ʼʼಸರ್ಕಾರ ನಡೆಸುವವರು ಎರಡು ವಿಷಯಗಳ ಕುರಿತು ಹೆಚ್ಚು ಗಮನ ಹರಿಸಬೇಕು. ಮೊದಲನೆಯದು ಸಂಪನ್ಮೂಲಗಳನ್ನು ಸಂರಕ್ಷಿಸುವುದು ಹಾಗೂ ಸಾರ್ವಜನಿಕ ಸೇವೆಯ ಘನತೆಯನ್ನು ಕಾಪಾಡುವುದು!ʼʼ
– ಇದು ಸಿಂಗಾಪುರದ ಪ್ರಧಾನಮಂತ್ರಿ ಲೀ ಸೀನ್ ಲೂಂಗ್ (lee hsien loong) ಅವರ ಸಾರ್ವಕಾಲಿಕ ಭಾಷಣದಿಂದ ಆಯ್ದ ಮಾತು. ಈ ಭಾಷಣಕ್ಕೆ ಈಗ 7 ವರ್ಷ 5 ತಿಂಗಳು ತುಂಬಿದೆ. ಈ ಭಾಷಣ ಮಾಡಿದವರು ಅಂದಿನ ಸಿಂಗಾಪುರದ ಪ್ರಧಾನಮಂತ್ರಿ ಲೀ ಸೀನ್ ಲೂಂಗ್. ಅಂದಿನ ಅಷ್ಟೆ ಅಲ್ಲ, ಇಂದಿನ ಪ್ರಧಾನಿ ಸಹ ಅವರೆ. ಕಳೆದ 18 ವರ್ಷ 308 ದಿನಗಳಿಂದಲೂ ಸಿಂಗಾಪುರಕ್ಕೆ ಅವರೇ ಪ್ರಧಾನಿಯಾಗಿದ್ದಾರೆ. 2004ರಲ್ಲಿ ಪ್ರಧಾನಿಯಾದ ನಂತರ 2016ರಲ್ಲಿ ಅಲ್ಲಿನ ಸಂಸತ್ತಿನಲ್ಲಿ ಭಾಷಣ ಮಾಡಿದಾಗ ಲೀ ಅವರಿಗೆ 64 ವರ್ಷ. ಈಗ 71 ವರ್ಷ. ಸಿಂಗಾಪುರ ಎನ್ನುವುದು ಇಂದಿನ ಮಟ್ಟಿಗೆ ಅಭಿವೃದ್ಧಿಯ ಮಾದರಿ. ಕೇವಲ ಅಭಿವೃದ್ಧಿ ಅಲ್ಲ, ಸುಸ್ಥಿರ ಹಾಗೂ ಆರೋಗ್ಯಕರವಾದ ಅಭಿವೃದ್ಧಿಯದು!
ಹೌದು. ಅಭಿವೃದ್ಧಿ ಎನ್ನುವುದು ಈಗ ಸಕಾರಾತ್ಮಕ ಪದವಾಗಿ ಉಳಿದಿಲ್ಲ. ಭಾರತದಲ್ಲಂತೂ ಅಭಿವೃದ್ಧಿ ಹೆಸರಿನಲ್ಲಿ ಮಾಡದ ಅನಾಚಾರಗಳೇ ಇಲ್ಲ. ಅಭಿವೃದ್ಧಿ ಹೆಸರಿನಲ್ಲೇ ರಸ್ತೆಯನ್ನು ಮಾಡಿಸಿದವರು, ಅದೇ ಅಭಿವೃದ್ಧಿ ಹೆಸರಿನಲ್ಲಿ ನೀರಿನ ಪೈಪ್ ಹಾಕಲು ಹೊಸ ರಸ್ತೆಯನ್ನು ಅಗೆಸಿದರು. ಬಳಿಕ ಅಗೆದಿರುವ ಈ ರಸ್ತೆಯನ್ನು ಸಪ್ಪಟ ಸುಂದರವಾಗಿಸಲು ಮತ್ತೆ ಟೆಂಡರ್ ಕರೆದರು. ತಾಲೂಕು ಆಸ್ಪತ್ರೆಗಳಲ್ಲಿ ಎಕ್ಸ್ ರೇ ಯಂತ್ರ ಇರುವುದು ಅಭಿವೃದ್ಧಿ ಎಂದು ಹೇಳಿ, ಅದನ್ನು ಆಸ್ಪತ್ರೆಗೆ ತಂದಿಟ್ಟು ಟೇಪ್ ಕತ್ತರಿಸಿ ಭಾಷಣ ಬಿಗಿದರು. ಬಳಿಕ ಈ ಯಂತ್ರವನ್ನು ಆಪರೇಟ್ ಮಾಡಲು ಸಿಬ್ಬಂದಿ ನೇಮಿಸಬೇಕು ಎನ್ನುವುದನ್ನು ಪ್ರಜ್ಞಾಪೂರ್ವಕವಾಗಿ ಮರೆತರು. ಮನೆಗೊಂದು ಶೌಚಾಲಯ ಇರುವುದು ಅಭಿವೃದ್ಧಿಯ ಸಂಕೇತ ಎಂದು ವ್ಯಾಖ್ಯಾನಿಸಿ, ಎಲ್ಲ ಮನೆಗಳಿಗೂ ಫ್ರೀಯಾಗಿ ಶೌಚಾಲಯ ಕಟ್ಟಿಸಿಕೊಟ್ಟ ಸರ್ಕಾರಕ್ಕೆ, ಉತ್ತರ ಕರ್ನಾಟಕದಲ್ಲಿ ಶೌಚಾಲಯಕ್ಕೆ ನೀರಿಲ್ಲ ಎಂಬುದು ಗೊತ್ತಾಗಲಿಲ್ಲ. ಶೌಚಾಲಯಕ್ಕಿರಲಿ, ಕೆಲವು ಕಡೆ ಕುಡಿಯುವ ನೀರಿಗೂ ತತ್ವಾರ. ಬಹಿರ್ದೆಶೆ ಶೌಚಕ್ಕೆ ಹೋಗಲು ಒಂದು ಚೊಂಬು ನೀರು ಬಳಸಲೂ ಹಿಂದೆ ಮುಂದೆ ನೋಡುತ್ತಿದ್ದ ಗ್ರಾಮಗಳಲ್ಲಿ ಶೌಚಾಲಯಕ್ಕೆ ಐದು ಲೀಟರ್ ಬಳಸುತ್ತಾರೆಯೇ ಎಂಬ ಸಾಮಾನ್ಯ ಜ್ಞಾನವೂ ಇಲ್ಲದೇ ಹೋಯಿತು. ಸರ್ಕಾರದ ಲೆಕ್ಕದಲ್ಲಿ ದೇಶದ ಎಲ್ಲ ಗ್ರಾಮಗಳೂ ಬಯಲು ಶೌಚ ಮುಕ್ತವಾದವು. ಈ ಬಯಲು ಶೌಚ ಮುಕ್ತದ ಘೋಷಣೆಗಳನ್ನು ಕಂಡು ಆ ಶೌಚಾಲಯಗಳಲ್ಲಿದ್ದ ಕುರಿ ಮೇಕೆಗಳು, ಒಟ್ಟಿದ್ದ ಸೌದೆ ಬೆರಣಿಗಳು ಪಕಪಕನೆ ನಗುತ್ತಿದ್ದವು. ಹೌದಲ್ವಾ, ಶೌಚಾಲಯಕ್ಕೆ ನೀರು ಅವಶ್ಯಕ ಎಂದು ಅರಿತ ಸರ್ಕಾರ ಈಗ ಪ್ರತಿ ಮನೆಗೆ ನೀರು ಒದಗಿಸುತ್ತಿದೆ. ಸದ್ಯ ಈಗಲಾದರೂ ಸರ್ಕಾರಗಳಿಗೆ ಕಿವಿ ಕೇಳಿಸಿತಲ್ಲ ಎನ್ನುವುದೊಂದೇ ಸಮಾಧಾನ. ಇವೆಲ್ಲವೂ ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಅಪಸವ್ಯಗಳ ಸರಣಿ ಸ್ಯಾಂಪಲ್.
ಹಾಗಾಗಿ ಇತ್ತೀಚಿನ ದಿನಗಳಲ್ಲಿ ಸುಸ್ಥಿರ ಅಭಿವೃದ್ಧಿ ಎಂಬ ಮಾತು ಚಾಲ್ತಿಗೆ ಬಂದಿದೆ. ಸುಸ್ಥಿರ ಎಂದರೆ ಏನು? ದೀರ್ಘಕಾಲಕ್ಕೆ ಒಳಿತನ್ನೇ ಮಾಡುತ್ತ ಮುಂದುವರಿಯುವ ವ್ಯವಸ್ಥೆ. ಅಂದರೆ ಸಾಲ ಮಾಡಿಯಾದರೂ ತುಪ್ಪ ತುನ್ನುವ ಚಾರ್ವಾಕ ಸಿದ್ಧಾಂತವಲ್ಲ. ಮಹಾತ್ಮಾ ಗಾಂಧಿ ಹೇಳಿದ ಟ್ರಸ್ಟಿಶಿಪ್ ಸಿದ್ಧಾಂತ. ನಮಗೆ ಮುಂದಿನ ಜನ್ಮ ಎನ್ನುವುದು ಇಲ್ಲ, ಇರುವವರೆಗೆ ಚೆನ್ನಾಗಿ ಮಜಾ ಮಾಡಿ ಹೋಗು ಎನ್ನುತ್ತಾನೆ ಚಾರ್ವಾಕ. ಆದರೆ ಗಾಂಧೀಜಿ ಹಾಗಲ್ಲ. ಒಮ್ಮೆ ಗಾಂಧೀಜಿ ಹಾಗೂ ನೆಹರೂ ಅಲಹಾಬಾದಿನಲ್ಲಿದ್ದರು. ಮಾತಿನ ನಡುವೆ ಮುಖವನ್ನು ಸ್ವಚ್ಛಗೊಳಿಸಿಕೊಳ್ಳಲು ಒಂದು ಚೊಂಬು ನೀರನ್ನು ಗಾಂಧೀಜಿ ತೆಗೆದುಕೊಂಡರು. ಮಾತಿನ ಭರದಲ್ಲಿ ಹೆಚ್ಚು ನೀರು ಹರಿದುಹೋಯಿತು, ಮುಖ ಸ್ವಚ್ಛಗೊಳಿಸುವಿಕೆ ಪೂರ್ಣ ಆಗಲೇ ಇಲ್ಲ ಎನ್ನುವುದು ಚೊಂಬು ಖಾಲಿಯಾದಾಗಲೇ ಗಾಂಧೀಜಿಗೆ ಗೊತ್ತಾಗಿದ್ದು. ಇದನ್ನು ಕಂಡ ನೆಹರೂ, ಇರಿ ಮತ್ತೊಂದು ಚೊಂಬು ನೀರು ಕೊಡುತ್ತೇನೆ ಎಂದರು. ಅದಕ್ಕೆ ಗಾಂಧೀಜಿ, ಹಾಗಾದರೆ ನಾನು ಒಂದು ಚೊಂಬು ನೀರು ವ್ಯರ್ಥ ಮಾಡಬೇಕೆ? ಎಂದು ಕೇಳಿದರು. ಅದಕ್ಕೆ ನೆಹರೂ, ನಮ್ಮ ಅಲಹಬಾದಿನಲ್ಲಿ ಒಂದಲ್ಲ, ಎರಡಲ್ಲ ಮೂರು ನದಿಗಳು. ಅಂದರೆ ಗಂಗೆ, ಯಮುನೆ ಹಾಗೂ ಸರಸ್ವತಿಯರು ಹರಿಯುತ್ತಾರೆ, ಒಂದು ಚೊಂಬಿನಿಂದ ಏನೂ ಆಗುವುದಿಲ್ಲ ಎಂದು ಹಾಸ್ಯದ ಧಾಟಿಯಲ್ಲಿ ಹೇಳುತ್ತಾರೆ. ಆದರೆ ಗಾಂಧೀಜಿಗೆ ಇದು ಹಾಸ್ಯವಲ್ಲ. ನಿಮ್ಮ ಅಲಹಾಬಾದಿನಲ್ಲಿ ಮೂರು ನದಿ ಇರಬಹುದು, ಅದರಲ್ಲಿ ಯಥೇಚ್ಚ ನೀರೂ ಇರಬಹುದು. ಆದರೆ ಆ ನೀರಿನಲ್ಲಿ ನನಗೆ ಬಳಸಲು ಇರುವ ಅಧಿಕಾರ ಒಂದು ಚೊಂಬು ಮಾತ್ರ. ಇಂದಿನ ಅಧಿಕಾರವನ್ನು ನಾನು ಬಳಸಿದ್ದೇನೆ, ಅಷ್ಟೇ ಸಾಕು ಎನ್ನುತ್ತಾರೆ. ಇದನ್ನು ಸುಸ್ಥಿರ ಅಭಿವೃದ್ಧಿ ಎನ್ನುತ್ತಾರೆ. ನಾವು ತಿಂದು ತೇಗುವುದಲ್ಲ, ಮುಂದಿನ ಪೀಳಿಗೆಗೂ ಉಳಿಸಬೇಕು ಎನ್ನುವುದು ಭಾರತದ ನೀತಿ. ಹಾಗೆ ನೋಡಿದರೆ ಇದು ನಮ್ಮ ಸಂಸ್ಕೃತಿಯಷ್ಟೇ ಅಲ್ಲ, ಚೀನಾ ಜಪಾನ್, ಮಲೇಷ್ಯಾ ಸೇರಿ ಒಟ್ಟಾರೆ ಪೂರ್ವ ದೇಶಗಳ ಸಂಸ್ಕೃತಿಯಲ್ಲೂ ಈ ಆಶಯವಿದೆ.
ಸಿಂಗಾಪುರ ಕಥೆಗೆ ಮತ್ತೆ ಮರಳೋಣ. ಅಂದು ರಾಷ್ಟ್ರಪತಿಯವರ ಭಾಷಣದ ಪ್ರಸ್ತಾವನೆ ಬೆಂಬಲಿಸಿ ಮಾತನಾಡುತ್ತಿದ್ದವರು ಲೀ ಸೀನ್ ಲೂಂಗ್. ದೇಶವನ್ನು ಹೇಗೆ ನಡೆಸಬೇಕು, ವಿವಿಧ ಧಾರ್ಮಿಕ ವಿಚಾರಗಳನ್ನು ಹೇಗೆ ನಿರ್ವಹಣೆ ಮಾಡಬೇಕು ಎನ್ನುವುದರ ಕುರಿತು ಒಂದು ಗಂಟೆ 28 ನಿಮಿಷ ಹಾಗೂ 29 ಸೆಕೆಂಡು ಮಾತನಾಡಿದರು. ಇದರ ಸಂಪೂರ್ಣ ವಿಡಿಯೊ ಯೂಟ್ಯೂಬಿನಲ್ಲಿದೆ. ಅದರಲ್ಲಿ ನನಗೆ ಪ್ರಮುಖವಾಗಿ ಅನಿಸಿದ್ದು ಹಾಗೂ ಇವತ್ತಿಗೂ ಸರಿ ಎನಿಸುತ್ತಿರುವ ಮಾತಿದು- “ಸರ್ಕಾರ ನಡೆಸುವವರು ಎರಡು ವಿಷಯಗಳ ಕುರಿತು ಹೆಚ್ಚು ಗಮನ ಹರಿಸಬೇಕು. ಮೊದಲನೆಯದು ಸಂಪನ್ಮೂಲಗಳನ್ನು ಸಂರಕ್ಷಿಸುವುದು ಹಾಗೂ ಸಾರ್ವಜನಿಕ ಸೇವೆಯ ಘನತೆಯನ್ನು ಘನತೆಯನ್ನು ಕಾಪಾಡುವುದು!” ಇದಕ್ಕೆ ಒಂದು ಉದಾಹರಣೆಯನ್ನೂ ಲೀ ನೀಡುತ್ತಾರೆ. 10 ವರ್ಷದ ಹಿಂದೆ ಆಸ್ಟ್ರೇಲಿಯಾದಲ್ಲಿ ಒಂದು ಸಾಂಪ್ರದಾಯಿಕ ಮನಸ್ಥಿತಿಯ ಸರ್ಕಾರವಿತ್ತು. ಅದು ಭವಿಷ್ಯದ ಎಷ್ಟೋ ವರ್ಷಗಳಿಗೆ, ಪಿಂಚಣಿಗೆ ಆಗುವಷ್ಟು ಯಥೇಚ್ಚ ಸಂಪನ್ಮೂಲವನ್ನು ಸಂಗ್ರಹಿಸಿತ್ತು. ಆದರೆ ಮುಂದಿನ ಚುನಾವಣೆ ವೇಳೆಗೆ ಜನರ ನಿರೀಕ್ಷೆಗಳು ಬದಲಾಗಿದ್ದವು. ಅದಕ್ಕಾಗಿ ಆಡಳಿತ ಹಾಗೂ ಪ್ರತಿ ಪಕ್ಷಗಳು ಯದ್ವಾತದ್ವ ಉಚಿತ ಘೋಷಣೆಗಳ ಹರಾಜು ಹಾಕಿದವು. ಇದರಿಂದಾಗಿ ಎಲ್ಲ ಸಂಪನ್ಮೂಲಗಳೂ ಕರಗಿಹೋಗಿ ಆ ದೇಶವು ಸಾಲದ ಸುಳಿಗೆ ಸಿಲುಕಿತು. ಹಾಗಾಗಿ ಸರ್ಕಾರ ನಡೆಸುವ ಒಂದು ಪಕ್ಷ ಅಧಿಕಾರಕ್ಕೆ ಬಂದು ಪೂರ್ಣ ಸಂಪನ್ಮೂಲವನ್ನು ಖಾಲಿ ಮಾಡುವ ಸ್ಥಿತಿ ಒಳ್ಳೆಯದಲ್ಲ. ಅದಕ್ಕಾಗಿ ಎರಡನೇ ಕೀಲಿಕೈ ರೀತಿ ಕೆಲಸ ಮಾಡಬೇಕು ಎಂದು ಲೀ ಹೇಳುತ್ತಾರೆ. ತಾನು ಸಂಪನ್ಮೂಲಗಳನ್ನು ವೆಚ್ಚ ಮಾಡಲು ಸಂಪೂರ್ಣ ಸ್ವಾತಂತ್ರ್ಯ ಇರುವುದು ಸರಿಯಲ್ಲ ಎಂದು ಇಲ್ಲಿ ವಾದಿಸುತ್ತಿರುವವರು ಪ್ರತಿಪಕ್ಷ ನಾಯಕರಲ್ಲ, ನ್ಯಾಯಾಂಗ ಅಲ್ಲ, ಚಿಂತಕರೂ ಅಲ್ಲ. ಸ್ವತಃ ಆ ಸಂಪನ್ಮೂಲವನ್ನು ಬಳಸಲು ಮುಖ್ಯ ಅಧಿಕಾರ ಹೊಂದಿರುವ ಪ್ರಧಾನಮಂತ್ರಿ. ಹಾಗಾಗಿಯೇ ಸಿಂಗಾಪುರ ಇಂದು ಸುಸ್ಥಿರ ಅಭಿವೃದ್ಧಿಯ ಒಂದು ಮಾದರಿಯಾಗಿದೆಯೇ ವಿನಃ ಅಮೆರಿಕ ಅಲ್ಲ.
ಇಷ್ಟೂ ದೊಡ್ಡ ಕಥೆ ಹೇಳಿದ್ದು ಏಕೆ ಎನ್ನುವುದು ಈಗಾಗಲೆ ಎಲ್ಲರಿಗೂ ಗೊತ್ತಾಗಿರುತ್ತದೆ. ಇದರಲ್ಲಿ ವಿಶೇಷವಾದದ್ದು, ಮುಚ್ಚಿಡುವಂಥದ್ದು ಏನೂ ಇಲ್ಲ. ಜನರ ಮತಗಳನ್ನು ಗಳಿಸಲು ಯದ್ವಾತದ್ವ ಗ್ಯಾರಂಟಿ ಘೋಷಣೆಗಳನ್ನು ಮಾಡಿದ ಕಾಂಗ್ರೆಸ್ ಪಕ್ಷ (congress guarantee) ಈಗ ಅಧಿಕಾರದಲ್ಲಿದೆ. ಆ ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ ಸುಮಾರು 59 ಸಾವಿರ ಕೋಟಿ ರೂ. ಬೇಕಾಗುತ್ತದೆ ಎಂಬ ಅಂದಾಜು ಸರ್ಕಾರದ್ದು. ಅದನ್ನು ಹೇಗೂ ಹೊಂದಿಸುತ್ತೇವೆ ಎನ್ನುತ್ತ ಸರ್ಕಾರ ಅನೇಕ ನಿಬಂಧನೆಗಳನ್ನು ವಿಧಿಸುತ್ತಿದೆ, ಅನ್ನ ಭಾಗ್ಯಕ್ಕೆ ಕೇಂದ್ರ ಸರ್ಕಾರ ಅಡ್ಡಗಾಲು ಹಾಕುತ್ತಿದೆ ಎಂಬ ನೆಪವನ್ನೂ ಶುರು ಮಾಡಿದೆ. ಇದು ಮುಖ್ಯ ವಿಷಯ ಅಲ್ಲ.
ಮೊದಲನೆಯದಾಗಿ, ಗ್ಯಾರಂಟಿ ಯೋಜನೆಗಳಿಂದಲೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎನ್ನಲು ಯಾವುದಾದರೂ ಬಲವಾದ ಸಾಕ್ಷಿಗಳಿವೆಯೇ? ಕಾಂಗ್ರೆಸ್ ಪಕ್ಷ ಗ್ಯಾರಂಟಿ ಘೋಷಣೆಗಳ ಜತೆಗೆ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಅಭಿಯಾನ ನಡೆಸಿತು, ಸ್ಥಳೀಯ ನಾಯಕತ್ವವನ್ನು ಮುಂದೆ ಮಾಡಿತು, ಇಬ್ಬರೂ ಕಿತ್ತಾಡಿಕೊಳ್ಳದಂತೆ ಎಚ್ಚರಿಕೆ ವಹಿಸಿತು, ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ಮಾಡಿದ್ದರು, ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದರು, ಇತ್ಯಾದಿ. ಅದೇ ಇನ್ನೊಂದು ಕಡೆ ಬಿಜೆಪಿ ಅತ್ಯಂತ ನಿಗೂಢವಾಗಿ ಸರ್ಕಾರ ನಡೆಸಿತು, ಸರ್ಕಾರ ನಡೆಯುತ್ತಿದೆಯೇ, ಹೇಗೆ ನಡೆಸಬೇಕು ಸರ್ಕಾರವನ್ನು ಎನ್ನುವುದಕ್ಕೆ ಅಪವಾದ ಎನ್ನುವಂತಿತ್ತು. ದಿಢೀರನೆ ಸಿಎಂ ಬದಲಾವಣೆ ಮಾಡಲಾಯಿತು, ಅದಕ್ಕೆ ಕಾರಣ ಗೊತ್ತಿಲ್ಲ. ಮತ್ತೊಬ್ಬರನ್ನು ಆಯ್ಕೆ ಮಾಡಲಾಯಿತು, ಅದಕ್ಕೂ ಕಾರಣ ಹೇಳಲಿಲ್ಲ. ಎಷ್ಟು ಸಮಯವಾದರೂ ಚುನಾವಣೆಗೆ ಗೆಲ್ಲುವಂಥ ಒಂದು ನೆರೇಟಿವ್ ಸೆಟ್ ಮಾಡಲೇ ಇಲ್ಲ, ಅದಕ್ಕೆ ಕಾರಣವೇ ಇಲ್ಲ. ಸರಿಯಾಗಿ ಪ್ರಚಾರ ಮಾಡಲಿಲ್ಲ, ಅನೇಕ ಸಮುದಾಯದ ನಾಯಕರುಗಳನ್ನು ಹೀನಾಯವಾಗಿ ನಡೆಸಿಕೊಂಡಿತು, ಅದಕ್ಕೂ ಕಾರಣ ಕೊಡಲಿಲ್ಲ. ಕೊನೆಗೆ ಟಿಕೆಟ್ ಹಂಚಿಕೆಯಲ್ಲಿ ಅನುಸರಿಸಿದ ಮಾನದಂಡ ಏನು ಎನ್ನುವುದನ್ನೂ ಜನರಿಗಿರಲಿ, ತನ್ನ ಕಾರ್ಯಕರ್ತರಿಗಿರಲಿ, ಕೊನೇಪಕ್ಷ ಟಿಕೆಟ್ ಕೈತಪ್ಪಿದ ನಾಲ್ಕಾರು ನಾಯಕರಿಗಾದರೂ ತಿಳಿಸಬೇಕು ಎಂಬ ಸೌಜನ್ಯವೂ ಇಲ್ಲವಾಯಿತು. ಇಂತಹ ಅನೇಕ ಯಡವಟ್ಟುಗಳು ಬಿಜೆಪಿ ಕಡೆಯಿಂದ ಇದ್ದವು. ಇನ್ನು, ಪ್ರತಿ ಬಾರಿಯೂ ತಾನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುತ್ತೇನೆ ಎನ್ನುತ್ತ 180-190ರಲ್ಲಿ ಸ್ಪರ್ಧಿಸಿ, 75-80 ಸೀಟುಗಳಲ್ಲಿ ಸೆಣೆಸಿ, ಕೊನೆಗೆ 55-60ರಲ್ಲಿ ಗಂಭೀರ ಸ್ಪರ್ಧೆ ಒಡ್ಡಿ 35-40 ಸೀಟು ಪಡೆಯುವ ಜೆಡಿಎಸ್ ಪಕ್ಷ ಇತ್ತು. ಅತಂತ್ರ ಸರ್ಕಾರ ನಿರ್ಮಾಣ ಆಗಬೇಕು ಎನ್ನುವ ಏಕೈಕ ಅಜೆಂಡಾ ಇಟ್ಟುಕೊಂಡದ್ದು ಆ ಪಕ್ಷದ ಮತದಾರರಿಗೆ ತಿಳಿಯಿತು, ಮುಂದಿನ ಪರ್ಯಾಯವಾಗಿ ಕೆಲವರು ಕಾಂಗ್ರೆಸನ್ನು, ಕೆಲವರು ಬಿಜೆಪಿಯನ್ನು ಆಯ್ಕೆ ಮಾಡಿಕೊಂಡರು. ಬಿಜೆಪಿಗೆ ಮತ ಬಂತು, ಆದರೆ ಜೆಡಿಎಸ್ ಓಟಿನ ನಷ್ಟದಿಂದಾಗಿ ಕಾಂಗ್ರೆಸ್ಗೆ ಹೆಚ್ಚು ಸೀಟು ಬಂದವು. ಒಂದು ಚುನಾವಣೆಯನ್ನು ಗೆಲ್ಲಲು ಹಾಗೂ ಸೋಲಲು ಇಂತಹ ನೂರಾರು, ಸಾವಿರಾರು ಕಾರಣಗಳಿರುತ್ತವೆ. ಆದರೆ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದರಿಂದಲೇ ಗೆದ್ದಿದ್ದು ಎಂದು ಅದ್ಯಾರು ತಲೆಗೆ ತುಂಬಿದರೋ, ಒಟ್ಟಿನಲ್ಲಿ ಅದನ್ನು ಈಡೇರಿಸಿಯೇ ತೀರಬೇಕು ಎಂದು ಸಿಎಂ ಸಿದ್ದರಾಮಯ್ಯ ಟೊಂಕ ಕಟ್ಟಿ ನಿಂತಿದ್ದಾರೆ.
ಎರಡನೆಯ ಪ್ರಶ್ನೆ, ಈ ಗ್ಯಾರಂಟಿ ಘೋಷಣೆಗಳನ್ನು ಮಾಡಲು ಆಧಾರ ಏನು? ಈ ಹಿಂದೆ ಎನ್‌ಡಿಎ ಸರ್ಕಾರ ಸರ್ವ ಶಿಕ್ಷಣ ಅಭಿಯಾನ ಘೋಷಣೆ ಮಾಡಿತು. ನಾಡಿನಲ್ಲಿ ಶುಲ್ಕದ ಕಾರಣಕ್ಕೆ ಶಿಕ್ಷಣದ ಪ್ರಮಾಣ ನಿರೀಕ್ಷಿತ ಏರಿಕೆ ಕಾಣುತ್ತಿಲ್ಲ, ಅದನ್ನು ಸರಿಪಡಿಸಬೇಕು ಎಂಬ ಕಾರಣಕ್ಕೆ ಯೋಜನೆ ಜಾರಿಯಾಯಿತು. ತಮಿಳುನಾಡಿನಲ್ಲಿ ಅಣ್ಣಾದೊರೈ ಕಾಲದಲ್ಲಿ ಬಿಸಿಯೂಟ ಜಾರಿ ಮಾಡಲಾಯಿತು. ಹಸಿವಿನಿಂದ ಜನರು ಬಳಲುತ್ತಿದ್ದಾರೆ ಎಂದು ತಿಳಿದ ಸರ್ಕಾರ ಬಿಸಿಯೂಟ ನೀಡುತ್ತೇವೆ ಎಂದಿದ್ದರಿಂದ, ಅದರ ಅಸೆಗೆಂದೇ ಬಂದ ಅನೇಕರು ಶಿಕ್ಷಿತರಾದರು, ಅದರಿಂದ ರಾಜ್ಯಕ್ಕೆ ಲಾಭವೇ ಆಯಿತು. ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ನರೇಗಾ ಯೋಜನೆ ಜಾರಿಯಾಯಿತು. ದೇಶದಲ್ಲಿ ಜನರ ಕೈಗೆ ಒಂದಿಷ್ಟು ಹಣ ಬೇಕಾಗಿದೆ. ಅವರು ಖರ್ಚು ಮಾಡಲು ಆರಂಭಿಸಿದರೆ ಆರ್ಥಿಕತೆ ಹಳಿಗೆ ಬರುತ್ತದೆ ಎನ್ನಿಸಿತು. ಆದರೆ ಪುಕ್ಕಟೆ ಹಣ ಕೊಡುವ ಬದಲಿಗೆ ಕೈ ಮೂಲಕ ಕೆಲಸ ಮಾಡುವ ನಿರ್ಧಾರ ಕೈಗೊಳ್ಳಲಾಯಿತು. ಕೆರೆ ಹೂಳು ತೆಗೆಯುವುದು, ಏರಿ ಕಟ್ಟುವುದು ಸೇರಿ ಅನೇಕ ಸಂಪನ್ಮೂಲ ನಿರ್ಮಾಣ ಮಾಡಿಸಿಕೊಂಡು ಹಣ ನೀಡಲಾಗುತ್ತಿದೆ. ಈ ಎಲ್ಲ ಹಾಗೂ ಇಂತಹ ಅನೇಕ ಯೋಜನೆಗಳ ಜಾರಿಗೂ ಮುನ್ನ ಸರ್ಕಾರದ ಬಳಿ ಒಂದಷ್ಟು ದತ್ತಾಂಶ, ಒಂದಷ್ಟು ಅಧ್ಯಯನ, ಪರಿಸ್ಥಿತಿಗೆ ಪರಿಹಾರದ ಸ್ವರೂಪ ಇರುತ್ತಿತ್ತು.
ಇಂದು ಕಾಂಗ್ರೆಸ್ ಸರ್ಕಾರ ಘೋಷಿಸಿದ ಐದು ಗ್ಯಾರಂಟಿಗಳಿಗೆ ಯಾವ ಆಧಾರವಿದೆ. ಸರ್ಕಾರವು ಗೃಹಿಣಿಯರಿಗೆ ಏಕೆ ಹಣ ಕೊಡುತ್ತಿದೆ? ಕೊಡಲೇಬೇಕಾದರೆ ಏಕೆ 2 ಸಾವಿರ ರೂ. ನೀಡಲಾಗುತ್ತಿದೆ? ಏಕೆ 4 ಸಾವಿರ ನೀಡಲಿಲ್ಲ? ಏಕೆ 500 ರೂ. ನೀಡಲಿಲ್ಲ? ಅನ್ನಭಾಗ್ಯದಲ್ಲಿ ಈಗಾಗಲೆ 5 ಕೆ.ಜಿ. ಅಕ್ಕಿ ಸಿಗುತ್ತಿದೆ. ಈ 5 ಕೆ.ಜಿ. ಸಾಕಾಗುತ್ತಿಲ್ಲ, 10 ಕೆ.ಜಿ. ನೀಡಬೇಕು ಎಂದು ಹೇಳಿದ್ದು ಯಾರು? ಯುವಕರಿಗೆ ನಿರುದ್ಯೋಗ ಭತ್ಯೆ ನೀಡುವುದು ಒಳ್ಳೆಯದು ಎಂದು ತಿಳಿಸಿದವರು ಯಾರು? ನಿರುದ್ಯೋಗ ಭತ್ಯೆ ನೀಡುವುದರಿಂದ ನಿರುದ್ಯೋಗ ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳಲು ಯಾವ ದತ್ತಾಂಶ ಇದೆ? ಮನೆಯ ವಿದ್ಯುತ್ ಬಿಲ್ ಫ್ರೀ ಎಂದು ಘೋಷಿಸಲಾಯಿತು. 200 ಯುನಿಟ್ಟೇ ಏಕೆ? ಏಕೆ 300 ಇಲ್ಲ? ಹಾಗೆಯೇ ಏಕೆ 100 ಇಲ್ಲ? ಹೋಗಲಿ, ಮಹಿಳೆಯರಿಗೆ ಬಸ್ ಪ್ರಯಾಣ ಉಚಿತಗೊಳಿಸುವ ಮುನ್ನ ಯಾವ ಸಂಶೋಧನೆ ನಡೆದಿತ್ತು? ಮಣ್ಣಂಗಟ್ಟಿ, ಏನೂ ಇಲ್ಲ. ಅರ್ಥಶಾಸ್ತ್ರದ ಭಾಷೆಯಲ್ಲಿ ಹೇಳಬೇಕು ಎಂದರೆ, ಡಿಮ್ಯಾಂಡ್ ಸರ್ವೆಯೇ ನಡೆದಿಲ್ಲ.
ಇದನ್ನೂ ಓದಿ: ವಿಸ್ತಾರ ಅಂಕಣ: ಪಠ್ಯ ಪುಸ್ತಕ ಪರಿಷ್ಕರಣೆ ಎಂದರೆ ಮಕ್ಕಳ ಆಟ ಎಂದುಕೊಂಡಿದೆಯೇ ಸರ್ಕಾರ?
ಸರ್ಕಾರ ಬಂದ ಕೂಡಲೆ ನಡೆದ ಮೊದಲ ಸಂಪುಟ ಸಭೆಯಲ್ಲಿ ಎಲ್ಲ ಐದು ಯೋಜನೆಗಳಿಗೂ ತಾತ್ವಿಕ ಒಪ್ಪಿಯನ್ನಷ್ಟೇ ನೀಡಲಾಯಿತು. ಏಕೆಂದರೆ ಈ ಯೋಜನೆಗೆ ಎಷ್ಟು ಫಲಾನುಭವಿಗಳಿದ್ದಾರೆ? ಎಷ್ಟು ಹಣ ಬೇಕಾಗುತ್ತದೆ? ಇದರಿಂದ ಆರ್ಥಿಕತೆಗೆ ತಕ್ಷಣಕ್ಕೆ ಆಗುವ ನಷ್ಟವೇನು? ದೂರಗಾಮಿಯಾಗಿ ಆಗುವ ಲಾಭವೇನು? ಯಾವ ಲೆಕ್ಕವೂ ಇರಲಿಲ್ಲ. ಬರಿಗೈಲಿದ್ದ ಸರ್ಕಾರ ನಂತರ ಒಂದು ವಾರದ ಸರಣಿ ಸಭೆಗಳನ್ನು ಮಾಡಿ ದತ್ತಾಂಶ ಸಂಗ್ರಹಿಸಿತು. ಓಹೊ, 200 ಯುನಿಟ್ ಹಾಗೆಯೇ ಕೊಟ್ಟರೆ ಹಣ ಹೊಂದಿಸುವುದು ಕಷ್ಟ, ಹಾಗಾಗಿ ಒಂದಷ್ಟು ಟ್ರಿಕ್ಸ್ ಮಾಡಿ ನಿಬಂಧನೆ ವಿಧಿಸೋಣ ಎಂದು ನಿರ್ಧರಿಸಲಾಯಿತು. ಎಲ್ಲ ನಿರುದ್ಯೋಗಿಗಳಿಗೂ ಭತ್ಯೆ ನೀಡಿದರೆ ಸರ್ಕಾರವೇ ನಿರುದ್ಯೋಗಿ ಆಗುತ್ತದೆ ಎಂದು ಅರಿವಿಗೆ ಬಂದು, ಕೇವಲ ಈ ವರ್ಷ ಪದವಿ ಗಳಿಸಿದವರಿಗೆ ಎಂದು ಹೇಳಲಾಯಿತು. ಅಂದರೆ ಈ ಯೋಜನೆಗಳನ್ನು ಯಾವ ಸಾಮಾಜಿಕ, ಆರ್ಥಿಕ ಅಧ್ಯಯನದೊಂದಿಗೆ ಘೋಷಣೆ ಮಾಡಿದ್ದಲ್ಲ. ಅದ್ಯಾರೋ ರಾಜಕೀಯ ತಂತ್ರಗಾರರು ಬಂದರು. ಅವರು ಜನರನ್ನು ಮಂಗ ಮಾಡಿ ನಿಮ್ಮನ್ನು ಗೆಲ್ಲಿಸುವುದು ಹೇಗೆ ಎಂದು ಐಡಿಯಾ ಕೊಟ್ಟರು, ಇವರು ಅದನ್ನು ಪಾಲಿಸಿದರು. ಇದು ಕಾಂಗ್ರೆಸ್ ಹಣೆಬರಹ ಮಾತ್ರ ಅಲ್ಲ. ಬಿಜೆಪಿಯೂ ಅಷ್ಟೆ. ಉಚಿತ ಘೋಷಣೆ ಮಾಡಿದರೆ ಆರ್ಥಿಕತೆ ಬರಿದಾಗುತ್ತದೆ ಎನ್ನುತ್ತಿರುವ ಬಿಜೆಪಿಯೂ ತನ್ನ ಪ್ರಣಾಳಿಕೆಯಲ್ಲಿ ಪ್ರತಿನಿತ್ಯ ಅರ್ಧ ಲೀಟರ್ ಹಾಲು ಉಚಿತ ಎಂದು ಘೋಷಿಸಿತ್ತು. ಸದ್ಯ ಆ ಪಕ್ಷ ಅಧಿಕಾರಕ್ಕೆ ಬರಲಿಲ್ಲ. ಹಾಗೇನಾದರೂ ಅಧಿಕಾರಕ್ಕೆ ಬಂದಿದ್ದರೆ ಈ ಅರ್ಧ ಲೀಟರ್ ಹಾಲಿಗೆ ಫಲಾನುಭವಿಗಳನ್ನು ಹೇಗೆ ಹುಡುಕುತ್ತಿತ್ತೊ? ಅದೆಷ್ಟು ನಕಲಿ ಫಲಾನುಭವಿಗಳು ಹುಟ್ಟಿಕೊಳ್ಳುತ್ತಿದ್ದರೊ? ಅದರಲ್ಲಿ ಇನ್ನೊಂದಿಷ್ಟು ಭ್ರಷ್ಟಾಚಾರ ಆಗಿ ಹಾಲಾಹಲವೇ ಸೃಷ್ಟಿಯಾಗುತ್ತಿತ್ತು. ಇಂದಿರಾ ಕ್ಯಾಂಟೀನ್ ಮಾಡಿದ್ದರಿಂದ ಜನರು ಸೋಮಾರಿ ಆಗುತ್ತಾರೆ ಎಂದವರು ಅದಕ್ಕೆ ಅಟಲ್ ಆಹಾರ ಕೇಂದ್ರ ಎಂದು ಹೆಸರಿಡುವುದಾಗಿ ಹೇಳಿದ್ದರು. ವರ್ಷಕ್ಕೆ ಮೂರು ಬಾರಿ ಅದೂ ಹಬ್ಬದ ಸಮಯದಲ್ಲಿ ಸಿಲಿಂಡರ್ ಉಚಿತವಾಗಿ ಕೊಡುವುದಾಗಿ ಹೇಳಿತ್ತು ಬಿಜೆಪಿ. ಕೇಂದ್ರ ಸರ್ಕಾರ 2020-21ರಿಂದಲೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಹೆಸರಿನಲ್ಲಿ ರೈತರ ಖಾತೆಗೆ ವರ್ಷಕ್ಕೆ 6 ಸಾವಿರ ರೂ. ನೀಡುತ್ತಿದೆ. ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಸದುದ್ದೇಶದಿಂದ ಹೆಚ್ಚುವರಿ 4 ಸಾವಿರ ರೂ. ಸೇರಿಸಿ 10 ಸಾವಿರ ರೂ. ಕೊಡಲಾಗುತ್ತಿದೆ. ರೈತರಿಗೆ ಹಣ ಕೊಟ್ಟಿದ್ದು, ಬೇಜಾರಿಲ್ಲ. ಆದರೆ ಇದಕ್ಕೆ ಯಾವುದಾದರೂ ಅಧ್ಯಯನ ನಡೆದಿದೆಯೇ? ಇಷ್ಟು ಹಣವನ್ನು ಕೊಟ್ಟಾಕ್ಷಣ ಅವರ ಬಾಳಿನಲ್ಲಿ ಆದ ಬದಲಾವಣೆ ಏನು? ರೈತರ ಆತ್ಮಹತ್ಯೆ ನಿಂತಿದೆಯೇ? ರೈತರು ಖಷಿಯಾಗಿದ್ದಾರೆಯೇ? ಕೃಷಿ ಗುಣಮಟ್ಟ ಹೆಚ್ಚಾಗಿದೆಯೇ? ಯಾವ ಸಮೀಕ್ಷೆ, ದತ್ತಾಂಶ ಇದೆ? ಏನೂ ಇಲ್ಲ.
ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲರ ಪಿಂಚಣಿ, ಆಸಿಡ್ ದಾಳಿಗೊಳಗಾದವರಿಗೆ ಧನಸಹಾಯ ಸೇರಿ ಅನೇಕ ಸಾಮಾಜಿಕ ಸಹಾಯ ಯೋಜನೆ, ಪಿಂಚಣಿಯನ್ನು ರೂಪಿಸಲು ಒಂದು ಆಧಾರ ಇರುತ್ತಿತ್ತು. ಆದರೆ ಈಗ ರಾಜಕೀಯ ಪಕ್ಷಗಳಿಗೆ ಅದ್ಯಾವುದೂ ಬೇಕಾಗಿಲ್ಲ. ಏನು ಹೇಳಿದರೆ ಜನ ಓಟ್ ಹಾಕುತ್ತಾರೆ ಎಂದು ಯೋಚಿಸುವುದು, ಮತ್ತಷ್ಟು ಸೇರಿಸಿ ಕ್ಷಣಿಕ ಸುಖ ತೋರಿಸುವುದು. ಆದರೆ ದೂರಗಾಮಿಯಾಗಿ ಇದು ಯಾರಿಗೆ ನಷ್ಟ? ರಾಜ್ಯದ ಆರ್ಥಿಕ ಸ್ಥಿತಿ ಏನಾಗಬಹುದು? ಯಾರಿಗೂ ಬೇಕಾಗಿಲ್ಲ. ಈ ದೇಶ, ಈ ರಾಜ್ಯ ಎನ್ನುವುದನ್ನು ಹರಾಜು ಮಾಡಲು ನಾವ್ಯಾರೂ ಈ ರಾಜಕಾರಣಿಗಳಿಗೆ ಬರೆದುಕೊಟ್ಟಿಲ್ಲ. ಧರ್ಮದರ್ಶಿ ಮಾದರಿಯಲ್ಲಿ ನಿರ್ವಹಣೆ ಮಾಡಿ ಮುಂದಿನ ಪೀಳಿಗೆಗೆ ಕೊಟ್ಟು ಹೋಗಬೇಕು ಎನ್ನುವುದಷ್ಟೆ ಜನರು ನೀಡಿರುವ ಅಧಿಕಾರ. ಅದನ್ನು ಮೀರಿ ವರ್ತನೆ ಮಾಡುತ್ತಿದ್ದರೆ ಕಿವಿ ಹಿಂಡಿ ಕೇಳಬೇಕಾದದ್ದು ನಮ್ಮೆಲ್ಲರ, ಅಂದರೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಅಲ್ಲವೇ?
ಹಳ್ಳಿ ಕಡೆ ಒಂದು ಮಾತಿದೆ- ಹರುಷದ ಕೂಳಿಗಾಗಿ ವರುಷದ ಕೂಳನ್ನು ಮರೆಯಬಾರದು. ಚುನಾವಣೆ ಗೆಲ್ಲುವ ಹರುಷದಲ್ಲಿ ರಾಜಕೀಯ ಪಕ್ಷಗಳು ನೀಡುವ ಕೊಡುಗೆಗಳು ಒಂದು ರೀತಿ ಹರುಷದ ಕೂಳೇ ಅಲ್ಲವೇ? ವರುಷದ ಕೂಳಿನ ಬಗ್ಗೆ ಯೋಚಿಸೋಣ.
ಇದನ್ನೂ ಓದಿ: ವಿಸ್ತಾರ ಅಂಕಣ: ವಿದೇಶದಲ್ಲಿ ಕಾಲಿಟ್ಟ ತಕ್ಷಣ ರಾಹುಲ್ ಗಾಂಧಿ ಭಾರತ ವಿರೋಧಿ ಆಗುವುದೇಕೆ?