ಬೆಂಗಳೂರು: ಭಯೋತ್ಪಾದಕ ಚಟುವಟಿಕೆಗಳ ಕುರಿತು ಕೆ.ಜಿ. ಹಳ್ಳಿಯಲ್ಲಿ ದಾಖಲಾಗಿರುವ ದೂರಿಗೆ ಸಂಬಂಧಿಸಿ ನಡೆಸಲಾಗುತ್ತಿರುವ ತನಿಖೆಯಲ್ಲಿ ಪೊಲೀಸರ ಕೈ ಸೇರಿರುವ ಆರೋಪಿಗಳ ಮೊಬೈಲ್ ರಿಟ್ರೀವ್ ರಿಪೋರ್ಟ್‌ನಿಂದ ಸಾಕಷ್ಟು ರಹಸ್ಯ ಮಾಹಿತಿಗಳು, ಸ್ಫೋಟಕ ಸುಳಿವುಗಳು ಲಭ್ಯವಾಗಿವೆ.
ರಾಜ್ಯಾದ್ಯಂತ ನಡೆಸಲು ಉದ್ದೇಶಿಸಲಾಗಿದ್ದ ವಿಧ್ವಂಸಕ ಕೃತ್ಯಗಳ ಸಂಚಿನ ರಹಸ್ಯ 55 ಮೊಬೈಲ್‌ಗಳ ರಿಟ್ರೀವ್‌ನಿಂದ ಲಭ್ಯವಾಗಿದೆ. ಹಿಂದುತ್ವ ಹಾಗೂ ಆರ್‌ಎಸ್ಎಸ್ ಸಿದ್ಧಾಂತಗಳ ಬಗ್ಗೆ ಆರೋಪಿಗಳು ಚಾಟ್ ನಡೆಸಿದ್ದಾರೆ. ಕೆಲವು ಕಚೇರಿ ಹಾಗೂ ಮೊಬೈಲ್‌ಗಳಲ್ಲಿ ಹಿಂದೂ ಮುಖಂಡರ ಪೋಟೋಗಳು ಪತ್ತೆಯಾಗಿವೆ.
ರಾಜಕೀಯವಾಗಿ ಸಂಘಟನೆ ಬಲಪಡಿಸಲು ಟೆಕ್ನಿಕಲ್ ಆಗಿ ಆರೋಪಿಗಳು ಪ್ಲಾನ್ ಮಾಡಿದ್ದರು. ಹಿಜಾಬ್, ಹಲಾಲ್ ಕಟ್, ಆಜಾನ್ ವಿವಾದದ ಬಳಿಕ ಸಂಘಟನೆ ಮತ್ತಷ್ಟು ಚುರುಕಾಗಿತ್ತು. ಮಸಲ್ಮಾನರು ಮುಸಲ್ಮಾನರ ಬಳಿಯೇ ವ್ಯವಹಾರ ನಡೆಸುವಂತೆ ಚರ್ಚೆ ಹಾಗೂ ಪ್ರೇರೇಪಣೆ ನೀಡಲಾಗುತ್ತಿತ್ತು. ವಾರಕ್ಕೊಮ್ಮೆ ಸಭೆ ಆಯೋಜಿಸಲಾಗುತ್ತಿತ್ತು. ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಕಲಬುರಗಿ, ದಾವಣಗೆರೆ, ಉಡುಪಿ ಹಾಗೂ ಕೇರಳದಲ್ಲಿ ಸರಣಿ ಸಭೆಗಳ ಬಗ್ಗೆ ಚರ್ಚೆ ನಡೆಸಲಾಗಿತ್ತು. ಸಭೆ ಸೇರುವ ಹಿಂದಿನ ದಿನ ಆಯೋಜಕರಿಂದ ವಿಶೇಷ ಸೂಚನೆ ಬರುತ್ತಿತ್ತು. ಸಭೆಗೆ ಬರುವವರು ಬಸ್ಸಲ್ಲೇ ಬರಬೇಕು, ಮೊಬೈಲ್ ಇಲ್ಲದೇ ಬರಬೇಕೆಂದು ಸೂಚನೆ ನೀಡಲಾಗುತ್ತಿತ್ತು. ಎಲ್ಲಿ ಸೇರಬೇಕೆಂದು ನಿರ್ಧರಿಸಿದ್ದ ಸ್ಥಳದ ಲೊಕೇಷನ್ ಕಳಿಸಿದ ಬಳಿಕ ಅದನ್ನು ಡಿಲೀಟ್ ಮಾಡುತ್ತಿದ್ದರು. ಸಭೆ ಬಳಿಕ ತರಬೇತಿಯ ಬಗ್ಗೆಯೂ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ತರಬೇತಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಬಗ್ಗೆ ಪಾಠಗಳನ್ನು ಬೋಧಿಸಲಾಗುತ್ತಿತ್ತು. ಇವೆಲ್ಲವನ್ನೂ ಐ ಶ್ರೇಡರ್ ಆಪ್ ಮೂಲಕ ಡಿಲಿಟ್ ಮಾಡಲಾಗುತ್ತಿತ್ತು.
ಇದನ್ನೂ ಓದಿ | PFIಗೆ CCB ಶಾಕ್ | ಕೆ.ಜಿ. ಹಳ್ಳಿ ಪ್ರಕರಣದಲ್ಲಿ ಬಂಧಿತರಾದ 14 ಪಿಎಫ್‌ಐ ಮುಖಂಡರಿಗೆ 11 ದಿನ ಪೊಲೀಸ್ ಕಸ್ಟಡಿ
ಐ ಶ್ರೇಡರ್ ಆಪ್ ರಿಟ್ರೀವ್ ವರದಿಯಲ್ಲಿ ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದ ಆರೋಪಿಗಳೊಂದಿಗೆ ಇವರು ನಿರಂತರ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ. ಆರೋಪಿಗಳಿಗೆ ಬೇಲ್ ಕೊಡಿಸುವ ಬಗ್ಗೆಯೂ ಮಾತುಕತೆ ನಡೆಸಿರುವುದು ಗೊತ್ತಾಗಿದೆ. ರುದ್ರೇಶ್ ಕೊಲೆ ಪ್ರಕರಣದ ಆರೋಪಿಗಳೂ ಇವರ ಸಂಪರ್ಕದಲ್ಲಿರುವ ಸಾಧ್ಯತೆ ಬಗ್ಗೆ ತನಿಖೆ ಮುಂದುವರಿದಿದೆ.
ಹಣಕಾಸು ವ್ಯವಹಾರ ಯಾರ ಕಣ್ಣಿಗೂ ಬೀಳದಂತೆ ಆರೋಪಿಗಳು ನೋಡಿಕೊಳ್ಳುತ್ತಿದ್ದರು. ಗ್ರಾಮ, ತಾಲ್ಲೂಕು, ಜಿಲ್ಲಾಮಟ್ಟದಲ್ಲಿ ಸಂಘಟನೆ ವಿಸ್ತರಿಸುವ ಪ್ಲಾನ್ ನಡೆದಿತ್ತು. ಸ್ಥಳೀಯ ಮಟ್ಟದಲ್ಲೇ ಆರೋಪಿಗಳು ಹಣ ಸಂಗ್ರಹ ಹಾಗೂ ವೆಚ್ಚ ಮಾಡುತ್ತಿದ್ದರು. ಹೀಗಾಗಿಯೇ ದಾಳಿ ವೇಳೆ ಕೇವಲ 33 ಲಕ್ಷ ರೂ. ಪತ್ತೆಯಾಗಿತ್ತು. ಆರೋಪಿಗಳ ವಿದ್ಯಾಭ್ಯಾಸ ಹಾಗೂ ಕೆಲಸಗಳ ಬಗ್ಗೆ ತನಿಖೆ ಮುಂದುವರಿದಿದ್ದು, ಆರೋಪಿಗಳ ಕಳೆದ ನಾಲ್ಕೈದು ತಿಂಗಳ ಟ್ರಾವೆಲ್ ಹಿಸ್ಟರಿಯನ್ನೂ ಪೊಲೀಸರು ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ | PFIಗೆ CCB ಶಾಕ್ | ಕೆ.ಜಿ. ಹಳ್ಳಿ ಪ್ರಕರಣದ 15ನೇ ಆರೋಪಿ ದಿಲ್ಲಿಯಲ್ಲಿ ಸೆರೆ, ಇನ್ನೂ ನಾಲ್ವರಿಗಾಗಿ ಹುಡುಕಾಟ