Site icon Vistara News

ವಿಸ್ತಾರ Explainer: Gaganyaan: ನಾಲ್ವರು ಗಗನಯಾನಿಗಳಲ್ಲಿ ಮಹಿಳೆ ಏಕಿಲ್ಲ?

gaganyaan pilots

ಭಾರತದ (India) ಇಸ್ರೋದ (ISRO) ಮಹತ್ವಕಾಂಕ್ಷೆಯ ಮಾನವ ಬಾಹ್ಯಾಕಾಶ ಯೋಜನೆ ʼಗಗನಯಾನʼ (Gaganyaan Mission) ಇನ್ನೊಂದು ಹೆಜ್ಜೆ ಮುಂದೆ ಹೋಗಿದೆ. ಗಗನಯಾನದ ನಾಲ್ವರು ಪೈಲೆಟ್‌ಗಳ (Gaganyaan pilots) ಪರಿಚಯವನ್ನು ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಬಹಿರಂಗಪಡಿಸಿದ್ದಾರೆ. ಆದರೆ ಈ ನಾಲ್ವರಲ್ಲಿ ಒಬ್ಬಳೇ ಒಬ್ಬ ಮಹಿಳೆ (woman) ಇಲ್ಲ! ಇದ್ಯಾಕೆ?

ಗುರುತಿಸಿದ ನಾಲ್ವರು ವಾಯುಪಡೆಯ ಪೈಲಟ್‌ಗಳ ಹೆಸರು ಬಹಿರಂಗಪಡಿಸಿ ಅಭಿನಂದಿಸಿದ ಸ್ವಲ್ಪ ಸಮಯದ ನಂತರ ಪ್ರಧಾನಿ ನರೇಂದ್ರ ಮೋದಿಯವರೂ ಕೂಡ, ದೇಶದ ಬಾಹ್ಯಾಕಾಶ ಯಾತ್ರೆಗಳಲ್ಲಿ ಮಹಿಳಾ ವಿಜ್ಞಾನಿಗಳ ಅಪಾರ ಕೊಡುಗೆಯನ್ನು ಒತ್ತಿಹೇಳಿದರು. ಅದರೆ ಗಗನಯಾನದಲ್ಲಿ ಮಹಿಳೆಯರಿಲ್ಲ.

ಗ್ರೂಪ್ ಕ್ಯಾಪ್ಟನ್‌ಗಳಾದ ಪ್ರಶಾಂತ್ ಬಾಲಕೃಷ್ಣನ್ ನಾಯರ್, ಅಜಿತ್ ಕೃಷ್ಣನ್, ಅಂಗದ್ ಪ್ರತಾಪ್ ಮತ್ತು ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ ಅವರ ಹೆಸರುಗಳು ಪ್ರಕಟವಾಗುತ್ತಿದ್ದಂತೆ, ಬಾಹ್ಯಾಕಾಶ ಹಾರಾಟಕ್ಕೆ ಮಹಿಳಾ ಪೈಲಟ್ ಅನ್ನು ಏಕೆ ಆಯ್ಕೆ ಮಾಡಲಿಲ್ಲ ಎಂದು ಹಲವರು ಆಶ್ಚರ್ಯಪಟ್ಟರು. ಬಾಹ್ಯಾಕಾಶಕ್ಕೆ ಈಗಾಗಲೇ ತೆರಳಿರುವ ನಾಲ್ವರು ಭಾರತೀಯರು ಮತ್ತು ಭಾರತೀಯ ಮೂಲದ ವ್ಯಕ್ತಿಗಳಲ್ಲಿ ಇಬ್ಬರು ಮಹಿಳೆಯರು. ಅವರು ದಿವಂಗತ ಕಲ್ಪನಾ ಚಾವ್ಲಾ ಮತ್ತು ಸುನೀತಾ ವಿಲಿಯಮ್ಸ್. ಈ ರಾಷ್ಟ್ರೀಯ ಐಕಾನ್‌ಗಳು ಯುವಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ. ಹಾಗಾದರೆ ಗಗನಯಾನಕ್ಕೆ ಮಹಿಳೆಯನ್ನು ಏಕೆ ಆಯ್ಕೆ ಮಾಡಲಿಲ್ಲ?

ಆಯ್ಕೆ ಮಾಡುವ ವಿಧಾನ

ಉತ್ತರ, ಬಾಹ್ಯಾಕಾಶ ಹಾರಾಟಕ್ಕೆ ಗಗನಯಾತ್ರಿಗಳನ್ನು ಆಯ್ಕೆ ಮಾಡುವ ವಿಧಾನದಲ್ಲಿದೆ. ಪ್ರಪಂಚದಾದ್ಯಂತ, ಮೊದಲ ಕಾರ್ಯಾಚರಣೆಗಳಿಗಾಗಿ ಗಗನಯಾತ್ರೆ ನಿಯೋಜಿತರನ್ನು ಪರೀಕ್ಷಾ ಪೈಲಟ್‌ಗಳ ಒಟ್ಟಾರೆ ಮೊತ್ತದಿಂದ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯ ಸಮಯದಲ್ಲಿ ಭಾರತವು ಮಹಿಳಾ ಪರೀಕ್ಷಾ ಪೈಲಟ್ ಅನ್ನು ಹೊಂದಿರಲಿಲ್ಲ. ಟೆಸ್ಟ್ ಪೈಲಟ್‌ಗಳು ತಮ್ಮ ವಿಶೇಷ ಕೌಶಲ್ಯಗಳಿಂದಾಗಿ ಆಯ್ಕೆಯಾದ ಹೆಚ್ಚು ನುರಿತ ಏವಿಯೇಟರ್‌ಗಳು. ಇವರು ತುರ್ತು ಪರಿಸ್ಥಿತಿಯ ಸಮಯದಲ್ಲಿಯೂ ಶಾಂತವಾಗಿರುತ್ತಾರೆ. ಇವರು ವಾಯುಯೋಧರಲ್ಲೂ ಅತ್ಯುನ್ನತ ನಿಯಂತ್ರಣ ಸಾಧಿಸಿದವರಾಗಿರುತ್ತಾರೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಎಸ್ ಸೋಮನಾಥ್ ಅವರು ʼʼಮುಂದಿನ ದಿನಗಳಲ್ಲಿ ಮಹಿಳಾ ಗಗನಯಾತ್ರಿಗಳನ್ನು ಬಾಹ್ಯಾಕಾಶ ಹಾರಾಟಕ್ಕೆ ಕಳುಹಿಸಲು ಸಂತೋಷಪಡುವುದಾಗಿʼʼ ಹೇಳಿದ್ದಾರೆ. “ಅತಿಶೀಘ್ರದಲ್ಲೇ ಭಾರತಕ್ಕೆ ಈ ಯೋಜನೆಯ ತಜ್ಞರು ಬೇಕಾಗುತ್ತಾರೆ. ಮಹಿಳೆಯರು ಗಗನಯಾತ್ರಿಗಳಾಗಿ ಹೋಗಬಹುದು. ಆದರೆ ಗಗನಯಾನದ ಮೊದಲ ಕೆಲವು ಕಾರ್ಯಾಚರಣೆಗಳು ನಿಸ್ಸಂಶಯವಾಗಿ ಆಯ್ಕೆಯಾದ ಮತ್ತು ತರಬೇತಿ ಪಡೆದ ಸಿಬ್ಬಂದಿಯನ್ನು ಮಾತ್ರ ಸಾಗಿಸುತ್ತವೆ” ಎಂದಿದ್ದಾರೆ ಅವರು.

ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಮತ್ತು ಭಾರತದ ಮಾನವ ಬಾಹ್ಯಾಕಾಶ ಕಾರ್ಯಕ್ರಮದ ಪ್ರಮುಖ ವಿಜ್ಞಾನಿ ಡಾ ಉನ್ನಿಕೃಷ್ಣನ್ ನಾಯರ್ ಹೇಳುತ್ತಾರೆ: “ಇಸ್ರೋದಲ್ಲಿ ಲಿಂಗಭೇದವಿಲ್ಲ. ಇಲ್ಲಿ ಪ್ರತಿಭೆ ಮಾತ್ರ ಮುಖ್ಯವಾದ ಕಾರಣ ಭವಿಷ್ಯದಲ್ಲಿ ಮಹಿಳೆಯರಿಗೆ ಅವಕಾಶ ಕಲ್ಪಿಸಬಹುದು.”

ಈಗಲೂ, ಎಲ್ಲಾ ಪರೀಕ್ಷೆಗಳು ಯಶಸ್ವಿಯಾದರೆ, 2025ರಲ್ಲಿ ಶೆಡ್ಯೂಲ್‌ ಮಾಡಲಾಗಿರುವ ಗಗನಯಾನದಲ್ಲಿ ಬಾಹ್ಯಾಕಾಶಕ್ಕೆ ಹಾರಲು ಸ್ತ್ರೀಯರಿಗೆ ಇನ್ನೂ ಅವಕಾಶವಿದೆ. ಅಲ್ಲದೆ, ಈ ವರ್ಷದ ಕೊನೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೂ NASA-ISRO ಮಾನವ ಬಾಹ್ಯಾಕಾಶ ಕಾರ್ಯಾಚರಣೆ ಇದೆ. ಅದಕ್ಕೆ IAFನ ನುರಿತ ಮಹಿಳಾ ಫೈಟರ್ ಪೈಲಟ್‌ಗಳಲ್ಲಿ ಒಬ್ಬರನ್ನು ನೇಮಿಸಬಹುದು. ಅವರು ಪರೀಕ್ಷಾ ಪೈಲಟ್‌ಗಳಲ್ಲದಿರಬಹುದು, ಆದರೆ ಅವರು ವಾಯು ಯೋಧರಾಗಿರುತ್ತಾರೆ. ಆದರೆ ಇಸ್ರೋ ಈ ನಾಲ್ಕು ಪುರುಷ ಗಗನಯಾನಿಗಳಲ್ಲಿ ಒಬ್ಬರನ್ನು ಕಳುಹಿಸಲು ಹೆಚ್ಚು ಒಲವು ತೋರುತ್ತಿದೆ. ಏಕೆಂದರೆ ಇವರು ಸಾಕಷ್ಟು ತರಬೇತಿ ಪಡೆದಿದ್ದಾರೆ.

ಗಗನಯಾನ ಭಾರತ ಕೈಗೊಂಡಿರುವ ಅತ್ಯಂತ ದುಬಾರಿ ವೈಜ್ಞಾನಿಕ ಕಾರ್ಯಕ್ರಮ. ಇದಕ್ಕೆ ಸುಮಾರು ₹10,000 ಕೋಟಿ ವೆಚ್ಚವಾಗಲಿದೆ. ಇದು ಹಲವಾರು ಕ್ರಾಂತಿಕಾರಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ಯಶಸ್ವಿಯಾದರೆ, ಭಾರತವು ಸ್ವದೇಶಿ ನಿರ್ಮಿತ ರಾಕೆಟ್‌ನಲ್ಲಿ ಗಗನಯಾತ್ರಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಸಾಮರ್ಥ್ಯ ಹೊಂದಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಲಿದೆ. ಈ ಸಾಧನೆಯನ್ನು ಇಲ್ಲಿಯವರೆಗೆ ಯುಎಸ್, ಚೀನಾ ಮತ್ತು ಸೋವಿಯತ್ ರಷ್ಯಾ ಮಾತ್ರ ಸಾಧಿಸಿವೆ. ಮಾನವ ಬಾಹ್ಯಾಕಾಶ ಹಾರಾಟದಲ್ಲಿ ಚೀನಾ 2003ರಲ್ಲಿ ಕೊನೆಯದಾಗಿ ಪ್ರವೇಶಿಸಿತ್ತು.

140 ಕೋಟಿ ಭಾರತೀಯರ ಶಕ್ತಿ

ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುವ ಪ್ರಧಾನಿ ಮೋದಿ, ಭಾರತವು ಜಾಗತಿಕ ಬಾಹ್ಯಾಕಾಶ ಸಾಹಸದಲ್ಲಿ ತನ್ನ ಸ್ಥಾನವನ್ನು ವಿಸ್ತರಿಸುತ್ತಿದೆ ಎಂದು ಹೇಳಿದ್ದಾರೆ. ತಿರುವನಂತಪುರಂನ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಮಿಷನ್‌ಗೆ ಆಯ್ಕೆಯಾದ ನಾಲ್ವರು ಗಗನಯಾತ್ರಿಗಳು ಕೇವಲ ನಾಲ್ಕು ಜನರಲ್ಲ. ಅವರು 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುವ ನಾಲ್ಕು ಶಕ್ತಿಗಳು” ಎಂದರು. “ನಲವತ್ತು ವರ್ಷಗಳ ನಂತರ ಇನ್ನೊಬ್ಬ ಭಾರತೀಯ ಬಾಹ್ಯಾಕಾಶಕ್ಕೆ ಹೋಗುತ್ತಿದ್ದಾನೆ. ಆದರೆ ಈ ಬಾರಿ ಸಮಯ, ಕೌಂಟ್‌ಡೌನ್ ಮತ್ತು ರಾಕೆಟ್ ಎಲ್ಲವೂ ನಮಗೇ ಸೇರಿದ್ದಾಗಿವೆ” ಎಂದು ಅವರು ಹೇಳಿದರು. ವಿಂಗ್ ಕಮಾಂಡರ್ ರಾಕೇಶ್ ಶರ್ಮಾ 1984ರಲ್ಲಿ ಸೋವಿಯತ್ ಕಾರ್ಯಾಚರಣೆಯ ಭಾಗವಾಗಿ ಬಾಹ್ಯಾಕಾಶಕ್ಕೆ ಹೋಗಿದ್ದರು.

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಯಶಸ್ಸು ಯುವ ಪೀಳಿಗೆಯಲ್ಲಿ ವೈಜ್ಞಾನಿಕ ಮನೋಧರ್ಮದ ಬೀಜಗಳನ್ನು ಬಿತ್ತುವುದು ಮಾತ್ರವಲ್ಲದೆ, 21ನೇ ಶತಮಾನದಲ್ಲಿ ಕ್ರಿಯಾತ್ಮಕ ಜಾಗತಿಕ ಆಟಗಾರನಾಗಿ ಭಾರತ ಹೊರಹೊಮ್ಮಲು ಸಹಾಯ ಮಾಡುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.

ಇದನ್ನೂ ಓದಿ: Gaganyaan: ಗಗನಯಾನ ಯಾತ್ರಿಗಳ ಹೆಸರು ರಿವೀಲ್‌ ಮಾಡಿದ ಮೋದಿ; ಇವರೇ ಸಾರಥಿಗಳು

Exit mobile version