ಮ ದೃಷ್ಟಿ ಈ ಮೆಟಾವರ್ಸ್ ಮೇಲಿರಿಸಿದ್ದಾರೆ ಹಾಗು ಬಹಳ ನಿಕಟವಾಗಿ ಗಮನಿಸುತ್ತಿದ್ದಾರೆ.
ಇದು ಏಕೆ, ಮೆಟಾವರ್ಸ್ ಹುಟ್ಟಿಕೊಂಡಿದ್ದಾದರೂ ಹೇಗೆ? ಇಷ್ಟು ಜನಪ್ರಿಯಗೊಂಡದ್ದು ಹೇಗೆ? ಇದರ ಪ್ರಭಾವ ಎಂಥದು? ಒಂದು ಸಂಜೆಯ ಕಥೆಯಲ್ಲಿ “ನೀವು” ಎಂದರೆ ನಿಮ್ಮನ್ನೇ ಬಲು ನಿಕಟವಾಗಿ ಹೋಲುವ “ಅವತಾರ” ಎಂತಹುದು? ಬಲು ಮುಖ್ಯವಾಗಿ ಕನ್ನಡ ಜಗತ್ತಿಗೆ ಇದನ್ನು ಹೇಗೆ ಒಪ್ಪಿಕೊಳ್ಳಬೇಕು, ಅಪ್ಪಿಕೊಳ್ಳಬೇಕು ಹಾಗು ಆವಿಷ್ಕರಿಸಬೇಕು? ಎಲ್ಲವನ್ನು ಮುಂಬರುವ ಅಂಕಣದಲ್ಲಿ ವಿವರವಾಗಿ ನೋಡೋಣ.