ಜನರ ಆರೋಗ್ಯ ಸುಧಾರಣೆಯಲ್ಲಿ ರಾಜ್ಯದ ಸಿದ್ದರಾಮಯ್ಯ ಸರ್ಕಾರವು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ‘ಸ್ಮಾರ್ಟ್ ಹೆಲ್ತ್ ಕಿಯೋಸ್ಕ್’ (ಹೆಲ್ತ್ ಎಟಿಎಂ) ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಉದ್ಘಾಟಿಸಿದ್ದಾರೆ. ‘ಆರೋಗ್ಯ ಮಿತ್ರ’ ಯೋಜನೆಯಡಿ, ಕಾರ್ಪೋರೇಟ್ ಕಂಪನಿಗಳ ಸಿಎಸ್‌ಆರ್ ನಿಧಿಯಡಿ(CSR Fund) 5 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ‘ಹೆಲ್ತ್ ಎಟಿಎಂ’ ಯೋಜನೆ ಜಾರಿಗೊಂಡಿದೆ. ಆರೋಗ್ಯ ಕೇಂದ್ರಗಳಲ್ಲಿ, ವೆಲ್‌ನೆಸ್ ಸೆಂಟರ್ ಸೇರಿದಂತೆ 25 ಆಯ್ದ ಸ್ಥಳಗಳಲ್ಲಿ ಹೆಲ್ತ್ ಎಟಿಎಂ ಆರಂಭ ಮಾಡಲಾಗಿದೆ. ಕರ್ನಾಟಕದ ಸರ್ಕಾರದ ಈ ಸಮುದಾಯ ಆರೋಗ್ಯ ಸುಧಾರಣೆ ನಡೆಯು ಮಹತ್ವದ್ದಾಗಿದ್ದು, ಶ್ಲಾಘನೀಯ ಕಾರ್ಯವಾಗಿದೆ.
ಈ ಸ್ಮಾರ್ಟ್ ಹೆಲ್ತ್ ಕಿಯೋಸ್ಕ್‌ಗಳ ಮೂಲಕ ತಪಾಸಣೆ ಮತ್ತು ಶೀಘ್ರ ರೋಗ ಪತ್ತೆ ಜತೆಗೆ ನಿಯಂತ್ರಣಕ್ಕೆ ತಂತ್ರಜ್ಞಾನ ಬಳಸಲಾಗುತ್ತಿದೆ. ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕಲಬುರಗಿ ಜಿಲ್ಲಾ ಆಡಳಿತ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಆರೋಗ್ಯ ಮಿತ್ರ ಯೋಜನೆಯನ್ನು ಜಾರಿ ಮಾಡಲಾಗಿದೆ. ಈ ಯೋಜನೆಯಡಿ ಕಲಬುರಗಿ ಜಿಲ್ಲೆಗೆ ಎಚ್.ಪಿ ಎಂಟರ್‌ಪ್ರೈಸಸ್ ವತಿಯಿಂದ 25 ಹೆಲ್ತ್ ಎಟಿಎಂ ಘಟಕಗಳನ್ನು ಆರಂಭಿಸಲಾಗಿದೆ.
ಈ ಹೆಲ್ತ್ ಎಟಿಎಂಗಳಿಂದ ಸಾಕಷ್ಟು ಪ್ರಯೋಜನಗಳಿವೆ. ಜನಸಂದಣಿ ಪ್ರದೇಶಗಳಲ್ಲಿ ಲಭ್ಯತೆ ಇರುವ ಆರೋಗ್ಯ ಎಟಿಎಂಗಳ ಮೂಲಕ ಸರಳವಾದ ಆರೋಗ್ಯ ಸೇವೆಗಳ ಲಭ್ಯವಾಗಲಿದೆ. ನಿಖರವಾದ ವೈದ್ಯಕೀಯ ಪರೀಕ್ಷೆ ಮತ್ತು ಹೆಚ್ಚಿನ ಆರೋಗ್ಯ ತಪಾಸಣೆಗಾಗಿ ಆರೋಗ್ಯ ಎಟಿಎಂಗಳನ್ನೂ ಬಳಸುವುದರಿಂದ ಸಮಯ ಮತ್ತು ಹಣ ಉಳಿತಾಯವಾಗಲಿದೆ. ಸಮಗ್ರ ಆರೋಗ್ಯ ಸೇವೆಗಳಿಂದ ತುರ್ತು ಸ್ಪಂದನೆ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವುದರ ಮೂಲಕ ಉತ್ತಮ ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮ ಸಾಧ್ಯವಾಗಲಿದೆ. ನಿರಂತರ ಆರೋಗ್ಯ ತಪಾಸಣೆ ಮತ್ತು ಮೇಲ್ವಿಚಾರಣೆಯ ಮೂಲಕ ರೋಗಗಳನ್ನು ಪತ್ತೆ ಹಚ್ಚಲು ಮತ್ತು ತಡೆಗಟ್ಟಲು ಸಹಕಾರಿಯಾಗಲಿದೆ. ರೋಗಿಯ ದಾಖಲೆಗಳನ್ನು ಸುರಕ್ಷಿತವಾಗಿ ಮತ್ತು ಗೌಪ್ಯವಾಗಿ ಇಡಬಹುದು. 10 ನಿಮಿಷದಲ್ಲಿ 50ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಬಹುದು ಮತ್ತು ತ್ವರಿತ ಆರೋಗ್ಯದ ವರದಿಯನ್ನು ನೀಡಲು ಸಾಧ್ಯವಾಗಲಿದೆ. ಗ್ರಾಮೀಣ ಪ್ರದೇಶಗಳಿಗೆ ಅಗತ್ಯವಿರುವ ಆರೋಗ್ಯ ಸಿಬ್ಬಂದಿ ಅಂತರವನ್ನು ಕಡಿಮೆ ಮಾಡಿ ದುರ್ಗಮ ಪ್ರದೇಶಗಳಿಗೂ ಕೂಡ ಆರೋಗ್ಯ ಸೇವೆಗಳನ್ನು ತಲುಪಿಸಬಹುದು. ಹಾಗಾಗಿ, ಸಾಮುದಾಯಿಕ ಆರೋಗ್ಯ ಸುಧಾರಣೆ ದೃಷ್ಟಿಯಿಂದ ಈ ಯೋಜನೆಯು ಮೈಲುಗಲ್ಲಾಗಲಿದೆ.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಸನಾತನ ಧರ್ಮ ಕುರಿತ ಕೋರ್ಟ್ ಅಭಿಮತ ಹಿಂದೂ ದ್ವೇಷಿಗಳ ಕಣ್ಣು ತೆರೆಸಲಿ
ಸಾಮಾನ್ಯವಾಗಿ ಸರ್ಕಾರಗಳು ಹೊಸ ಯೋಜನೆಗಳನ್ನು ಸದುದ್ದೇಶ ಮತ್ತು ಅತ್ಯುತ್ಸಾಹದಿಂದಲೇ ಆರಂಭಿಸುತ್ತವೆ. ಆದರೆ, ಅವುಗಳ ಜಾರಿಯಲ್ಲಿ ಹಿನ್ನಡೆಯನ್ನು ಕಾಣುತ್ತವೆ. ಸಮುದಾಯ ಆರೋಗ್ಯ ಸುಧಾರಣೆಯಲ್ಲಿ ರಾಜ್ಯದಲ್ಲಿ ಯಶಸ್ವಿನಿ ಸೇರಿದಂತೆ ಈಗಾಗಲೇ ಅನೇಕ ಆರೋಗ್ಯ ಕಾರ್ಯಕ್ರಮಗಳು ಜಾರಿಯಲ್ಲಿವೆ. ಕೇಂದ್ರ ಸರ್ಕಾರದ ಆಯುಷ್ಮಾನ್ ಕೂಡ ಇದೆ. ಹೀಗಿದ್ದೂ, ಅರ್ಹ ಫಲಾನುಭವಿಗಳಿಗೆ ಸಕಾಲಕ್ಕೆ ಅವುಗಳ ಲಾಭ ದೊರೆಯುತ್ತಿಲ್ಲ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಈ ಕುರಿತು ಆಗಾಗ ಟಿವಿ ಮತ್ತು ಪತ್ರಿಕೆಗಳಲ್ಲಿ ವರದಿಯಾಗುತ್ತಲೇ ಇರುತ್ತವೆ. ಯೋಜನೆಯಲ್ಲಿ ಭಾಗಿದಾರರಾಗಿರುವ ಆಸ್ಪತ್ರೆಗಳ ನಿರುತ್ಸಾಹ ಮತ್ತು ಅಧಿಕಾರ ವರ್ಗದ ವಿಳಂಬ ಧೋರಣೆಯು ಜನಪರ ಯೋಜನೆಗಳ ಹಿನ್ನಡೆಗೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಯೋಚಿಸಬೇಕಿದೆ. ಯಾವುದೇ ಯೋಜನೆಯ ಸಾಫಲ್ಯ ಅದರ ಅನುಷ್ಠಾನದಲ್ಲಿ ಅಡಗಿರುತ್ತದೆ. ಹಾಗಾಗಿ, ಯೋಜನೆಯ ಜಾರಿಯನ್ನು ಫಾಲೋಅಪ್ ಮಾಡುವಂಥ ಇಲ್ಲವೇ ನಿಗಾ ವ್ಯವಸ್ಥೆಯನ್ನೂ ರೂಪಿಸಬೇಕು. ಈ ಪ್ರಕ್ರಿಯೆಯಲ್ಲಿ ತಪ್ಪೆಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ಹೊಸ ಯೋಜನೆಗಳ ಜತೆಗೆ ರಾಜ್ಯ ಸರ್ಕಾರವು ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆಗಳ ಗುಣಮಟ್ಟವನ್ನು ಹೆಚ್ಚಿಸುವ ಅಗತ್ಯವಿದೆ. ಅನೇಕ ಕಡೆ ಸರ್ಕಾರಿ ಆಸ್ಪತ್ರೆಗಳೇ ಇಲ್ಲ. ಆಸ್ಪತ್ರೆಗಳು ಇರುವೆಡೆ ನುರಿತ ಸಿಬ್ಬಂದಿ ಕೊರತೆ ಇರುತ್ತದೆ. ಎಲ್ಲವೂ ಇದ್ದರೆ, ಮೂಲಸೌಕರ್ಯಗಳು ಇರುವುದಿಲ್ಲ. ಜಿಲ್ಲಾ ಮಟ್ಟದ ಆಸ್ಪತ್ರೆಯಿಂದ ಹಿಡಿದು ಗ್ರಾಮ ಮಟ್ಟದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದವರಿಗೆ ವೈದ್ಯರ ಕೊರತೆ ಇದೆ. ಈ ಸಮಸ್ಯೆಯೇ ಮುಖ್ಯವಾಗಿ ಆರೋಗ್ಯ ಸುಧಾರಣೆಯಲ್ಲಿ ಸಾಕಷ್ಟು ಹಿನ್ನಡೆಗೆ ಕಾರಣವಾಗುತ್ತಿದೆ ಎಂಬುದನ್ನು ಸರ್ಕಾರ ಅರಿತುಕೊಂಡು, ಪರಿಹಾರ ಕಂಡುಕೊಳ್ಳುವುದಕ್ಕೆ ಯತ್ನಿಸಬೇಕು. ಹೆಲ್ತ್ ಎಟಿಎಂನಂಥ ವಿನೂತನ ಕಾರ್ಯಕ್ರಮಗಳ ಜತೆಗೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ವಿಭಾಗಗಳನ್ನು ಬಲಪಡಿಸುವ ಕಾರ್ಯವನ್ನು ರಾಜ್ಯ ಸರ್ಕಾರವು ಕಾಲಮಿತಿಯೊಳಗೇ ಮಾಡಲಿ.