ಶೀಲಾ ಸಿ. ಸೆಟ್ಟಿ, ಬೆಂಗಳೂರು
ನವರಾತ್ರಿಯ ಮೊದಲ ದಿನ ಕೇಸರಿ ಬಣ್ಣದ ಜಾದೂ (Navaratri Saffron Colour Outfit Tips) ಎಲ್ಲೆಡೆ ಹರಡಲಿದೆ. ಒಂದೊಂದು ದಿನವೂ ಒಂದೊಂದು ಶೇಡ್‌ಗಳು ಈ ದಸರಾದಲ್ಲಿ ಮಾನಿನಿಯರನ್ನು ಆವರಿಸಲಿದೆ. ಇನ್ನು ಕೇಸರಿ ವರ್ಣದ ಉಡುಪು ಹಾಗೂ ಸೀರೆಗಳಲ್ಲಿ ಆಕರ್ಷಕವಾಗಿ ಕಾಣಿಸಿಕೊಳ್ಳಲು ಬಯಸುವವರು ಒಂದಿಷ್ಟು ಸ್ಟೈಲಿಂಗ್ ಐಡಿಯಾಗಳನ್ನು ಗಮನದಲ್ಲಿಟ್ಟುಕೊಂಡು ಪಾಲಿಸಿದಲ್ಲಿ ಸುಂದರವಾಗಿ ಕಾಣಿಸಿಕೊಳ್ಳಬಹುದು. ಹಾಗೆನ್ನುತ್ತಾರೆ ಸ್ಟೈಲಿಸ್ಟ್‌ಗಳು. ಕೇಸರಿ ಎಥ್ನಿಕ್ ಔಟ್‌ಫಿಟ್‌ಗಳಲ್ಲಿ ಹೇಗೆಲ್ಲಾ ಸಿಂಗರಿಸಿಕೊಳ್ಳಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್ ರಚಿತಾ ಒಂದಿಷ್ಟು ಟಿಪ್ಸ್ ನೀಡಿದ್ದಾರೆ.
ಕೇಸರಿ ಸೀರೆಯಲ್ಲಿ ಹೀಗೆ ಕಾಣಿಸಿಕೊಳ್ಳಿ
ನೀವು ಕೇಸರಿ ಬಣ್ಣದ ಸೀರೆ ಉಡುವಿರಾದಲ್ಲಿ ಮೊದಲು ಯಾವ ಬಗೆಯ ಸೀರೆ ಉಡುತ್ತಿದ್ದೀರಾ ಎಂಬುದನ್ನು ನಿರ್ಧರಿಸಿ. ರೇಷ್ಮೆ ಸೀರೆಯಾದಲ್ಲಿ ಗೋಲ್ಡ್ ಜ್ಯುವೆಲರಿ ಮ್ಯಾಚ್ ಮಾಡಿ. ಉದ್ಯೋಗಸ್ಥ ಮಹಿಳೆಯರು ರೇಷ್ಮೆಯನ್ನು ಹೊರತುಪಡಿಸಿ ಇತರೇ ಸೀರೆಗಳನ್ನು ಧರಿಸುವುದು ಸಾಮಾನ್ಯ. ಅಂತಹವರು ಉದಾಹರಣೆಗೆ., ಕ್ರೇಪ್, ಅರ್ಗಾನ್ಜಾ, ಕಾಟನ್ ಸಿಲ್ಕ್, ಮಲ್‌ಮಲ್ ಇಂತಹ ಲೈಟ್‌ವೈಟ್ ಸೀರೆಗಳನ್ನು ಧರಿಸುತ್ತಿದ್ದಲ್ಲಿ ಗ್ರ್ಯಾಂಡ್ ಲುಕ್ ಬೇಡ. ಸಾದಾ ಸೀರೆ ಆಗಿದ್ದಲ್ಲಿ ಆವಕ್ಕೆ ಜ್ಯುವೆಲರಿ ಗ್ರ್ಯಾಂಡ್ ಆಗಿ ಧರಿಸಬಹುದು. ಪ್ರಿಂಟೆಡ್ ಆಗಿದ್ದಲ್ಲಿ ಸಿಂಪಲ್ ಜ್ಯುವೆಲರಿ ಧರಿಸಿದರೇ ಸಾಕು. ಬಾರ್ಡರ್ ಸೀರೆಗಳಾದಲ್ಲಿ ಬಂಗಾರದ ಆಭರಣಗಳನ್ನು ಮ್ಯಾಚ್ ಆಗುವಂತೆ ಧರಿಸಬಹುದು. ಮ್ಯಾಚಿಂಗ್ ಕೇಸರಿ ಬಳೆಗಳನ್ನು ಗೋಲ್ಡನ್ ಬಳೆಗಳ ಮಧ್ಯೆ ಮಿಕ್ಸ್ ಮ್ಯಾಚ್ ಮಾಡಿ ಹಾಕಿಕೊಳ್ಳಬಹುದು. ಹೇರ್‌ಸ್ಟೈಲ್ ಟ್ರೆಡಿಷನಲ್ ಲುಕ್‌ಗೆ ಮ್ಯಾಚ್ ಆಗುವಂತಿರಲಿ. ಟ್ರೆಡಿಷನಲ್ ಲುಕ್ ಬೇಕಿದ್ದಲ್ಲಿ, ಹೂ ಮುಡಿಯಿರಿ. ಹಣೆಗೊಂದು ಅದೇ ಕಲರ್‌ನ ಬಿಂದಿ ಇರಿಸಿ.
ಕೇಸರಿ ಔಟ್‌ಫಿಟ್ ಧರಿಸುವವರು ಪಾಲಿಸಬೇಕಾದ್ದು
ಯುವತಿಯರು ಹಾಗೂ ಹುಡುಗಿಯರು ಸೀರೆ ಬೇಡ, ಎಥ್ನಿಕ್‌ವೇರ್ ಗಳನ್ನು ಧರಿಸುತ್ತೇವೆ ಎನ್ನುವುದಾದಲ್ಲಿ ಸ್ಟೈಲಿಂಗ್ ಕೊಂಚ ಬೇರೆಯಾಗುತ್ತದೆ ಅಷ್ಟೇ! ಆದರೆ, ಲುಕ್ ವಿಭಿನ್ನವಾಗುತ್ತದೆ. ಕೇಸರಿ ಬಣ್ಣದ ಸಲ್ವಾರ್ ಕಮೀಝ್, ಚೂಡಿದಾರ್, ಕುರ್ತಾ ಹಾಗೂ ಲಾಂಗ್ ಸ್ಕರ್ಟ್ ಧರಿಸಬಹುದು. ಮಾನೋಕ್ರೋಮ್ ಶೇಡ್‌ನ ಕೇಸರಿ ವರ್ಣದ ಉಡುಪಿಗೆ ಟ್ರೆಂಡಿ ಬಿಗ್ ಜುಮ್ಕಾ ಧರಿಸಬಹುದು. ಇಲ್ಲವೇ ಬ್ಲಾಕ್ ಮೆಟಲ್ ಸೆಟ್ ಮ್ಯಾಚ್ ಮಾಡಬಹುದು. ಡ್ರೆಸ್ ಕಾಂಟ್ರಾಸ್ಟ್ ಶೇಡ್ ಹೊಂದಿದಲ್ಲಿ, ಆದಷ್ಟೂ ಕೇಸರಿ ವರ್ಣದ ಸ್ಟೇಟ್‌ಮೆಂಟ್ ಜ್ಯುವೆಲರಿ ಧರಿಸಿ. ಹೇರ್‌ಸ್ಟೈಲ್ ಎಥ್ನಿಕ್ ಲುಕ್‌ಗೆ ಸಾಥ್ ನೀಡಲಿ ಎನ್ನುತ್ತಾರೆ ಸ್ಟೈಲಿಸ್ಟ್ ಜೀವಿತಾ.
- ಕ್ರೇಪ್, ಶಿಫಾನ್, ಕಾಟನ್ ಸಿಲ್ಕ್ನ ಕೇಸರಿ ವರ್ಣದ ಡಬ್ಬಲ್ ಶೇಡ್‌ನ ಸೀರೆಗಳು ಟ್ರೆಂಡ್ನಲ್ಲಿವೆ.
- ಔಟ್ಫಿಟ್ಗಳಿಗೆ ಆದಷ್ಟೂ ಟ್ರೆಡಿಷನಲ್ ಟಚ್ ನೀಡಿ.
- ಸಾಂಪ್ರದಾಯಿಕ ಲುಕ್ ನಿಮ್ಮದಾಗಿಸಿಕೊಳ್ಳಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Navaratri: ನವರಾತ್ರಿ ನವವರ್ಣ; 9 ಬಣ್ಣಗಳ ಮಹತ್ವ ಏನು?