ಪಾಕಿಸ್ತಾನದ ಬಲೂಚಿಸ್ತಾನದಲ್ಲಿರುವ ಜೈಶ್ ಅಲ್ ಅದ್ಲ್ (Jaish al Adl) ಉಗ್ರ ಸಂಘಟನೆಯ ಎರಡು ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ (Iran Attack) ನಡೆಸಿದೆ. ಇದರಿಂದಾಗಿ ಆರ್ಥಿಕವಾಗಿ ಕಂಗೆಟ್ಟಿರುವ, ಉಗ್ರ ಪೋಷಣೆಗಾಗಿ ಜಾಗತಿಕವಾಗಿ ವಿರೋಧ ಎದುರಿಸುತ್ತಿರುವ ಪಾಕಿಸ್ತಾನವು (Pakistan) ತತ್ತರಿಸಿ ಹೋಗಿದೆ. ಇದರಿಂದ ಇರಾನ್ ಗಂಭೀರ ಪರಿಣಾಮ ಎದುರಿಸಲಿದೆ ಎಂದು ಪಾಕಿಸ್ತಾನ ಗುಟುರು ಹಾಕಿದರೂ ಅದಕ್ಕೆ ಹಾಗೆ ಮಾಡಲು ಶಕ್ತಿಯಿಲ್ಲ ಎಂಬುದು ಗೊತ್ತೇ ಇದೆ. ಇರಾನ್ ಹಾಗೂ ಪಾಕಿಸ್ತಾನ ಬಲೂಚಿಸ್ತಾನದ ಬಳಿ 969 ಮೈಲುಗಳ ಗಡಿ ಹಂಚಿಕೊಂಡಿವೆ. ಬಲೂಚಿಸ್ತಾನದ ಗಡಿಯಲ್ಲಿ ಇರಾನ್ನ ಸುನ್ನಿ ಪಂಗಡದವರು ದೌರ್ಜನ್ಯಕ್ಕೀಡಾಗುತ್ತಿದ್ದಾರೆ. ಇವರಿಗೆ ಕಿರುಕುಳ ನೀಡಲಾಗುತ್ತಿದೆ. ಭಾರತದ ಜಮ್ಮು-ಕಾಶ್ಮೀರ ಗಡಿಯಲ್ಲಿ ಉಗ್ರರನ್ನು ಛೂಬಿಡುವಂತೆಯೇ ಬಲೂಚಿಸ್ತಾನದಲ್ಲಿ ಜೈಶ್ ಅಲ್ ಅದ್ಲ್ ಉಗ್ರ ಸಂಘಟನೆ ಸೇರಿ ಹಲವು ಸಂಘಟನೆಗಳಿಗೆ ಪಾಕಿಸ್ತಾನ ಹಣಕಾಸು ನೆರವು ನೀಡಿ ಅಶಾಂತಿಗೆ ಕಾರಣವಾಗುತ್ತಿದೆ ಎಂದು ಇರಾನ್ ಆರೋಪಿಸಿದೆ. ಹಿಂದೊಮ್ಮೆ ಭಾರತ ಸರ್ಜಿಕಲ್ ಸ್ಟ್ರೈಕ್ ಮಾಡಿ ತಕ್ಕ ಪಾಠ ಕಲಿಸಿದಂತೆಯೇ ಈ ಬಾರಿ ಇರಾನ್ ಬುದ್ಧಿ ಕಲಿಸಲು ಯತ್ನಿಸಿದೆ. ಆದರೆ ಪಾಕಿಸ್ತಾನ ಬುದ್ಧಿ ಕಲಿಯುವುದೇ ಎಂಬುದು ಪ್ರಶ್ನೆ(Vistara Editorial).
ಪಾಕಿಸ್ತಾನ ತನ್ನ ಹುಟ್ಟಿನಿಂದಲೇ ಭಯೋತ್ಪಾದಕ ದೇಶವಾಗಿದೆ. 1947ರಲ್ಲಿ ಸ್ವಾತಂತ್ರ್ಯ ದೊರೆತ ಕ್ಷಣದಿಂದಲೇ ಪಶ್ತೂನ್ ಬುಡಕಟ್ಟಿನವರನ್ನು ಛೂಬಿಟ್ಟು ಕಾಶ್ಮೀರದ ಬಹುಭಾಗವನ್ನು ವಶಪಡಿಸಿಕೊಂಡಿತು. ಇದರಿಂದಾಗಿಯೇ ಇಂದು ಪಾಕ್ ಆಕ್ರಮಿತ ಕಾಶ್ಮೀರ ಸೃಷ್ಟಿಯಾಗಿದೆ. ಇದರಿಂದಾಗಿಯೇ, ಕಾಶ್ಮೀರದ ಮಹಾರಾಜ ಹರಿಸಿಂಗ್ ಭಾರತದೊಳಗೆ ವಿಲೀನಕ್ಕೆ ಮುಂದಾಗಿದ್ದರೂ ಕಾಶ್ಮೀರದ ಬಹುಭಾಗ, ಪಾಕ್ಗೆ ಸೇರಿಹೋಗಿದೆ. ಅಲ್ಲಿಂದ ಕಾರ್ಯಾಚರಿಸುವ ಭಯೋತ್ಪಾದಕರ ಶಿಬಿರಗಳು ಜಮ್ಮು- ಕಾಶ್ಮೀರಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ತಲೆನೋವಾಗಿವೆ. ತನ್ನ ಹುಟ್ಟಿನಲ್ಲಿಯೇ ಭಯೋತ್ಪಾದನೆಯ ಬೀಜಗಳನ್ನು ಹೊತ್ತುಕೊಂಡಿರುವ ಪಾಕಿಸ್ತಾನದ ಮಿಲಿಟರಿ ಕೂಡ ಪಿಒಕೆಯಲ್ಲಿ ಕಾರ್ಯಾಚರಿಸುತ್ತಿರುವ ಉಗ್ರರ ತರಬೇತಿ ಶಿಬಿರಗಳಿಗೆ ಶಸ್ತ್ರಾಸ್ತ್ರಗಳು ಹಾಗೂ ಹಣವನ್ನು ಸರಬರಾಜು ಮಾಡುತ್ತಿದೆ. ಅಲ್ಲಿ ಹುಟ್ಟಿಕೊಳ್ಳುತ್ತಿರುವ ಉಗ್ರರು ಇತ್ತ ಕಾಶ್ಮೀರಕ್ಕೆ, ಅತ್ತ ಅಫಘಾನಿಸ್ತಾನಕ್ಕೆ ಸರರಾಜು ಆಗುತ್ತಿದ್ದಾರೆ. ಅತ್ತ ಸಿರಿಯಾದಲ್ಲಿ ಹುಟ್ಟಿಕೊಂಡು ಜಗತ್ತಿಗೆ ಬಲುದೊಡ್ಡ ತಲೆನೋವಾಗಿ ಬೆಳೆದ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರಿಗೂ ಇದುವೇ ಮೂಲ. ಬಲಿಷ್ಠ ಅಮೆರಿಕವನ್ನೇ ಭಯೋತ್ಪಾದನೆಗೆ ಗುರಿ ಮಾಡಿ ಗದಗುಟ್ಟಿ ನಡುಗಿಸಿದ ಅಲ್ ಕೈದಾ ಸಂಘಟನೆ ಹಾಗೂ ಅದರ ಮುಖಂಡ ಒಸಾಮಾ ಬಿನ್ ಲಾಡೆನ್ ಹುಟ್ಟಿಕೊಂಡದ್ದೂ, ಅಡಗಿಕೊಂಡಿದ್ದುದೂ ಇದೇ ಪಾಕ್ನಲ್ಲಿ.
ಇಂಥ ಪಾಕ್ಗೆ ಇರಾನ್ ಸರಿಯಾಗಿ ತಪರಾಕಿ ನೀಡಿದೆ. ಪಾಕಿಸ್ತಾನವು ಗಡಿ ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿದೆ. ಸುನ್ನಿ ಅಲ್ಪಸಂಖ್ಯಾತರಿಗೆ ಕಿರುಕುಳ, ಗಡಿಯಲ್ಲಿ ಉಗ್ರರ ಪೋಷಣೆ, ಅವರಿಗೆ ಹಣಕಾಸು ನೆರವು ನೀಡುತ್ತಿದೆ ಎಂದು ಇರಾನ್ ಆರೋಪಿಸುತ್ತಲೇ ಇತ್ತು. ಆದರೆ, ಇರಾನ್ ಆರೋಪಗಳನ್ನು ಪಾಕಿಸ್ತಾನ ತಿರಸ್ಕರಿಸುತ್ತಲೇ ಬಂದಿದೆ. ಈಗ ಆಕ್ರಮಣಕಾರಿ ನೀತಿ ಅನುಸರಿಸಿರುವ ಇರಾನ್, ಕ್ಷಿಪಣಿ ದಾಳಿ ಮೂಲಕ ಉಗ್ರ ಸಂಘಟನೆಯ ನೆಲೆಗಳನ್ನು ಧ್ವಂಸಗೊಳಿಸಿದೆ. ದಾಳಿಯಿಂದ ಇರಾನ್ ಹಾಗೂ ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆಯಾಗಿದೆ. ಇದು ಪ್ರಾದೇಶಿಕ ಅಶಾಂತಿಗೆ ಕಾರಣವಾಗುವ ಸಾಧ್ಯತೆ ಇದೆ. ಇರಾನ್ ಮೇಲೆ ಸೇಡು ತೀರಿಸಿಕೊಳ್ಳಲು ಪಾಕಿಸ್ತಾನವೂ ಪ್ರತಿದಾಳಿ ಮಾಡಿದರೆ ಇರಾನ್ ಸುಮ್ಮನಿರುವುದಿಲ್ಲ. ಎರಡು ದೇಶಗಳ ಸಂಘರ್ಷಕ್ಕೆ ಇರಾನ್ ದಾಳಿ ಮುನ್ನುಡಿ ಬರೆಯುವ ಸಾಧ್ಯತೆ ಇದೆ. ಶಿಯಾ- ಸುನ್ನಿ ಸಂಘರ್ಷವು ಜಾಗತಿಕ ಅಶಾಂತಿಗೆ ಕಾರಣವಾಗುವ ಸಾಧ್ಯತೆ ಇದೆ. ಆದರೆ, ಆರ್ಥಿಕವಾಗಿ ದಿವಾಳಿಯಾಗಿರುವ, ಸಾಮಾಜಿಕವಾಗಿ ಕಂಗೆಟ್ಟಿರುವ, ರಾಜಕೀಯ ಅರಾಜಕತೆ ಎದುರಿಸುತ್ತಿರುವ ಪಾಕಿಸ್ತಾನವು ಪ್ರತಿದಾಳಿ ಮಾಡುವ ಧೈರ್ಯ ತೋರಲಿಕ್ಕಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಅದರ ಮಿತ್ರರಾಷ್ಟ್ರ ಚೀನಾ ಸಹಾಯ ಮಾಡಿದರೆ ಅದು ಪ್ರತಿದಾಳಿಯ ಧೈರ್ಯ ತೋರಬಹುದು. ಆದರೆ ಚೀನಾಕ್ಕೂ ಇರಾನ್ಗೂ ಯಾವುದೇ ಶತ್ರುತ್ವ ಇಲ್ಲವಾದ್ದರಿಂದ ಚೀನಾ ಕೂಡ ಈ ವಿಚಾರದಲ್ಲಿ ಪಾಕ್ಗೆ ಸಹಾಯ ಮಾಡಲಿಕ್ಕಿಲ್ಲ. ಹೀಗಾಗಿ ಪಾಕ್ ಇಂದು ಒಂಟಿಯಾಗಿದೆ.
ಭಯೋತ್ಪಾದನೆ ಎಂಬುದು ಭಸ್ಮಾಸುರನ ಉರಿಹಸ್ತದಂತೆ ಎಂಬುದು ಪಾಕಿಸ್ತಾನ ಇದರಿಂದ ಕಲಿಯಬೇಕಾದ ಪಾಠ. ಯಾವುದೇ ಬಗೆಯ ಭಯೋತ್ಪಾದನೆಗೂ ಸ್ವಯಂ ನಾಶವೇ ಅಂತ್ಯ. ಪಾಕಿಸ್ತಾನ ಇದರಿಂದ ಪಾಠ ಕಲಿತು ಆಧುನಿಕ ಶಿಕ್ಷಣ, ಸದೃಢ ಆರ್ಥಿಕತೆ, ಮುಕ್ತ ಮಾರುಕಟ್ಟೆ ಇತ್ಯಾದಿಗಳತ್ತ ಯೋಚಿಸಿ ಬದುಕು ಕಟ್ಟಿಕೊಳ್ಳಲಿ.
ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಸರ್ಕಾರಿ ನೌಕರರ ಬೇಡಿಕೆಗಳಿಗೆ ಗಮನ ಕೊಡಿ